ಜಲಸಿರಿ ಯೋಜನೆ ಅಪೂರ್ಣ: ಅಧಿಕಾರಿಗಳನ್ನು ತರಾಟೆಗ ತೆಗೆದುಕೊಂಡ ಶಾಮನೂರು ಶಿವಶಂಕರಪ್ಪ
ದಾವಣಗೆರೆ, ಮೇ 31: ಜಲಸಿರಿ ಯೋಜನೆಯು ಕಳೆದ 6 ವರ್ಷಗಳ ಹಿಂದೆ ಪ್ರಾರಂಭವಾಗಿದ್ದರೂ ಸಹ ಕಾಮಗಾರಿ ಇನ್ನು ಮುಕ್ತಾಯಗೊಳ್ಳದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಇಂದು ತಮ್ಮ ಗೃಹ ಕಛೇರಿಯಲ್ಲಿ ನಡೆದ ಸಭೆಯಲ್ಲಿ ಅಧಿಕಾರಿಗಳ ವಿರುದ್ಧ ಅಸಮಾಧಾನ ಹೊರಹಾಕಿದ ಶಾಸಕರು, ಕಳೆದ 6 ವರ್ಷಗಳ ಹಿಂದೆ ಯೋಜನೆಯನ್ನು ತಂದು ಕಾಮಗಾರಿಗೆ ಚಾಲನೆ ನೀಡಲಾಗಿತ್ತು. 4 ವರ್ಷಗಳ ಅವಧಿಯಲ್ಲಿ ಕಾಮಗಾರಿ ಮುಕ್ತಾಯಗೊಳಿಸಿ ಸಾರ್ವಜನಿಕರಿಗೆ ನೀರು ಒದಗಿಸಬೇಕಾಗಿತ್ತು ಎಂದರು.

ಅಧಿಕಾರಿಗಳು ಮತ್ತು ಗುತ್ತಿಗೆದಾರರ ವಿಳಂಬ ನೀತಿಯಿಂದಾಗಿ ಕಾಮಗಾರಿ ಪೂರ್ಣಗೊಳ್ಳದೇ ನೀರು ಪೂರೈಕೆ ಆಗದೇ ಜನರು ಪರಿತಪಿಸುವಂತಾಗಿದೆ. ಜನತೆ ನಮ್ಮ ಬಳಿ ಬಂದು ತಮ್ಮ ಅಳಲನ್ನು ತೊಡಿಕೊಳ್ಳುತ್ತಿದ್ದು, ನೀವು ನೀರು ಇಲ್ಲದೇ ಜೀವಿಸುತ್ತಿರಾ ಎಂದು ಪ್ರಶ್ನಿಸಿದರು.
ಕಾಮಗಾರಿ ವಿಳಂಬಕ್ಕೆ ಕಾರಣ ನೀಡಿ ಎಂದು ಸೂಚಿಸಿದ ಅವರು ಇನ್ನೆರಡು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಿ ಇಡೀ ದಾವಣಗೆರೆ ನಗರಕ್ಕೆ ನೀರು ಒದಗಿಸಬೇಕು. ಇಲ್ಲದಿದ್ದರೆ ಶಿಸ್ತುಕ್ರಮ ಎದುರಿಸಲು ಮುಂದಾಗಿ ಎಂದು ಎಚ್ಚರಿಸಿದರು.

ಇದೇ ವೇಳೆ ಸ್ಮಾರ್ಟ್‌ಸಿಟಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕರು, ಕಾಮಾಗಾರಿಗಳ ವಿಳಂಬ ಆಗದಂತೆ ಅದಷ್ಟು ಶೀಘ್ರ ಗುಣಮಟ್ಟದ ಕಾಮಗಾರಿ ಮಾಡುವಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ಉದ್ಯಮಿ ಎಸ್.ಎಸ್.ಗಣೇಶ್, ಮಹಾನಗರ ಪಾಲಿಕೆ ಸದಸ್ಯರಾದ ಎ.ಬಿ.ರಹೀಂ, ಕಬೀರ್, ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ವೀರೇಶ್ ಶೆಟ್ಟಿ, ನಿರ್ದೇಶಕರಾದ ಎಂ.ನಾಗರಾಜ್, ಪ್ರಭಾರ ಮುಖ್ಯ ಇಂಜಿನಿಯರ್ ಹರ್ಷಿತಾ, ಜಲಸಿರಿ ಯೋಜನೆಯ ವಿರೇಂದ್ರ ಕುಂದಗೊಳ್, ಕಾರ್ಯಪಾಲಕ ಅಭಿಯಂತರ ಕಾಯಿ ಮಂಜುನಾಥ್, ಮುಖಂಡರಾದ ಕೊಡಪಾನ ದಾದಾಪೀರ್, ಲಾಲ್ ಆರೀಫ್, ಅಲಿ, ಸೈಯದ್ ಬಾಬ್ ಜಾನ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.












Click it and Unblock the Notifications