• search
  • Live TV
ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೊರೊನಾ ಭೀತಿ ನಡುವೆ ಭಾರೀ ಮಳೆ; ದಾವಣಗೆರೆಯಲ್ಲಿ ಅವಾಂತರ

By ದಾವಣಗೆರೆ ಪ್ರತಿನಿಧಿ
|

ದಾವಣಗೆರೆ, ಏಪ್ರಿಲ್ 06: ವಾಣಿಜ್ಯ ನಗರಿ ದಾವಣಗೆರೆಯಲ್ಲಿ ಭಾನುವಾರ ರಾತ್ರಿ ಗುಡುಗು ಮಿಂಚು ಸಹಿತ ಸತತವಾಗಿ ಧಾರಾಕಾರ ಮಳೆ ಸುರಿದಿದೆ. ಕೊರೊನಾ ಭೀತಿ ಆವರಿಸಿರುವ ಈ ಹೊತ್ತಿನಲ್ಲಿ ಸುರಿದಿರುವ ಈ ಮಳೆ ಅವಾಂತರಗಳನ್ನೇ ಸೃಷ್ಟಿಸಿ ಜನತೆಯನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸಿದೆ.

ಏಕಾಏಕಿ ಸುರಿದ ಮಳೆಗೆ ಜನ ತತ್ತರಿಸಿದ್ದು, ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ದಾವಣಗೆರೆ ಜಿಲ್ಲೆಯಲ್ಲಿ ಮೂರು ಕೊರೊನಾ ಪಾಸಿಟಿವ್ ಪ್ರಕರಣವಿದ್ದು, ಕೊರೊನಾ ಭೀತಿಯಿಂದ ಎಚ್ಚರಿಕೆಯ ಹೆಜ್ಜೆ ಇಡುತ್ತಿರುವ ಹೊತ್ತಿನಲ್ಲಿ ಸುರಿದಿರುವ ಮಳೆ ಜನರ ಆತಂಕಕ್ಕೂ ಕಾರಣವಾಗಿದೆ. ಮೊದಲೇ ಕಷ್ಟದಲ್ಲಿರುವ ರೈತರಿಗೆ ಮತ್ತಷ್ಟು ಹೊರೆಯನ್ನು ತಂದಿತ್ತಿದೆ.

 ರೈತರ ಗಾಯದ ಮೇಲೆ ಬರೆ ಎಳೆದ ಮಳೆ

ರೈತರ ಗಾಯದ ಮೇಲೆ ಬರೆ ಎಳೆದ ಮಳೆ

ಲಾಕ್ ಡೌನ್ ನಿಂದ ಮನೆಯಿಂದ ಹೊರಗೆ ಬಾರದೇ ನಾಲ್ಕು ಗೋಡೆಗಳ ಮಧ್ಯೆ ಕಾಲ ಕಳೆಯುತ್ತಾ ಜೀವನವೇ ಅಸ್ತವ್ಯಸ್ತವಾಗಿದ್ದಾರೆ. ಇದೀಗ ಏಕಾಏಕಿ ಸುರಿದ ಮಳೆಗೆ ನಿನ್ನೆ ಜನಜೀವನವೇ ಅತಂತ್ರವಾಗಿ ಹೋಗಿದೆ. ಮಳೆಯಿಂದಾಗಿ ಸಾಕಷ್ಟು ಮನೆಗಳಿಗೆ ನೀರು ನುಗ್ಗಿ ನಿವಾಸಿಗಳು ನೀರು ಹೊರ ಹಾಕಲು ರಾತ್ರಿಯಿಡೀ ಕಳೆದಿದ್ದಾರೆ. ಕೆಲ ಕಡೆ ರಸ್ತೆಗಳು ಜಲಾವೃತಗೊಂಡಿವೆ. ನಗರದ ರೈಲ್ವೆ ಕೆಳ ಸೇತುವೆಗಳು ಸಹ ತುಂಬಿ ವಾಹನ ಸವಾರರು ಮನೆಯತ್ತ ತೆರಳಲು ಪರದಾಡಿದ್ದಾರೆ. ಇವೆಲ್ಲಕ್ಕಿಂತ ಮುಖ್ಯವಾಗಿ ಲಾಕ್ ಡೌನ್ ನಿಂದ ಕೈಗೆ ಬಂದ ಬೆಳೆಗಳು ಮಾರಾಟವಾಗದೇ, ಸೂಕ್ತ ಬೆಲೆ ಸಿಗದೇ ಬೆಳೆಗಳ ನಾಶ ಮಾಡಿಕೊಂಡು ನಷ್ಟ ಅನುಭವಿಸುತ್ತಿದ್ದ ರೈತರಿಗೆ ಮಳೆ ಗಾಯದ ಮೇಲೆ ಬರೆ ಎಳೆದಿದ್ದು, ಭತ್ತದ ಬೆಳೆ ಸೇರಿದಂತೆ ವಿವಿಧ ಬೆಳೆಗಳು ಗಾಳಿ, ಮಳೆಗೆ ನೆಲಸಮವಾಗಿವೆ.

ಕೊರೊನಾ ಭೀತಿ ನಡುವೆ ಕರ್ನಾಟಕದಲ್ಲಿ ಯೆಲ್ಲೋ ಅಲರ್ಟ್ ಘೋಷಣೆಕೊರೊನಾ ಭೀತಿ ನಡುವೆ ಕರ್ನಾಟಕದಲ್ಲಿ ಯೆಲ್ಲೋ ಅಲರ್ಟ್ ಘೋಷಣೆ

 ಮನೆಗಳಿಗೆ ನುಗ್ಗಿದ ಮಳೆ ನೀರು

ಮನೆಗಳಿಗೆ ನುಗ್ಗಿದ ಮಳೆ ನೀರು

ಲಾಕ್ ಡೌನ್ ನಿಂದ ದುಡಿಮೆ ಇಲ್ಲದೇ ಒಪ್ಪತ್ತಿನ ಊಟಕ್ಕೂ ಪರದಾಡುತ್ತಿದ್ದ ಬಡ ಹಾಗೂ ಕೂಲಿ ಕಾರ್ಮಿಕರು, ನಿರಾಶ್ರಿತರನ್ನು, ಗುಡಿಸಲು, ಟೆಂಟ್ ವಾಸಿಗಳನ್ನು ಮಳೆ ಮತ್ತೆ ಸಂಕಷ್ಟಕ್ಕೆ ನೂಕಿದೆ. ತಗ್ಗು ಪ್ರದೇಶದಲ್ಲಿ ಮಳೆ ನೀರು ನಿಂತು, ಶೀಟ್, ಗುಡಿಸಲು ಮನೆಗಳು ನಾಶವಾಗಿ ಎಷ್ಟೋ ಕುಟುಂಬಗಳು ಬೀದಿಯಲ್ಲಿ ಜೀವನ ಸಾಗಿಸುವಂತಾಗಿದೆ. ಬೇತೂರ ರಸ್ತೆಯ ಆನೆಕೊಂಡ ಎಕೆ ಕಾಲೋನಿಯ ನೂರಾರು ಮನೆಗಳಿಗೆ‌ ನೀರು ನುಗ್ಗಿದೆ. ಜನರು ರಾತ್ರಿಯಿಡೀ ಜಾಗರಣೆ ಮಾಡಿದ್ದಾರೆ.

ದೇವರಾಜ ಅರಸು ಬಡಾವಣೆ, ಬಿಜೆ ಬಡಾವಣೆ ಬೂದಿಹಾಳ್ ರಸ್ತೆಯ ಮನೆಗೆ ನೀರು ನುಗ್ಗಿದೆ. ಪಿಬಿ ರಸ್ತೆಯ ಗುಡಿಸಲು ವಾಸಿಗಳಿಗೆ ತಾತ್ಕಾಲಿಕವಾಗಿ ನರಹರಿಶೇಟ್ ಕಲ್ಯಾಣ ಮಂಟಪದಲ್ಲಿ ಜಿಲ್ಲಾಡಳಿತ ಆಸರೆ ನೀಡಿದೆ. ಹರಪ್ಪನಹಳ್ಳಿ ತಾಲ್ಲೂಕಿನ ನೀಲಗುಂದ ಗ್ರಾಮದಲ್ಲಿ ಏಕಾಏಕಿ ಮಳೆನೀರು ಮನೆಗೆ ನುಗ್ಗಿ ಹೊರ ಬರಲಾರದ ಸ್ಥಿತಿಯಲ್ಲಿ ಸಿಲುಕಿದ್ದ ವೃದ್ಧೆಯನ್ನು ಗ್ರಾಮದ ಯುವಕರು ರಕ್ಷಿಸಿದ್ದಾರೆ. ವೃದ್ಧೆಯ ಮನೆಯಲ್ಲಿದ್ದ ಸಾಮಗ್ರಿಗಳು, ದವಸ- ಧಾನ್ಯಗಳು ಸಂಪೂರ್ಣ ನೀರು ಪಾಲಾಗಿವೆ. ನೀರು ನಿಂತು ನೀಲಗುಂದ ಗ್ರಾಮ ದ್ವೀಪದಂತಾಗಿದೆ.

 ಮೂರು ಎಕರೆ ಬಾಳೆ ತೋಟ ಸಂಪೂರ್ಣ ನಾಶ

ಮೂರು ಎಕರೆ ಬಾಳೆ ತೋಟ ಸಂಪೂರ್ಣ ನಾಶ

ಹರಪ್ಪನಹಳ್ಳಿ ತಾಲ್ಲೂಕಿನ ಉಚ್ಚಂಗಿ ದುರ್ಗದಲ್ಲಿ ರಾತ್ರಿ ಸುರಿದ ಮಳೆಗೆ ಬಾಳೆ ತೋಟ ಸಂಪೂರ್ಣ ನೆಲ ಸಮವಾಗಿದೆ. ಗಂಗಮ್ಮ ಎನ್ನುವವರಿಗೆ ಸೇರಿದ 3 ಎಕರೆ ಬಾಳೆ ತೋಟ ಸಂಪೂರ್ಣ ನೆಲಸಮವಾಗಿದೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೆಳೆದಿದ್ದ ಈ ಬಾಳೆ ಕೊರೊನಾದಿಂದಾಗಿ ಲಾಭ ಸಿಗದೆ ಒದ್ದಾಡುತ್ತಿದ್ದ ರೈತರಿಗೆ ಮತ್ತೆ ದೊಡ್ಡ ನಷ್ಟ ತಂದೊಡ್ಡಿದೆ. ಮಳೆ ಗಾಳಿಯಿಂದ ರೈತರ ಬದುಕು ಬೀದಿಗೆ ಬಿದ್ದಿದೆ. ದಾವಣಗೆರೆ ತಾಲ್ಲೂಕು ಕಡ್ಲೇಬಾಳು, ಕಕ್ಕರಗೊಳ್ಳ, ಅರಸಾಪುರ, ಕೋಡಿಹಳ್ಳಿ ಸೇರಿದಂತೆ ಜಿಲ್ಲೆಯ ವಿವಿಧೆಡೆ ಭತ್ತ ಹಾಗೂ ವಿವಿಧ ಬೆಳೆಗಳು ಮಳೆಗೆ ನೆಲಸಮವಾಗಿವೆ.

ಕೊರೊನಾ ಎಫೆಕ್ಟ್: ತರಕಾರಿ ಬೆಳೆದು ಕಂಗಾಲಾದ ಚಿತ್ರದುರ್ಗ ರೈತಕೊರೊನಾ ಎಫೆಕ್ಟ್: ತರಕಾರಿ ಬೆಳೆದು ಕಂಗಾಲಾದ ಚಿತ್ರದುರ್ಗ ರೈತ

 ತಾತ್ಕಾಲಿಕ ಬಸ್ ನಿಲ್ದಾಣವೂ ನೆಲಸಮ

ತಾತ್ಕಾಲಿಕ ಬಸ್ ನಿಲ್ದಾಣವೂ ನೆಲಸಮ

ರಾತ್ರಿ ಬಿದ್ದ ಮಳೆಯಿಂದ ತಾತ್ಕಾಲಿಕವಾಗಿ ನಿರ್ಮಾಣ ಮಾಡಿದ್ದ ಬಸ್ ನಿಲ್ದಾಣ ನೆಲಸಮವಾಗಿದೆ. ಶೀಟ್ ಗಳೆಲ್ಲ ಹಾರಿಹೋಗಿ ಅವಾಂತರ ಸೃಷ್ಟಿಯಾಗಿದೆ. ದಾವಣಗೆರೆಯಲ್ಲಿ ಸ್ಮಾರ್ಟ್ ಸಿಟಿಯಿಂದ ನೂತನ ಬಸ್ ನಿಲ್ದಾಣ ನಿರ್ಮಾಣದ ಹಿನ್ನಲೆ ಹೈಸ್ಕೂಲ್ ಮೈದಾನಕ್ಕೆ ಶಿಫ್ಟ್ ಆಗಿದ್ದ ಖಾಸಗಿ ಬಸ್ ನಿಲ್ದಾಣದ ಶೀಟ್ ಹಾರಿಹೋಗಿ ಅಂಗಡಿಗಳೆಲ್ಲ ನೀರುಪಾಲಾಗಿವೆ. ಲಕ್ಷಾಂತರ ರೂಪಾಯಿ ಸಾಮಗ್ರಿಗಳು, ಮೊಬೈಲ್, ಕಂಪ್ಯೂಟರ್ ನಷ್ಟವಾಗಿದೆ. ರಾತ್ರಿ ಬಂದ ಅಕಾಲಿಕ ಮಳೆಗೆ ಮನೆಗಳಿಗೆ ಚರಂಡಿ ನೀರು ನುಗ್ಗಿದೆ. ದಾವಣಗೆರೆಯ ಬೇತೂರು ರಸ್ತೆಯಲ್ಲಿರುವ ಮನೆಗಳಿಗೆ ನೀರು ನುಗ್ಗಿದೆ. ಸ್ಥಳಕ್ಕೆ ಪಾಲಿಕೆ ಮೇಯರ್ ಬಿಜೆಪಿ ಅಜಯ್ ಕುಮಾರ್ ಪ್ರತಿಯೊಂದು ಮನೆಗೂ ಭೇಟಿ ನೀಡಿ ಪರಿಶೀಲಿಸಿದರು.

English summary
Heavy rain has been reported in davangere yesterday night. It has created anxiety among people in between corona fear
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X