Lokayukta Raid: ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಚನ್ನಗಿರಿ ನಿವಾಸದಲ್ಲಿ ಕಂತೆ ಕಂತೆ ನೋಟು ಪತ್ತೆ
ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ಚನ್ನಗಿರಿಯ ಚನ್ನೇಶಪುರದ ನಿವಾಸದ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು, ಶಾಸಕರ ಮನೆಯಲ್ಲಿ ಕಂತೆ ಕಂತೆ ಹಣ ಹಾಗೂ ಚಿನ್ನಾಭರಣ ಪತ್ತೆಯಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ದಾವಣಗೆರೆ, ಮಾರ್ಚ್ 3: ಜಿಲ್ಲೆಯ ಚನ್ನಗಿರಿ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಪ್ರಶಾಂತ್ ಮಾಡಾಳ್ ಲೋಕಾಯುಕ್ತ ಬಲೆಗೆ ಬಿದ್ದ ಮೇಲೆ ಲೋಕಾಯುಕ್ತ ಪೊಲೀಸರು ಇಂಚಿಂಚೂ ಬಿಡದೆ ಶೋಧ ನಡೆಸುತ್ತಿದ್ದಾರೆ. ಚನ್ನೇಶಪುರದ ಮಾಡಾಳ್ ವಿರೂಪಾಕ್ಷಪ್ಪರ ಮನೆಯ ಮೇಲೂ ಅಧಿಕಾರಿಗಳು ದಾಳಿ ನಡೆಸಿದ್ದು ಶಾಸಕರ ಮನೆಯಲ್ಲಿ ಕಂತೆ ಕಂತೆ ಹಣ ಪತ್ತೆಯಾಗಿದೆ.
ಶಾಸಕ ಮಾಡಾಳು ವೀರುಪಾಕ್ಷಪ್ಪ ಮನೆಯಲ್ಲಿ ನೋಟುಗಳ ಕಂತೆ ಪತ್ತೆಯಾಗಿದ್ದು, 500, 200, 100 ಮುಖ ಬೆಲೆಯ ನೋಟಗಳನ್ನು ಲೋಕಾಯುಕ್ತ ಅಧಿಕಾರಿಗಳು ಎಣಿಸುತ್ತಿದ್ದಾರೆ. ಜೊತೆಗೆ ಸಾಕಷ್ಟು ಚಿನ್ನಾಭರಣ ಕೂಡ ಪತ್ತೆ ಆಗಿದ್ದು, ಈ ಬಗ್ಗೆ ಕೂಡ ಪರಿಶೀಲನೆ ನಡೆಸಿದ್ದಾರೆ. ಮಾಹಿತಿ ಪ್ರಕಾರ ಇದುವರೆಗೆ ಏಳೂವರೆ ಲಕ್ಷ ರೂಪಾಯಿ ಅಧಿಕ ನಗದು ಪತ್ತೆಯಾಗಿದೆ ಎನ್ನಲಾಗಿದೆ. ಮನೆಯಲ್ಲಿರುವ ಪ್ರತಿ ಕಬೋರ್ಡ್ ಕೂಡ ತಡಕಾಡಿರೋ ಲೊಕಾಯುಕ್ತ ಅಧಿಕಾರಿಗಳು, ದಾಖಲೆಗಳನ್ನು ಪರಿಶೀಲಿಸತೊಡಗಿದ್ದಾರೆ.

ಇನ್ನು ಚನ್ನಗಿರಿಯ ಮಾಡಾಳ್ ವಿರೂಪಾಕ್ಷಪ್ಪರ ಮನೆಯಲ್ಲಿ ಲೋಕಾಯುಕ್ತ ಪೊಲೀಸರಿಗೆ 500 ಹಾಗೂ 200 ರೂಪಾಯಿ ಮುಖಬೆಲೆಯ ಲಕ್ಷಾಂತರ ರೂಪಾಯಿ ಸಿಕ್ಕಿದೆ. ಹೀಗಾಗಿ ಗುರುವಾರ ಯಾರೆಲ್ಲಾ ಮನೆಗೆ ಬಂದು ಹೋಗಿದ್ದರು. ಬೆಂಗಳೂರಿನಲ್ಲಿ ದಾಳಿಯಾದ ಬಳಿಕ ಯಾರಾದರೂ ಬಂದಿದ್ದರಾ? ಹಣ ಇಲ್ಲಿಂದ ಬೇರೆ ಕಡೆ ಸಾಗಣೆ ಮಾಡಲಾಗಿದೆಯಾ ಎಂಬ ಕುರಿತಂತೆ ಸಿಸಿಟಿವಿ ಪರಿಶೀಲನೆ ನಡೆಸಿರುವ ಪೊಲೀಸರು, ಎಷ್ಟು ಹಣ ಇದೆ ಎಂಬುದನ್ನು ಲೆಕ್ಕಾಚಾರ ಮಾಡುತ್ತಿದ್ದಾರೆ. ಮಾತ್ರವಲ್ಲ, ಕೆಲವೊಂದು ದಾಖಲಾತಿಗಳು ಸಿಕ್ಕಿವೆ ಎಂದು ಲೋಕಾಯುಕ್ತ ಮೂಲಗಳು ತಿಳಿಸಿವೆ.
ಕಳೆದ ಮೂರ್ನಾಲ್ಕು ದಿನಗಳಿಂದ ಯಾರ್ಯಾರು ಬಂದು ಹೋದಿದ್ದರು? ಶಾಸಕರು ಮನೆಯಲ್ಲಿಯೇ ಇದ್ದರಾ? ಇಲ್ಲಿಗೆ ಬಂದು ಹೋದ ಬಳಿಕ ಗುತ್ತಿಗೆದಾರರು ಬೆಂಗಳೂರಿಗೆ ಹೋಗಿದ್ದಾರಾ? ಟೆಂಡರ್ ನೀಡಲು ಹಣ ನೀಡುವಂತೆ ಮಾತುಕತೆ ಎಲ್ಲಿ ಆಗಿದ್ದು ಎಂಬ ಆಯಾಮದಲ್ಲಿಯೂ ಲೋಕಾಯುಕ್ತ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.

ಮಾಡಾಳ್ ವಿರೂಪಾಕ್ಷಪ್ಪರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಯನ್ನೂ ಸಹ ವಿಚಾರಣೆಗೊಳಪಡಿಸುವ ಸಾಧ್ಯತೆ ಇದೆ. ಮನೆಗೆ ಕೆಲಸ ಮಾಡಲು ಬರುತ್ತಿದ್ದವರಲ್ಲಿಯೂ ಕೆಲ ಪ್ರಶ್ನೆಗಳನ್ನು ಕೇಳಲಾಗಿದೆ. ಆದರೆ ಯಾರಿಂದಲೂ ಸರಿಯಾದ ಮಾಹಿತಿ ಸಿಕ್ಕಿಲ್ಲ. ನಾವು ಕೆಲಸಕ್ಕೆ ಬರುತ್ತಿದ್ದೆವು. ಮುಗಿದ ತಕ್ಷಣ ಮನೆಗೆ ಹೋಗುತ್ತಿದ್ದೆವು. ಈ ವಿಚಾರದ ಬಗ್ಗೆ ಮಾಹಿತಿ ಇಲ್ಲ ಎಂದಿದ್ದಾರೆ ಎಂದು ಲೋಕಾಯುಕ್ತ ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.
ಲೋಕಾಯುಕ್ತ ದಾಳಿ ಹಿಂದೆ ಕಾಂಗ್ರೆಸ್ ಕೈವಾಡ
ಇಷ್ಟೆಲ್ಲಾ ಬೆಳವಣಿಗೆ ನಡೆದ ಬಳಿಕ ಶಾಸಕ ಮಾಡಾಳ್ ವಿರೂಪಾಕ್ಷಪ್ಪರ ಪರ ಅತ್ಯಾಪ್ತರು, ಬೆಂಬಲಿಗರು ಪ್ರತಿಭಟನೆ ನಡೆಸಿದ್ದಾರೆ. ಚನ್ನಗಿರಿ ಪಟ್ಟಣದಲ್ಲಿ ಮೆರವಣಿಗೆ ನಡೆಸಿದ ಕೆಲ ಮುಖಂಡರು, ಲೋಕಾಯುಕ್ತ ದಾಳಿ ಹಿಂದೆ ಕಾಂಗ್ರೆಸ್ ಪಕ್ಷದವರ ಕೈವಾಡವಿದೆ ಎಂದು ಆರೋಪಿಸಿದರು. ಚನ್ನಗಿರಿ ಕ್ಷೇತ್ರದಲ್ಲಿ ಮಾಡಾಳ್ ವಿರೂಪಾಕ್ಷಪ್ಪ ಹಲವು ಅಭಿವೃದ್ಧಿ ಕಾರ್ಯ ಮಾಡಿದ್ದಾರೆ. ಇದನ್ನು ಸಹಿಸದೆ ಪೂರ್ವ ನಿಯೋಜಿತ ಮಾಡಿ ಷಡ್ಯಂತ್ರ ರೂಪಿಸಿ, ಮಾಡಾಳ್ ವಿರೂಪಾಕ್ಷಪ್ಪರ ಪುತ್ರ ಪ್ರಶಾಂತ್ ಅವರನ್ನು ಷಡ್ಯಂತ್ರದಲ್ಲಿ ಸಿಲುಕಿಸಲಾಗಿದೆ ಎಂದು ಆರೋಪಿಸಿದರು.












Click it and Unblock the Notifications