Karnataka elections 2023: ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ ಎಂದು ಘೋಷಿಸಿದ ಎಸ್.ಎ. ರವೀಂದ್ರನಾಥ್
ದಾವಣಗೆರೆ, ಏಪ್ರಿಲ್, 03: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ದಾವಣಗೆರೆ ಉತ್ತರ ಕ್ಷೇತ್ರದಿಂದ ಸ್ಪರ್ಧೆ ಮಾಡುವುದಿಲ್ಲ. ಈ ಬಗ್ಗೆ ಬೆಂಗಳೂರಿನಲ್ಲಿ ನಡೆದ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಸ್ಪಷ್ಟವಾಗಿ ತಿಳಿಸಿದ್ದೇನೆ. ವಯಸ್ಸಿನ ಕಾರಣದಿಂದ ನನಗೆ ಟಿಕೆಟ್ ನಿರಾಕರಿಸಿಲ್ಲ. ಆರೋಗ್ಯ ಸರಿ ಇಲ್ಲದ ಕಾರಣ ನಾನೇ ಕಣದಿಂದ ಹಿಂದೆ ಸರಿಯುವುದಾಗಿ ತಿಳಿಸಿ ಬಂದಿದ್ದೇನೆ ಎಂದು ಬಿಜೆಪಿಯ ಹಿರಿಯ ಶಾಸಕ ಎಸ್.ಎ. ರವೀಂದ್ರನಾಥ್ ಘೋಷಣೆ ಮಾಡಿದ್ದಾರೆ.
ಶಿರಮಗೊಂಡನಹಳ್ಳಿಯ ತಮ್ಮ ನಿವಾಸದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಆರೋಗ್ಯ ಸರಿ ಇಲ್ಲದ ಕಾರಣ ಸ್ಪರ್ಧೆ ಮಾಡುತ್ತಿಲ್ಲ. ಕೋರ್ ಕಮಿಟಿ ಸಭೆಯಲ್ಲಿ ರಾಜ್ಯ ನಾಯಕರ ಮುಂದೆ ನನ್ನ ಅಭಿಪ್ರಾಯವನ್ನು ಹೇಳಿದ್ದೇನೆ. ಜಿಲ್ಲಾವಾರು ಸಭೆ ನಡೆಸಿದ ವೇಳೆ ಯಾವ ಕ್ಷೇತ್ರದಲ್ಲಿ ಯಾರಿಗೆ ಟಿಕೆಟ್ ನೀಡಬೇಕು ಎನ್ನವ ಬಗ್ಗೆ ಸಭೆಯಲ್ಲಿ ಸುದೀರ್ಘವಾಗಿ ಚರ್ಚಿಸಲಾಯಿತು. ಹಾಗೆಯೇ ಜಿಲ್ಲಾಧ್ಯಕ್ಷರು ಯಾವ ಯಾವ ಕ್ಷೇತ್ರಗಳಲ್ಲಿ ಆಕಾಂಕ್ಷಿಗಳಿದ್ದಾರೆ ಎಂಬ ಕುರಿತಂತೆ ಮಾಹಿತಿ ನೀಡಿದರು ಎಂದು ತಿಳಿಸಿದರು.

ದಾವಣಗೆರೆ ಉತ್ತರದಲ್ಲಿ ಬಿಜೆಪಿಯ ಐವರು ಆಕಾಂಕ್ಷಿಗಳಿದ್ದಾರೆ. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಗದೀಶ್, ಮಹಾನಗರ ಪಾಲಿಕೆ ಮಾಜಿ ಮೇಯರ್ ಎಸ್. ಟಿ.ವೀರೇಶ್, ಬಿಜೆಪಿ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಲೋಕಿಕೆರೆ ನಾಗರಾಜ, ಬಿಜೆಪಿ ಮಾಜಿ ಅಧ್ಯಕ್ಷ ಜೀವನಮೂರ್ತಿ ಹಾಗೂ ಧನಂಜಯ ಕುಮಾರ್ ಹೆಸರು ಪ್ರಸ್ತಾಪ ಮಾಡಿದ್ದಾರೆ. ನಾನು ಸ್ಪರ್ಧೆ ಮಾಡುವುದಿಲ್ಲ ಎಂದು ಹೇಳಿದ ಮೇಲೆ ಆಕಾಂಕ್ಷಿಗಳು ಹೆಚ್ಚಾಗಿದ್ದಾರೆ ಎಂದು ತಿಳಿಸಿದರು.
ನಾನು ಎಲ್ಲಿಯೂ ಸ್ಪರ್ಧಿಸುವುದಿಲ್ಲ
ಚುನಾವಣೆಗೆ ನಾನು ಸ್ಪರ್ಧಿಸುವುದಿಲ್ಲ ಎಂದು ಈ ಹಿಂದೆಯೇ ಹಲವಾರು ಬಾರಿ ಹೇಳಿದ್ದೆ. ಆದರೆ ಪಕ್ಷದ ವರಿಷ್ಠರು ಚುನಾವಣೆಗೆ ನಿಲ್ಲುವುದಿಲ್ಲ ಎಂಬುದಾಗಿ ಎಲ್ಲಿಯೂ ಹೇಳಬೇಡಿ ಎಂಬ ಸೂಚನೆ ನೀಡಿದ್ದರು. ಈ ಕಾರಣದಿಂದ ಬಹಿರಂಗವಾಗಿ ನಾನು ಎಲ್ಲಿಯೂ ಸ್ಪರ್ಧೆ ಮಾಡುವುದಿಲ್ಲ ಅಂತಾ ಹೇಳಿರಲಿಲ್ಲ. ಇದೀಗ ಸ್ಪಷ್ಟವಾಗಿ ತಿಳಿಸಿಬಂದಿದ್ದೇನೆ ಎಂದು ಹೇಳಿದರು.
ದಾವಣಗೆರೆ ಉತ್ತರ, ಚನ್ನಗಿರಿಯಿಂದ ಸಿಎಂ ಸ್ಪರ್ಧೆ ಮಾಡುವುದಿಲ್ಲ. ಕೇವಲ ವದಂತಿ ಅಷ್ಟೇ. ಬಸವರಾಜ ಬೊಮ್ಮಾಯಿ ಶಿಗ್ಗಾಂವಿಯಲ್ಲಿ ಸ್ಪರ್ಧೆ ಮಾಡುತ್ತಾರೆ. ಒಂದೇ ಜಾತಿಯಿಂದ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಿಲ್ಲ. ಎಲ್ಲಾ ಸಮುದಾಯಗಳ ಸಹಕಾರ ಬೇಕು. ಆಗ ಮಾತ್ರ ಗೆಲ್ಲಲು ಸಾಧ್ಯ ಆಗುತ್ತದೆ ಎಂದರು.

50 ವರ್ಷಗಳಲ್ಲಿ ಎಲ್ಲವನ್ನೂ ನೋಡಿದ್ದೇನೆ
ರಾಜಕಾರಣ ಅಂದ ಮೇಲೆ ನೋವು ಸಹಜವಾಗಿರುತ್ತದೆ. ಎಲ್ಲವನ್ನೂ ಬಹಿರಂಗವಾಗಿ ಹೇಳಲು ಆಗುವುದಿಲ್ಲ. 50 ವರ್ಷಗಳ ರಾಜಕಾರಣದಲ್ಲಿ ಎಲ್ಲವನ್ನೂ ನೋಡಿದ್ದೇನೆ. ಇದು ಹೊಸದೇನೂ ಅಲ್ಲ. ಕೊನೆ ಅವಧಿಗೆ ಸಚಿವ ಸ್ಥಾನ ನೀಡದಿದ್ದರ ಬಗ್ಗೆ ಪರೋಕ್ಷವಾಗಿ ಎಸ್.ಎ.ರವೀಂದ್ರನಾಥ್ ಅವರು ಅಸಮಾಧಾನ ಹೊರಹಾಕಿದರು.
ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಭ್ರಷ್ಟಾಚಾರ ಪ್ರಕರಣದಲ್ಲಿ ಜೈಲು ಸೇರಿರುವ ಕುರಿತಂತೆ ಪ್ರತಿಕ್ರಿಯಿಸಿದ ಅವರು, ಶರಾವತಿ ಕರ್ಮಕಾಂಡ ಎಂಬ ಆರೋಪ ನಿಜಲಿಂಗಪ್ಪ ಅವರ ಮೇಲೆ ಕೇಳಿಬಂದಿತ್ತು. ಪತ್ರಿಕೆಗಳಲ್ಲಿ ಇದು ನಿತ್ಯವೂ ಪ್ರಕಟವಾಗುತಿತ್ತು. ಆದರೂ ನಂತರ ನಡೆದ ಚುನಾವಣೆಯಲ್ಲಿ ನಿಜಲಿಂಗಪ್ಪ ಗೆಲುವು ಸಾಧಿಸಿದ್ದರು. ಬಾಲ್ ಅನ್ನು ಎಷ್ಟು ಜೋರಾಗಿ ಎಸೆಯುತ್ತೇವೆಯೋ ಅದು ಅಷ್ಟೇ ವೇಗವಾಗಿ ವಾಪಸ್ ಬರುತ್ತದೆ ಎಂದು ಹೇಳಿದರು.
ಮಾಡಾಳ್ ವಿರೂಪಾಕ್ಷಪ್ಪ ಹಾಗೂ ಅವರ ಪುತ್ರನಿಗೆ ಟಿಕೆಟ್ ನೀಡುವ ಸಂಬಂಧ ಯಾವುದೇ ಚರ್ಚೆಯಾಗಿಲ್ಲ. ಯಾರಿಗೇ ಟಿಕೆಟ್ ಕೊಟ್ಟರೂ ಗೆಲುವಿಗೆ ನಾವೆಲ್ಲರೂ ಪ್ರಾಮಾಣಿಕವಾಗಿ ಶ್ರಮಿಸುತ್ತೇವೆ. ಪಕ್ಷ ಕೊಟ್ಟ ಜವಾಬ್ದಾರಿಯನ್ನು ನಿರ್ವಹಿಸುತ್ತೇವೆ. ಜೊತೆಗೆ ಅಭ್ಯರ್ಥಿಗಳ ಗೆಲುವು ಮುಖ್ಯ ಎಂದರು.












Click it and Unblock the Notifications