ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆ ಅನುಮತಿ ನೀಡದ ಪಾಲಿಕೆ: ಕಾಂಗ್ರೆಸ್ ಮುಖಂಡರ ಪ್ರತಿಕೃತಿ ದಹನ
ಹುಬ್ಬಳ್ಳಿ, ಸೆಪ್ಟೆಂಬರ್ 15:ಹುಬ್ಬಳ್ಳಿ ನಗರದ ಈದ್ಗಾ ಮೈದಾನದಲ್ಲಿ ಹಿಂದೂ ಪರ ಸಂಘಟನೆಗಳಿಗೆ ಗಣೇಶೋತ್ಸವ ಆಚರಣೆಗೆ ಅನುಮತಿ ಕೊಟ್ಟರು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಅನುಮತಿ ನೀಡುತ್ತಿಲ್ಲ ಎನ್ನುವ ಆಕ್ರೋಶ ಹೆಚ್ಚಾಗಿದೆ.
ಆಯುಕ್ತರಾ ಡಾ.ಈಶ್ವರ ಉಳ್ಳಾಗಡ್ಡಿ ಅನುಮತಿ ಕೊಡುತ್ತಿಲ್ಲ. ಗಣೇಶೋತ್ಸವ ಆಚರಣೆಗೆ ಅವಕಾಶ ಕೊಡದಿರುವ ಹಿಂದೆ ರಾಜ್ಯ ಸರ್ಕಾರದ ಕೈವಾಡ ಇದೆ ಎಂದು ಆರೋಪಿಸಿ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ನಗರದ ಸಂಗೊಳ್ಳಿ ರಾಯಣ್ಣ ಸರ್ಕಲ್ ಬಳಿ ರಸ್ತೆ ತಡೆ ಮಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಶಿವಕುಮಾರ್ ಅವರ ಪ್ರತಿಕೃತಿ ದಹನ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.

ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಟಾಪನೆ ವಿಚಾರ ಮತ್ತಷ್ಟು ಕಗ್ಗಂಟಾಗಿದ್ದು, ಭಾರತೀಯ ಜನತಾ ಪಕ್ಷದ ಕಾರ್ಯಕರ್ತರ ಹಾಗೂ ಮುಖಂಡರು ಬೀದಿಗೀಳಿದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹೈಕೋರ್ಟ್ ನಿರ್ಣಯ ಪ್ರಕಟಗೊಂಡರೂ ಅನುಮತಿ ಕೊಡದ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಆಯುಕ್ತರ ಅನುಮತಿ ವಿಳಂಬಕ್ಕೆ ಮತ್ತಷ್ಟು ಕಿಡಿಕಾರಿದ್ದು, ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆ ಆವರಣದಿಂದ ಹೊರಗಡೆ ಬಂದು ರಸ್ತೆ ತಡೆ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಮೊದಲು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಮುಂಭಾಗ ರಸ್ತೆ ತಡೆ ನಡೆಸಿ ಉಗ್ರ ಹೋರಾಟಕ್ಕೆ ಮುಂದಾದ ಕಾರ್ಯಕರ್ತರು ರಸ್ತೆಯಲ್ಲಿಯೇ ಸರ್ಕಾರದ ವಿರುದ್ಧ ಘೋಷಣೆ ಕೂಗುವ ಮೂಲಕ ಅಸಮಾಧಾನ ವ್ಯಕ್ತಪಡಿಸಿದರು.
ಹುಬ್ಬಳ್ಳಿ ಧಾರವಾಡ ರಸ್ತೆಯಲ್ಲಿ ಪ್ರತಿಭಟನೆ ನಡೆಸಿದ ಬಿಜೆಪಿ ಕಾರ್ಯಕರ್ತರು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಆಯುಕ್ತರು ಸ್ಥಳಕ್ಕೆ ಆಗಮಿಸಬೇಕೆಂದು ಪಟ್ಟು ಹಿಡಿದರು. ಹುಬ್ಬಳ್ಳಿ ಧಾರವಾಡ ಪಶ್ಚಿಮ ವಿಧಾನಸಭಾ ಶಾಸಕ ಅರವಿಂದ ಬೆಲ್ಲದ್ ಹಾಗೂ ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ಶಾಸಕ ಶಾಸಕ ಮಹೇಶ ಟೆಂಗಿನಕಾಯಿ ಪ್ರತಿಭಟನೆಗೆ ಸಾಥ್ ನೀಡಿದ್ದಾರೆ. ಈ ವೇಳೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಫೋಟೋ ದಹನ ಮಾಡಲಾಗಿದೆ.

ಪ್ರತಿಭಟನಾ ಸ್ಥಳಕ್ಕೆ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ ಭೇಟಿ ನೀಡಿದ್ದು, ಪ್ರತಿಭಟನಾಕಾರರ ಮನವೊಲಿಸಲು ಪ್ರಯತ್ನ ಮಾಡಿದರು. ನಂತರ ಮಾತನಾಡಿದ ಅವರು, ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದರು. ಈಗ ದಿಢೀರ್ ರಸ್ತೆ ಬಂದ್ ಮಾಡಿದ್ದಾರೆ. ಪ್ರತಿಭಟನೆಯಿಂದ ಸಾರ್ವಜನಿಕರಿಗೆ ತೊಂದರೆ ಆಗಿದ್ದು, ತಕ್ಷಣವೇ ಪ್ರತಿಭಟನಾಕಾರರನ್ನು ವಾಪಸ್ ಕಳಸಿ, ರಸ್ತೆ ಸಂಚಾರ ಸುಗಮಗೊಳಿಸಿದ್ದೇವೆ ಎಂದರು.
ಮುಂದಿನ ಒಂದು ಗಂಟೆಯಲ್ಲಿ ಪಾಲಿಕೆ ಆಯುಕ್ತರು ತೀರ್ಮಾನ ತೆಗೆದುಕೊಳ್ಳುತ್ತಾರೆ. ಅಲ್ಲಿಯವರೆಗೂ ಶಾಂತಿ ಕಾಪಾಡಿ ಎಂದು ಪ್ರತಿಭಟನಾಕಾರರಿಗೆ ಹೇಳಿದ್ದೇವೆ. ದಿಢೀರ್ ರಸ್ತೆ ತಡೆ ನಡೆಸಿದ್ದಾರೆ. ಕಾನೂನು ಎಲ್ಲರಿಗೂ ಒಂದೇ ಕಾನೂನು ರೀತಿಯಲ್ಲಿ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.












Click it and Unblock the Notifications