ರೇಣುಕಾಚಾರ್ಯರಿಗೆ ಯಡಿಯೂರಪ್ಪ ಎಚ್ಚರಿಕೆ ಕೊಟ್ಟಿದ್ದಾರೆ: ಹರಿಹರ ಬಿಜೆಪಿ ಶಾಸಕ ಬಿ.ಪಿ ಹರೀಶ್
ದಾವಣಗೆರೆ, ಜನವರಿ 20: ಬಿಜೆಪಿ, ಸಿದ್ದೇಶ್ವರ ವಿರುದ್ಧ ಆರೋಪ, ಟೀಕೆ ಮುಂದುವರಿಸಿದರೆ ಮಾಜಿ ಸಚಿವ ಎಂ. ಪಿ. ರೇಣುಕಾಚಾರ್ಯರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳುವುದಾಗಿ ದಾವಣಗೆರೆ ಬಿಜೆಪಿ ಮುಖಂಡರು ತಿಳಿಸಿದ್ದಾರೆ.
ಬಿಜೆಪಿ, ದಾವಣಗೆರೆ ಲೋಕಸಭಾ ಸದಸ್ಯ ಡಾ.ಜಿ. ಎಂ. ಸಿದ್ದೇಶ್ವರ ವಿರುದ್ಧ ಹೇಳಿಕೆ, ಟೀಕೆ, ಆರೋಪ ಮಾಡುವುದನ್ನು ಮುಂದುವರಿಸಿದರೆ ಮಾಜಿ ಸಚಿವ ಎಂ. ಪಿ. ರೇಣುಕಾಚಾರ್ಯರ ವಿರುದ್ಧ ತಕ್ಷಣವೇ ಶಿಸ್ತಿನ ಕ್ರಮ ತೆಗೆದುಕೊಳ್ಳಲಾಗುವುದು ಎಂಬುದಾಗಿ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಭರವಸೆ ನೀಡಿದ್ದಾರೆ.

ಅವರ ಸೂಚನೆಯಂತೆ ತುರ್ತು ಪತ್ರಿಕಾಗೋಷ್ಠಿ ನಡೆಸಲಾಗುತ್ತಿದೆ. ಪಕ್ಷ ವಿರೋಧಿ ನಡವಳಿಕೆ ಸಹಿಸುವ ಪ್ರಶ್ನೆಯೇ ಇಲ್ಲ. ಇನ್ನು ಮುಂದೆ ಬಹಿರಂಗ ಹೇಳಿಕೆ ನೀಡದಂತೆ ರೇಣುಕಾಚಾರ್ಯರಿಗೆ ಯಡಿಯೂರಪ್ಪರು ಫೋನ್ ಮಾಡಿ ಎಚ್ಚರಿಕೆ ಕೊಟ್ಟಿದ್ದಾರೆ ಎಂದು ಹರಿಹರ ಶಾಸಕ ಬಿ. ಪಿ. ಹರೀಶ್ ಹೇಳಿದರು.
ಜಿಲ್ಲಾ ವರದಿಗಾರರ ಕೂಟದಲ್ಲಿ ಕರೆದಿದ್ದ ತುರ್ತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎಂ. ಪಿ. ರೇಣುಕಾಚಾರ್ಯ ಅವರು ದಿನಕ್ಕೊಮ್ಮೆಯಾದರೂ ಮಾಧ್ಯಮದವರ ಮುಂದೆ ಬಂದು ಬಿಜೆಪಿಯಲ್ಲಿ ಗೊಂದಲ, ಕಾರ್ಯಕರ್ತರಲ್ಲಿ ದ್ವಂದ್ವ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಇದನ್ನು ಸಹಿಸಲು ಆಗದು. ಯಡಿಯೂರಪ್ಪ ಅವರೇ ಫೋನ್ ಮಾಡಿ ರೇಣುಕಾಚಾರ್ಯ ಅವರಿಗೆ ಪಕ್ಷಕ್ಕೆ, ಸಿದ್ದೇಶ್ವರ ಅವರಿಗೆ ಮುಜುಗರ ಆಗದಂತೆ ಹೇಳಿಕೆ ನೀಡಬಾರದು ಎಂಬ ಸೂಚನೆ ಕೊಟ್ಟಿದ್ದು, ಯಾವ ರೀತಿ ಪಾಲನೆ ಮಾಡುತ್ತಾರೆ ಎಂಬುದನ್ನು ನೋಡಬೇಕು. ಇದಕ್ಕೆ ಪ್ರತಿಕ್ರಿಯೆ ನೀಡಿದರೆ ಮುಂದೆ ನಾವೂ ಮಾತನಾಡುತ್ತೇವೆ ಎಂದು ತಿಳಿಸಿದರು.
ಕಳೆದ ಕೆಲವು ದಿನಗಳಿಂದ ಎಂ. ಪಿ. ರೇಣುಕಾಚಾರ್ಯ ಅವರು ದಾವಣಗೆರೆಗೆ ಬರುವುದು, ಮಾಧ್ಯಮದವರ ಜೊತೆ ಮಾತನಾಡುವುದು, ಮುಂಬರುವ ಲೋಕಸಭೆ ಚುನಾವಣೆಗೆ ಹೊರಗಿನವರಿಗೆ ಟಿಕೆಟ್ ಬೇಡ, ಸ್ಥಳೀಯರಿಗೆ ಟಿಕೆಟ್ ನೀಡಿ ಎನ್ನುವುದು ಸಾಮಾನ್ಯವಾಗಿದೆ. ದಿನವೂ ಮಾಧ್ಯಮಗಳ ಮುಂದೆ ಬಂದು ಪಕ್ಷಕ್ಕೆ ಹಾನಿಯಾಗುವಂತೆ ಹೇಳಿಕೆ ನೀಡುವುದರ ಹಿಂದೆ ಯಾರ ಚಿತಾವಣೆ ಇದೆ ಎಂಬುದು ಎಲ್ಲರಿಗೂ ಗೊತ್ತಿರು ವಿಚಾರ. ಇಂಥ ನಡವಳಿಕೆ ಮುಂದುವರಿಸಿದರೆ ಕ್ರಮ ಖಚಿತ ಎಂಬ ಭರವಸೆ ಸಿಕ್ಕಿದೆ ಎಂದು ಹೇಳಿದರು.

ದಾವಣಗೆರೆ ಜಿಲ್ಲೆಯ ಬಿಜೆಪಿ ನಿಷ್ಠಾವಂತ ಮುಖಂಡರು, ಕಾರ್ಯಕರ್ತರು ಸೇರಿದಂತೆ ಸುಮಾರು 40 ಮಂದಿ ಬೆಂಗಳೂರಿನಲ್ಲಿ ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ, ರಾಜ್ಯ ಘಟಕದ ಅಧ್ಯಕ್ಷ ಬಿ. ವೈ. ವಿಜಯೇಂದ್ರ, ಸಂಘಟನಾ ಕಾರ್ಯದರ್ಶಿ ರಾಜೇಶ್ ಸೇರಿದಂತೆ ಪಕ್ಷದ ವರಿಷ್ಠರನ್ನು ಭೇಟಿ ಮಾಡಿ ಜಿಲ್ಲೆಯ ಬೆಳವಣಿಗೆಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ದೇವೆ.
ರೇಣುಕಾಚಾರ್ಯರ ಹೇಳಿಕೆಗಳು, ಪಕ್ಷಕ್ಕಾಗುತ್ತಿರುವ ಹಾನಿ, ಕಾರ್ಯಕರ್ತರಲ್ಲಿ ಮೂಡುತ್ತಿರುವ ಗೊಂದಲ ಸೇರಿದಂತೆ ಎಲ್ಲಾ ವಿಚಾರಗಳನ್ನೂ ತಿಳಿಸಿದ್ದೇವೆ. ಆಗ ಕೂಡಲೇ ಯಡಿಯೂರಪ್ಪರು ರೇಣುಕಾಚಾರ್ಯರ ಜೊತೆ ಮಾತನಾಡಿದ್ದಾರೆ. ನಮಗೂ ತಾಳ್ಮೆಯಿತ್ತು. ತಾಳ್ಮೆಯ ಕಟ್ಟೆ ಒಡೆದ ಬಳಿಕ ವರಿಷ್ಠರ ಮುಂದೆ ಮನವಿ ಮಾಡಿದ್ದೇವೆ ಎಂದು ಹರೀಶ್ ಸ್ಪಷ್ಟಪಡಿಸಿದರು.
ಜಿಲ್ಲೆಯಲ್ಲಿ ಬಿಜೆಪಿ ಸದೃಢವಾಗಿ ಕಟ್ಟಿದ್ದು ದಿವಂಗತ ಮಲ್ಲಿಕಾರ್ಜುನಪ್ಪ ಹಾಗೂ ಸಂಸದ ಜಿ. ಎಂ. ಸಿದ್ದೇಶ್ವರರು. ಅವರ ಬಗ್ಗೆ ಮಾತನಾಡುವ ನೈತಿಕತೆ ರೇಣುಕಾಚಾರ್ಯರಿಗೆ ಇಲ್ಲ. ಒಟ್ಟು ಎಂಟು ಬಾರಿ ಈ ಕುಟುಂಬದವರು ಸ್ಪರ್ಧೆ ಮಾಡಿದ್ದಾರೆ.

ದಾವಣಗೆರೆ ಬಿಜೆಪಿ ಭದ್ರಕೋಟೆಯಾಗಿದೆ. ಲೋಕಸಭೆ ಚುನಾವಣೆಯಲ್ಲಿ ಕಳೆದ ಆರು ಚುನಾವಣೆಗಳಲ್ಲಿ ಸೋತಿಲ್ಲ. ಸಿದ್ದೇಶ್ವರ ಅವರ ವಿದ್ಯಾಸಂಸ್ಥೆಗಳು, ಕಾಲೇಜು, ವ್ಯವಹಾರ, ಕ್ಷೇತ್ರವೂ ದಾವಣಗೆರೆಯೇ ಆಗಿದೆ. ಮಲ್ಲಿಕಾರ್ಜುನಪ್ಪ ಹಾಗೂ ಸಿದ್ದೇಶ್ವರ ಅವರು ಲೋಕಸಭಾ ಸದಸ್ಯರಾದ ಬಳಿಕವೂ ಜಿಲ್ಲೆಯ 2 ಸಾವಿರ ಹಳ್ಳಿಗಳಿಗೆ ನಾಲ್ಕೈದು ಬಾರಿ ಭೇಟಿ ನೀಡಿದ್ದಾರೆ. ಆದ್ರೆ, ಇಂಥವರ ವಿರುದ್ಧ ಕಂಟಕ ತರುವ ಹೇಳಿಕೆ ಕೊಟ್ಟರೆ ರಾಜ್ಯ ನಾಯಕರು ಶಿಸ್ತಿನ ಕ್ರಮ ಜರುಗಿಸುವುದು ಖಚಿತ ಎಂದು ಹೇಳಿದರು.
ಪಕ್ಷ ವಿರೋಧಿ ಚಟುವಟಿಕೆ ನಡೆಸಿದರೆ ಯಾವುದೇ ಮುಲಾಜಿಲ್ಲದೇ ಕ್ರಮ ಜರುಗಿಸಲಾಗುವುದು ಎಂದು ಯಡಿಯೂರಪ್ಪರೇ ಹೇಳಿದ್ದಾರೆ. ಹಾಗಾಗಿ, ಯಾವ ಮುಖಂಡರು, ಕಾರ್ಯಕರ್ತರು ಇಂಥವರ ಜೊತೆ ಹೋಗಬಾರದು. ಟಿಕೆಟ್ ನಿರ್ಣಯಿಸುವುದು ರಾಜ್ಯ, ಜಿಲ್ಲಾ ಮುಖಂಡರಲ್ಲ. ಪಕ್ಷದ ಹೈಕಮಾಂಡ್. ಯಾರನ್ನೇ ಅಭ್ಯರ್ಥಿ ಮಾಡಿದರೂ ಧರ್ಮ, ಸಂಸ್ಕತಿ ಉಳಿಸಲು, ದೇಶಕ್ಕಾಗಿ, ನರೇಂದ್ರ ಮೋದಿ ಅವರ ಕೈ ಬಲಪಡಿಸಲು ದೇಶಭಕ್ತ ಬಿಜೆಪಿ ಕಾರ್ಯಕರ್ತರು ದುಡಿಯಬೇಕು. ಅಭ್ಯರ್ಥಿ ಯಾರೇ ಆದರೂ ಗೆಲುವಿಗೆ ಶ್ರಮಿಸೋಣ. ಟೀಕೆ ಮಾಡುವವರಿಗೆ ಸಹಕರಿಸಬೇಡಿ ಎಂದು ಮನವಿ ಮಾಡಿದರು.
ಯತ್ನಾಳ್, ಎಂಪಿಆರ್ ಟೀಕೆ ಅಂತ್ಯವಾಗಲೇ ಬೇಕು
ದಾವಣಗೆರೆ ಜಿಲ್ಲೆಯು ಬಿಜೆಪಿ ಭದ್ರಕೋಟೆ. ಇದಕ್ಕೆ ಲೋಕಸಭೆ ಚುನಾವಣಾ ಫಲಿತಾಂಶವೇ ಸಾಕ್ಷಿ. ಆದ್ರೆ, ಇತ್ತೀಚಿನ ದಿನಗಳಲ್ಲಿ ಪಕ್ಷಕ್ಕೆ ಡ್ಯಾಮೇಜ್ ಆಗುವ ರೀತಿಯಲ್ಲಿ ವರ್ತಿಸುತ್ತಿರುವ ಮಾಜಿ ಸಚಿವ ಎಂ. ಪಿ. ರೇಣುಕಾಚಾರ್ಯ ಹಾಗೂ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಕ್ರಮ ಆಗಲೇಬೇಕು. ಶಿಸ್ತು ಕ್ರಮ ಜರುಗಿಸಲೇಬೇಕು. ಆಗ ಮಾತ್ರ ಎಲ್ಲದಕ್ಕೂ ಅಂತ್ಯ ಸಿಗಲು ಸಾಧ್ಯ ಎಂದು ಬಿ. ಪಿ. ಹರೀಶ್ ಪ್ರತಿಪಾದಿಸಿದರು.
ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮತ್ತೊಮ್ಮೆ ದಾವಣಗೆರೆ ಜಿಲ್ಲೆಯಲ್ಲಿ ಬಿಜೆಪಿ ಗೆಲ್ಲಬೇಕು, ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೊಮ್ಮೆ ದೇಶದ ಪ್ರಧಾನಿ ಆಗಬೇಕು ಎಂಬ ದೃಷ್ಟಿಯಲ್ಲಿ ನಾವೆಲ್ಲರೂ ಸೇರಿ ಪಕ್ಷ ಸಂಘಟನೆ ಮಾಡೋಣ. ಇದು ನನ್ನ ವೈಯಕ್ತಿಕ ಹಾಗೂ ಪಕ್ಷದ ಪ್ರಾರ್ಥನೆ ಎಂದು ಹೇಳಿದರು.
ಎಂ. ಪಿ. ರೇಣುಕಾಚಾರ್ಯರ ನಡವಳಿಕೆಗಳ ಕುರಿತಂತೆ ಮಾಹಿತಿ ನೀಡಲು ಹಾಗೂ ದೂರು ಕೊಡುವುದಕ್ಕಾಗಿ ಸುಮಾರು 40 ಜನರು ತೆರಳಿದ್ದೆವು. ಆದ್ರೆ, ಜಿಲ್ಲಾಧ್ಯಕ್ಷರಿಗೆ ಈ ಮಾಹಿತಿ ಇರಲಿಲ್ಲ. ಅವರೂ ಅಧ್ಯಕ್ಷರಾಗಿ ಕೆಲವೇ ಕೆಲ ದಿನಗಳು ಮಾತ್ರ ಆಗಿವೆ. ಹಾಗಾಗಿ, ಈ ವಿಚಾರ ಗಮನಕ್ಕೆ ತಂದಿರಲಿಲ್ಲ. ಈಗ ಗಮನಕ್ಕೆ ತರುತ್ತೇವೆ. ಯಾರ್ಯಾರು ರೇಣುಕಾಚಾರ್ಯರ ನಡವಳಿಕೆಯಿಂದ ಬೇಸತ್ತಿದ್ದರೋ ಅವರೆಲ್ಲರೂ ಬಂದಿದ್ದರು.
ಮಾಜಿ ಸಚಿವರು, ಮಾಜಿ ಶಾಸಕರು, ಪಕ್ಷದ ಮುಖಂಡರು, ಕಾರ್ಯಕರ್ತರು ಪಕ್ಷಕ್ಕೆ ಹಾನಿ ಮಾಡುವಂತವರ ಜೊತೆ ಹೋಗಬೇಡಿ ಎಂದು ಪ್ರಾರ್ಥನೆ ಮಾಡುತ್ತೇನೆ. ಯಡಿಯೂರಪ್ಪ ಅವರೂ ಸಹ ಪಕ್ಷಕ್ಕೆ ಹಾನಿ ಮಾಡಿದರೆ ಸಹಿಸಿಕೊಂಡು ಕೂರಲು ಸಾಧ್ಯವಿಲ್ಲ. ನಾನು ಯಾರೇ ಇದ್ದರೂ ಮಾತನಾಡುತ್ತೇನೆ ಎಂದು ಹೇಳಿದ್ದಾರೆ ಎಂದರು.
ಯಡಿಯೂರಪ್ಪರು ಈಗಾಗಲೇ ಫೋನ್ ಮೂಲಕ ರೇಣುಕಾಚಾರ್ಯರ ಜೊತೆ ಮಾತನಾಡಿದ್ದಾರೆ. ಅವರು ದಾವಣಗೆರೆಗೆ ಬಂದು ಸಮಸ್ಯೆ ಬಗೆಹರಿಸಬೇಕು ಎಂದೇನಿಲ್ಲ. ಬೆಂಗಳೂರಿಗೆ ಕರೆಯಿಸಿಕೊಂಡು ಮಾತನಾಡುತ್ತಾರೆ. ಏನೇ ಸಮಸ್ಯೆಗಳಿದ್ದರೂ ಪಕ್ಷದ ಚೌಕಟ್ಟಿನೊಳಗೆ ಅಭಿಪ್ರಾಯ ವ್ಯಕ್ತಪಡಿಸಬೇಕು. ಅದನ್ನು ಬಿಟ್ಟು ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಈ ಹೊತ್ತಿನಲ್ಲಿ ಗೊಂದಲ ಹೇಳಿಕೆ ನೀಡಿದರೆ ಕಾರ್ಯಕರ್ತರೂ ಗೊಂದಲಕ್ಕೆ ಒಳಗಾಗುತ್ತಾರೆ. ಪಕ್ಷಕ್ಕೆ ಹಿನ್ನೆಡೆ ಆಗುವ ಸಾಧ್ಯತೆ ಹಿನ್ನೆಲೆಯಲ್ಲಿ ನಾವೆಲ್ಲರೂ ಮೊದಲೇ ಎಚ್ಚೆತ್ತುಕೊಂಡು ಈ ಕೆಲಸ ಮಾಡಿದ್ದೇವೆ ಎಂದು ತಿಳಿಸಿದರು.
ಯಾರಿಗೆ ತಪ್ಪು ನಡೆಯುತ್ತದೆ ಎಂದು ಅನಿಸಿದೆಯೋ ಅವರೆಲ್ಲರೂ ಯಡಿಯೂರಪ್ಪರ ಭೇಟಿಗೆ ಹೋದ ನಿಯೋಗದ ಜೊತೆ ಬಂದಿದ್ದರು. ಸಮಸ್ಯೆಗಳನ್ನು ಸರಿಪಡಿಸಲು ಯತ್ನಿಸುತ್ತಾರೆ. ಎಲ್ಲವೂ ಸರಿ ಹೋಗುತ್ತದೆ ಎಂಬ ವಿಶ್ವಾಸ ಇದೆ. ಆದ್ರೆ,ಸರಿಹೋಗದಿದ್ದರೆ ಕ್ರಮ ಜರುಗಿಸಲೇಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್, ಮುಖಂಡರಾದ ಬಿ. ಎಸ್. ಜಗದೀಶ್, ಹನುಮಂತ ನಾಯ್ಕ, ದೂಡಾ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಮಹಾನಗರ ಪಾಲಿಕೆ ಮಾಜಿ ಸದಸ್ಯ ಶಿವನಗೌಡ ಪಾಟೀಲ್, ಮಾಧ್ಯಮ್ ಪ್ರಮುಖ್ ಹೆಚ್. ಪಿ. ವಿಶ್ವಾಸ್, ಗಂಗಾಧರ್ ಮತ್ತಿತರರು ಹಾಜರಿದ್ದರು.
-
Bengaluru: ಶಾಲೆಗಳಿಗೂ BWSSB ನೀರಿನ ಬಿಲ್ ಶಾಕ್; ಡಿಸಿಎಂ ಡಿ.ಕೆ. ಶಿವಕುಮಾರ್ ಮೊರೆ ಹೋದ ಖಾಸಗಿ ಶಿಕ್ಷಣ ಸಂಸ್ಥೆಗಳು -
ಸಕಲೇಶಪುರದಲ್ಲಿ ಫೋಟೋಗ್ರಾಫರ್ಗಳ ಮೇಲೆ ಹಲ್ಲೆ ಪ್ರಕರಣ: ದುಬಾರಿ ಕ್ಯಾಮೆರಾಗೆ ಹಾನಿ, ಆರೋಪಿಗಳ ಬಂಧನ -
Price Hike: ಕೇಂದ್ರದಿಂದ ಪೆಟ್ರೋಲ್-ಡೀಸೆಲ್ ಬೆಲೆ ಹೆಚ್ಚಳ ಹೇಳಿಕೆ, ದರ ಹೆಚ್ಚಿಸಿದ್ದೇ ಕಾಂಗ್ರೆಸ್; ಡಿಕೆಶಿಗೆ ತಿರುಗೇಟು -
By Election: ಸಿದ್ದರಾಮಯ್ಯರಿಂದ ಅಹಿಂದ ಜೊತೆಗೆ ಗುತ್ತಿಗೆ ರಾಜಕಾರಣ: ಮಾಜಿ ಸಿಎಂ ಗಡುಗು -
ದಾವಣಗೆರೆಯಲ್ಲಿ ಹೈಡ್ರಾಮಾ: ಪ್ರದೀಪ್ ಈಶ್ವರ್ ಪ್ರಚಾರದ ವೇಳೆ ಚಪ್ಪಲಿ, ಪೊರಕೆ ತೋರಿಸಿದ ಬಿಜೆಪಿ ಕಾರ್ಯಕರ್ತರು -
ತಮಿಳುನಾಡು ಚುನಾವಣೆ 2026: ಟಿವಿಎಕೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ; ಎರಡು ಕ್ಷೇತ್ರಗಳಿಂದ ನಟ ದಳಪತಿ ವಿಜಯ್ ಸ್ಪರ್ಧೆ -
ಕುಕ್ಕರ್ ಬಾಂಬ್ ಬ್ಲಾಸ್ಟ್ ಕೇಸ್: ಕಾಂಗ್ರೆಸ್ ಉಗ್ರರಿಗೆ 'ಗ್ಯಾರಂಟಿ ಭಾಗ್ಯ' ನೀಡಿದರೂ ಅಚ್ಚರಿಯಿಲ್ಲ; ವಿಜಯೇಂದ್ರ -
Gen Z ಪ್ರತಿಭಟನೆಯಲ್ಲಿ 'ಪಾತ್ರ': ಬಲೆನ್ ಪ್ರಮಾಣ ವಚನ ಸ್ವೀಕರಿಸಿದ ಮರುದಿನವೇ ನೇಪಾಳ ಮಾಜಿ ಪ್ರಧಾನಿ ಕೆಪಿ ಶರ್ಮಾ ಒಲಿ ಬಂಧನ -
ಸೋಷಿಯಲ್ ಮೀಡಿಯಾಗೆ ವಯೋಮಿತಿ ಫಿಕ್ಸ್?: ಕಠಿಣ 'ಎಐ' ಕಾನೂನು ಜಾರಿಗೆ ಸಂಸದೀಯ ಸಮಿತಿ ಶಿಫಾರಸು -
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ. -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ












Click it and Unblock the Notifications