ದಾವಣಗೆರೆ: ಅರುಣಾ ಚಿತ್ರಮಂದಿರ ಬಳಿ ಬಸ್ ಗ್ಲಾಸ್ ಪುಡಿಪುಡಿ ಮಾಡಿದ್ದೇಕೆ?
ದಾವಣಗೆರೆ, ಡಿಸೆಂಬರ್ 29: ದಾವಣಗೆರೆ ನಗರದ ಅರುಣಾ ಚಿತ್ರಮಂದಿರದ ಸರ್ಕಲ್ ಅಪಾಯಕಾರಿ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಈಗಾಗಲೇ ಇದೇ ಸ್ಥಳದಲ್ಲಿ ಆಗಾಗ್ಗೆ ಅಪಘಾತಗಳು ಸಂಭವಿಸಿವೆ. ಪಿ.ಬಿ ರಸ್ತೆಯಲ್ಲಿ ಬರುವ ಈ ಸರ್ಕಲ್‌ನಲ್ಲಿ ಸಿಗ್ನಲ್ ಅಳವಡಿಕೆ ಮಾಡಿದ್ದರೂ ವಾಹನ ಸವಾರರು ಪಾಲನೆ ಮಾಡುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ.
ಕಿತ್ತೂರು ರಾಣಿ ಚೆನ್ನಮ್ಮ ಸರ್ಕಲ್‌ನಲ್ಲಿ ನಾಲ್ಕು ಕಡೆಗಳಲ್ಲಿಯೂ ಸಿಗ್ನಲ್ ಅಳವಡಿಕೆ ಮಾಡಲಾಗಿದೆ. ಆದರೆ ಸಿಗ್ನಲ್ ಬಿದ್ದಾಗ ವಾಹನ ಸವಾರರು ವಾಹನಗಳನ್ನು ಚಾಲನೆ ಮಾಡುತ್ತಿರುವುದೇ ಸಮಸ್ಯೆ ಆಗಲು ಕಾರಣ. ಕೆಲವೊಮ್ಮೆ ಗ್ರೀನ್ ಸಿಗ್ನಲ್ ಬಿದ್ದಿರುವುದಿಲ್ಲ. ಬಸ್, ಲಾರಿ, ಕಾರು ಚಾಲಕರು ವಾಹನ ಚಲಾಯಿಸಿಬಿಡುತ್ತಾರೆ. ಇಂಥ ವೇಳೆಯಲ್ಲಿ ಪಾದಚಾರಿಗಳು ಜೀವ ಕೈಯಲ್ಲಿಡಿದುಕೊಂಡು ಓಡಾಡುವ ಸ್ಥಿತಿ ನಿರ್ಮಾಣವಾಗಿದೆ.
ಬಸ್ ಗ್ಲಾಸ್ ಪುಡಿಪುಡಿ ಮಾಡಿದ್ಯಾಕೆ?
ದಾವಣಗೆರೆ ನಗರದ ಅರುಣಾ ಚಿತ್ರಮಂದಿರದ ಬಳಿ ಪಾದಚಾರಿ ಮೇಲೆ ಬಸ್ ಹರಿದ ಪರಿಣಾಮ ವ್ಯಕ್ತಿ ಸ್ಥಳದಲ್ಲಿ ಮೃತಪಟ್ಟ ಘಟನೆ ನಡೆದಿದ್ದು, ಉದ್ರಿಕ್ತರು ಬಸ್ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.

ಅರುಣಾ ಟಾಕೀಸ್ ಬಳಿಯ ಬಾರ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಬಸಪ್ಪ ನಡೆದುಕೊಂಡು ಬರುತ್ತಿದ್ದರು. ಈ ವೇಳೆ ಬಸಪ್ಪನ ತಲೆ ಮೇಲೆ ಬಸ್ ಹರಿದಿದೆ. ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಆರಾಧ್ಯ ಸ್ಟೀಲ್ ಕಂಪೆನಿಗೆ ಸೇರಿದ ಬಸ್ ಇದಾಗಿದ್ದು, ಸ್ಥಳದಲ್ಲಿದ್ದ ಜನರು ರೊಚ್ಚಿಗೆದ್ದರು. ಈ ವೇಳೆ ಜನರ ಆಕ್ರೋಶಕ್ಕೆ ಬಸ್ ತುತ್ತಾಯಿತು. ಬಸ್‌ನ ಗ್ಲಾಸ್ ಪುಡಿ ಪುಡಿ ಆದವು. ಇದೇ ಸ್ಥಳದಲ್ಲಿ ಬಸ್ ಚಾಲಕರು ವೇಗವಾಗಿ ಓಡಿಸುತಲಿದ್ದು, ಆಗಿದ್ದಾಗ ಅಪಘಾತಗಳು ನಡೆಯುತ್ತಲೇ ಇವೆ.

ಕಳೆದೊಂದು ತಿಂಗಳಲ್ಲಿ ಇದೇ ಸ್ಥಳದಲ್ಲಿ ಅಪಘಾತ ಆಗಿದ್ದರೂ ಯಾವುದೇ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡಿಲ್ಲ. ಪಾದಚಾರಿ ಸಾವಿಗೆ ನ್ಯಾಯ ಸಿಗಲೇಬೇಕು. ಕೂಡಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ಅವರು ಸ್ಥಳಕ್ಕೆ ಬರಬೇಕು ಎಂದು ಸಾರ್ವಜನಿಕರು ಪಟ್ಟು ಹಿಡಿದರು. ಈ ವೇಳೆ ಟ್ರಾಫಿಕ್ ಜಾಮ್ ಸಹ ಉಂಟಾಗಿತ್ತು. ಬಳಿಕ ಸ್ಥಳಕ್ಕೆ ಆಗಮಿಸಿದ ಬಡಾವಣೆ ಪೊಲೀಸ್ ಠಾಣೆ ಪೊಲೀಸರು ಗುಂಪನ್ನು ಚದುರಿಸಿ, ಟ್ರಾಫಿಕ್ ಜಾಮ್ ತೆರೆವುಗೊಳಿಸಿದರು. ದಾವಣಗೆರೆ ದಕ್ಷಿಣ ಟ್ರಾಫಿಕ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಅರುಣಾ ಚಿತ್ರಮಂದಿರ ಸರ್ಕಲ್ ಯಾವಾಗಲೂ ವಾಹನ ದಟ್ಟಣೆಯಿಂದ ಕೂಡಿರುತ್ತದೆ. ಜಿಲ್ಲಾಧಿಕಾರಿ ಕಚೇರಿಗೆ ಹೋಗಲು, ಆ ಕಡೆಯಿಂದ ದಾವಣಗೆರೆ ಕಡೆಗೆ ಬರಲು ಈ ಮಾರ್ಗದಲ್ಲಿ ಜನರು ಹೆಚ್ಚಾಗಿ ಸಂಚರಿಸುತ್ತಾರೆ. ಇಲ್ಲಿ ವಾಹನಗಳ ದಟ್ಟಣೆಯೂ ಹೆಚ್ಚಾಗಿರುತ್ತದೆ. ರಾತ್ರಿ ವೇಳೆಯಲ್ಲಿ ಮರಳು, ಇಟ್ಟಿಗೆ ಹೊತ್ತ ಲಾರಿಗಳ ಓಡಾಟವೂ ಹೆಚ್ಚಾಗಿರುತ್ತದೆ. ಇನ್ನು ಬಸ್‌ಗಳ ಚಾಲಕರು ವೇಗವಾಗಿ ಓಡಿಸುವುದರಿಂದ ಜನರಂತೂ ಆತಂಕದಲ್ಲಿಯೇ ಓಡಾಡುವಂತಾಗಿದೆ.

ಇನ್ನು ಸಿಗ್ನಲ್‌ಗಳಲ್ಲಿ ಪೊಲೀಸರು ಇರುವುದಿಲ್ಲ. ಮನೆಗೆ ನೊಟೀಸ್ ಕಳುಹಿಸುತ್ತಾರೆ ಎಂಬ ಭಯವೂ ಇಲ್ಲ. ನಗರದ ಪ್ರಮುಖ ರಸ್ತೆಗಳಲ್ಲಿ ಸಿಗ್ನಲ್ ಅಳವಡಿಕೆ ಮಾಡಿದ್ದರೂ ಕಾನೂನು ಮಾತ್ರ ಪಾಲನೆ ಮಾಡುತ್ತಿಲ್ಲ. ಕೆಲವು ಕಡೆಗಳಲ್ಲಿ ಸಿಗ್ನಲ್ ಅಳವಡಿಕೆ ಪೂರ್ಣ ಪ್ರಮಾಣದಲ್ಲಿ ಆಗಿಲ್ಲ. ಪೊಲೀಸರು ನಗರ ವ್ಯಾಪ್ತಿಯಲ್ಲಿ ವಾಹನಗಳ ವೇಗದ ಓಡಾಟಕ್ಕೆ ಬ್ರೇಕ್ ಹಾಕಬೇಕು. ಸಾಧ್ಯವಾದರೆ ಪೊಲೀಸ್ ಸಿಬ್ಬಂದಿ ನಿಯೋಜಿಸಬೇಕೆಂದು ಜನರು ಆಗ್ರಹಿಸಿದ್ದಾರೆ.












Click it and Unblock the Notifications