ಚಂದ್ರಯಾನ-3: ಧಾರವಾಡದಲ್ಲಿ "ಆಲ್ ದಿ ಬೆಸ್ಟ್" ಎಂದು ಶುಭಹಾರೈಸಿದ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು
ಧಾರವಾಡ, ಜುಲೈ, 14: ದೇಶವೆ ಹೆಮ್ಮೆ ಪಡುವ ಚಂದ್ರಯಾನ-3 ಉಡಾವಣೆ ಹಿನ್ನೆಲೆಯಲ್ಲಿ ದೇಶಾದ್ಯಂತ ಇಸ್ರೋಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಹಾಗೆಯೇ ಧಾರವಾಡದಲ್ಲಿ 500ಕ್ಕೂ ಹೆಚ್ಚು ಶಾಲಾ ವಿದ್ಯಾರ್ಥಿಗಳು ಒಂದೇಡೆ ಸೇರಿ "all d best isro" ಅಂತಾ ಹೇಳುತ್ತಾ Thumps up ಮಾಡಿ ಶುಭಾಶಯ ಹಾರೈಸಿದ್ದಾರೆ.
ಹೌದು.. ಧಾರವಾಡದ ಮೃತ್ಯುಂಜಯ ನಗರದಲ್ಲಿರುವ ಜೆಎಸ್‌ಎಸ್ ಶ್ರೀ ಮಂಜುನಾಥೇಶ್ವರ ಅಂಗ್ಲ ಮಾಧ್ಯಮ ಶಾಲೆಯಲ್ಲಿ ನರ್ಸರಿಯಿಂದ 10ನೇ ತರಗತಿವರೆಗಿನ ಮಕ್ಕಳು ತಮ್ಮ ಶಾಲೆ ಕ್ಯಾಂಪಸ್‌ನಲ್ಲಿ ಸೇರಿ ಸಾಮೂಹಿಕ ಇಸ್ರೋಗೆ ಶುಭಾಶಯ ಹೇಳಿದ್ದಾರೆ. ಕೆಲವು ವಿದ್ಯಾರ್ಥಿಗಳು ರಾಕೆಟ್‌ನ ಪುಟ್ಟ ಮಾದರಿಯನ್ನು ಮಧ್ಯದಲ್ಲಿಟ್ಟು, ತ್ರಿವರ್ಣ ಧ್ವಜ ಹಿಡಿದು ಏಕಕಾಲಕ್ಕೆ "ಆಲ್ ದಿ ಬೆಸ್ಟ್" ಎಂದು ಘೋಷಣೆ ಕೂಗಿದರು.

ಚಂದ್ರಯಾನ-2 ಯಶಸ್ವಿ ಉಡಾವಣೆ ಆಗಿದ್ದರೂ, ಆ ಬಳಿಕ ಸಂಪರ್ಕ ಕಡಿತಗೊಂಡು ಚಂದ್ರಯಾನ 2 ಉದ್ದೇಶವೇ ವಿಫಲವಾಗಿತ್ತು. ಇದರಿಂದಾಗಿ ಭಾರತೀಯರಿಗೆಲ್ಲ ಬಹಳ ನಿರಾಸೆ ಮತ್ತು ಬೇಸರವಾಗಿತ್ತು. ಹೀಗಾಗಿ ಚಂದ್ರಯಾನ-3 ಯಾವುದೇ ಅಡೆತಡೆ ಇಲ್ಲದೇ ಯಶಸ್ವಿಯಾಗಬೇಕು ಎಂಬ ಬಯಕೆಯಿಂದ ಮಕ್ಕಳು ಮತ್ತು ಶಿಕ್ಷಕರು ಸೇರಿ ಈ ಶುಭಾಶಯ ಕೋರಿ, ಯಶಸ್ಸಿಗೆ ಪ್ರಾರ್ಥಿಸಿದರು.
ಚಾಮರಾಜನಗರದಲ್ಲಿ ವಿಶೇಷ ಪೂಜೆ
ಬಾಹ್ಯಾಕಾಶದಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಯಾಗಲು ಇಡೀ ದೇಶವೇ ಎದುರು ನೋಡುತ್ತಿರುವ ಇಸ್ರೋದ ಚಂದ್ರಯಾನ-3 ಯಶಸ್ಸು ಸಾಧಿಸಲೆಂದು ಚಾಮರಾಜನಗರದಲ್ಲಿ ನಾಗರಿಕರು ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಚಂದ್ರಯಾನ 3 ಉಡಾವಣೆ ಯಶಸ್ವಿಗೆ ಚಾಮರಾಜೇಶ್ವರ ದೇವಸ್ಥಾನದಲ್ಲಿ ಓಂ ಶಾಂತಿ ಸಂಘಟನೆ, ಜೈಹಿಂದ್ ಪ್ರತಿಷ್ಟಾನದ ವತಿಯಿಂದ ಭಾರತದ ಧ್ವಜ ಹಿಡಿದು ಪೂಜೆ ಸಲ್ಲಿಸಿದ್ದಾರೆ. ಭಾರತ ಮಾತೆ ಹೆಸರಲ್ಲಿ ದೇಶಾಭಿಮಾನಿಗಳು ಅರ್ಚನೆ ಸಲ್ಲಿಸಿದ್ದಾರೆ. ಇನ್ನು, ವೆಂಕಟಯ್ಯನಛತ್ರ ಸೇರಿದಂತೆ ಜಿಲ್ಲೆಯ ವಿವಿಧ ಶಾಲೆಗಳಲ್ಲಿ ಚಂದ್ರಯಾನಕ್ಕೆ ವಿದ್ಯಾರ್ಥಿಗಳು ಶುಭ ಹಾರೈಸಿದ್ದಾರೆ.
ಹಾಗೆಯೇ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಮಹತ್ವಾಕಾಂಕ್ಷೆಯ ಚಂದ್ರಯಾನ-3 ಗಗನನೌಕೆ ಉಡಾವಣೆ ಆಗಿದೆ. ಮಧ್ಯಾಹ್ನ 2:35ಕ್ಕೆ ಗಗನನೌಕೆಯ ಪ್ರಯಾಣ ಚಂದ್ರನೆಡೆಗೆ ಸಾಗಿದೆ.
ಇಸ್ರೋ ಸಂಸ್ಥೆಯ ಮಹತ್ವಾಕಾಂಕ್ಷೆಯ ಚಂದ್ರಯಾನ-3ಕ್ಕೆ ಧಾರವಾಡದ ಕಲಾವಿದ ಮಂಜುನಾಥ ಹಿರೇಮಠ ಅವರು ವಿಶೇಷವಾಗಿ ಶುಭ ಕೋರಿದ್ದಾರೆ. ಎಲ್‌ಎಂವಿ ಪೈಪ್‌ಗಳ ಸಹಾಯದಿಂದ ಮಿನಿ ಉಪಗ್ರಹ ಸಿದ್ಧಪಡಿಸಿರುವ ಕಲಾವಿದ ಹಿರೇಮಠ, ಈ ಬಾರಿ ಯಾವುದೇ ವಿಘ್ನಗಳು ಉಂಟಾಗದಂತೆ ಯಶಸ್ವಿಯಾಗಿ ಉಪಗ್ರಹ ಉಡಾವಣೆಯಾಗಲಿ ಎಂದು ವಿಘ್ನೇಶ್ವರನಿಗೆ ಪೂಜೆ ಸಹ ಸಲ್ಲಿಸಿದ್ದಾರೆ.
ಚಂದ್ರಯಾನ-2 ಸಂದರ್ಭದಲ್ಲಿ ರೋವರ್ ಲ್ಯಾಂಡಿಂಗ್ ಸಮಸ್ಯೆ ಯುಂಟಾಗಿತ್ತು. ಹೀಗಾಗಿ ಈ ಬಾರಿ ಯಾವುದೇ ತೊಂದರೆಯಾಗದೆ ಚಂದ್ರಯಾನ-3 ಯಶಸ್ವಿಯಾಗಲಿ ಎಂದು ಕಲಾವಿದ ಮಂಜುನಾಥ ಹಿರೇಮಠ ಅವರು ವಿಘ್ನೇಶ್ವರನಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಮಂಜುನಾಥ ಹಿರೇಮಠ ಅವರ ಕೈಚಳಕದಲ್ಲಿ ಚಂದ್ರಯಾನ-3 ಗಗನನೌಕೆ ಅದ್ಭುತವಾಗಿ ಮೂಡಿ ಬಂದಿದ್ದು, ನೋಡಿದವರು ವಾವ್ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.












Click it and Unblock the Notifications