ಕೋವಿಡ್ ಪರಿಸ್ಥಿತಿ; ಈ ಬಾರಿಯೂ ಸಾರ್ವಜನಿಕ ಗಣೇಶೋತ್ಸವ ರದ್ದು
ಧಾರವಾಡ, ಆಗಸ್ಟ್ 10; ಕರ್ನಾಟಕದಲ್ಲಿ ಕೋವಿಡ್ ಪರಿಸ್ಥಿತಿ ಹಿನ್ನಲೆಯಲ್ಲಿ ಕಳೆದ ವರ್ಷ ಸಾರ್ವಜನಿಕ ಗಣೇಶೋತ್ಸವಗಳನ್ನು ರದ್ದುಗೊಳಿಸಲಾಗಿತ್ತು. ಕೋವಿಡ್ 3ನೇ ಅಲೆಯ ಆತಂಕದ ಕಾರಣ ಈ ಬಾರಿಯೂ ಕೆಲವು ಜಿಲ್ಲೆಗಳಲ್ಲಿ ಸಾರ್ವಜನಿಕ ಗಣೇಶೋತ್ಸವ ರದ್ದುಗೊಳಿಸಲಾಗಿದೆ. ಸೆಪ್ಟೆಂಬರ್‌ನಲ್ಲಿ ಗಣೇಶ ಚತುರ್ಥಿ ಇದೆ.
ಧಾರವಾಡ ಜಿಲ್ಲಾಧಿಕಾರಿ ನಿತೇಶ ಪಾಟೀಲ ಈ ಕುರಿತು ಮಾಹಿತಿ ನೀಡಿದ್ದಾರೆ. "ಬರುವ ಸೆಪ್ಟೆಂಬರ್‌ನಲ್ಲಿ ಆಚರಿಸುವ ಗಣೇಶ ಚತುರ್ಥಿ ಸಂದರ್ಭದಲ್ಲಿ ಕೋವಿಡ್ ನಿಯಂತ್ರಣದ ಮುಂಜಾಗೃತೆಗಾಗಿ ಕಳೆದ ವರ್ಷದಂತೆ ಈ ಬಾರಿಯು ಸಾರ್ವಜನಿಕ ಗಣೇಶೋತ್ಸವಕ್ಕೆ ಅವಕಾಶವಿಲ್ಲ" ಎಂದು ಹೇಳಿದ್ದಾರೆ.
ಜಿಲ್ಲಾಡಳಿತ ಸುರಕ್ಷತಾ ಕ್ರಮಗಳೊಂದಿಗೆ ದೇವಾಲಯಗಳು ಹಾಗೂ ಮನೆಗಳಲ್ಲಿ ಮಾತ್ರ ಗಣೇಶ ಮೂರ್ತಿ ಪ್ರತಿಷ್ಠಾಪಿಸಬಹುದು ಎಂದು ಹೇಳಿದೆ. ಸಿ.ಎಸ್.ಐ.ಆರ್ ಮತ್ತು ನೀರಿ ಪ್ರಮಾಣೀಕೃತ ಹಸಿರು ಪಟಾಕಿಗಳನ್ನು ಮಾತ್ರ ಉಪಯೋಗಿಸಬೇಕು ಎಂದು ಹೇಳಿದೆ.

"ಈಗಾಗಲೇ ಕೇರಳ, ಮಹಾರಾಷ್ಟ್ರ ರಾಜ್ಯದಲ್ಲಿ ಪ್ರತಿದಿನ ಕೋವಿಡ್ ಸೋಂಕಿತರ ಪ್ರಮಾಣ ಹೆಚ್ಚಳವಾಗುತ್ತಿದೆ. ರಾಜ್ಯದ ಕೆಲವು ಜಿಲ್ಲೆಗಳಲ್ಲಿಯೂ ಆಗಸ್ಟ್ ಅಂತ್ಯಕ್ಕೆ ಸೋಂಕಿತರ ಪ್ರಮಾಣ ಏರಿಕೆಯಾಗುವ ಸಂಭವವಿದೆ. ಸೆಪ್ಟಂಬರ್ ವೇಳೆಗೆ ಸಂಭಾವ್ಯ 3ನೇ ಅಲೆ ಅತ್ಯಧಿಕವಾಗುವ ಸಾಧ್ಯತೆಗಳಿವೆ. ಆದ್ದರಿಂದ ಎಚ್ಚರವಹಿಸಬೇಕು" ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು.
"ಕಳೆದ ವರ್ಷದ ಮಾದರಿಯಲ್ಲಿ ಈ ಬಾರಿಯೂ ಸಾರ್ವಜನಿಕ ಸ್ಥಳಗಳಲ್ಲಿ ಗಣೇಶಮೂರ್ತಿ ಪ್ರತಿಷ್ಠಾಪನೆಗೆ ಅವಕಾಶವಿಲ್ಲ. ದೇವಾಲಯ ಹಾಗೂ ಮನೆಗಳಲ್ಲಿ ಸೂಕ್ತ ಸುರಕ್ಷತಾ ಕ್ರಮಗಳ ಜೊತೆಗೆ ಮೂರ್ತಿ ಪ್ರತಿಷ್ಠಾಪಿಸಬಹುದು. ಪ್ಲಾಸ್ಟರ್ ಆಫ್ ಪ್ಯಾರಿಸ್‌ನಿಂದ ತಯಾರಿಸಿದ ಮೂರ್ತಿಗಳ ಪ್ರತಿಷ್ಠಾಪನೆಗೆ ಅವಕಾಶವಿಲ್ಲ" ಎಂದು ಜಿಲ್ಲಾಧಿಕಾರಿಗಳು ಸ್ಪಷ್ಟಪಡಿಸಿದರು.
"ಗಣೇಶ ವಿಗ್ರಹ ತಯಾರಕರು ಪ್ಲಾಸ್ಟರ್ ಆಫ್ ಪ್ಯಾರಿಸ್ ಬಳಕೆ ಮಾಡಿ ಮೂರ್ತಿ ತಯಾರು ಮಾಡಬಾರದು. ಹೊರ ರಾಜ್ಯಗಳಿಂದ ಇಂತಹ ಮೂರ್ತಿಗಳು ಬರುವ ಮಾಹಿತಿ ಇದ್ದರೆ ಜಿಲ್ಲಾಡಳಿತ, ಪೊಲೀಸ್ ಅಥವಾ ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ತಿಳಿಸಿದರೆ ಅಂತಹ ವಿಗ್ರಹಗಳನ್ನು ವಶಪಡಿಸಿಕೊಳ್ಳಲಾಗುವುದು" ಎಂದು ಜಿಲ್ಲಾಧಿಕಾರಿಗಳು ಹೇಳಿದರು.
"ನದಿ, ಕೆರೆ, ಕಾಲುವೆ ಹಾಗೂ ಬಾವಿಗಳಲ್ಲಿ ಬಣ್ಣ ಲೇಪಿತ ವಿಗ್ರಹಗಳ ವಿಸರ್ಜನೆ ನಿಷೇಧಿಸಲಾಗಿದೆ. ಗಣೇಶ ವಿಗ್ರಹಗಳ ವಿಸರ್ಜನೆಗೆ ಮಹಾನಗರ ಪಾಲಿಕೆ ಹಾಗೂ ಇತರ ಸ್ಥಳೀಯ ಸಂಸ್ಥೆಗಳು ಕೃತಕ ಟ್ಯಾಂಕುಗಳ ವ್ಯವಸ್ಥೆ ಮಾಡಲಿವೆ. ಸರ್ಕಾರ ಕಾಲ ಕಾಲಕ್ಕೆ ಹೊರಡಿಸುವ ಮಾರ್ಗಸೂಚಿಗಳನ್ನು ಜಿಲ್ಲೆಯಲ್ಲಿ ಜಾರಿ ಮಾಡಲಾಗುವುದು" ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಹುಬ್ಬಳ್ಳಿ-ಧಾರವಾಡ ನಗರ ಉಪ ಪೊಲೀಸ್ ಆಯುಕ್ತ ಕೆ. ರಾಮರಾಜನ್ ಮಾತನಾಡಿ, "ಕೋವಿಡ್ ನಿಯಂತ್ರಣ ಉದ್ದೇಶದಿಂದ ಸರ್ಕಾರ ಹಾಗೂ ಜಿಲ್ಲಾಡಳಿತ ಹೊರಡಿಸುವ ಆದೇಶಗಳನ್ನು ಜಿಲ್ಲೆಯ ಜನತೆ ಪಾಲಿಸಿ ಜಿಲ್ಲಾಡಳಿತದ ಜೊತೆ ಸಹಕಾರ ನೀಡಬೇಕು" ಎಂದು ಮನವಿ ಮಾಡಿದರು.
ಹುಬ್ಬಳ್ಳಿ-ಗ್ರಾಮೀಣ ತಹಶೀಲ್ದಾರ್ ಪ್ರಕಾಶ ನಾಶಿ ಮಾತನಾಡಿ, "ಛಬ್ಬಿ ಗ್ರಾಮದ ಕೆಲವು ಕುಟುಂಬಗಳ ಮನೆಗಳಲ್ಲಿ ಪ್ರತಿಷ್ಠಾಪಿಸುವ ಗಣೇಶ ಮೂರ್ತಿಗಳ ದರ್ಶನಕ್ಕೆ ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದ ಜನರು ಬರುತ್ತಾರೆ. ಹೊರ ರಾಜ್ಯಗಳಿಂದ ಆಗಮಿಸುವ ಪ್ರಯಾಣಿಕರು ಕಡ್ಡಾಯವಾಗಿ ಕೋವಿಡ್ ನೆಗೆಟಿವ್ ವರದಿ ಹೊಂದಿರುವುದನ್ನು ತಪಾಸಣೆ ಮಾಡಲು ಚೆಕ್ ಪೋಸ್ಟ್ ಸ್ಥಾಪಿಸಲಾಗುವುದು" ಎಂದರು.
ಕರ್ನಾಟಕ ಸರ್ಕಾರ ಕೋವಿಡ್ 3ನೇ ಅಲೆ ತಡೆಯಲು ಈಗಾಗಲೇ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಕೇರಳ, ಮಹಾರಾಷ್ಟ್ರ ರಾಜ್ಯಗಳ ಜೊತೆ ಗಡಿ ಹಂಚಿಕೆ ಮಾಡಿರುವ ಜಿಲ್ಲೆಗಳಲ್ಲಿ ವಾರಾಂತ್ಯದ ಕರ್ಫ್ಯೂ ಜಾರಿಗೊಳಿಸಲಾಗಿದೆ. ರಾಜ್ಯಾದ್ಯಂತ ರಾತ್ರಿ 9ರಿಂದ ಬೆಳಗ್ಗೆ 5 ಗಂಟೆಯ ತನಕ ರಾತ್ರಿ ಕರ್ಫ್ಯೂ ಹೇರಲಾಗಿದೆ.
ಮಹಾರಾಷ್ಟ್ರ ಮತ್ತು ಕೇರಳದಿಂದ ಕರ್ನಾಟಕ ಪ್ರವೇಶಿಸಲು ಎಲ್ಲರಿಗೂ ಅವಕಾಶವಿಲ್ಲ. ಗಡಿಯಲ್ಲಿ ಚೆಕ್ ಪೋಸ್ಟ್ ತೆರೆಯಲಾಗಿದ್ದು, 72 ಗಂಟೆಗಳ ಮೊದಲ ಕೋವಿಡ್ ಪರೀಕ್ಷೆ ಆರ್‌ಟಿಪಿಸಿಆರ್ ವರದಿ ಇದ್ದವರಿಗೆ ಮಾತ್ರ ರಾಜ್ಯ ಪ್ರವೇಶಿಸಲು ಅನುಮತಿ ನೀಡಲಾಗಿದೆ.
ಸೋಮವಾರದ ವರದಿಯಂತೆ ಕರ್ನಾಟಕದಲ್ಲಿ 1186 ಹೊಸ ಕೋವಿಡ್ ಪ್ರಕರಣ ದಾಖಲಾಗಿದೆ. ರಾಜ್ಯದ ಸಕ್ರಿಯ ಪ್ರಕರಣಗಳ ಸಂಖ್ಯೆ 23316. 24 ಗಂಟೆಯಲ್ಲಿ ರಾಜ್ಯದಲ್ಲಿ 24 ಜನರು ಮೃತಪಟ್ಟಿದ್ದಾರೆ.











Click it and Unblock the Notifications