ವಿಶ್ವ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಮಾನವ ಸರಪಳಿ ರಚನೆ: ಧಾರವಾಡ ಜಿಲ್ಲೆ ರಾಜ್ಯಕ್ಕೆ ಪ್ರಥಮ
ಧಾರವಾಡ, ಸೆಪ್ಟೆಂಬರ್ 16: ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಬೀದರನಿಂದ ಚಾಮರಾಜನಗರದ ವರೆಗೆ ರಾಜ್ಯದ 31 ಜಿಲ್ಲೆಗಳನ್ನು ಒಳಗೊಂಡಿರುವ ಅತಿ ಉದ್ದದ ಮಾನವ ಸರಪಳಿಯನ್ನು ರಚಿಸಲಾಯಿತು. ಜಿಲ್ಲೆಯ ಧಾರವಾಡ ತಾಲೂಕಿನ ತೇಗೂರದಿಂದ ಮಾವಿನಕೊಪ್ಪ ಗ್ರಾಮದ ವರಗೆ ಅಂದಾಜು 55 ಕಿಲೋ ಮೀಟರ್ ಉದ್ಧದ ಮಾನವ ಸರಪಳಿಯನ್ನು ನಿರ್ಮಿಸಲಾಗಿತ್ತು.
ಇದರಲ್ಲಿ ಪ್ರತಿ ಮೀಟರಗೆ ಒಬ್ಬರಂತೆ ಸುಮಾರು 60 ಸಾವಿರ ಜನ ಹಾಗೂ ರಾಷ್ಟ್ರೀಯ ಹೆದ್ದಾರಿ, ನಗರ ಪ್ರದೇಶದಲ್ಲಿ ಡಬಲ್ ಲೈನ್ ಮಾಡಲಾಗಿತ್ತು. ಮಾನವ ಸರಪಳಿ ಕಾರ್ಯಕ್ರಮದಲ್ಲಿ ಅಂದಾಜು 95 ಸಾವಿರಕ್ಕೂ ಹೆಚ್ಚು ಜನ ಪ್ರತ್ಯಕ್ಷವಾಗಿ ಭಾಗವಹಿಸಿ ಯಶಸ್ವಿಗೊಳಿಸಿದರು.

ಈ ಕಾರ್ಯಕ್ರಮದಲ್ಲಿ ಶಾಲಾ- ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ಸಂಘ ಸಂಸ್ಥೆಗಳು ಸ್ವಯಂ ಪ್ರೇರಿತರಾಗಿ ಮಾನವ ಸರಪಳಿಯನ್ನು ನಿರ್ಮಿಸುವದರ ಮೂಲಕ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ಮಹತ್ವ ಸಾರುವ ಸಂವಿಧಾನ ಪಿಠೀಕೆಯನ್ನು ಸಾಮೂಹಿಕವಾಗಿ ವಾಚಿಸಿದರು.
ವಿದ್ಯಾರ್ಥಿಗಳಿಂದ ಬೃಹತ್ ಭಾರತ ನಕ್ಷೆ ನಿರ್ಮಾಣ
ಕರ್ನಾಟಕ ಕಲಾ ಮಹಾವಿದ್ಯಾಲಯದ ಮೈದಾನದಲ್ಲಿ ಸುಮಾರು 2 ಸಾವಿರು ವಿದ್ಯಾರ್ಥಿಗಳು ಬೃಹತ್ ಮಾನವ ಸರಪಳಿ ಮೂಲಕ ಭಾರತ ನಕ್ಷೆಯನ್ನು ರಚಿಸಿದರು. ಭಾರತದ ನಕ್ಷೆಯಲ್ಲಿ ಕರ್ನಾಟಕ ರಾಜ್ಯದ ಚಿತ್ರಣವನ್ನು ಸಹ ಮೂಡಿಸಿದರು. ಅಲ್ಲದೇ ಮೈದಾನದಲ್ಲಿ 1 ಕಿ.ಮೀ. ಉದ್ದದ ಕರ್ನಾಟಕ ಸಂಕೇತವಾಗಿ ಹಳದಿ ಮತ್ತು ಕೆಂಪು ಬಣ್ಣದ ಬೃಹತ್ ಬಾವುಟವನ್ನು ಪ್ರದರ್ಶನ ಮಾಡಲಾಯಿತು. ಮೈದಾನದ ತುಂಬ ಕೇಸರಿ, ಬಿಳಿ ಮತ್ತು ಹಸಿರು ಬಣ್ಣದ ಕ್ಯಾಪ್‌ಳನ್ನು ಧರಿಸಿ, ಏಕತೆ ಸಾರಿದರು.
ಮೆರವಣಿಗೆಗೆ ಮೆರಗು ತಂದ ವೇಷಭೂಷಣ ಮತ್ತು ಕಲಾತಂಡಗಳು
ಇಲ್ಲಿನ ಜುಬ್ಲಿ ವೃತ್ತದಿಂದ ಕರ್ನಾಟಕ ಕಲಾ ಮಹಾವಿದ್ಯಾಲಯದ ಮೈದಾನದವರೆಗೆ ನಡೆದ ಮೆರವಣಿಗೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯಗಳ ಹಾಗೂ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಕಿತ್ತೂರು ರಾಣಿ ಚೆನ್ನಮ್ಮ, ಒನಕೆ ಓಬವ್ವ, ಬೆಳವಡಿ ಮಲ್ಲಮ್ಮ, ತಾಯಿ ಭುವನೇಶ್ವರಿ, ಕನಕದಾಸರು, ಭಗತ್ ಸಿಂಗ್ ಸೇರಿದಂತೆ ವಿವಿಧ ಮಹಾನ ಪುರುಷರ ವೇಷಭೂಷಣಗಳಲ್ಲಿ ಕಾಣಿಸಿಕೊಂಡು ಮೆರವಣಿಗೆಗೆ ಮೆರಗು ತಂದರು.

ದೇಶದ 30 ರಾಜ್ಯಗಳಲ್ಲಿನ ಸಾಂಪ್ರಾದಾಯಿಕ ಉಡುಗೆ ತೊಡುಗೆಗಳನ್ನು ತೊಟ್ಟು ವಿದ್ಯಾರ್ಥಿಗಳು ಮಿಂಚಿದ್ದರು. ಅಲ್ಲದೇ ಡೊಳ್ಳು ಕುಣಿತ, ಜಗ್ಗಲಗಿ, ಜಾಂಜ್ ಮೇಳ, ಗೊಂಬೆ ಕುಣಿತ ಸೇರಿದಂತೆ ವಿವಿಧ ಕಲಾತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದವು. ಮಹಿಳೆಯರ ಕುಂಭಮೇಳ ಮೆರವಣಿಗೆಗೆ ಮತ್ತಷ್ಟು ಮೆರಗು ತಂದಿತ್ತು. ಉಸ್ತುವಾರಿ ಸಚಿವ ಸಂತೋಷ ಲಾಡ್, ಶಾಸಕರು ಹಾಗೂ ಜಿಲ್ಲಾಧಿಕಾರಿ ದಿವ್ಯಪ್ರಭು ಅವರು ಕಾಲ್ನಡಿಗೆ ಮೂಲಕ ಜುಬ್ಲಿ ವೃತ್ತದಿಂದ ಕೆಸಿಡಿವರೆಗೆ ಭಾಗವಹಿಸಿ ಗೌರವ ಸೂಚಿಸಿದರು.
ಪ್ರಜಾಪ್ರಭುತ್ವ ದಿನದ ನೆನಪಿಗೆ 4,180 ಸಸಿಗಳು
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಸವಿನೆನಪಿಗಾಗಿ ಅರಣ್ಯ ಇಲಾಖೆಯ ಸಾಮಾಜಿಕ ಅರಣ್ಯ ವಿಭಾಗದಿಂದ 4180 ವಿವಿಧ ಬಗೆಯ ಸಸಿಗಳನ್ನು ನೆಡುವ ಕಾರ್ಯಕ್ರಮ ಜರುಗಿಸಲಾಯಿತು. ಕರ್ನಾಟಕ ಮಹಾವಿದ್ಯಾಲಯದ ಮೈದಾನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರು ಸಾಂಕೇತಿಕವಾಗಿ ಸಸಿಗಳನ್ನು ನೆಡುವ ಮೂಲಕ ಚಾಲನೆ ನೀಡಿದರು.
ತಪ್ಪಸ್ಸಿ, ಬಸವನಪಾದ, ಶಿವನಿ, ನೇರಳೆ, ಹೊಂಗೆ, ಹೊಳಮತ್ತಿ, ಮಹಾಗಣಿ, ಬೆಟ್ಟದ ನೆಲ್ಲಿ ಮುಂತಾದ ಸಸಿಗಳನ್ನು ಕಾರ್ಯಕ್ರಮದ ಅಂಗವಾಗಿ ನೆಡಲಾಯಿತು. ಕೊಟೂರದಿಂದ ದುಬ್ಬನಮರಡಿ ಮತ್ತು ಬೋಗುರ ಕ್ರಾಸದಿಂದ ಹಳೆ ತೇಗೂರ, ಶಿಂಗನಹಳ್ಳಿ ಕ್ರಾಸದಿಂದ ಆದಿಚುಂಚನಗಿರಿ ಮಠ, ಹೊಸಟ್ಟಿಯಿಂದ ಹೊಸಟ್ಟಿ ಕ್ರಾಸ್‍ವರೆಗೆ ರಸ್ತೆಯ ಬದಿಗಳಲ್ಲಿ ಮತ್ತು ಸಲಕಿನಕೊಪ್ಪ, ಬಾಡ್ ಗ್ರಾಮಗಳಲ್ಲಿನ ಸರ್ಕಾರಿ ಗೋಮಾಳ ಜಮೀನಗಳಲ್ಲಿ ಸಸಿಗಳನ್ನು ನೆಡಲಾಯಿತು.












Click it and Unblock the Notifications