"ಬಿಜೆಪಿ ಅಧಿಕಾರಕ್ಕೆ ಬಂದರೂ ಬಹಳ ದಿನ ಉಳಿಯಲ್ಲ, ಅತೃಪ್ತರು ಉಳಿಯಲು ಬಿಡಲ್ಲ"
ದಾವಣಗೆರೆ, ಜುಲೈ 20: "ರಾಜೀನಾಮೆ ನೀಡಿ ಮುಂಬೈಗೆ ಹೋದವರು ಸಾಮೂಹಿಕವಾಗಿ ಹೋಗಿಲ್ಲ, ಬಿಜೆಪಿಯವರೇ ಅವರನ್ನು ಕರೆದುಕೊಂಡು ಹೋಗಿದ್ದಾರೆ" ಎಂದು ದಾವಣಗೆರೆಯಲ್ಲಿ ಕಾಂಗ್ರೆಸ್ ಹಿರಿಯ ಮುಖಂಡ ಹಾಗೂ ಶಾಸಕ ಶಾಮನೂರು ಶಿವಶಂಕರಪ್ಪ ಕಿಡಿಕಾರಿದರು.
ದಾವಣಗೆರೆಯಲ್ಲಿನ ಸ್ವಗೃಹದಲ್ಲಿ ಮಾತನಾಡಿದ ಅವರು, " ಸರ್ಕಾರ ಉರುಳೋದು, ಉಳಿಯೋದು ಸೋಮವಾರ ಅಂತಿಮವಾಗಲಿದೆ. ಅತೃಪ್ತರು ವಾಪಸ್ಸು ಬಂದರೆ ಸರ್ಕಾರ ಉಳಿಯುತ್ತೆ, ಇಲ್ಲವೇ ಉಳಿಯಲ್ಲ. ಸಮ್ಮಿಶ್ರ ಸರ್ಕಾರದ ಶಾಸಕರು ದುಡ್ಡು ತೆಗೆದುಕೊಂಡು ಸಮ್ಮಿಶ್ರ ಸರ್ಕಾರ ಉರುಳಿಸಲು ಹೋಟೆಲ್ ನಲ್ಲಿ ಕೂತಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬಂದರೆ 16 ಜನರಿಗೂ ಸಚಿವ ಸ್ಥಾನ ನೀಡಲು ಸಾಧ್ಯವಾ? ಬಿಜೆಪಿ ಪಕ್ಷದಲ್ಲಿ ಇರುವವರು ಎಲ್ಲಿಗೆ ಹೋಗಬೇಕು? ಈಗ ನಮಗೆ ಆದ ಸ್ಥಿತಿಯೇ ಮುಂದೆ ಬಿಜೆಪಿಗೂ ಆಗುತ್ತೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಅದು ಕೂಡ ಬಹಳ ದಿನ ಉಳಿಯಲ್ಲ" ಎಂದು ವ್ಯಂಗ್ಯವಾಡಿದರು.

"ಅತೃಪ್ತರು ವಾಪಸ್ಸು ಬಂದರೆ ಸಿಎಂ ಬದಲಾವಣೆ ಆಗಲ್ಲ. ಕುಮಾರಸ್ವಾಮಿಯೇ ಸಿಎಂ ಆಗಿರ್ತಾರೆ. ಆದರೆ ಬಿಜೆಪಿಯವರ ಕುದುರೆ ವ್ಯಾಪಾರ ಜೋರಾಗಿದೆ. ಅಪ್ಪಿ ತಪ್ಪಿ ಬಿಜೆಪಿ ಅಧಿಕಾರಕ್ಕೆ ಬಂದರೂ ಬಹಳ ದಿನ ಉಳಿಯಲ್ಲ, ಅತೃಪ್ತರು ಉಳಿಯಲು ಬಿಡಲ್ಲ" ಎಂದರು.












Click it and Unblock the Notifications