ದಾವಣಗೆರೆ: ಪೊಲೀಸಪ್ಪನ ಪೋಲಿಯಾಟ.. ಪತಿ ಪ್ರಿಯತಮೆ ಮನೆ ಮುಂದೆ ರೊಚ್ಚಿಗೆದ್ದ ಪತ್ನಿ ಮಾಡಿದ್ದಾದ್ರೂ ಏನು ಗೊತ್ತಾ?
ದಾವಣಗೆರೆ, ಜುಲೈ, 03: ಪತಿ ಮನೆಗೆ ಬರುತ್ತಿಲ್ಲ, ಪತಿಯು ಅನೈತಿಕ ಸಂಬಂಧ ಹೊಂದಿದ್ದಾರೆ ಎಂದು ಆರೋಪಿಸಿ ಪೊಲೀಸ್ ಕಾನ್‌ಸ್ಟೇಬಲ್‌ನ ಪತ್ನಿಯು ಆತನ ಪ್ರಿಯತಮೆ ಮನೆ ಮುಂದೆ ಪ್ರತಿಭಟನೆ ನಡೆಸಿದ ಘಟನೆ ನಗರದಲ್ಲಿ ನಡೆದಿದೆ.
2003ರಲ್ಲಿ ಹರಪನಹಳ್ಳಿ ತಾಲೂಕಿನ ಎರಡತ್ತೇನಹಳ್ಳಿ ಗ್ರಾಮದ ಪೊಲೀಸ್ ಕಾನ್‌ಸ್ಟೇಬಲ್ ಗೋಣಪ್ಪ ಎಂಬುವವನೊಂದಿಗೆ ಸೌಮ್ಯ ಅವರ ಮದುವೆಯಾಗಿತ್ತು. ಮದುವೆಯಾಗಿ ಸುಖ ಸಂಸಾರಕ್ಕೆ ಸಾಕ್ಷಿಯಾದ ಇವಬ್ಬರಿಗೆ ಮುದ್ದಾದ ಹೆಣ್ಣು ಮಕ್ಕಳಿದ್ದಾರೆ. ಆದರೆ ಇದೀಗ ಗೋಣೆಪ್ಪ ಗೀತಾ ಎಂಬ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಾನೆ ಎಂದು ಆರೋಪಿಸಿ ದಾವಣಗೆರೆಯ ರಾಮನಗರದಲ್ಲಿರುವ ಗೀತಾ ಅವರ ಮನೆಯ ಮುಂದೆ ಪೊಲೀಸ್ ಪೇದೆಯ ಪತ್ನಿ ಸೌಮ್ಯ ಮಕ್ಕಳೊಂದಿಗೆ ಪ್ರತಿಭಟನೆ ನಡೆಸುತ್ತಿದ್ದಾರೆ.

ಗೋಣಪ್ಪ ನನ್ನನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ, ಮನೆಗೆ ಬರುತ್ತಿಲ್ಲ, ಜೀವನಾಂಶ ಕೂಡ ಕೊಡುತ್ತಿಲ್ಲ ಎಂದು ಸೌಮ್ಯ ಆರೋಪಿಸಿದ್ದಾರೆ. ಗೋಣಪ್ಪ ಪ್ರಸ್ತುತ ಬಳ್ಳಾರಿ ಜಿಲ್ಲೆಯ ಕಂಪ್ಲಿಯಲ್ಲಿ ಪೇದೆಯಾಗಿ ಕೆಲಸ ಮಾಡುತ್ತಿದ್ದಾರೆ. ದಾವಣಗೆರೆಯ ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ಪೇದೆಯಾಗಿ ಕೆಲಸ ಮಾಡುತ್ತಿರುವಾಗ ಪ್ರಕರಣವೊಂದರಲ್ಲಿ ಗೀತಾ ಗೋಣಪ್ಪನಿಗೆ ಪರಿಚಯವಾಗಿದ್ದಾರೆ. ಅಲ್ಲಿಂದ ಇಬ್ಬರ ನಡುಗೆ ಪ್ರೇಮಾಂಕುರವಾಗಿದೆ. ಹಾಗಾಗಿ ಗೋಣಪ್ಪ ಗೀತಾಳೊಂದಿಗೆ ಇದ್ದು, ನನ್ನನ್ನು ಕಡೆಗಣಿಸಿದ್ದಾರೆಂದು ಸೌಮ್ಯ ಆರೋಪ ಮಾಡುತ್ತಿದ್ದಾರೆ.
ಇನ್ನು ಸೌಮ್ಯ ಅವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ಇಬ್ಬರು ಅಸ್ತಮದಿಂದ ಬಳಲುತ್ತಿದ್ದು, ಚಿಕಿತ್ಸೆಗೆ ಹಣ ಇಲ್ಲದಂತಾಗಿದೆ ಎಂದು ಸೌಮ್ಯ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಆತ್ಮಹತ್ಯೆಗೆ ಶರಣು: ಕೌಟುಂಬಿಕ ಆಸ್ತಿ ವಿವಾದ ಹಾಗೂ ತಾನು ಕೆಲಸ ಮಾಡಿದ ಕಾಮಗಾರಿಗೆ ಬಿಲ್ ಮಂಜೂರಾಗಿಲ್ಲ ಎಂಬ ಆರೋಪ ಮಾಡಿ ಹಿನ್ನೆಲೆಯಲ್ಲಿ ದಾವಣಗೆರೆ ಮೂಲದ ಗುತ್ತಿಗೆದಾರ ಪಿ ಎಸ್ ಗೌಡರ್ (48) ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚನ್ನಗಿರಿ ತಾಲೂಕಿನ ಸಂತೆಬೆನ್ನೂರಿನಲ್ಲಿ ನಡೆದಿದೆ.
ಗುತ್ತಿಗೆದಾರ ಪಿ ಎಸ್ ಗೌಡರ್ ಅವರ ಡೆತ್ ನೋಟ್‌ನಲ್ಲಿ, ತನ್ನ ಸಾವಿಗೆ ಅಣ್ಣ ಜಿ ಎಸ್ ನಾಗರಾಜ್, ಕಿರಿಯ ಸಹೋದರ ಗೌಡರ್ ಶ್ರೀನಿವಾಸ್ ಮತ್ತು ಕರ್ನಾಟಕ ರೂರಲ್ ಇನ್‌ಫ್ರಾಸ್ಟ್ರಕ್ಚರ್ ಡೆವಲಪ್‌ಮೆಂಟ್ ಲಿಮಿಟೆಡ್, (ಕೆಆರ್‌ಐಡಿಎಲ್) ದಾವಣಗೆರೆ ಕಾರಣ ಎಂದು ಆರೋಪಿಸಿದ್ದಾರೆ. ಡೆತ್ ನೋಟ್‌ನಲ್ಲಿರುವ ಈ ವಿಷಯಗಳು ರಾಜ್ಯ ಸರ್ಕಾರವನ್ನು ಸಂಕಷ್ಟಕ್ಕೆ ನೂಕಿದೆ.
ಹಿರಿಯ ಸಹೋದರ ತನಗೆ ಆರ್ಥಿಕ ಹಾಗೂ ಮಾನಸಿಕ ಒತ್ತಡ ಹಾಕುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. 1 ಲಕ್ಷಕ್ಕಿಂತ ಹೆಚ್ಚು ಪಿಂಚಣಿ ಪಡೆದರೂ, ಅವರ ಹಿರಿಯ ಸಹೋದರ ಅವರಿಗೆ ಪೂರ್ವಜರ ಆಸ್ತಿಯನ್ನು ಬಿಟ್ಟುಕೊಡಲು ಸಿದ್ಧರಿರಲಿಲ್ಲ. ತಮ್ಮ ಕಿರಿಯ ಸಹೋದರ ಗೌಡರ್ ಶ್ರೀನಿವಾಸ್, ಅವರ ಪತ್ನಿ ಡಿಸಿ ಇಂದುಮತಿ, ಅವರ ತಂದೆ ಚಿತ್ರಶೇಖರಪ್ಪ ಅವರಿಗೆ ಆರ್ಥಿಕ ನಷ್ಟ ಮತ್ತು ಮಾನಸಿಕ ಒತ್ತಡವನ್ನು ಉಂಟುಮಾಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಡೆತ್ ನೋಟ್‌ನ ಕೊನೆಯ ಭಾಗದಲ್ಲಿ, ಪಿ ಎಸ್ ಗೌಡರ್ ಅವರು ಕಳೆದ ವರ್ಷ ಫೆಬ್ರವರಿಯಲ್ಲಿ ಸಂತೆಬೆನ್ನೂರಿನ ಕೃಷಿ ಇಲಾಖೆ ಕಚೇರಿ ಆವರಣದಲ್ಲಿ ಕೆಲವು ಕೆಲಸಗಳನ್ನು ಪೂರ್ಣಗೊಳಿಸಿದ್ದರೂ, ಸಂಬಂಧಿಸಿದ ಅಧಿಕಾರಿಗಳು ಇನ್ನೂ ಬಿಲ್‌ಗಳನ್ನು ಕ್ಲಿಯರ್ ಮಾಡಿರಲಿಲ್ಲ. ಆದ್ದರಿಂದ ಈ ಎಲ್ಲಾ ಒತ್ತಡಗಳು ತನ್ನನ್ನು ಇಂತಹ ನಿರ್ಧಾರ ತೆಗೆದುಕೊಳ್ಳುವಂತೆ ಮಾಡಿದೆ ಎಂದು ಡೆತ್ ನೋಟ್‌ನಲ್ಲಿ ಬರೆದಿದ್ದಾರೆ.
ಆತನ ಪತ್ನಿ ವಸಂತ ಕುಮಾರಿ ನೀಡಿದ ದೂರಿನ ಮೇರೆಗೆ ಪೊಲೀಸರು ಆತನ ಸಹೋದರರು ಮತ್ತು ಕೆಆರ್‌ಐಡಿಎಲ್ ಸೇರಿದಂತೆ ಐವರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಕೃಷಿ ಇಲಾಖೆ ಜಂಟಿ ನಿರ್ದೇಶಕ ಶ್ರೀನಿವಾಸ ಚಿಂತಾಲ್ , ಸಂತೆಬೆನ್ನೂರಿನಲ್ಲಿ ಅಂತಹ ಯಾವುದೇ ಕಾಮಗಾರಿ ನಡೆದಿಲ್ಲ. ಆದರೂ ಪರಿಶೀಲಿಸುವುದಾಗಿ ಹೇಳಿದ್ದಾರೆ.












Click it and Unblock the Notifications