ಹಾವೇರಿಯಿಂದ ಕನ್ನಡ ಸಾಹಿತ್ಯ ಸಮ್ಮೇಳನ ಎತ್ತಂಗಡಿ
ಧಾರವಾಡ, ಆ.18 : ಕಳೆದ ಆರು ತಿಂಗಳಿನಿಂದ ಗೊಂದಲದ ಗೂಡಾಗಿದ್ದ 81ನೇ ಸಾಹಿತ್ಯ ಸಮ್ಮೇಳನ ಅಂತಿಮವಾಗಿ ಹಾವೇರಿ ಜಿಲ್ಲೆಯ ಕೈ ತಪ್ಪಿದೆ. ಮುಂದಿನ ತಿಂಗಳು ಹಂಪಿಯಲ್ಲಿ ನಡೆಯಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಸಭೆಯಲ್ಲಿ ಎಲ್ಲಿ ಸಾಹಿತ್ಯ ಸಮ್ಮೇಳನ ನಡೆಸಬೇಕು ಎಂದು ತೀರ್ಮಾನ ಕೈಗೊಳ್ಳಗುತ್ತದೆ.
ಧಾರವಾಡದಲ್ಲಿ ಭಾನುವಾರ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪುಂಡಲೀಕ ಹಾಲಂಬಿ ಅವರು 81ನೇ ಸಾಹಿತ್ಯ ಸಮ್ಮೇಳನ ನಡೆಸುವ ಕುರಿತು ಹಾವೇರಿ ಜಿಲ್ಲೆಗೆ ನೀಡಲಾಗಿದ್ದ ಆಹ್ವಾನವನ್ನು ವಾಪಸ್ ಪಡೆಯಲಾಗಿದೆ ಎಂದು ಹೇಳಿದ್ದಾರೆ.

ಅಖಿಲ ಭಾರತ ಸಾಹಿತ್ಯ ಸಮ್ಮೇಳನ ನಡೆಸುವ ಕುರಿತು ಚರ್ಚಿಸಲು ಧಾರವಾಡದಲ್ಲಿ ಭಾನುವಾರ ಕರೆಯಲಾಗಿದ್ದ ಸಭೆಯಲ್ಲಿ ಸದಸ್ಯರು ಒಮ್ಮತದ ನಿರ್ಧಾರ ಕೈಗೊಳ್ಳುವಲ್ಲಿ ವಿಫಲವಾದ್ದರಿಂದ ಹಾವೇರಿಗೆ ನೀಡಲಾಗಿರುವ ಆಹ್ವಾನವನ್ನು ಹಿಂಪಡೆಯಲು ನಿರ್ಧರಿಸಲಾಗಿದೆ ಎಂದು ಪುಂಡಲೀಕ ಹಾಲಂಬಿ ತಿಳಿಸಿದ್ದಾರೆ.
ಕನ್ನಡ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸುವ ಕುರಿತು ಹಾವೇರಿ ಮತ್ತು ರಾಣೆಬೆನ್ನೂರು ತಾಲೂಕುಗಳ ನಡುವೆ ಜಿದ್ದಾಜಿದ್ದು ನಡೆಯುತ್ತಿತ್ತು. ಹಾವೇರಿಯಲ್ಲಿಯೇ ಸಮ್ಮೇಳನ ನಡೆಸಬೇಕು ಎಂದು ಒಂದು ದಿನದ ಹಾವೇರಿ ಬಂದ್ ಸಹ ನಡೆಸಲಾಗಿತ್ತು.
ಸೆಪ್ಟೆಂಬರ್ ತಿಂಗಳಿನಲ್ಲಿ ಹಂಪಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಸಭೆ ನಡೆಯಲಿದ್ದು, ಆ ಸಭೆಯಲ್ಲಿ ಸಾಹಿತ್ಯ ಸಮ್ಮೇಳನ ನಡೆಸುವ ನೂತನ ಸ್ಥಳದ ಕುರಿತು ನಿರ್ಧಾರ ಕೈಗೊಳ್ಳಲಾಗುತ್ತದೆ. 81ನೇ ಸಾಹಿತ್ಯ ಸಮ್ಮೇಳನದ ಆಯೋಜನೆಯ ಖುಷಿಯಲ್ಲಿದ್ದ ಹಾವೇರಿ ಜನತೆಗೆ ಆ ಅವಕಾಶ ಕೈತಪ್ಪಿದಂತಾಗಿದೆ. [ಹಾವೇರಿಯಲ್ಲಿ 81ನೇ ಕನ್ನಡ ಸಾಹಿತ್ಯ ಸಮ್ಮೇಳನ]
ಜನವರಿಯಲ್ಲಿ ಕೊಡಗಿನಲ್ಲಿ ನಡೆದ 80ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ 81 ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಹಾವೇರಿಯಲ್ಲಿ ನಡೆಸುವ ಕುರಿತು ತೀರ್ಮಾನ ಕೈಗೊಳ್ಳಲಾಗಿತ್ತು. ಜಿಲ್ಲಾ ಘಟಕಗಳ ಸಭೆಯಲ್ಲಿ ಈ ಕುರಿತು ಒಮ್ಮತದ ತೀರ್ಮಾನ ಕೈಗೊಳ್ಳಲಾಗಿತ್ತು. ಆದರೆ, ಸದ್ಯ ಸಮ್ಮೇಳನದ ಸ್ಥಳವನ್ನು ಬದಲಾವಣೆ ಮಾಡಲಾಗಿದೆ.












Click it and Unblock the Notifications