ನವಜೋಡಿಯ ಬಾಳಲ್ಲಿ ವಿಧಿಯಾಟ: ಸ್ಟ್ರೆಚರ್‌ನಲ್ಲಿ ಬಂದು ಪತಿಯ ಮೃತದೇಹ ನೋಡಿದ ಪತ್ನಿ
ದಾವಣಗೆರೆ, ಡಿಸೆಂಬರ್ 17: ಹದಿನೈದು ದಿನಗಳ ಹಿಂದೆಯಷ್ಟೇ ಮದುವೆಯಾಗಿದ್ದ ನವಜೋಡಿಯ ಬದುಕಿನಲ್ಲಿ ದುರಂತ ನಡೆದಿದೆ. ರಸ್ತೆ ಅಪಘಾತದಲ್ಲಿ ನವವಿವಾಹಿತ ಇಹಲೋಕ ತ್ಯಜಿಸಿದ್ದು, ಗಂಭೀರ ಗಾಯಗೊಂಡ ಪತ್ನಿ ಸ್ಟ್ರೆಚರ್‌ನಲ್ಲಿ ಮಲಗಿಕೊಂಡೇ ಕೊನೆಯ ಬಾರಿ ಪತಿಯ ಮುಖವನ್ನು ನೋಡಿದ ಕರಳುಹಿಂಡುವ ಘಟನೆ ದಾವಣಗೆರೆಯಲ್ಲಿ ನಡೆದಿದೆ.
ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕಿನ ಕೋಡ ಬಳಿ ರಸ್ತೆ ಬದಿ ನಿಂತಿದ್ದ ಕಬ್ಬಿನ ಗಾಡಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಜಿಗಳಿ ಗ್ರಾಮದ ಸಂಜಯ್ (28) ಸ್ಥಳದಲ್ಲೇ ಸಾವನ್ನಪ್ಪಿದ್ದು, ಸಂಜಯ್ ಪತ್ನಿ ಗಂಭೀರ ಗಾಯಗೊಂಡಿದ್ದಾರೆ.
ಕಳೆದ 15 ದಿನಗಳ ಹಿಂದೆಯಷ್ಟೇ ಮದುವೆಯಾಗಿದ್ದ ಸಂಜಯ್ ಹಾಗೂ ಪ್ರೀತಿ ಬೈಕ್‌ನಲ್ಲಿ ಸುತ್ತಾಡಲು ತೆರಳಿದ್ದರು. ಹಾವೇರಿ ಸುತ್ತಮುತ್ತಲಿನ ದೇವಸ್ಥಾನ, ಪ್ರವಾಸಿ ತಾಣಗಳಿಗೆ ಭೇಟಿ ನೀಡಿ ಬಳಿಕ ಜಿಗಳಿ ಗ್ರಾಮಕ್ಕೆ ವಾಪಸ್ ಆಗುತ್ತಿರುವಾಗ ಹಿರೇಕೆರೂರಿನ ಕೋಡ ಗ್ರಾಮದಲ್ಲಿ ಅಪಘಾತ ಸಂಭವಿಸಿದೆ. ಮೃತ ಸಂಜಯ್ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.

ಅಪಘಾತದಲ್ಲಿ ಸ್ಥಳದಲ್ಲೇ ಸಾವನ್ನಪ್ಪಿದ ಸಂಜಯ್ ಮೃತದೇಹವನ್ನು ದಾವಣಗೆರೆಯ ಬಾಪೂಜಿ ಆಸ್ಪತ್ರೆಗೆ ತರಲಾಯಿತು. ಈ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ಪ್ರೀತಿ, ಸ್ಟ್ರೆಚರ್‌ನಲ್ಲಿ ಬಂದು ಪತಿಯ ಮುಖ ಸವರುತ್ತಿರುವ, ಕಣ್ಣೀರು ಸುರಿಸುತ್ತಾ, ಮೃತದೇಹದ ಮುಂದೆ ಗೋಳಾಡುತ್ತಿರುವ ಫೋಟೋ ಎಲ್ಲೆಡೆ ವೈರಲ್ ಆಗುತ್ತಿದೆ.
ಜಿಗಳಿ ಗ್ರಾಮಕ್ಕೆ ಸಂಜಯ್ ಮೃತದೇಹ ಬರುತ್ತಿದ್ದಂತೆ ಪೋಷಕರು ಹಾಗೂ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಗ್ರಾಮದಲ್ಲಿ ಮೆರವಣಿಗೆ ನಡೆಸಿ ದುಃಖದ ಕೋಡಿಯಲ್ಲಿ ಸಂಜಯ್ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ಚಿಕಿತ್ಸೆ ಬಳಿಕ ಪ್ರೀತಿ ಸುಧಾರಿಸಿಕೊಳ್ಳುತ್ತಿದ್ದು, ಪತಿಯನ್ನು ಕಳೆದುಕೊಂಡು ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾರೆ.












Click it and Unblock the Notifications