ದೇವನಗರಿಯಲ್ಲಿ ನಿಲ್ಲದ ನಾಯಿಗಳ ದಾಳಿ: ಪಾಲಿಕೆ ವಿರುದ್ಧ ರೊಚ್ಚಿಗೆದ್ದ ಜನ
ದಾವಣಗೆರೆ, ಡಿಸೆಂಬರ್, 12: ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಹಾವಳಿ ಜಾಸ್ತಿಯಾಗಿದ್ದು, ಜನರು ಭಯದಲ್ಲಿಯೇ ಓಡಾಡುವಂತಹ ಪರಿಸ್ಥಿತಿ ನಿರ್ಮಾಣ ಆಗಿದೆ. ಇದಕ್ಕೆ ಮಹಾನಗರ ಪಾಲಿಕೆ ಆಡಳಿತ ಹಾಗೂ ಅಧಿಕಾರಿ ವರ್ಗ ಶಾಶ್ವತ ಪರಿಹಾರ ಒದಗಿಸಬೇಕು ಎಂದು ಜನರು ಆಗ್ರಹಿಸುತ್ತಿದ್ದಾರೆ. ಆದರೆ ಅಧಿಕಾರಿಗಳು ಮಾತ್ರ ಇದುವರೆಗೂ ಇತ್ತ ತಲೆ ಹಾಕುತ್ತಿಲ್ಲ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದಾವಣಗೆರೆ ನಗರದಾದ್ಯಂತ ನಾಯಿಗಳು ಎಲ್ಲೆಡೆ ವಾಹನ ಸವಾರರ ಮೇಲೆ ದಾಳಿ ಮಾಡುತ್ತಲೇ ಇರುತ್ತವೆ. ಇನ್ನು ನಾಯಿಗಳ ಹಾವಳಿ ಹೆಚ್ಚಾದ ಕಾರಣ ಮಕ್ಕಳು, ಮಹಿಳೆಯರು ಸೇರಿದಂತೆ ಜನರು ಮನೆಯಿಂದ ಹೊರಬರಲು ಭಯಪಡುವಂತಹ ವಾತಾವರಣ ನಿರ್ಮಾಣವಾಗಿದೆ. ಆದರೆ ಅಧಿಕಾರಿಗಳು ಮಾತ್ರ ಇದುವರೆಗೂ ನಾಯಿಗಳ ಹಾವಳಿ ತಡೆಗಟ್ಟುವಂತಹ ಯಾವುದೇ ಸೂಕ್ತ ಕೈಗೊಂಡಿಲ್ಲ ಎಂದು ಜನರು ಹಿಡಿಶಾಪ ಹಾಕುತ್ತಿದ್ದಾರೆ.
ದೇವನಗರಿಯಲ್ಲಿ ಹೆಚ್ಚಿದ ನಾಯಿಗಳ ಹಾವಳಿ
ದಾವಣಗೆರೆ ಎಂಸಿಸಿ ಬಿ ಬ್ಲಾಕ್‌ನ ಈಜುಕೊಳ ಬಳಿಯ ಹಿರಿಯ ನಾಗರಿಕರ ಪಾರ್ಕ್‌ನಲ್ಲಿ ಹತ್ತಾರು ನಾಯಿಗಳು ಹಂದಿಯ ಮರಿಗಳನ್ನು ಬೇಟೆಯಾಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇನ್ನು ವಾಹನ ಸವಾರರನ್ನು ಕೂಡ ಹಿಂಬಾಲಿಸಿ ದಾಳಿ ನಡೆಸುತ್ತಿವೆ. ಇದರಿಂದ ಅಪಘಾತಗಳ ಸಂಖ್ಯೆಯೂ ಕೂಡ ಹೆಚ್ಚಾಗಿದೆ. ನಾಯಿಯಿಗಳನ್ನು ಕಂಡರೆ ಸಾಕು ಜನರು ಬೆಚ್ಚಿಬೀಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹಂದಿ ಮರಿ ಬೇಟೆಯಾಡುವಾಗ ನಾಯಿಗಳ ಗೀಳಿಗೆ ಜನರು ಕಂಗಾಲಾಗಿದ್ದಾರೆ. ನಾಯಿಗಳ ದಾಳಿಯಿಂದ ಜನರು ನಿತ್ಯವೂ ತಪ್ಪಿಸಿಕೊಳ್ಳಲು ಪರದಾಡುವಂತಾಗಿದೆ.

ಪಾಲಿಕೆ ವಿರುದ್ಧ ರೊಚ್ಚಿಗೆದ್ದ ಜನ
ಇನ್ನು ಆಜಾದ್ ನಗರದಲ್ಲಿ ವ್ಯಕ್ತಿಯ ಮೇಲೆ ನಾಯಿಗಳು ದಾಳಿ ನಡೆಸಿದ್ದು, ಕೈ, ಕಾಲಿಗೆ ಕಚ್ಚಿವೆ. ಇದರಿಂದಾಗಿ ಮಕ್ಕಳು, ಮಹಿಳೆಯರು ಜೀವಭಯದಲ್ಲಿಯೇ ಓಡಾಡುವಂತಾಗಿದೆ. ನಾಯಿಗಳನ್ನು ಬೇರೆಡೆ ಸ್ಥಳಾಂತರಿಸುವಂತೆ ಒತ್ತಾಯ ಹೆಚ್ಚಾಗುತ್ತಿದ್ದರೂ ಯಾವ ಅಧಿಕಾರಿಗಳು ಕೂಡ ಗಂಭೀರವಾಗಿ ಪರಿಗಣಿಸಿಲ್ಲ.
ಪಾಲಿಕೆಯಿಂದ ರೇಬಿಸ್ ಲಸಿಕೆ ಹಾಕಿ ವಾಪಸ್ ಬಿಟ್ಟ ಬಳಿಕ ಶ್ವಾನಗಳು ರೊಚ್ಚಿಗೇಳುತ್ತಿವೆ. ಪಾಲಿಕೆ ಆಡಳಿತದ ನಿರ್ಲಕ್ಷ್ಯಕ್ಕೆ ಜನರು ಪ್ರತಿಕ್ಷಣವೂ ಹಿಡಿಶಾಪ ಹಾಕುತ್ತಿದ್ದು, ಪಾಲಿಕೆ ವಿರುದ್ಧ ಕೆಂಡಕಾರುತ್ತಿದ್ದಾರೆ. ಇದಕ್ಕೂ ಮುನ್ನ ಪಾಲಿಕೆ ವ್ಯಾಪ್ತಿಯಲ್ಲಿನ ನಾಯಿಗಳನ್ನು ನಗರದ ಹೊರವಲಯದಲ್ಲಿ ಜಾಗ ನೋಡಿ ಸ್ಥಳಾಂತರಿಬೇಕು. ಈ ಬಗ್ಗೆ ಕೂಡಲೇ ಕ್ರಮ ಜರುಗಿಸಬೇಕು ಎಂದು ಜನರು ಒತ್ತಾಯಿಸಿದ್ದಾರೆ.

ನಾಯಿಗಳ ದಾಳಿಯಿಂದ ಬೇಸತ್ತ ಜನ
ಪಶು ವೈದ್ಯಾಧಿಕಾರಿಗಳು, ಪಾಲಿಕೆ ಆರೋಗ್ಯಾಧಿಕಾರಿಗಳು ಕರೆ ಮಾಡಿದರೆ ಸ್ವೀಕರಿಸುವುದಿಲ್ಲ. ಜನರು ಯಾರ ಬಳಿ ಸಮಸ್ಯೆ ಹೇಳಿಕೊಳ್ಳಬೇಕು? ಪಾಲಿಕೆ ಆಡಳಿತ ಸತ್ತು ಹೋಗಿದೆಯಾ? ನಾಯಿಗಳ ಹಾವಳಿ ತಡೆಗೆ ಯಾಕೆ ಕ್ರಮ ಕೈಗೊಂಡಿಲ್ಲ? ಬಂದಿರುವ ಅನುದಾನ ಏನಾಗಿದೆ? ಈ ಬಗ್ಗೆ ಪಾಲಿಕೆ ಮೇಯರ್ ಜಯಮ್ಮ ಗೋಪಿನಾಯ್ಕ್ ಉತ್ತರಿಸಬೇಕು ಎಂದು ಜನರು ಪ್ರಶ್ನಿಸುತ್ತಿದ್ದಾರೆ. ಇನ್ನು ಪಾಲಿಕೆಯ ಆರೋಗ್ಯಾಧಿಕಾರಿಗಳಿಗೆ ಈ ಬಗ್ಗೆ ಕೇಳಿದರೆ ಸೂಕ್ತವಾದ ಜಾಗ ಗುರುತಿಸಬೇಕು. ಆ ಜಾಗದಲ್ಲಿ ನಾಯಿಗಳನ್ನು ಬಿಟ್ಟರೆ ಶಾಶ್ವತ ಪರಿಹಾರ ಸಿಗುತ್ತದೆ. ಇಲ್ಲದಿದ್ದರೆ ಈ ಸಮಸ್ಯೆ ಪರಿಹರಿಸಲು ಆಗುವುದಿಲ್ಲ. ನಾವು ನಮ್ಮ ಕೈಯಲ್ಲಾದಷ್ಟು ನಾಯಿಗಳ ಸ್ಥಳಾಂತರಕ್ಕೆ ಶ್ರಮ ವಹಿಸುತ್ತಿದ್ದೇವೆ ಎಂದು ತಿಳಿಸಿದರು.












Click it and Unblock the Notifications