ಲಾರಿ ಗುದ್ದಿದ ರಭಸಕ್ಕೆ ವಾಹನ ಉಡೀಸ್, ಬದುಕುಳಿದವ ಹೇಳಿದ ಕಥೆ!
ದಾವಣಗೆರೆ, ಆಗಸ್ಟ್ 10; ಅದು ರಾತ್ರಿ 1.30ರ ಹೊತ್ತು. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಏನಾಗುತ್ತಿದೆ? ಎಂಬ ಪರಿವೇ ಇರಲಿಲ್ಲ. ಸ್ಫೋಟದಂತ ಭಾರೀ ಶಬ್ಧ. ಭೂಕಂಪ ಏನಾದ್ರೂ ಆಯಿತಾ? ಅಂತಾ ಕಣ್ಣು ಬಿಟ್ಟರೆ ಲಾರಿಯೊಂದು ಮನೆಯ ಮಣ್ಣಿನ ಗೋಡೆಯೊಳಗೆ. ಅದರಲ್ಲಿಯೂ ಓಮಿನಿ ವಾಹನದಲ್ಲೇ ಮಲಗುತ್ತಿದ್ದ ಯುವಕನಿಗಂತೂ ಜೀವ ಹೋಗಿ ಬಂದ ಅನುಭವ.
ಹೌದು...ಇಂಥದ್ದೊಂದು ಭಯಾನಕ ಘಟನೆ ನಡೆದಿದ್ದು ದಾವಣಗೆರೆ ತಾಲೂಕಿನ ಹದಡಿ ಗ್ರಾಮದಲ್ಲಿ. ಆಂಧ್ರಪ್ರದೇಶ ಮೂಲದ ಲಾರಿಯೊಂದು ಮಾಡಿದ ಭೀಕರ ಅಪಘಾತದ ಕೆಲ ತುಣುಕುಗಳು ಇವು.
ದಾವಣಗೆರೆ ಕಡೆಯಿಂದ ಚನ್ನಗಿರಿಗೆ ಹೋಗುತ್ತಿದ್ದ ಲಾರಿಯು ಹದಡಿ ಗ್ರಾಮದ ಮನೆಮುಂದೆ ನಿಲ್ಲಿಸಿದ್ದ ವಾಹನಗಳಿಗೆ ಗುದ್ದಿದೆ. ಬಳಿಕ ಮನೆಯೊಂದರ ಬಾಗಿಲು ಮುರಿದು ಗೋಡೆಗೆ ಹೋಗಿ ಸಿಲುಕಿಕೊಂಡಿದೆ. ಇದರಿಂದಾಗಿ ಗ್ರಾಮದ ಜನರು ಬೆಚ್ಚಿಬಿದ್ದಿದ್ದಾರೆ.
ಲಾರಿ ಚಾಲಕ ಮತ್ತು ಕಂಡಕ್ಟರ್ ಕಂಠಪೂರ್ತಿ ಕುಡಿದಿದ್ದಾರೆ. ಚಾಲಕನ ಅಜಾಗರೂಕತೆ ಹಾಗೂ ನಿಯಂತ್ರಣ ತಪ್ಪಿದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಸ್ವಲ್ಪ ಯಾಮಾರಿದ್ದರೂ ಭಾರೀ ಅನಾಹುತವೇ ಆಗುತ್ತಿತ್ತು. ದೇವರ ದಯೆಯಿಂದ ನಾವೆಲ್ಲರೂ ಬದುಕಿದ್ದೇವೆ ಅಂತಾರೆ ಸ್ಥಳೀಯರು.

ಯುವಕರ ಬೆನ್ನು ಮೂಳೆ ಮುರಿದಿದೆ
ಆಂಧ್ರಪ್ರದೇಶ ಮೂಲದ ಲಾರಿ ಮನೆಗೆ ನುಗ್ಗಿದೆ. ಅದಕ್ಕೂ ಮೊದಲು ಲಾರಿ ಟಾಟಾ ಏಸ್, ಓಮಿನಿ, ದ್ವಿಚಕ್ರ ವಾಹನಗಳಿಗೆ ಡಿಕ್ಕಿ ಹೊಡೆದಿದೆ. ಲಾರಿ ಡಿಕ್ಕಿ ಹೊಡೆದ ರಭಸಕ್ಕೆ ವಾಹನಗಳು ಸಂಪೂರ್ಣ ನುಜ್ಜುಗುಜ್ಜಾಗಿವೆ. ಪ್ರತಿದಿನ ರಾತ್ರಿ ಓಮಿನಿಯಲ್ಲೇ ಮಲಗುತ್ತಿದ್ದ ಯುವಕನ ಬೆನ್ನು ಮೂಳೆ ಮುರಿದಿದೆ. ಈ ಅಪಘಾತ ನೋಡಿ ಸ್ಥಳೀಯರು ಬೆಚ್ಚಿ ಬಿದ್ದಿದ್ದಾರೆ.
"ಪೂರ್ತಿ ನಿದ್ದೆಯಲ್ಲಿದ್ದೆ. ಇದ್ದಕ್ಕಿದ್ದಂತೆ ಸ್ಫೋಟದ ಶಬ್ಧ ಬಂತು. ನಾನು ಮನೆ ಮುಂದೆ ನಿಲ್ಲಿಸುವ ವಾಹನದಲ್ಲಿ ನಿತ್ಯವೂ ಮಲಗುತ್ತಿದ್ದೆ. ನಿನ್ನೆಯೇ ರಾತ್ರಿ 11. 30 ಕ್ಕೆ ಮಲಗಿದ್ದೆ. ಒಂದೂವರೆ ಗಂಟೆ ಬಳಿಕ ಇದ್ದಕ್ಕಿದ್ದಂತೆ ಸ್ಫೋಟದ ಶಬ್ಧ ಕೇಳಿ ಬಂತು. ಕಣ್ಣು ಬಿಟ್ಟು ನೋಡಿದರೆ ಲಾರಿ ನುಗ್ಗಿತ್ತು. ನಾನು ಸತ್ತು ಬದುಕಿ ಬಂದಿದ್ದೇನೆ ಎಂಬ ಅನುಭವ ಆಗಿದೆ. ಅದೃಷ್ಟವಶಾತ್ ಭಾರೀ ಅನಾಹುತ ತಪ್ಪಿದೆ. ಓಮ್ನಿ ವಾಹನದಲ್ಲೇ ನನ್ನ ದುಡಿಮೆ. ಈಗ ನುಜ್ಜುಗುಜ್ಜಾಗಿರುವ ಕಾರಣ ಹೊಸ ವಾಹನ ಕೊಡಿಸಬೇಕು. ಇಲ್ಲದಿದ್ದರೆ ಬದುಕುವುದೇ ಕಷ್ಟವಾಗುತ್ತದೆ'' ಎಂದು ಓಮ್ನಿಯಲ್ಲಿ ಮಲಗಿದ್ದ ಯುವಕ ಹೇಳಿದ್ದಾರೆ.

ಪೊಲೀಸರು ತನಿಖೆ ಕೈಗೊಂಡಿದ್ದಾರೆ
ಮಧ್ಯರಾತ್ರಿ ಒಂದೂವರೆ ವೇಳೆ ಈ ಘಟನೆ ನಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ವಾಹನಗಳು ನುಜ್ಜುಗುಜ್ಜಾಗಿವೆ. ಓಮಿನಿಯಲ್ಲಿ ಮಲಗಿದ್ದ ಯುವಕನಿಗೆ ಗಾಯ ಕೂಡ ಆಗಿದೆ. ಮನೆಗೂ ಗುದ್ದಿರುವುದರಿಂದ ಮನೆಗೂ ಹಾನಿಯಾಗಿದೆ. ಮನೆ ಬಾಗಿಲು ಕೂಡ ಹಾಳಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಲಾರಿ ಅಪಘಾತದ ಬಗ್ಗೆ ಹದಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಲಾರಿ ಚಾಲಕ ಹಾಗೂ ಕ್ಲೀನರ್ ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ವೇಗದ ಚಾಲನೆಯೇ ಕಾರಣ
ಇನ್ನು ಈ ಮಾರ್ಗದಲ್ಲಿ ಚಲಿಸುವ ಬಸ್, ಲಾರಿಗಳು ವೇಗವಾಗಿ ಚಲಿಸುತ್ತವೆ. ಅದರಲ್ಲಿಯೂ ರಾತ್ರಿ ವೇಳೆ ಹೋಗುವ ವೇಗಕ್ಕೆ ಎದುರುಗಡೆಯಿಂದ ಬರುವ ವಾಹನ ಸವಾರರು ಪರದಾಡಬೇಕು. ಈ ಮಾರ್ಗದಲ್ಲಿ ವೇಗ ನಿಯಂತ್ರಣ ಅಳವಡಿಕೆ ಮಾಡಬೇಕು. ಈಗಾಗಲೇ ಅಪಘಾತಗಳು ಈ ಮಾರ್ಗದಲ್ಲಿ ಆಗಾಗ್ಗೆ ಆಗುತ್ತಲೇ ಇರುತ್ತದೆ. ದೊಡ್ಡ ಅನಾಹುತವಾದಾಗ ಅಧಿಕಾರಿಗಳು ಇತ್ತ ಗಮನ ಹರಿಸುತ್ತಾರೆ. ಹದಡಿಯಲ್ಲಿ ಪೊಲೀಸ್ ಠಾಣೆ ಇದ್ದರೂ ಲಾರಿ ಚಾಲಕ ಕಂಠಪೂರ್ತಿ ಕುಡಿದಿದ್ದರೂ ಆತನನ್ನು ಎಲ್ಲಿಯೂ ಪೊಲೀಸರು ತಡೆದಿಲ್ಲವೇಕೆ ಎಂದು ಸ್ಥಳೀಯರು ಪ್ರಶ್ನಿಸಿದ್ದಾರೆ.
Recommended Video

ಮುನ್ನೆಚ್ಚರಿಕೆ ವಹಿಸಲು ಆಗ್ರಹ
ಕೇವಲ ಅಪಘಾತ ಆಗಿರುವ ಲಾರಿ ಚಾಲಕ ಮಾತ್ರವಲ್ಲ, ಈ ಮಾರ್ಗದಲ್ಲಿ ಸಂಚರಿಸುವ ಕೆಲ ಲಾರಿ ಚಾಲಕರದ್ದು ಇದೇ ಪರಿಸ್ಥಿತಿ. ಪೊಲೀಸ್ ಇಲಾಖೆ ಹಾಗೂ ಸಾರಿಗೆ ಇಲಾಖೆಯ ಅಧಿಕಾರಿಗಳು ರಾತ್ರಿ ವೇಳೆ ಡ್ರಂಕ್ ಅಂಡ್ ಡ್ರೈವ್ ಕಾರ್ಯಾಚರಣೆ ನಡೆಸಿ ವಾಹನ ಚಲಾಯಿಸುವವರಿಗೆ ತಕ್ಕ ಪಾಠ ಕಲಿಸಬೇಕು. ಇಂತ ಅವಘಡ ಆಗದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಹದಡಿ ಗ್ರಾಮಸ್ಥರು ಆಗ್ರಹಿಸಿದ್ದಾರೆ.












Click it and Unblock the Notifications