ದಾವಣಗೆರೆ; ಹಿಜಾಬ್ ಪರ, ವಿರೋಧ ಪ್ರತಿಭಟನೆ
ದಾವಣಗೆರೆ, ಫೆಬ್ರವರಿ 07; ಹಿಜಾಬ್ ವಿಚಾರದಲ್ಲಿ ರಾಜ್ಯಾದ್ಯಂತ ಎದ್ದಿರುವ ಸಮರ ಬೆಣ್ಣೆನಗರಿಗೂ ಕಾಲಿಟ್ಟಿದೆ. ನಗರದ ಜಯವೃತ್ತದಲ್ಲಿ ಪರ, ವಿರೋಧ ಪ್ರತಿಭಟನೆಗಳು ನಡೆದವು. ಹಿಂದೂ ಜಾಗರಣ ವೇದಿಕೆ, ಹಿಂದೂ ಯುವ ವಾಹಿನಿ ನೇತೃತ್ವದಲ್ಲಿ ವಿದ್ಯಾರ್ಥಿನಿಯರು, ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಆಕ್ರೋಶ ವ್ಯಕ್ತಪಡಿಸಿದರು. ಮಹಿಳಾ ಹಕ್ಕುಗಳ ಹಿತರಕ್ಷಣಾ ವೇದಿಕೆಯ ನೇತೃತ್ವದಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಪ್ರತಿಭಟಿಸಿದರು.
ಸೋಮವಾರ ಮಧ್ಯಾಹ್ನ 1 ಗಂಟೆಗೆ ಹಿಂದೂ ಜಾಗರಣ ವೇದಿಕೆಯವರು ಪ್ರತಿಭಟನೆ ಆರಂಭಿಸಿದರು. ಬಿಸಿಲು ಏರಿದಂತೆ ಹೋರಾಟದ ಕಾವು ಏರತೊಡಗಿತು. ಮಧ್ಯಾಹ್ನ 2.30ಕ್ಕೆ ಮುಸ್ಲಿಂ ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸಲು ಅವಕಾಶ ನೀಡಲಾಗಿತ್ತು. ಮಧ್ಯಾಹ್ನ 2 ಗಂಟೆಯಾಗುತ್ತಿದ್ದಂತೆ ಮುಸ್ಲಿಂ ವಿದ್ಯಾರ್ಥಿನಿಯರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು, ವಿದ್ಯಾರ್ಥಿಗಳು ಜಮಾಯಿಸ ತೊಡಗಿದರು. ಆಗ ಜಯದೇವ ವೃತ್ತದಲ್ಲಿ ಕೆಲಹೊತ್ತು ಆತಂಕದ ಪರಿಸ್ಥಿತಿ ನಿರ್ಮಾಣವಾಗಿತ್ತು.
ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿಯರಿಗೆ ಪ್ರವೇಶ ನಿರಾಕರಿಸಿದ ಕಾಲೇಜು ಆಡಳಿತ ಮಂಡಳಿ ಮತ್ತು ಪ್ರಾಂಶುಪಾಲರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಹಿಜಾಬ್ ಧರಿಸಿ ಶಾಲಾ ಕಾಲೇಜುಗಳಿಗೆ ತೆರಳಲು ನಮಗೆ ಅವಕಾಶ ನೀಡುವಂತೆ ಆಗ್ರಹಿಸಿ ಮಹಿಳಾ ಹಕ್ಕುಗಳ ಹಿತರಕ್ಷಣಾ ವೇದಿಕೆ ನೇತೃತ್ವದಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸಿದರು.

ಸಮವಸ್ತ್ರ ಕಡ್ಡಾಯಗೊಳಿಸಬೇಕು
ದಾವಣಗೆರೆ ಜಿಲ್ಲೆಯ ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಹೆಗ್ಗುರುತಾದ ಸಮವಸ್ತ್ರಧಾರಣೆ ಕಡ್ಡಾಯಗೊಳಿಸಬೇಕು. ಕೆಲ ಮತೀಯ ಸಂಘಟನೆಗಳು ಶಾಲಾ ಶೈಕ್ಷಣಿಕ ಸಾಮರಸ್ಯ ಕದಡುವ ಉದ್ದೇಶದಿಂದ ಒಂದು ಕೋಮಿನ ವಿದ್ಯಾರ್ಥಿಗಳನ್ನು ಪ್ರಚೋದನೆಗೆ ಒಳಪಡಿಸಿ ಬುರ್ಕಾ, ಹಿಜಾಬ್ ಧರಿಸಿ ಕಾಲೇಜಿನ ಆವರಣದೊಳಗೆ ಪ್ರವೇಶಿಸುವಂತೆ ಮಾಡುವ ಪ್ರಯತ್ನ ನಡೆಯುತ್ತಿವೆ. ಅಲ್ಲದೇ ದಿನದಿಂದ ದಿನಕ್ಕೆ ಹಿಜಾಬ್ ವಿಷಯ ನೆಪವಾಗಿಟ್ಟುಕೊಂಡು ಇದೊಂದು ಅಂತಾರಾಷ್ಟ್ರೀಯ ಸಮಸ್ಯೆ ಎನ್ನುವ ರೀತಿಯಲ್ಲಿ ಬಿಂಬಿಸುವ ಕೆಲಸವೂ ನಡೆಯುತ್ತಿದೆ ಎಂದು ಪ್ರತಿಭಟನಾನಿರತರು ಆಕ್ರೋಶ ವ್ಯಕ್ತಪಡಿಸಿದರು.
ಹಿಜಾಬ್ ವಿವಾದದ ಹಿಂದೆ ಮತೀಯ ಸಂಘಟನೆಗಳ ಕೈವಾಡವಿರುವುದು ಈಗ ಜಗಜ್ಜಾಹೀರಾಗಿದ್ದು, ಯಾವುದೇ ಕಾರಣಕ್ಕೂ ಶಾಲಾ ಕಾಲೇಜುಗಳಲ್ಲಿ ಬುರ್ಕಾ ಹಾಗೂ ಹಿಜಾಬ್ ಧರಿಸಲು ಅವಕಾಶ ಕೊಡಬಾರದು ಎಂದು ಆಗ್ರಹಿಸಲಾಯಿತು. ಹಿಂದೂ ಜಾಗರಣ ವೇದಿಕೆ ಮತ್ತು ಹಿಂದೂ ಯುವ ವಾಹಿನಿ ನೇತೃತ್ವದಲ್ಲಿ ನೂರಾರು ವಿದ್ಯಾರ್ಥಿನಿಯರು ಹಾಗೂ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಘೋಷಣೆ ಹಾಕುತ್ತಾ ಆಕ್ರೋಶ ಹೊರಹಾಕಿದರು.

ಕೇಸರಿ ಶಲ್ಯ ಧರಿಸುವ ಅಭಿಯಾನ
ಸರ್ಕಾರ ಹಾಗೂ ಶಿಕ್ಷಣ ಇಲಾಖೆಯು ಹಿಜಾಬ್ ವಿವಾದ ಹುಟ್ಟುಹಾಕಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಷಡ್ಯಂತ್ರಕ್ಕೆ ಮಣಿದು ಹಿಜಾಬ್ ಧರಿಸಲು ಅವಕಾಶ ನೀಡಿದರೆ, ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಲ್ಲಿ ಹಿಂದೂ ವಿದ್ಯಾರ್ಥಿಗಳನ್ನು ಸಂಘಟಿಸಿ, ಸಮವಸ್ತ್ರದ ಜೊತೆಗೆ ಕೇಸರಿ ಶಲ್ಯ ಧರಿಸುವ ಅಭಿಯಾನವನ್ನು ಕೈಗೊಳ್ಳಬೇಕಾಗುತ್ತದೆ. ಜೊತೆಗೆ ಉಗ್ರ ಹೋರಾಟ ನಡೆಸುವುದಾಗಿ ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.
ಯಾವುದೇ ಕಾರಣಕ್ಕೂ ಮುಸ್ಲಿಂ ವಿದ್ಯಾರ್ಥಿನಿಯರು ಬುರ್ಖಾ ಧರಿಸಿ ಬರುವುದಾಗಲೀ, ಹಿಜಾಬ್ ಧರಿಸಿ ಬಂದರೆ ನಾವು ಸುಮ್ಮನಿರಲ್ಲ. ನಾವು ಸಹ ಕೇಸರಿ ಶಾಲು ಧರಿಸಿ ಶಾಲಾ ಕಾಲೇಜುಗಳಿಗೆ ಹೋಗುತ್ತೇವೆ. ಅವರಿಗೊಂದು ನ್ಯಾಯ, ನಮಗೊಂದು ನ್ಯಾಯನಾ?, ಸಮವಸ್ತ್ರ ಧರಿಸಿ ಬರಲಿ, ಅದಕ್ಕೇನೂ ಅಭ್ಯಂತರ ಏನಿಲ್ಲ. ಅವರ ಹೋರಾಟಕ್ಕೆ ಮಣಿದು ಅವಕಾಶ ನೀಡಿದರೆ ನಾವು ಕೂಡ ಸುಮ್ಮನೆ ಕೂರಲು ಸಾಧ್ಯವಿಲ್ಲ. ಆದ್ದರಿಂದ ಸರ್ಕಾರ ಈ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು ಎಂದು ವಿದ್ಯಾರ್ಥಿನಿಯರು ಒತ್ತಾಯಿಸಿದರು.

ವಿದ್ಯಾರ್ಥಿಗಳು ಅಲ್ಲಿಂದ ತೆರಳಲಿಲ್ಲ
ವಿದ್ಯಾರ್ಥಿಗಳು ನಡೆಸುತ್ತಿದ್ದ ಪ್ರತಿಭಟನಾ ಸ್ಥಳಕ್ಕೆ ಎಸಿ ಮಮತಾ ಗೌಡರ್ ಆಗಮಿಸಿದರು. ಮಧ್ಯಾಹ್ನ 1. 30ಕ್ಕೆ ಆಗಮಿಸಿದ ಉಪವಿಭಾಗಾಧಿಕಾರಿಗಳು ಬಿಸಿಲಿನಲ್ಲಿಯೇ ಅರ್ಧಗಂಟೆ ನಿಂತರು. ಆದರೂ ವಿದ್ಯಾರ್ಥಿಗಳು ಮನವಿ ನೀಡಲಿಲ್ಲ. ಬಳಿಕ ಪ್ರತಿಭಟನಾ ವೇದಿಕೆ ಮೇಲೆ ತೆರಳಿದಾಗಲೂ ಹಿಂದೂ ಜಾಗರಣ ವೇದಿಕೆ ಶಿವಮೊಗ್ಗ ವಿಭಾಗದ ಪ್ರಮುಖ ಸತೀಶ್ ಪೂಜಾರಿ ಭಾಷಣ ಮುಂದುವರಿಸಿದರು. ಬಿಸಿಲಿನ ಝಳ ಹೆಚ್ಚಾದ್ದರಿಂದ ಮಮತಾ ಗೌಡರ್ ಅವರು, "ಬಿಸಿಲು ಜಾಸ್ತಿ ಇದೆ. ಭಾಷಣ ಮಾಡುತ್ತಲೇ ಹೋದರೆ ಹೇಗೆ?. ಹೇಗೆ ನಿಲ್ಲೋದು ಇಲ್ಲಿ?" ಎಂದ ಮೇಲೆ ಮನವಿ ಸಲ್ಲಿಸಲಾಯಿತು.
ಬಳಿಕವೂ ವಿದ್ಯಾರ್ಥಿಗಳು ಅಲ್ಲಿಂದ ತೆರಳಲಿಲ್ಲ. ಅಷ್ಟೊತ್ತಿಗೆ ಹಿಜಾಬ್ ಪರ ಪ್ರತಿಭಟನೆ ನಡೆಸಲು ಮಹಿಳಾ ಮಕ್ಕಳ ಹಿತರಕ್ಷಣಾ ವೇದಿಕೆಯ ಮುಖಂಡರು ಹಾಗೂ ಮುಸ್ಲಿಂ ವಿದ್ಯಾರ್ಥಿನಿಯರು ಬರಲಾರಂಭಿಸಿದರು. ಈ ವೇಳೆ ಪೊಲೀಸರು ಬಿಗಿ ಬಂದೋಬಸ್ತ್ ಮಾಡಿದರು. ಘೋಷಣೆ ಕೂಗದಂತೆ ತಾಕೀತು ಮಾಡಿದರು. ಹಿಂದೂ ವಿದ್ಯಾರ್ಥಿಗಳನ್ನು ಸ್ಥಳದಿಂದ ಹೋಗುವಂತೆ ಮಾಡಿದರು.

ನಿರ್ಬಂಧ ಹೇರುತ್ತಿರುವುದು ಸರಿಯಲ್ಲ
ಉಡುಪಿ ಹಾಗೂ ರಾಜ್ಯದ ವಿವಿಧ ಕಾಲೇಜುಗಳಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ತಮ್ಮ ಧಾರ್ಮಿಕ ಶಿರವಸ್ತ್ರ ಧರಿಸುವುದಕ್ಕೆ ನಿರ್ಬಂಧಪಡಿಸುತ್ತಿರುವುದು ಸರಿಯಲ್ಲ. ಕಾಲೇಜು ಆಡಳಿತ ಮಂಡಳಿ, ಪ್ರಾಂಶುಪಾಲರ ನಡೆಯು ಕಾನೂನು ವಿರೋಧಿ ಮತ್ತು ಅಸಂವಿಧಾನಿಕವಾಗಿದೆ. ಎಲ್ಲಾ ಧರ್ಮದವರಿಗೂ ಅವರವರ ಧಾರ್ಮಿಕ ವಿಧಿವಿಧಾನದಂತೆ ಜೀವಿಸುವ ಹಕ್ಕನ್ನು ಸಂವಿಧಾನ ನೀಡಿದೆ. ಆದ್ದರಿಂದ ಮಹಿಳಾ ಸಬಲೀಕರಣ ಮತ್ತು ಸುರಕ್ಷತೆಗೆ ಬೇಕಾಗುವ ಎಲ್ಲಾ ರೀತಿಯ ಕ್ರಮಗಳನ್ನು ಸರ್ಕಾರ ಮತ್ತು ಜಿಲ್ಲಾಡಳಿತ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಈ ವೇಳೆ ನಮಗೆ ಹಿಜಾಬ್ ಧರಿಸಲು ಅವಕಾಶ ಕೊಡಬೇಕು, ಹಿಜಾಬ್ ಬೇಕೇ ಬೇಕು ಎಂದು ಘೋಷಣೆ ಕೂಗುತ್ತಾ ವಿದ್ಯಾರ್ಥಿಗಳು ಒತ್ತಾಯಿಸಿದರು.












Click it and Unblock the Notifications