ದೇವರ ಕೋಣಕ್ಕೆ ಶುರುವಾಯ್ತು ಎರಡು ಊರುಗಳ ನಡುವೆ ಗಲಾಟೆ!
ದಾವಣಗೆರೆ, ಅಕ್ಟೋಬರ್ 15: ದೇವರಿಗೆ ಬಿಟ್ಟಿದ್ದ ಕೋಣಕ್ಕೆ ಸಂಬಂಧಪಟ್ಟಂತೆ ಎರಡು ಗ್ರಾಮಗಳ ನಡುವೆ ಕಿತ್ತಾಟ ಶುರುವಾಗಿದೆ. ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ಬೇಲಿಮಲ್ಲೂರು ಹಾಗೂ ಶಿವಮೊಗ್ಗ ತಾಲ್ಲೂಕಿನ ಹಾರ್ನಹಳ್ಳಿ ಗ್ರಾಮಸ್ಥರು ಕೋಣ ನಮ್ಮದು ಎಂದು ಕಿತ್ತಾಡಿಕೊಂಡಿದ್ದಾರೆ.
ಹೊನ್ನಾಳಿ ತಾಲ್ಲೂಕಿನ ಬೇಲಿಮಲ್ಲೂರು ಗ್ರಾಮದಲ್ಲಿ 7 ವರ್ಷಗಳ ಹಿಂದೆ ಮಾರಿಕಾಂಬ ದೇವಿಗೆ ಕೋಣವನ್ನು ಬಿಡಲಾಗಿತ್ತು. ಇಲ್ಲಿಯವರೆಗೂ ಗ್ರಾಮ ಹಾಗೂ ಪಕ್ಕದ ಗ್ರಾಮಗಳಲ್ಲಿ ಕೋಣ ಸಂಚರಿಸಿ ಪುನಃ ಗ್ರಾಮಕ್ಕೆ ಬರುತ್ತಿತ್ತು. ಆದರೆ ಮೂರು ದಿನಗಳಿಂದ ಕೋಣ ಕಾಣಿಸಿಕೊಂಡಿರಲಿಲ್ಲ. ಹೀಗಾಗಿ ಗ್ರಾಮಸ್ಥರು ಹುಡುಕಾಡಲು ಆರಂಭಿಸಿದ್ದರು.
ಗಲಾಟೆ ಮಾಡಬೇಡಿ ಎಂದಿದ್ದಕ್ಕೆ ಪೊಲೀಸರಿಗೆ ಥಳಿಸಿದ ಪುಂಡರು
ಶಿವಮೊಗ್ಗ ತಾಲ್ಲೂಕಿನ ಹಾರ್ನಹಳ್ಳಿ ಗ್ರಾಮದವರು ಕೋಣ ನಮ್ಮೂರಿನದು ಎಂದು ಇದನ್ನು ವಾಹನದಲ್ಲಿ ತೆಗೆದುಕೊಂಡು ಹೋಗಿದ್ದಾರೆ ಎನ್ನುವ ವಿಷಯ ಗ್ರಾಮಸ್ಥರಿಗೆ ತಿಳಿಯಿತು. ಕೂಡಲೇ ನೂರಾರು ಜನ ಗ್ರಾಮಸ್ಥರು ಹಾರ್ನಹಳ್ಳಿಗೆ ಹೋಗಿ ಕೋಣವನ್ನು ನೋಡಿ ಅದು ತಮ್ಮದೇ ಎಂದು ಖಚಿತಪಡಿಸಿಕೊಂಡ ಮೇಲೆ, ಈ ಕೋಣ ನಮ್ಮದು, ಕಳೆದುಹೋಗಿತ್ತು, ಬಿಟ್ಟುಕೊಡಿ ಎಂದು ಕೇಳಿದ್ದಾರೆ. ಆದರೆ ಹಾರ್ನಹಳ್ಳಿ ಗ್ರಾಮಸ್ಥರು ಈ ಕೋಣ ನಮ್ಮದು ಎಂದು ಹೇಳಿ ಬೇಲಿ ಮಲ್ಲೂರು ಗ್ರಾಮಸ್ಥರನ್ನು ವಾಪಸ್ ಕಳುಹಿಸಿದ್ದಾರೆ.
ಇದರಿಂದ ರೊಚ್ಚಿಗೆದ್ದಿದ್ದ ಬೇಲಿಮಲ್ಲೂರು ಯುವಕರು, ಗ್ರಾಮಸ್ಥರು ಟ್ರ್ಯಾಕ್ಟರ್ ಮಾಡಿಕೊಂಡು ಕೋಣ ತರಲೇಬೇಕು ಎಂದು ಹೊರಟು ನಿಂತಿದ್ದಾರೆ, ಈ ಸಂದರ್ಭದಲ್ಲಿ ಗ್ರಾಮದ ಹಿರಿಯರೊಬ್ಬರು ಅವರನ್ನು ತಡೆದು ಕೋಣದಿಂದ ಎರಡು ಗ್ರಾಮಗಳ ನಡುವೆ ಘರ್ಷಣೆ ಆಗುವುದು ಬೇಡ, ಇದನ್ನು ಕಾನೂನು ರೀತಿ ಸರಿಪಡಿಸಿಕೊಳ್ಳೋಣ ಎಂದು ಸಮಾಧಾನಪಡಿಸಿ ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಸೆಲ್ಫಿ ತೆಗೆಸಿಕೊಳ್ಳಲು ನಿರಾಕರಣೆ: ಕಿರುತೆರೆ ನಟನಿಗೆ ಥಳಿಸಿದ ಪುಂಡರು
ಈಗ ಕೋಣ ಯಾವ ಊರಿನದ್ದು ಎಂದು ಪತ್ತೆ ಹಚ್ಚುವ ಕೆಲಸ ಪೊಲೀಸರ ಹೆಗಲೇರಿದೆ.