ಅನರ್ಹ ಶಾಸಕರ ತ್ಯಾಗ ಬಲಿದಾನದಿಂದ ನಮ್ಮ ಸರ್ಕಾರ ಬಂದಿದೆ: ವಿವಾದ ತಂದ ರೇಣುಕಾಚಾರ್ಯ ಹೇಳಿಕೆ
ದಾವಣಗೆರೆ, ಸೆಪ್ಟೆಂಬರ್ 7: "17 ಅನರ್ಹ ಶಾಸಕರ ತ್ಯಾಗ ಬಲಿದಾನದಿಂದ ಬಿಜೆಪಿ ಸರ್ಕಾರ ಬಂದಿದೆ. ಹಿಂದೆ ದೇಶಕ್ಕೆ ಸ್ವತಂತ್ರ ಬಂದ ರೀತಿ ಅನರ್ಹ ಶಾಸಕರ ತ್ಯಾಗದಿಂದ ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ" ಎಂದು ಹೊನ್ನಾಳಿಯಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ ಶಾಸಕ ರೇಣುಕಾಚಾರ್ಯ.
ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯಾಗಿ ನೇಮಕ ಮಾಡಿದ ನಂತರ ಹೊನ್ನಾಳಿಯ ರಾಯಣ್ಣ ಸರ್ಕಲ್ ನಲ್ಲಿ ರಾಯಣ್ಣನ ಪ್ರತಿಮೆಗೆ ಹಾರ ಹಾಕಿ ಅವರು ಮಾತನಾಡಿದ್ದಾರೆ. ಹದಿನೇಳು ಅನರ್ಹ ಶಾಸಕರ ತ್ಯಾಗದಿಂದ ನಮ್ಮ ಸರ್ಕಾರ ಬಂದಿದೆ ಎಂದು ಅನರ್ಹ ಶಾಸಕರಿಗೆ ಸ್ವಾತಂತ್ರ್ಯ ಹೋರಾಟಗಾರರೆಂಬಂತೆ ಮಾತನಾಡಿರುವುದು ವಿವಾದ ಉಂಟು ಮಾಡಿದೆ.
ರೇಣುಕಾಚಾರ್ಯ ಕೇಳಿದ್ದು ಸಚಿವ ಸ್ಥಾನ ಆದರೆ ಸಿಕ್ಕಿದ್ದು ಬೇರೆ
ಇದೇ ಸಂದರ್ಭ, "ಪಕ್ಷ ನನ್ನನ್ನು ಗುರುತಿಸಿ ಸ್ಥಾನಮಾನ ನೀಡಿದೆ. ಕೊಟ್ಟ ಜವಾಬ್ದಾರಿಯನ್ನು ನಾನು ನಿಭಾಯಿಸುತ್ತೇನೆ. ರೇಣುಕಾಚಾರ್ಯ ಅವರನ್ನು ಸಮಾಧಾನಪಡಿಸಲು ರಾಜಕೀಯ ಕಾರ್ಯದರ್ಶಿಯಾಗಿ ಮಾಡಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ. ಆದರೆ ನನಗೆ ಯಾವುದೇ ಅಸಮಾಧಾನವಿಲ್ಲ. ಪಕ್ಷ ಮೊದಲು, ಸ್ಥಾನಮಾನವೆಲ್ಲ ನಂತರ" ಎಂದು ಪಕ್ಷದ ಕುರಿತು ಮಾತನಾಡಿದ್ದಾರೆ.
ಜೊತೆಗೆ ತಾವು ಅಬಕಾರಿ ಸಚಿವ ಆಗಿದ್ದ ಅವಧಿಯಲ್ಲಿ ಕೈಗೊಂಡಿದ್ದ ಕಾರ್ಯಗಳ ಕುರಿತೂ ಹೇಳಿಕೊಂಡಿದ್ದಾರೆ. ಈ ಮೂಲಕವೇ ಈಗಿನ ಅಬಕಾರಿ ಸಚಿವ ನಾಗೇಶ್ ಅವರ ವಿರುದ್ಧ ಮತ್ತೆ ಮಾತನಾಡಿದ್ದಾರೆ. "ಅಬಕಾರಿ ಸಚಿವ ನಾಗೇಶ್ ಹುಚ್ಚು ಹುಚ್ಚಾದ ಹೇಳಿಕೆ ಕೊಡುವುದನ್ನು ನಿಲ್ಲಿಸಲಿ. ಇದರಿಂದ ಸರ್ಕಾರಕ್ಕೆ ಡ್ಯಾಮೇಜ್ ಆಗುತ್ತದೆ. ನಾನೂ ಅಬಕಾರಿ ಸಚಿವನಾಗಿ ಕೆಲಸ ಮಾಡಿದ್ದೀನಿ, ನಾನು ರಾಜ್ಯದ ಉದ್ದಗಲಕ್ಕೂ ಪ್ರವಾಸ ಮಾಡಿ ಕಳ್ಳಭಟ್ಟಿ, ನಕಲಿ ಮದ್ಯ ತಡೆಗಟ್ಟಿ ಸರ್ಕಾರಕ್ಕೆ ಆದಾಯ ತಂದಿದ್ದೆ" ಎಂದು ಹೇಳಿಕೊಂಡಿದ್ದಾರೆ.