ದಾವಣಗೆರೆಯಲ್ಲಿ ಮತದಾರರಿಗೆ ಹಂಚಲು ದಾಸ್ತಾನು ಮಾಡಿದ್ದ 16.65 ಲಕ್ಷ ರೂ. ಮೌಲ್ಯದ ಗೃಹಬಳಕೆ ವಸ್ತುಗಳ ವಶ
ದಾವಣಗೆರೆ ದಕ್ಷಿಣ ವಿಭಾಗದ 107 ಮತಕ್ಷೇತ್ರದ ವ್ಯಾಪ್ತಿಯಲ್ಲಿ ಮತದಾರರಿಗೆ ಹಂಚಲು ಅಕ್ರಮವಾಗಿ ದಾಸ್ತಾನು ಮಾಡಿದ್ದ ಗೃಹಬಳಕೆ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡು ಮೊಕದ್ದಮೆ ದಾಖಲಿಸಿದ್ದಾರೆ.
ದಾವಣಗೆರೆ, ಮಾರ್ಚ್, 20: ದಾವಣಗೆರೆ ದಕ್ಷಿಣ ವಿಭಾಗದ 107 ಮತಕ್ಷೇತ್ರದ ವ್ಯಾಪ್ತಿಯಲ್ಲಿ ಮತದಾರರಿಗೆ ಹಂಚಲು 16,65,630 ರೂಪಾಯಿ ಮೌಲ್ಯದ ಗೃಹಬಳಕೆ ವಸ್ತುಗಳನ್ನು ಅಕ್ರಮವಾಗಿ ದಾಸ್ತಾನು ಮಾಡಿದ್ದು, ಇದೀಗ ಇವುಗಳನ್ನು ಪೊಲೀಸರು ವಶಪಡಿಸಿಕೊಂಡು ಮೊಕದ್ದಮೆ ದಾಖಲಿಸಿದ್ದಾರೆ.
ಗೃಹಬಳಕೆ ವಸ್ತುಗಳ ವಶ
ಮಾರ್ಚ್ 19ರ ಸಂಜೆ ದಾವಣಗೆರೆ ಶಹರದ ಗಾಂಧಿನಗರ ಪೊಲೀಸ್ ಠಾಣೆ ಸರಹದ್ದಿನ ನಾಲಾಬಂದ್ ರಸ್ತೆಯಲ್ಲಿನ ಮಾಲತೇಶ ಜಾಧವ್ ಎಂಬುವವರಿಗೆ ಸೇರಿದ ಶೆಡ್‍ನಲ್ಲಿ ಅಂದಾಜು ಮೌಲ್ಯ 16,65,630 ರೂಪಾಯಿ ಮೌಲ್ಯದ ನಿರ್ಲಾನ್ ಗೆಲಾಕ್ಸಿ 353 ರಟ್ಟಿನ ಬಾಕ್ಸ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಹಾಗೂ ಕೊಂಬೊ ಪ್ಯಾಕ್ 244 ರಟ್ಟಿನ ಬಾಕ್ಸ್ ಸೇರಿ 597 ರಟ್ಟಿನ ಬಾಕ್ಸ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಬಾಕ್ಸ್‌ಗಳ ಮೇಲೆ ರಾಜಕಾರಣಿಗಳ ಭಾವಚಿತ್ರ
ಪ್ರತಿ ರಟ್ಟಿನ ಬಾಕ್ಸ್‍ನ ಮೇಲೆ 2790 ರೂಪಾಯಿ ಎಂದು ನಮೂದಿಸಲಾಗಿದ್ದು, ಎಲ್ಲಾ ಬಾಕ್ಸ್‌ಗಳ ಮೇಲೆ ಎಸ್.ಎಸ್. ಮತ್ತು ಎಸ್.ಎಸ್.ಎಂ. ಅಭಿಮಾನ ಬಳಗ, ಹಸ್ತದ ಗುರುತು ಇರುವ ಹಾಗೂ ಹಾಲಿ ಶಾಸಕರಾದ ಶ್ಯಾಮನೂರು ಶಿವಶಂಕರಪ್ಪ ಹಾಗೂ ಮಾಜಿ ಶಾಸಕ ಎಸ್.ಎಸ್.ಮಲ್ಲಿಕಾರ್ಜುನ್ ಅವರ ಭಾವಚಿತ್ರ ಅಂಟಿಸಿರುವುದು ಕಂಡುಬಂದಿದೆ.
ದಾಸ್ತಾನು ಮಾಲೀಕನ ವಿರುದ್ಧ ಪ್ರಕರಣ ದಾಖಲು
ಪತ್ತೆಯಾದ ಬಾಕ್ಸ್‌ಗಳ ಒಳಗೆ ಗೃಹ ಬಳಕೆಗೆ ಸಂಬಂಧಿಸಿದ ನಾನ್‍ಸ್ಟಿಕ್ ಕೋಟಿಂಗ್ ಇರುವ ಕಡಾಯಿ, ಪ್ರೈಫ್ಯಾನ್, ಕ್ಯಾರೋಲ್, ವುಡ್ ಸ್ಟಿಕ್‍ಗಳು ಕಂಡುಬಂದಿವೆ. ಮತದಾರರಿಗೆ ಹಂಚಲು ದಾಸ್ತಾನು ಮಾಡಿರುವ ಅನುಮಾನ ವ್ಯಕ್ತವಾಗಿದೆ. ಆದ್ದರಿಂದ ದಾಸ್ತಾನು ಮಾಡಿದ ಶೆಡ್ಡಿನ ಮಾಲೀಕ ಮಾಲತೇಶ ಜಾಧವ್ ಎಂಬುವರು ಸ್ಥಳಕ್ಕೆ ಬಂದು ಸಹಕರಿಸಿದ್ದು, ನಂತರ ಶೆಡ್ ಅನ್ನು ಸೀಲ್ ಮಾಡಿ ಮಾಲೀಕನ ವಿರುದ್ಧ ಕಲಂ 171(ಇ) ಐಪಿಸಿ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ದಾವಣಗೆರೆ ದಕ್ಷಿಣ ವಿಭಾಗದ ಮತಕ್ಷೇತ್ರದ (107) ಸಹಾಯಕ ಚುನಾವಣಾಧಿಕಾರಿ ಬಿ.ಎಂ.ಮಾನೆ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳಾದ ಅನೀಲ್ ಕುಮಾರ, ಶಿವಾನಂದ ಡಿ. ಹಾಗೂ ಪೊಲೀಸರ ಸಮಕ್ಷಮದಲ್ಲಿ ಪಂಚನಾಮೆ ನಡೆಸಿ ದೂರು ದಾಖಲಿಸಿದ್ದಾರೆ.
ಚಿಕ್ಕಮಗಳೂರಿನಲ್ಲಿ ಸೀರೆ ಹಂಚಿಕೆ
ಇತ್ತೀಚೆಗಷ್ಟೇ ಚುನಾವಣೆ ನೆಪದಲ್ಲಿ ಮುಂಬರುವ ಯುಗಾದಿ ಹಬ್ಬಕ್ಕೆ ಚಿಕ್ಕಮಗಳೂರಿನಲ್ಲಿ ಶಾಸಕ ಸಿ.ಟಿ. ರವಿ ಮಹಿಳೆಯರಿಗೆ ಸೀರೆ ಹಂಚಿಕೆ ಮಾಡಿದ್ದರು. ಇದೇ ವಿಚಾರಕ್ಕೆ ಇದೀಗ ಸಿ.ಟಿ.ರವಿ ಬೆಂಬಲಿಗರಿಗೆ ಮತದಾರರು ಮೈಚಳಿ ಬಿಡಿಸಿರುವ ಘಟನೆ ಚಿಕ್ಕಮಗಳೂರು ತಾಲೂಕಿನಲ್ಲಿ ನಡೆದಿದೆ. ಕಳೆದ ರಾತ್ರಿ ಬಿಜೆಪಿ ಕಾರ್ಯಕರ್ತರು ಚಿಕ್ಕಮಗಳೂರು ತಾಲೂಕಿನ ಭಕ್ತರಹಳ್ಳಿ, ಮಲ್ಲೇನಹಳ್ಳಿ ಭಾಗದಲ್ಲಿ ಸೀರೆ ಹಂಚಿದ್ದಾರೆ. ಈ ವೇಳೆ ಮನೆಗೆ ಬಂದ ಮದ್ಯವ್ಯಸನಿಯೊಬ್ಬ ಸೀರೆಗೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದ್ದಾರೆ. ಹಾಗೆಯೇ ರಸ್ತೆ ಮಧ್ಯೆ ಸೀರೆಯನ್ನು ಸುಟ್ಟು ಬಿಜೆಪಿ ಕಾರ್ಯಕರ್ತರಿಗೆ ಅಲ್ಲೇ ಕ್ಲಾಸ್ ತೆಗೆದುಕೊಂಡಿದ್ದಾನೆ.
ಕೊರೊನಾ ಸಂದರ್ಭದಲ್ಲಿ ಒಂದು ಕೆ.ಜಿ. ಅಕ್ಕಿಯನ್ನೂ ಕೊಟ್ಟಿಲ್ಲ. ಈಗ ಚುನಾವಣೆ ಸಮೀಪಿಸುತ್ತಿದೆ ಅಂತಾ ಸೀರೆ ಹಂಚಲು ಬಂದಿದ್ಧೀರಾ? ಎಂದು ಪ್ರಶ್ನಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಮ್ಮ ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಸೂಕ್ತವಾದ ಮೂಲಭೂತ ಸೌಲಭ್ಯ ಬೇಕು ಎಂದು ನಶೆಯಲ್ಲಿ ಬಿಜೆಪಿಗರಿಗೆ ಹಿಗ್ಗಾಮುಗ್ಗಾ ಕ್ಲಾಸ್ ತೆಗೆದುಕೊಂಡಿದ್ದಾರೆ. ಹಾಗೆಯೇ ಎರಡ್ಮೂರು ಸೀರೆಗಳನ್ನು ರಸ್ತೆಗೆ ಹಾಕಿ ಬೆಂಕಿ ಹಚ್ಚಿದ್ದಾನೆ. ಇದನ್ನು ಕಂಡ ಬಿಜೆಪಿ ಕಾರ್ಯಕರ್ತರು ಸ್ಥಳದಿಂದ ಕಾಲ್ಕಿತ್ತಿದ್ದರು.












Click it and Unblock the Notifications