ತಂದೆ ಸಾವಿನ ದುಃಖದಲ್ಲಿ ಪರೀಕ್ಷೆ ಬರೆದ ಹುಡುಗಿಗೆ ಶೇ 76ರಷ್ಟು ಅಂಕ
ಧಾರವಾಡ, ಮೇ 06 : ತಂದೆಯ ಸಾವಿನ ದುಃಖದ ನಡುವೆಯೇ ಪರೀಕ್ಷೆ ಬರೆದಿದ್ದ ಹೆಣ್ಣು ಮಗಳ ದಿಟ್ಟತನಕ್ಕೆ ರಾಜ್ಯವೇ ಭೇಷ್ ಎಂದಿತ್ತು. ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿನಿ ಶೇ 76ರಷ್ಟು ಅಂಕಗಳನ್ನು ಗಳಿಸುವ ಮೂಲಕ ಸಾಧನೆ ಮಾಡಿದ್ದಾಳೆ.
ಸೋಮವಾರ ಸಿಬಿಎಸ್‌ಇಯ 10ನೇ ತರಗತಿ ಫಲಿತಾಂಶ ಪ್ರಕಟವಾಗಿದೆ. ಸಚಿವರಾಗಿದ್ದ ಸಿ.ಎಸ್.ಶಿವಳ್ಳಿ ಅವರ ಪುತ್ರಿ ರೂಪಾ ಶಿವಳ್ಳಿ ಅವರು ಶೇ 76ರಷ್ಟು ಅಂಕಗಳನ್ನು ಪಡೆದು ಉತ್ತೀರ್ಣರಾಗಿದ್ದಾರೆ. ಸಿ.ಎಸ್.ಶಿವಳ್ಳಿ ಅವರು ನಿಧನರಾದ ಮರು ದಿನ ರೂಪಾ ಪರೀಕ್ಷೆ ಬರೆದಿದ್ದರು.
ಹುಬ್ಬಳ್ಳಿಯ ಕೆ.ಎಲ್.ಇ.ಇಂಗ್ಲಿಷ್ ಶಾಲೆಯ ವಿದ್ಯಾರ್ಥಿನಿ ರೂಪಾ ಅವರು ಚೇತನಾ ಕಾಲೋನಿಯಲ್ಲಿರುವ ಸೇಂಟ್ ಅಂಟೋನಿ ಶಾಲೆಯಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆದಿದ್ದರು. ಇಂದು ಫಲಿತಾಂಶ ಪ್ರಕಟವಾಗಿದ್ದು ಪ್ರಥಮ ಶ್ರೇಣಿಯಲ್ಲಿ ರೂಪಾ ಉತ್ತೀರ್ಣರಾಗಿದ್ದಾರೆ.

ಕುಂದಗೋಳ ಕ್ಷೇತ್ರದ ಕಾಂಗ್ರೆಸ್ ಶಾಸಕ, ಪೌರಾಡಳಿತ ಸಚಿವ ಸಿ.ಎಸ್.ಶಿವಳ್ಳಿ ಅವರು ಮಾರ್ಚ್ 22ರಂದು ಹೃದಯಾಘಾತದಿಂದಾಗಿ ನಿಧನಹೊಂದಿದ್ದರು. ಸಂಜೆ ಅವರ ಪಾರ್ಥಿವ ಶರೀರವನ್ನು ಹುಟ್ಟೂರು ಯುರಗುಪ್ಪಿಗೆ ತೆಗೆದುಕೊಂಡು ಹೋಗಲಾಗಿತ್ತು.
ತಂದೆಯ ಪಾರ್ಥಿವ ಶರೀರ ರಾತ್ರಿ ಮನೆಯಲ್ಲಿದ್ದೂ, ಇಡೀ ಕುಟುಂಬ ದುಃಖದಲ್ಲಿ ಮುಳಗಿದ್ದರೂ ರೂಪಾ ಅವರು ಮಾ.23ರಂದು ಎಸ್.ಎಸ್.ಎಲ್.ಸಿ.ಪರೀಕ್ಷೆ ಬರೆಯಲು ನಿರ್ಧರಿಸಿದ್ದರು. ಪರೀಕ್ಷೆ ಬರೆದು ಬಳಿ ತಂದೆಯ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡಿದ್ದರು.
ಸಿ.ಎಸ್.ಶಿವಳ್ಳಿ ಅವರ ನಿಧನದಿಂದ ತೆರವಾದ ಕುಂದಗೋಳ ವಿಧಾನಸಭಾ ಕ್ಷೇತ್ರಕ್ಕೆ ಮೇ 19ರಂದು ಉಪ ಚುನಾವಣೆ ನಡೆಯಲಿದೆ. ಸಿ.ಎಸ್.ಶಿವಳ್ಳಿ ಅವರ ಪತ್ನಿ ಕುಸುಮಾ ಶಿವಳ್ಳಿ ಅವರು ಕಾಂಗ್ರೆಸ್-ಜೆಡಿಎಸ್ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ.












Click it and Unblock the Notifications