ಹಳ್ಳ ಹಿಡಿದ ಸ್ಮಾರ್ಟ್ ಸಿಟಿಯ ನಗರ ಅಂದಗೊಳಿಸುವ ಯೋಜನೆ: ಹೂವಿನ ಕುಂಡದಲ್ಲಿ ಮದ್ಯದ ಬಾಟಲಿ ಪತ್ತೆ
ದಾವಣಗೆರೆ, ಜನವರಿ 13: ದಾವಣಗೆರೆಯ ಪಿ.ಬಿ. ರಸ್ತೆಯಲ್ಲಿ ನಗರದ ಅಂದ ಹೆಚ್ಚಿಸುವ ಉದ್ದೇಶದಿಂದ ಹೂವು ಕುಂಡಗಳನ್ನು ಖರೀದಿ ಮಾಡಲಾಗಿತ್ತು. ಆದರೆ ಸೂಕ್ತ ನಿರ್ವಹಣೆ, ದೂರದೃಷ್ಟಿತ್ವ ಇಲ್ಲದ ಕಾರಣ ಈ ಯೋಜನೆ ಹಳ್ಳಹಿಡಿದಿದೆ.
ಸ್ಮಾರ್ಟ್ ಸಿಟಿಯು 'ಡಲ್ಟ್' ಯೋಜನೆಯಡಿ ಈ ಕೆಲಸ ಕೈಗೆತ್ತಿಕೊಳ್ಳಲಾಗಿತ್ತಾದರೂ, ಯೋಜನೆ ಮುಂದುವರಿಸಬೇಕೋ ಬೇಡವೋ ಎನ್ನುವ ಬಗ್ಗೆ ಇನ್ನು ಸ್ಮಾರ್ಟ್ ಸಿಟಿ ಗೊಂದಲದಲ್ಲಿದೆ.
ಗಿಡಗಳನ್ನು ಹಾಕಲು ಒಂದು ಕುಂಡಕ್ಕೆ ಸಾಮಾನ್ಯವಾಗಿ 1,200 ರೂಪಾಯಿ ತಗುಲುತ್ತದೆ. ಆದರೆ, ಸುಮಾರು 1800 ಸಾವಿರ ಕುಂಡಗಳನ್ನು ಖರೀದಿಸಿದ್ದ ಕಾರಣ ಕುಂಡಗಳು ರಿಯಾಯಿತಿ ದರದಲ್ಲಿ ದೊರೆಕಿವೆ. ಈ ಯೋಜನೆಯಡಿ ಹೂ ಕುಂಡಗಳನ್ನು ಫುಟ್ ಪಾತ್ ಸೇರಿದಂತೆ ಕೆಲವೆಡೆ ಅಳವಡಿಸಲಾಗಿತ್ತು. ಆದರೆ ಈಗ ಪಾಟ್‌ಗಳನ್ನು ವಾಪಸ್ ಪಡೆಯವ ಪ್ರಕ್ರಿಯೆ ನಡೆಯುತ್ತಿದೆ. ಸ್ಮಾರ್ಟ್ ಸಿಟಿ ಅಧಿಕಾರಿಗಳಿಗೆ ಕೇಳಿದರೆ ಹೂವು ಕುಂಡಗಳಲ್ಲಿ ಗಿಡಗಳನ್ನು ನೆಟ್ಟು ಪೋಷಿಸಬೇಕಾಗಿತ್ತು. ಇದು ಸಾಧ್ಯವಾಗದ ಕಾರಣ ಯೋಜನೆ ಪೂರ್ಣಗೊಳ್ಳುವುದು ಅನುಮಾನ ಎನ್ನುತ್ತಿದ್ದಾರೆ.

ನಗರವನ್ನು ಅಂದಗಾಣಿಸುವ ಬದಲು ಹಣ ಪೋಲು
ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿಲ್ಲ. ಸರ್ಕಾರದಿಂದ ಬಿಡುಗಡೆಯಾದ ಹಣವು ಸರಿಯಾದ ರೀತಿಯಲ್ಲಿ ಸದ್ಭಳಕೆ ಆಗುತ್ತಿಲ್ಲ. ಹೂ ಕುಂಡಗಳಲ್ಲಿ ಗಿಡ, ಹೂವುಗಳನ್ನು ಬೆಳೆಸಿ ನಗರ ಅಂದಗಾಣಿಸುವ ಬದಲು ಕೋಟ್ಯಂತರ ರೂಪಾಯಿ ಪೋಲಾಗುವಂತೆ ಮಾಡುತ್ತಿರುವುದು ದುರದೃಷ್ಟಕರ. ಸಂಸದರು, ಸ್ಮಾರ್ಟ್ ಸಿಟಿ ಅಧಿಕಾರಿಗಳು, ಪಾಲಿಕೆಯ ಸದಸ್ಯರು ಸ್ಮಾರ್ಟ್ ಸಿಟಿ ಸದಸ್ಯರಾಗಿದ್ದಾರೆ. ಆದರೆ ಈ ಬಗ್ಗೆ ಯಾಕೆ ಚಕಾರ ಎತ್ತುತ್ತಿಲ್ಲ. ಇದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಪಾಲಿಕೆ ವ್ಯಾಪ್ತಿಯಲ್ಲಿ ಅಪೂರ್ಣ ಕೆಲಸಗಳು
ದಾವಣಗೆರೆಗೆ ಬಂದಾಗ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ ದಾವಣಗೆರೆ, ಚಿತ್ರದುರ್ಗ ಹಾಗೂ ತುಮಕೂರಿನಲ್ಲಿ ಉತ್ತಮ ರಸ್ತೆಗಳಿವೆ. ಸ್ಮಾರ್ಟ್ ಸಿಟಿಗೆ ಒಂದು ಸಾವಿರ ಕೋಟಿ ರೂಪಾಯಿ ಬಿಡುಗಡೆಯಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ, ಎಂದು ಹೇಳಿ ಹೋಗಿದ್ದರು. ಕೇವಲ ರಾಷ್ಟ್ರೀಯ ಹೆದ್ದಾರಿ ರಸ್ತೆಗಳಲ್ಲಿ ಬಂದರೆ ಸಾಲದು. ಪಾಲಿಕೆ ವ್ಯಾಪ್ತಿಯಲ್ಲಿನ ವಾರ್ಡ್ ಗಳಲ್ಲಿ ಎಲ್ಲಿ ಬೇಕೆಂದರಲ್ಲಿ ಗುಂಡಿಗಳು ಕಾಣ ಸಿಗುತ್ತವೆ. ಜಲಸಿರಿ ಯೋಜನೆಯಡಿ ಅರ್ಧಂಬರ್ಧ ಕೆಲಸ ಮಾಡಿ ಜನರಿಗೆ ತೊಂದರೆ ಕೊಡುತ್ತಿರುವ ಬಗ್ಗೆ ಬಿಜೆಪಿ ನಾಯಕರು ಹೇಳಬೇಕಿತ್ತು ಎಂದು ಜನರು ವ್ಯಂಗ್ಯವಾಡಿದ್ದಾರೆ.

ಸರ್ಕಾರದ ವಿರುದ್ಧ ಪಾಲಿಕೆ ವಿರೋಧ ಪಕ್ಷದ ನಾಯಕ ಕಿಡಿ
ಪಿ.ಬಿ. ರಸ್ತೆಯಲ್ಲಿನ ಮಧ್ಯದಲ್ಲಿ ಅಳವಡಿಸಿರುವ ಲೈಟ್ ಕಂಬಗಳ ನಿರ್ವಹಣೆಯೂ ಉತ್ತಮವಾಗಿಲ್ಲ. ಅದೇ ರೀತಿಯಲ್ಲಿ ಅಲ್ಲಿರುವ ಹೂವು ಕುಂಡಗಳಲ್ಲಿ ಕೆಲ ಕಿಡಿಗೇಡಿಗಳು ಮದ್ಯದ ಬಾಟೆಲ್ ಎಸೆದಿದ್ದಾರೆ. ಆದರೂ ಈ ಬಗ್ಗೆ ಕ್ರಮ ಕೈಗೊಳ್ಳದಿರುವುದು ಖಂಡನೀಯ.
'ಸಂಸದರು ಕಾಂಗ್ರೆಸ್ ಬಗ್ಗೆ ಮಾತನಾಡುವಾಗ ಇದು ಯಾವ ಸೀಮೆ ಅಭಿವೃದ್ಧಿ ಎಂಬುದನ್ನು ಅರ್ಥಮಾಡಿಕೊಳ್ಳಲಿ. ಅಭಿವೃದ್ಧಿ ಬಿಟ್ಟು ಉಳಿದೆಲ್ಲವನ್ನೂ ಮಾಡುವ ಬಿಜೆಪಿ ನಾಯಕರು ಚುನಾವಣೆಯಲ್ಲಿ ಬ್ಯುಸಿಯಾಗಿಬಿಟ್ಟಿದ್ದಾರೆ. ಜನರ ಹಿತಕ್ಕಿಂತ ಅಧಿಕಾರವೇ ಇವರಿಗೆ ಮುಖ್ಯ. ಇದಕ್ಕಾಗಿ ಏನು ಬೇಕದಾರೂ ಮಾಡುತ್ತಾರೆ. ಹೂ ಕುಂಡಗಳ ಅಳವಡಿಕೆ ಯೋಜನೆಯಲ್ಲಿ ಕಮಿಷನ್ ಹಣ ಸಿಗದ ಕಾರಣ ಈ ರೀತಿ ಹಳ್ಳ ಹಿಡಿಸಲಾಗುತ್ತಿದೆಯಾ ಎಂಬ ಅನುಮಾನ ಮೂಡುತ್ತಿದೆ' ಎಂದು ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕ ಗಡಿಗುಡಾಳ್ ಮಂಜುನಾಥ್ ಕಿಡಿ ಕಾರಿದ್ದಾರೆ.

ಈ ಬಗ್ಗೆ ಮುಂದೆ ಚರ್ಚಿಸುತ್ತೇವೆ ಎಂದ ಸ್ಮಾರ್ಟ್ ಸಿಟಿ ಅಧಿಕಾರಿಗಳು
ಸ್ಮಾರ್ಟ್ ಸಿಟಿ ಅಧಿಕಾರಿಗಳು ಪ್ರತಿಕ್ರಿಯಿಸಿದ್ದು, ಪ್ರಾಯೋಗಿಕವಾಗಿ ಈ ಯೋಜನೆ ಜಾರಿಗೊಳಿಸುವ ಪ್ರಯತ್ನ ನಡೆದಿದೆ. ಮಳೆ ಬಂದಾಗ, ಚಳಿಗಾಲದಲ್ಲಿ ಗಿಡಗಳು ಬೆಳೆಯುವುದಿಲ್ಲ. ದುರ್ಗಾಂಬಿಕಾ ರಸ್ತೆಯಿಂದ ಸಂಗೊಳ್ಳಿ ರಾಯಣ್ಣ ವೃತ್ತದವರೆಗೆ ಹೂಕುಂಡ ಅಳವಡಿಸಲಾಗಿದೆ. ಫುಟ್ ಪಾತ್‌ಗಳಲ್ಲಿ ಇಡುವ ಉದ್ದೇಶ ಇತ್ತು. ಯಶಸ್ವಿ ಆದರೆ ಮುಂದುವರಿಸುತ್ತೇವೆ. ಇಲ್ಲದಿದ್ದರೆ ಬೇರೆ ಏನು ಮಾಡಬೇಕೆಂಬ ಚರ್ಚಿಸಲಾಗುತ್ತದೆ ಎಂಬ ಸ್ಪಷ್ಟನೆ ನೀಡಿದ್ದಾರೆ.












Click it and Unblock the Notifications