ನಾನೇ ದಾವಣಗೆರೆ ಲೋಕಸಭೆಗೆ ಬಿಜೆಪಿ ಅಭ್ಯರ್ಥಿ ನನಗೆ ಟಿಕೆಟ್ ಸಿಗುತ್ತೆ: ಸಂಸದ ಜಿ.ಎಂ. ಸಿದ್ದೇಶ್ವರ
ದಾವಣಗೆರೆ, ಆಗಸ್ಟ್ 29: ಮುಂಬರುವ 2024ರ ಲೋಕಸಭೆ ಚುನಾವಣೆಗೆ ದಾವಣಗೆರೆಯಿಂದ ಬಿಜೆಪಿಯ ಅಭ್ಯರ್ಥಿ ನಾನೇ. ನನಗೆ ಟಿಕೆಟ್ ನೀಡುವ ವಿಶ್ವಾಸ ಇದೆ. ಹೊನ್ನಾಳಿ ಮಾಜಿ ಶಾಸಕ ಎಂ. ಪಿ. ರೇಣುಕಾಚಾರ್ಯ ಪ್ರಬಲ ಟಿಕೆಟ್ ಆಕಾಂಕ್ಷಿ ಎಂದೇಳಿರುವ ಬಗ್ಗೆ ನನಗೆ ಗೊತ್ತಿಲ್ಲ ಎಂದು ಸಂಸದ ಜಿ. ಎಂ. ಸಿದ್ದೇಶ್ವರ ಹೇಳಿದರು.
ಜಿಎಂಐಟಿ ವಸತಿ ಗೃಹದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೇಣುಕಾಚಾರ್ಯ ಹೇಳಿಕೆ ಕುರಿತಂತೆ ನನ್ನನ್ನು ಏನೂ ಕೇಳಬೇಡಿ. ಅವರ ಅಭಿಪ್ರಾಯ ಹೇಳಿರುತ್ತಾರೆ. ರೇಣುಕಾಚಾರ್ಯ, ಮಾಡಾಳ್ ವಿರೂಪಾಕ್ಷಪ್ಪ ಸೇರಿದಂತೆ ಎಲ್ಲರ ಜೊತೆ ಚೆನ್ನಾಗಿದ್ದೇನೆ. ವಿನಾಕಾರಣ ತಿಕ್ಕಾಟ ತಂದಿಡಬೇಡಿ ಎಂದು ಹೇಳಿದರು.

ಗೆದ್ದವನು ಸೋಲ್ತಾನೆ, ಸೋತವನು ಗೆಲ್ತಾನೆ. ನಾಲ್ಕು ಬಾರಿ ಸಂಸದನಾಗಿ ಆಯ್ಕೆಯಾಗಿದ್ದಾನೆ. ಜನಸೇವೆ ಮಾಡಿದ್ದೇನೆ. ಮುಂದಿನ ಬಾರಿಯೂ ಜನರು ಆಶೀರ್ವಾದ ಮಾಡಿದರೆ ಜನಸೇವೆ ಮಾಡುತ್ತೇನೆ. ಚುನಾವಣೆ ಹತ್ತಿರ ಬರುತ್ತಿದೆ. ಇದಕ್ಕೆ ತಯಾರಿ ನಡೆಯುತ್ತಿದೆ. ಎಲ್ಲಾ ಕಡೆ ಓಡಾಡುತ್ತಿದ್ದೇನೆ. ನಾನು ಹೊಂದಾಣಿಕೆ ಹಾಗೂ ಸಾಫ್ಟ್ ರಾಜಕಾರಣ ಎಂದಿಗೂ ಮಾಡಿಲ್ಲ, ಮುಂದೆಯೂ ಮಾಡುವುದಿಲ್ಲ ಎಂದು ತಿಳಿಸಿದರು.
ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗುವವರು ಆಗಲಿ. ಪಕ್ಷ ಬಿಟ್ಟು ಹೋಗುವವರನ್ನು ಮನವೊಲಿಸುವ ಕೆಲಸ ಮಾಡುತ್ತೇನೆ. ಪಕ್ಷದಲ್ಲಿ ಎಲ್ಲಾ ರೀತಿಯ ಅವಕಾಶಗಳಿವೆ. ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ನಾವು ಸೋತಿರಬಹುದು. ಸೋತವನು ಗೆಲ್ಲುತ್ತಾನೆ, ಗೆದ್ದವನು ಸೋಲುತ್ತಾನೆ ಎಂಬ ಮಾತು ಸಹಜ. ಚುನಾವಣೆ ಎಂದ ಮೇಲೆ ಸೋಲು ಗೆಲುವ ಸಹಜ. ಎರಡನ್ನೂ ಸಮಾನವಾಗಿ ಸ್ವೀಕರಿಸಬೇಕು ಎಂದರು.
ಕೇಂದ್ರ ಸರ್ಕಾರವು ರಾಜ್ಯ ಸರ್ಕಾರ ಬರಪೀಡಿತ ಪ್ರದೇಶ ಗುರುತಿಸಿ ಘೋಷಿಸಿದ ಬಳಿಕ ಕೇಂದ್ರದ ಎನ್‌ಡಿಎಫ್ ಈ ಬಗ್ಗೆ ಪರಿಶೀಲಿಸುತ್ತದೆ. ಆ ನಂತರ ನೆರವು ನೀಡುತ್ತದೆ. ಮೊದಲು ರಾಜ್ಯ ಸರ್ಕಾರ ಈ ಬಗ್ಗೆ ನಿರ್ಧಾರ ಮಾಡಬೇಕು ಎಂದು ಸಂಸದ ಸಿದ್ದೇಶ್ವರ ತಿಳಿಸಿದರು.

ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಿವೇಶನ ಹಂಚಿಕೆ ವಿಚಾರವಾಗಿ ಮಾತನಾಡಿದ ಅವರು, ಸ್ಮಾರ್ಟ್ ಸಿಟಿ ಕಾಮಗಾರಿ ಸೇರಿದಂತೆ ಎಲ್ಲವನ್ನೂ ಮಾಡಿದ್ದು ಶಾಸಕರು. ದಾವಣಗೆರೆ ಉತ್ತರ ಕ್ಷೇತ್ರದಲ್ಲಿ ಶಾಸಕರಾಗಿದ್ದ ಎಸ್. ಎ. ರವೀಂದ್ರನಾಥ್ ಹಾಗೂ ಮಲ್ಲಿಕಾರ್ಜುನ್ ಉತ್ತಮ ಸ್ನೇಹಿತರು. ಕುಂದುವಾಡ ಕೆರೆ ಅಭಿವೃದ್ಧಿಪಡಿಸಿದ್ದು ರವೀಂದ್ರನಾಥ್ ಅವರು ಶಾಸಕರಾಗಿದ್ದಾಗ. ಅವರನ್ನೇ ಕೇಳಲಿ. ಸಂಸದರು ಈ ಕೆಲಸ ಮಾಡುವುದಿಲ್ಲ. ನನ್ನ ವ್ಯಾಪ್ತಿಯಲ್ಲಿ ಬರುವಷ್ಟೇ ಕೆಲಸ ಮಾಡುತ್ತೇನೆ ಎಂದು ಹೇಳಿದರು.
ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ ಅವರು ಬಿಜೆಪಿ ಸಂಸದೀಯ ಮಂಡಳಿಯ ರಾಷ್ಟ್ರ ಕಾರ್ಯಕಾರಿಣಿ ಸದಸ್ಯರಿದ್ದಾರೆ. ಅವರನ್ನು ಸೈಡ್ ಲೈನ್ ಮಾಡುವ ಪ್ರಶ್ನೆಯೇ ಇಲ್ಲ. ಟಿಕೆಟ್ ನೀಡುವ ಸಮಿತಿಯಲ್ಲಿದ್ದಾರೆ ಎಂದರೆ ಅವರನ್ನು ಕಡೆಗಣಿಸಿದ ರೀತಿನಾ? ಆ ರೀತಿ ಏನೂ ಇಲ್ಲ. ಅವರ ಮಾರ್ಗದರ್ಶನ ಈಗಲೂ ಇದೆ ಎಂದು ಹೇಳಿದರು.












Click it and Unblock the Notifications