ಮರದ ಕಂಬಗಳ ನಡುವೆ ಸಿಲುಕಿದ್ದ ಕಾರ್ಮಿಕರ ರಕ್ಷಣೆ
ದಾವಣಗೆರೆ, ಜುಲೈ 25: ಬೆಳ್ಳಂಬೆಳಿಗ್ಗೆ ಕಾರ್ಮಿಕರಿಬ್ಬರು ನೂರಾರು ಕಂಬಗಳ ನಡುವೆ ಸಿಲುಕಿಕೊಂಡು ಗಾಯಗೊಂಡಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ.
ದಾವಣಗೆರೆಯ ಬೊಂಬೂ ಬಜಾರ್ ನಲ್ಲಿ ಪ್ರತಿನಿತ್ಯದಂತೆ ಬೆಳಿಗ್ಗೆ ಕಾರ್ಮಿಕರಾದ ಶಿವರಾಜ್ ಹಾಗೂ ವೆಂಕಟೇಶ್ ನೀಲಗಿರಿ ಮರದ ಗಳಗಳನ್ನು ಜೋಡಿಸುತ್ತಿರುವಾಗ ಏಕಾಏಕಿ ಅವರ ಮೇಲೆ ನೂರಾರು ಗಳಗಳು ಬಿದ್ದಿವೆ. ಇವುಗಳ ನಡುವೆ ಸಿಲುಕಿ ಹೊರಬರಲಾರದೇ ಇಬ್ಬರು ಕೂಗಿಕೊಂಡಿದ್ದಾರೆ. ಕೂಗಾಟ ಕೇಳುತ್ತಿದ್ದಂತೆಯೇ ತಕ್ಷಣ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಪೊಲೀಸರು ಹಾಗೂ ಸ್ಥಳೀಯರು ಮರದ ಕಂಬಗಳ ನಡುವೆ ಸಿಲುಕಿದ್ದ ಕಾರ್ಮಿಕರನ್ನು ರಕ್ಷಣೆ ಮಾಡಿದ್ದಾರೆ. ವೆಂಕಟೇಶ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಶಿವರಾಜ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಇಬ್ಬರು ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.












Click it and Unblock the Notifications