ದಾವಣಗೆರೆ: ಪಾಲಿಕೆ ತೆರಿಗೆ ಪರಿಷ್ಕರಣೆ ಮಾಡುವಂತೆ ಒತ್ತಾಯ
ದಾವಣಗೆರೆ, ಮೇ 29: ದಾವಣಗೆರೆ ಮಹಾನಗರ ಪಾಲಿಕೆಯು ಕಂದಾಯ ಪರಿಷ್ಕರಣೆಯನ್ನು ಮುಂದೂಡಿ, ಈ ಮೊದಲಿದ್ದಂತೆ ಕಂದಾಯ ಪಾವತಿಸಲು ಅನುಮತಿ ನೀಡಬೇಕೆಂದು ಒತ್ತಾಯಿಸಿ ಪಾಲಿಕೆ ವಿಪಕ್ಷ ನಾಯಕ ಎ.ನಾಗರಾಜ್ ನೇತೃತ್ವದಲ್ಲಿ ಆಯುಕ್ತ ವಿಶ್ವನಾಥ್ ಮುದ್ದಜ್ಜಿ ಅವರಿಗೆ ಮನವಿ ಸಲ್ಲಿಸಿದರು.
ದಾವಣಗೆರೆ ಮಹಾನಗರ ಪಾಲಿಕೆ ಮುಂಭಾಗದಲ್ಲಿ ಮಹಾನಗರ ಪಾಲಿಕೆಯ ವಿಪಕ್ಷ ಸದಸ್ಯರು ಮನವಿ ಸಲ್ಲಿಸಿದರು. ಪಾಲಿಕೆಯಲ್ಲಿ ಸರ್ವ ಸದಸ್ಯರ ಸಭೆ ಕರೆದು ಕಂದಾಯ ಪರಿಷ್ಕರಣೆ ಮಾಡುವ ನಿಯಮವಿದೆ. ಈ ಬಗ್ಗೆ ಚರ್ಚಿಸಿ ಜನ ಸಾಮಾನ್ಯರಿಗೂ, ಸರ್ಕಾರಕ್ಕೂ ಸೂಕ್ತ ಕಂದಾಯ ಬರುವ ರೀತಿಯಲ್ಲಿ ನಿರ್ಧಾರ ತೆಗೆದುಕೋಳ್ಳಬೇಕು ಎಂದರು.
ಆದರೆ ಪಾಲಿಕೆ ಸದಸ್ಯರನ್ನು ಕಡೆಗಣಿಸಿ ಪಾಲಿಕೆ ಆಡಳಿತಾಧಿಕಾರಿಗಳಾಗಿದ್ದ ಜಿಲ್ಲಾಧಿಕಾರಿಗಳು ಅವೈಜ್ಞಾನಿಕವಾಗಿ ಕಂದಾಯ ಪರಿಷ್ಕರಣೆ ಮಾಡಿದ್ದಾರೆ. ಇದಕ್ಕೆ ಸರ್ಕಾರದ ಮಟ್ಟದಲ್ಲಿ ಅನುಮೋದನೆ ಸಹ ದೊರಕಿದೆ. ಏಕಾಏಕಿ ಕಂದಾಯವನ್ನು ಶೇ.18 ರಷ್ಟು ವಸತಿಗೆ ಹಾಗೂ ಶೇ.24 ರಷ್ಟು ವಾಣಿಜ್ಯ ಮಳಿಗೆಗಳಿಗೆ ದರ ಏರಿಕೆ ಮಾಡಲಾಗಿದೆ ಇದು ಖಂಡನೀಯವಾಗಿದೆ ಎಂದು ವಿಪಕ್ಷ ಸದಸ್ಯರು ತಿಳಿಸಿದರು.

ಕೊರೊನಾ ವೈರಸ್ ನಿಂದಾಗಿ ಕಳೆದ 2 ತಿಂಗಳು ವಾಣಿಜ್ಯ ಚಟುವಟಿಕೆಗಳು ಸ್ಥಗಿತಗೊಂಡು ಜನರು ಕಷ್ಟದಲ್ಲಿದ್ದಾರೆ. ಇಂತಹ ಸಮಯದಲ್ಲಿ ಜಿಲ್ಲಾಧಿಕಾರಿಗಳ ಈ ನಿರ್ಣಯದಿಂದ ಜನತೆಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಹೇಳಿದರು.
ಆದ್ದರಿಂದ ಕಂದಾಯ ಪರಿಷ್ಕರಣೆ ಕೈಬಿಟ್ಟು ಹಳೇ ಕಂದಾಯವನ್ನು ಪಾವತಿಸಲು ಅನುಮತಿ ನೀಡಬೇಕು ಎಂದು ವಿಪಕ್ಷದ ಸದಸ್ಯರು ಒತ್ತಾಯಿಸಿದರು. ಈ ವೇಳೆ ಮಂಜುನಾಥ್ ಗಡಿಗುಡಾಳ್, ಸುಧಾ, ಶಿವಲೀಲ, ಆಶಾ ಸೇರಿದಂತೆ ಪಾಲಿಕೆಯ ವಿಪಕ್ಷ ಸದಸ್ಯರಿದ್ದರು.












Click it and Unblock the Notifications