ದಾವಣಗೆರೆಯ ಕೆಹೆಚ್‌ಬಿ ಕಾಲೋನಿಯಲ್ಲಿ ರಸ್ತೆ ಕಾಮಗಾರಿ ಕಳಪೆ, ಅಧಿಕಾರಿಗಳ ವಿರುದ್ಧ ರೊಚ್ಚಿಗೆದ್ದ ಜನ
ದಾವಣಗೆರೆ, ಫೆಬ್ರವರಿ, 22: ಮಹಾನಗರ ಪಾಲಿಕೆಯ 44ನೇ ವಾರ್ಡ್‌ನ ಶಾಮನೂರು ಮತ್ತು ಹೊಸಕುಂದವಾಡದ ಕೆಹೆಚ್‌ಬಿ ಮೊದಲನೇ ಹಂತದ ಪ್ರದೇಶದಲ್ಲಿ ರಸ್ತೆ ಡಾಂಬರೀಕರಣ ಮಾಡಲಾಗುತ್ತಿದೆ. ಇದು ಕಳಪೆ ಗುಣಮಟ್ಟದಿಂದ ಕೂಡಿದೆ ಎಂದು ಸ್ಥಳೀಯರು ಆರೋಪ ಮಾಡುತ್ತಿದ್ದಾರೆ. ಈ ಹಿನ್ನೆಲೆ ಸ್ಥಳಕ್ಕೆ ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕ ಗಡಿಗುಡಾಳ್ ಮಂಜುನಾಥ್ ಭೇಟಿ ನೀಡಿ ಪರಿಶೀಲಿಸಿದರು. ಗುಣಮಟ್ಟದ ಕಾಮಗಾರಿ ನಡೆಸುವಂತೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ರಸ್ತೆ ಡಾಂಬರೀಕರಣ ಮಾಡಿಲ್ಲ
ಜನನಿಬಿಡ ಮತ್ತು ಜನರು ವಾಸ ಮಾಡುತ್ತಿರುವ ಪ್ರದೇಶಗಳಲ್ಲಿ ರಸ್ತೆ ಡಾಂಬರೀಕರಣ ಮಾಡಿಲ್ಲ. ಬೀದಿ ದೀಪ ಅಳವಡಿಕೆ ಮಾಡಿಲ್ಲ. ಈಗ ಮಾಡುತ್ತಿರುವ ರಸ್ತೆ ಡಾಂಬರೀಕರಣ ಕಳಪೆಯಿಂದ ಕೂಡಿದೆ. ಮೇಲೆ ಮೇಲೆ ರಸ್ತೆ ಮಾಡಲಾಗುತ್ತಿದ್ದು, ವೈರ್‌ಗಳು ಕಾಣಿಸುತ್ತಿವೆ. ಈ ಬಗ್ಗೆ ಸಂಬಂಧಪಟ್ಟವರಿಗೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನ ಇಲ್ಲ. ಈ ಹಿನ್ನೆಲೆಯಲ್ಲಿ ಪಾಲಿಕೆ ವಿಪಕ್ಷ ನಾಯಕ ಗಡಿಗುಡಾಳ್ ಮಂಜುನಾಥ್ ಅವರ ಗಮನಕ್ಕೆ ತಂದೆವು ಎಂದು ಸ್ಥಳೀಯರು ಮಾಹಿತಿ ನೀಡಿದರು.

ಅಧಿಕಾರಿಗಳ ವಿರುದ್ಧ ಜನಾಕ್ರೋಶ
ಕೆಹೆಚ್‌ಬಿ ಕಾಲೋನಿಯ ಮೊದಲನೇ ಹಂತದಲ್ಲಿ ಯಾರೂ ವಾಸ ಮಾಡದ ಪ್ರದೇಶದಲ್ಲಿ ಕೆಲಸ ನಡೆಯುತ್ತಿದೆ. ಇದಕ್ಕೆ ನಮ್ಮ ಅಭ್ಯಂತರ ಇಲ್ಲ. ಜನರು, ವಾಹನಗಳ ಓಡಾಟದ ಪ್ರದೇಶದಲ್ಲಿ ರಸ್ತೆ ಹಾಳಾಗಿದೆ. ಇಲ್ಲಿ ಮೊದಲು ಸರಿಪಡಿಸಲಿ. ಅನುದಾನ ಇದ್ದರೆ ಅಲ್ಲಿಯೂ ಮಾಡಲಿ. ಇದಕ್ಕೆ ನಮ್ಮ ಅಭ್ಯಂತರ ಏನಿಲ್ಲ. ತುರ್ತಾಗಿ ಎಲ್ಲಿ ಕೆಲಸ ಆಗಬೇಕೋ ಅಲ್ಲಿ ಮಾಡಲಿ. ಅದನ್ನು ಬಿಟ್ಟು ಜನರೇ ವಾಸ ಮಾಡದ ಪ್ರದೇಶದಲ್ಲಿ ರಸ್ತೆ ಡಾಂಬರೀಕರಣ ಮಾಡಿದರೆ ಹೇಗೆ? ಜನರು ವಾಸ ಮಾಡದ ಪ್ರದೇಶದಲ್ಲಿ ಆಸಕ್ತಿ ಏಕೆ ಎಂಬ ಅನುಮಾನ ಮೂಡುತ್ತಿದೆ ಅಂತಾ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದರು.
ಬೀದಿ ದೀಪ ಅಳವಡಿಕೆ ಮಾಡಿಲ್ಲ
ಜನರು ರಾತ್ರಿ ವೇಳೆ ಮನೆಯಿಂದ ಹೊರಬರಲು ಆಗುತ್ತಿಲ್ಲ. ಬೀದಿ ದೀಪ ಅಳವಡಿಕೆ ಮಾಡಿಲ್ಲ. ಇದು ಪುಂಡ ಪೋಕರಿಗಳ ಹಾಟ್‌ಸ್ಪಾಟ್ ಆಗಿದೆ. ಎಲ್ಲೆಂದರಲ್ಲಿ ಮದ್ಯದ ಬಾಟೆಲ್‌ಗಳು ಬಿದ್ದಿವೆ. ರಾತ್ರಿ ವೇಳೆ ಯುವಕರ ದಾಂಧಲೆ ಹೆಚ್ಚಾಗಿದ್ದು, ಇದಕ್ಕೆ ಕಡಿವಾಣ ಹಾಕಬೇಕು ಎಂದು ಮನವಿ ಮಾಡಿದರು. ಕೂಡಲೇ ಅಸಿಸ್ಟೆಂಟ್ ಇಂಜಿನಿಯರ್ ಜೊತೆ ಮಾತನಾಡಿದ ಗಡಿಗುಡಾಳ್ ಮಂಜುನಾಥ್, ಅಧಿಕಾರಿಗಳ ಜನರ ಹಿತ ಕಾಪಾಡಬೇಕು. ಬೇಜವಾಬ್ದಾರಿಯಿಂದ ಕೆಲಸ ಮಾಡಬಾರದು. ಕೂಡಲೇ ಜನರ ಸಮಸ್ಯೆಗಳಿಗೆ ಸ್ಪಂದಿಸಿ ಎಂದು ಹೇಳಿದರು.
ಕಳಪೆ ಕಾಮಗಾರಿ ಮಾಡಿದ್ರೆ ಸಹಿಸುವುದಿಲ್ಲ
ರಸ್ತೆ ಡಾಂಬರೀಕರಣ ಕೆಲಸ ಗುಣಮಟ್ಟದ್ದಾಗಬೇಕು. ಕಳಪೆ ಕಾಮಗಾರಿ ನಡೆಸಿದರೆ ಸಹಿಸುವುದಿಲ್ಲ. ಆದ್ಯತೆ ಪ್ರಕಾರ ಕಾಮಗಾರಿ ಮಾಡಿ. ಜನನಿಬಿಡ ಪ್ರದೇಶದಲ್ಲಿ ಮೊದಲು ಕಾಮಗಾರಿ ನಡೆಸಲಿ. ಆಮೇಲೆ ಖಾಲಿ ನಿವೇಶನಗಳಿರುವ ಕಡೆ ರಸ್ತೆ ಮಾಡಲಿ. ಹಾಗೆಯೇ ಆದಷ್ಟು ಬೇಗ ಬೀದಿದೀಪ ಅಳವಡಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಈ ವೇಳೆ ಮಾತನಾಡಿದ ಪಾಲಿಕೆ ಸದಸ್ಯ ಕಲ್ಲಳ್ಳಿ ನಾಗರಾಜ್, ಕಾಮಗಾರಿ ಕಳಪೆಯಿಂದ ನಡೆಯುತ್ತಿದೆ ಎಂದು ಜನರಿಂದ ದೂರುಗಳು ಬಂದಿವೆ. ಅಲ್ಲದೆ ಬೀದಿ ದೀಪ ಅಳವಡಿಸುವಂತೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನೆ ಇಲ್ಲದಂತಾಗಿದೆ. ಕೂಡಲೇ ಅಗತ್ಯವಿರುವ ಕಡೆಗಳಲ್ಲಿ ಬೀದಿ ದೀಪ ಹಾಕಿ. ಹಾಗೂ ಗುಣಮಟ್ಟದ ರಸ್ತೆ ಕಾಮಗಾರಿ ಮಾಡಬೇಕು ಎಂದು ಹೇಳಿದರು.
ಈ ವೇಳೆ ಮಹಾನಗರ ಪಾಲಿಕೆಯ ಮಾಜಿ ಸದಸ್ಯ ಹುಲ್ಲುಮನೆ ಗಣೇಶ್, ಅಧಿಕಾರಿಗಳು ಹಾಗೂ ಸ್ಥಳೀಯರು ಹಾಜರಿದ್ದರು.












Click it and Unblock the Notifications