• search
 • Live TV
ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕಬ್ಬು ಬೆಳೆಗಾರರಿಗೆ 2500 ಕೋಟಿ ರೂ. ಬಾಕಿ ಹಣ ನೀಡಬೇಕಿದೆ: ಕುರುಬೂರು ಶಾಂತಕುಮಾರ್

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ನವೆಂಬರ್ 3: "ಕಬ್ಬು ಬೆಳೆಗಾರರಿಗೆ ಕಳೆದ ವರ್ಷದ 600 ಕೋಟಿ ರೂಪಾಯಿ ಬಾಕಿ ಬರಬೇಕಿದೆ. ಈ ವರ್ಷವೂ ಕಬ್ಬು ಪೂರೈಕೆ ಮಾಡಲಾಗುತ್ತಿದೆ. ಇದೂ ಸೇರಿದರೆ ಬರೋಬ್ಬರಿ ಎರಡೂವರೆ ಸಾವಿರ ಕೋಟಿ ರೂ. ಪಾವತಿಯಾಗಬೇಕಿದೆ,'' ಎಂದು ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಹೇಳಿದರು.

"ಸಕ್ಕರೆ ಕಾರ್ಖಾನೆ ಮಾಲೀಕರು ಕಬ್ಬು ಬೆಳೆಗಾರರಿಗೆ ಹಣ ಪಾವತಿ ಮಾಡುತ್ತಿದ್ದಾರೆ. ಆದರೆ ಹಣ ಪಾವತಿ ವೇಗವಾಗಿ ಆಗುತ್ತಿಲ್ಲ," ಎಂದು ತಿಳಿಸಿದರು.

ದಾವಣಗೆರೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಕುರುಬೂರು ಶಾಂತಕುಮಾರ್, "ರೈತರು ಪೂರೈಕೆ ಮಾಡಿರುವ ಕಬ್ಬಿನ ಹಣವನ್ನೇ ನೀಡಿಲ್ಲ. ಇನ್ನು ಬಡ್ಡಿ ಎಲ್ಲಿಂದ ಕೊಡ್ತಾರೆ," ಎಂದು ಪ್ರಶ್ನಿಸಿದರು.

"ಚುನಾವಣೆಗೆ ಸ್ಪರ್ಧಿಸುವ ಯಾವುದೇ ಇರಾದೆ ನನಗೆ ಇಲ್ಲ. ನಮ್ಮಲ್ಲಿಂದ ಹೋದವರು ಶಾಸಕ, ಸಚಿವ, ಮುಖ್ಯಮಂತ್ರಿಯಾಗಿ ಅಧಿಕಾರ ಅನುಭವಿಸಿದರು. ನಮ್ಮ‌ ಸಿದ್ಧಾಂತ ಬಿಟ್ಟು ಹೋಗಲ್ಲ. ಚುನಾವಣೆಗೆ ಸ್ಪರ್ಧೆ ಮಾಡುವ ಯಾವುದೇ ಆಲೋಚನೆ ಇಲ್ಲ," ಎಂದು ಸ್ಪಷ್ಟಪಡಿಸಿದರು.

"ಕಬ್ಬು ಪೂರೈಕೆ ಮಾಡಿದ ರೈತರಿಗೆ 14 ದಿನಗಳಲ್ಲಿ ಹಣ ಪಾವತಿಸಬೇಕು. ಇಲ್ಲವಾದರೆ ಶೇಕಡಾ 15ರಷ್ಟು ಬಡ್ಡಿ ಸೇರಿಸಿ ನೀಡಬೇಕೆಂಬ ನಿಯಮ ಸಕ್ಕರೆ ನಿಯಂತ್ರಣ ಕಾಯ್ದೆ 1966ಕ್ಕೆ ತಿದ್ದುಪಡಿ ಮಾಡಿ ರೈತರ ಹಣ ಪಾವತಿಗೆ ಮೂರು ಕಂತುಗಳಲ್ಲಿ 60 ದಿನಗಳ ಕಾಲಾವಕಾಶ ನೀಡುವ ತಿದ್ದುಪಡಿಗೆ ಕೇಂದ್ರ ಸರ್ಕಾರ ಮುಂದಾಗಿರುವುದಕ್ಕೆ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘ ವಿರೋಧ ವ್ಯಕ್ತಪಡಿಸಿದೆ."

"ಇದು ಕಬ್ಬು ಬೆಳೆಗಾರ ಹಾಗೂ ರೈತರ ಕತ್ತು ಕೊಯ್ಯುವ ಕಾರ್ಯ ಎಂದು ಆಕ್ರೋಶ ವ್ಯಕ್ತಪಡಿಸಿದರಲ್ಲದೇ, ಈ ಬಗ್ಗೆ ನೀತಿ ಆಯೋಗ ನೀಡಿರುವ ವರದಿಯನ್ನು ತಿರಸ್ಕರಿಸಬೇಕೆಂದು," ಕುರುಬೂರು ಶಾಂತಕುಮಾರ್ ಒತ್ತಾಯಿಸಿದರು.

"ಕಬ್ಬು, ಭತ್ತ, ಮೆಕ್ಕೆಜೋಳ ಸೇರಿದಂತೆ ಕೃಷಿ ಉತ್ಪನ್ನಗಳ ಬೆಂಬಲ ಬೆಲೆಯನ್ನು ಕೇಂದ್ರ ಸರ್ಕಾರ ಕೇವಲ ಅರ್ಧ ಪರ್ಸೆಂಟ್ ರಷ್ಟು ಮಾತ್ರ ಏರಿಕೆ ಮಾಡುತ್ತದೆ. ಆದರೆ ಸರ್ಕಾರಿ ನೌಕರರಿಗೆ ನಿತ್ಯ ಬಳಕೆಯ ವಸ್ತುಗಳ ಬೆಲೆ ಏರಿಕೆ ಅನುಸಾರ ಶೇ.3ರಷ್ಟು ತುಟ್ಟಿಭತ್ಯೆ ಏರಿಕೆ ಮಾಡುತ್ತದೆ. ಇದು ರೈತರಿಗೆ ಮಾಡುತ್ತಿರುವ ವಂಚನೆಯಲ್ಲವೇ? ಇಂದು ರೈತರ ಆದಾಯ ಕಡಿಮೆಯಾಗಿದೆ. ತಿಂಗಳಿಗೆ 3100 ಇದ್ದ ಕೂಲಿ ಕಾರ್ಮಿಕರ ಆದಾಯ, ಈಗ 4100 ರೂಪಾಯಿ ಆಗಿದೆ. ಕೇಂದ್ರ ಸರ್ಕಾರದ ಅವೈಜ್ಞಾನಿಕ ನೀತಿಗಳಿಂದ ರೈತ ದುರ್ಬಲವಾಗುತ್ತಿದ್ದಾನೆ," ಎಂದು ಬೇಸರ ವ್ಯಕ್ತಪಡಿಸಿದರು.

"ಕಬ್ಬಿನಿಂದ ಎಥೆನಾಲ್ ಉತ್ಪಾದನೆಗೆ ಮತ್ತು ಅದರ ಖರೀದಿಗೆ ಕೇಂದ್ರ ಸರ್ಕಾರ ಲೀಟರ್‌ಗೆ 65 ರೂ. ನಿಗದಿ ಮಾಡುತ್ತದೆ. ಆದರೆ ಚೀನಾ ದೇಶದಿಂದ ಲೀಟರ್‌ಗೆ 500 ರೂ. ನೀಡಿ ಆಮದು ಮಾಡಿಕೊಳ್ಳುತ್ತದೆ. ಇಂತಹ ಇಬ್ಬಗೆ ನೀತಿಗಳಿಂದ ದೇಶದ ರೈತರು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ," ಎಂದು ಆರೋಪಿಸಿದರು.

"ಕಬ್ಬಿನ ಎಫ್ಆರ್‌ಪಿ ದರ ಪುನರ್ ಪರಿಶೀಲಿಸುವಂತೆ ಆಗ್ರಹಿಸಿ ಬೆಂಗಳೂರಿನಲ್ಲಿ ಕಳೆದ ಅ.5ರಂದು ನಡೆದ ಪ್ರತಿಭಟನಾ ಮೆರವಣಿಗೆ ವೇಳೆ ಸಿಎಂ, ಸಕ್ಕರೆ ಸಚಿವ, ಕೃಷಿ ಸಚಿವರು ಒಪ್ಪಿ ತಿಂಗಳಾಗಿದೆ. ಈ ಬಗ್ಗೆ ಯಾವುದೇ ಕ್ರಮ ಜಾರಿಯಾಗಿಲ್ಲ. ಸರ್ಕಾರ ಕೂಡಲೇ ಕ್ರಮ ತೆಗೆದುಕೊಳ್ಳಬೇಕು. ಈ ನಿಟ್ಟಿನಲ್ಲಿ ಮತ್ತೊಮ್ಮೆ ಸದ್ಯದಲ್ಲಿಯೇ ಮುಖ್ಯಮಂತ್ರಿಗಳನ್ನು ರಾಜ್ಯ ಕಬ್ಬು ಬೆಳೆಗಾರರ ಸಂಘದ ಪದಾಧಿಕಾರಿಗಳ ನಿಯೋಗ ಭೇಟಿ ಮಾಡಲಿದೆ," ಎಂದು ತಿಳಿಸಿದರು.

   ಪುನೀತ್ ಗೆ ಅವಮಾನ ಮಾಡಿದವನಿಗೆ ಹಿಗ್ಗಾಮುಗ್ಗ ಜಾಡಿಸಿದ ಸುದೀಪ್ ಮಗಳು | Oneindia Kannada

   ಸಂಘದ ರಾಜ್ಯ ಉಪಾಧ್ಯಕ್ಷ ತೇಜಸ್ವಿ ಪಟೇಲ್ ಮಾತನಾಡಿ, "ಡಿಸೆಂಬರ್ 23ರಂದು ಮೈಸೂರಿನಲ್ಲಿ ರಾಜ್ಯಮಟ್ಟದ ವಿಶ್ವ ರೈತ ದಿನಾಚರಣೆಯನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಲಾಗುವುದು. ಈ ಬಗ್ಗೆ ರಾಜ್ಯ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗಿದೆ," ಎಂದು ಮಾಹಿತಿ ನೀಡಿದರು.

   English summary
   Pay Dues Rs 2500 Crores To Sugarcane Growers, said Kurubur Shantakumar, president of the Sugarcane Growers Association.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X