ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾಂಗ್ರೆಸ್ ಪಕ್ಷದಿಂದ ಉಚ್ಛಾಟನೆ; ಸ್ಥಳೀಯ ಮುಖಂಡರ ವಿರುದ್ಧ ವೈ ರಾಮಪ್ಪ ಆಕ್ರೋಶ

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ಸೆಪ್ಟೆಂಬರ್ 9: ಕಾಂಗ್ರೆಸ್ ಪಕ್ಷದಿಂದ ಉಚ್ಚಾಟಿಸಲಾಗಿದೆ ಎಂಬ ವಿಚಾರ ನನ್ನ ಗಮನಕ್ಕೆ ಬಂದಿದೆ. ಪಕ್ಷದ ಸಂಸ್ಕೃತಿ, ಸಿದ್ಧಾಂತ, ನೀತಿ ನಿಯಮ ಗೊತ್ತಿಲ್ಲದ ಜಿಲ್ಲಾಧ್ಯಕ್ಷ ಹೆಚ್. ಬಿ. ಮಂಜಪ್ಪ ಶಿಸ್ತು ಸಮಿತಿಗೆ ಶಿಫಾರಸು ಮಾಡಿರುವುದು ಸಂಪೂರ್ಣ ಸುಳ್ಳಾಗಿದ್ದು, ಸತ್ಯಕ್ಕೆ ದೂರವಾದದ್ದು. ಒಂದು ವಾರದೊಳಗೆ ಉಚ್ಚಾಟಿಸಲು ಸೂಕ್ತ ಕಾರಣ ನೀಡದಿದ್ದರೆ ಕಾನೂನು ಮೊರೆ ಹೋಗುತ್ತೇನೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ವೈ. ರಾಮಪ್ಪ ಸವಾಲು ಹಾಕಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆರೋಗ್ಯ ಸರಿಯಿಲ್ಲದ ಕಾರಣ ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದೆ. ಈ ವೇಳೆಯಲ್ಲಿ ಕೆಲವರು ಸೇರಿಕೊಂಡು ನನ್ನನ್ನು ಕಾಂಗ್ರೆಸ್ ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ ಎಂಬ ವಾಟ್ಸಪ್ ಸಂದೇಶ ಕಳುಹಿಸಿದ್ದಾರೆ. ಆದರೆ ಕೆಪಿಸಿಸಿಯಿಂದ ಯಾವುದೇ ನೋಟಿಸ್, ಉಚ್ಚಾಟನೆ ಮಾಡಿರುವ ಬಗ್ಗೆ ಪತ್ರ ಬಂದಿಲ್ಲ. ಪಕ್ಷದ ಸಭೆ, ಸಮಾರಂಭಗಳಲ್ಲಿ ಗಲಾಟೆ ಮಾಡಿ ಜಾತಿನಿಂದನೆ ಕೇಸ್‌ಗಳನ್ನು ಪೊಲೀಸ್ ಠಾಣೆಯಲ್ಲಿ ನಾನು ಕೇಸ್ ದಾಖಲಿಸಿದ್ದೇನೆ. ಇದರಿಂದ ಪಕ್ಷಕ್ಕೆ ಮುಜುಗರವಾಗಿದೆ ಎಂಬ ಕಾರಣ ನೀಡಿದ್ದಾರೆ. ಯಾವಾಗ, ಎಲ್ಲಿ ಈ ರೀತಿ ನಡೆದುಕೊಂಡಿದ್ದೇನೆ ಎಂಬ ಬಗ್ಗೆ ದಾಖಲಾತಿ ನೀಡಿ ಎಂದು ಹೇಳಿದರು.

ಜನಸ್ಪಂದನ ಸಮಾವೇಶ: ಬೆಂಗಳೂರಿನಲ್ಲಿ ಸೆ.10ರಂದು ಸಂಚಾರ ಮಾರ್ಗದಲ್ಲಿ ಬದಲಾವಣೆಜನಸ್ಪಂದನ ಸಮಾವೇಶ: ಬೆಂಗಳೂರಿನಲ್ಲಿ ಸೆ.10ರಂದು ಸಂಚಾರ ಮಾರ್ಗದಲ್ಲಿ ಬದಲಾವಣೆ

ಶಿಸ್ತು ಸಮಿತಿ ಸಭೆ ನಡೆಸಿ ಈ ನಿರ್ಧಾರಕ್ಕೆ ಬರಲಾಗಿದೆ ಎಂಬ ಮಾತು ಹೇಳಿದ್ದಾರೆ. ಯಾವ ಶಿಸ್ತು ಸಮಿತಿ ಸಭೆ? ಯಾವಾಗ ರಚನೆ ಮಾಡಿದ್ದೀರಾ? ಸರ್ವಾನುಮತದಿಂದ ತೀರ್ಮಾನ ಮಾಡಿದವರು ಯಾರು? ಎಂದು ಪ್ರಶ್ನಿಸಿದ ಅವರು, ಏಕಾಏಕಿಯಾಗಿ ಉಚ್ಚಾಟನೆ ಮಾಡಲಿಕ್ಕೆ ಕಾಂಗ್ರೆಸ್ ಪಕ್ಷ ನಿಮ್ಮ ಮನೆಯ ಪೂರ್ವಜರ ಆಸ್ತಿಯಾ, ಯಾರ ಪ್ರೇರಣೆಯಿಂದ ಈ ಕೃತ್ಯಕ್ಕೆ ಕೈ ಹಾಕಿದ್ದೀರಾ? ದಲಿತ ನಾಯಕನೊಬ್ಬ ಬೆಳೆಯಬಾರದು ಎಂಬ ಕಾರಣಕ್ಕೆ ಈ ರೀತಿ ಷಡ್ಯಂತ್ರ ನಡೆಸಲಾಗಿದೆ. ಸಾರ್ವಜನಿಕವಾಗಿ ನನಗಾಗಿರುವ ಅಪಮಾನ, ನೋವು, ಮಾನಸಿಕ ಕಿರುಕುಳದ ಕುರಿತಂತೆ ಕಾನೂನು ತಜ್ಞರ ಜೊತೆ ಸಮಾಲೋಚನೆ ನಡೆಸಿದ್ದೇನೆ. ವಾರದೊಳಗೆ ಸೂಕ್ತ ಉತ್ತರ ಜಿಲ್ಲಾಧ್ಯಕ್ಷರಿಂದ ಬಾರದಿದ್ದರೆ ಕಾನೂನು ಹೋರಾಟ ನಡೆಸುತ್ತೇನೆ ಎಂದು ಎಚ್ಚರಿಸಿದರು.

ನೂರಾರು ಮಲ್ಲಿಕಾರ್ಜುನ್ ಬಂದರೂ ಹೆದರುವುದಿಲ್ಲ

ನೂರಾರು ಮಲ್ಲಿಕಾರ್ಜುನ್ ಬಂದರೂ ಹೆದರುವುದಿಲ್ಲ

ಮಾಜಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದ ರಾಮಪ್ಪ, ಶ್ರೀಮಂತ, ಹಣವಿದೆ ಎಂಬ ದರ್ಪದಿಂದ ಮಲ್ಲಿಕಾರ್ಜುನ್ ನನ್ನನ್ನು ಉಚ್ಚಾಟನೆ ಮಾಡಲು ಹೇಳಿದ್ದಾರೆ ಎಂದು ಹೇಳಲಾಗುತ್ತಿದೆ. ಅವರೊಬ್ಬ ಎಲ್ಲಾ ಸಮುದಾಯದವರನ್ನು ತೆಗೆದುಕೊಂಡು ಹೋಗುವ ನಾಯಕ ಎಂಬ ನಂಬಿಕೆ ಇತ್ತು. ಬ್ರಹ್ಮಾವರದಿಂದ ಬಂದಿರುವ ದಿನೇಶ್ ಕೆ. ಶೆಟ್ಟಿ, ಮುದ್ದೇಗೌಡ್ರು ಗಿರಿ, ಕರಿಬಸಪ್ಪ ಎಂಬುವರ ಮಾತು ಕೇಳಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಇಂದಿಗೂ ಜಿಲ್ಲಾ ಕಾಂಗ್ರೆಸ್ ಮಲ್ಲಿಕಾರ್ಜುನ್ ಹಿಡಿತದಲ್ಲಿಯೇ. ಅವರ ಅಣತಿಯಂತೆ ಎಲ್ಲವೂ ನಡೆಯುತ್ತದೆ. ನೂರಾರು ಮಲ್ಲಿಕಾರ್ಜುನ್ ಬಂದರೂ ಹೆದರುವುದಿಲ್ಲ. ನಾನು ಕಾಂಗ್ರೆಸ್ ತತ್ವ, ಸಿದ್ಧಾಂತ ಒಪ್ಪಿ ಬಂದವನು. ಕಾಂಗ್ರೆಸ್ ಪಕ್ಷದಲ್ಲಿದ್ದುಕೊಂಡೇ ಹೋರಾಟ ಮಾಡುತ್ತೇನೆ ಎಂದು ಹೇಳಿದರು.

ಬಿಜೆಪಿ ಪರ ಕೆಲಸ ಮಾಡಿದವರನ್ನು ಉಚ್ಚಾಟನೆ ಮಾಡಿಲ್ಲ.

ಬಿಜೆಪಿ ಪರ ಕೆಲಸ ಮಾಡಿದವರನ್ನು ಉಚ್ಚಾಟನೆ ಮಾಡಿಲ್ಲ.

ಕಾಂಗ್ರೆಸ್ ಪಕ್ಷಕ್ಕೆ ದ್ರೋಹ ಬಗೆಯುವ ಕೆಲಸ ಎಂದಿಗೂ ಮಾಡಿಲ್ಲ. ಅಸಭ್ಯ ವರ್ತನೆ ತೋರಿಲ್ಲ. ಕಾಂಗ್ರೆಸ್ ಸಭೆ, ಸಮಾರಂಭಗಳಲ್ಲಿ ಗಲಾಟೆ ಮಾಡಿದ ಬಗ್ಗೆ ಒಂದೇ ಒಂದು ಎಫ್‌ಐ ಆರ್ ದಾಖಲಾಗಿಲ್ಲ. ಇದನ್ನು ಸಾಬೀತುಪಡಿಸಿದರೆ ನಾನು ರಾಜಕೀಯ ಬಿಡುತ್ತೇನೆ. ಇಲ್ಲದಿದ್ದರೆ, ಅವರು ರಾಜಕಾರಣ ತೊರೆಯಲಿ ಎಂದು ಸ್ಥಳೀಯ ನಾಯಕರಿಗೆ ಸವಾಲಾಕಿದ್ದಾರೆ.

ಲೋಕಸಭೆ, ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪರ ಕೆಲಸ ಮಾಡಿದ ಕಾಂಗ್ರೆಸ್ ನಾಯಕರನ್ನು ಉಚ್ಚಾಟನೆ ಮಾಡಿಲ್ಲ. ಲೋಕಸಭಾ ಚುನಾವಣೆಯಲ್ಲಿ ಮೂರು ಬಾರಿ ಹಾಗೂ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರು ಮಲ್ಲಿಕಾರ್ಜುನ್‌ರನ್ನು ತಿರಸ್ಕರಿಸಿದ್ದಾರೆ. ಅವರ ಪರವಾಗಿ ಹೋರಾಟ ಮಾಡಿದವರು ನಾವು. ನಿಷ್ಠಾವಂತ ಕಾರ್ಯಕರ್ತರ ವಿರುದ್ದ ಕ್ರಮ ಕೈಗೊಂಡು, ಪಕ್ಷ ವಿರೋಧಿ ಚಟುವಟಿಕೆ ನಡೆಸಿದವರನ್ನು ರಕ್ಷಿಸುತ್ತಿರುವುದು ಖಂಡನೀಯ. ಅಕ್ಟೋಬರ್ 15ರ ಬಳಿಕ ಎರಡನೇ ಅಧ್ಯಾಯ ಶುರುವಾಗುತ್ತದೆ. ಅದನ್ನು ಈಗಲೇ ಹೇಳಲ್ಲ. ಮುಂಬರುವ ದಿನಗಳಲ್ಲಿ ಹೇಳುತ್ತೇನೆ ಎಂದು ಹೇಳಿದರು.

ಶಿಸ್ತು ಸಮಿತಿಯಿಂದ ಉಚ್ಛಾಟನೆ

ಶಿಸ್ತು ಸಮಿತಿಯಿಂದ ಉಚ್ಛಾಟನೆ

ಉಚ್ಚಾಟನೆ ಮಾಡಿರುವುದರ ವಿರುದ್ಧದ ತೀರ್ಮಾನಕ್ಕೆ ನನ್ನ ವಿರುದ್ದ ಕೇಸ್ ದಾಖಲಿಸಲು ಅಭ್ಯಂತರವಿಲ್ಲ. ಕಾನೂನಿನಲ್ಲಿ ಅವಕಾಶ ಇದ್ದರೆ ಮೊಕದ್ದಮೆ ಹೂಡಲಿ. ಬೇಡವೆಂದವರು ಯಾರು? ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್. ಬಿ. ಮಂಜಪ್ಪ ಅವರು ವೈ. ರಾಮಪ್ಪರಿಗೆ ತಿರುಗೇಟು ನೀಡಿದ್ದಾರೆ.

ಪಕ್ಷ ಬಿಟ್ಟು ಹೋಗುವಾಗ ಆಪಾದನೆ ಮಾಡುವುದು ಸಾಮಾನ್ಯ. ಇದಕ್ಕೆ ಉತ್ತರ ಕೊಡುತ್ತಾ ಕೂರಲು ಆಗದು. ನಾನೇನೂ ಪಕ್ಷದಿಂದ ಉಚ್ಚಾಟನೆ ಮಾಡಿಲ್ಲ. ಜಿಲ್ಲೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಯುತ್ತಿರುವ ಬಗ್ಗೆ ಕೆಪಿಸಿಸಿ ಗಮನಕ್ಕೆ ತಂದಿದ್ದೇನೆ. ಶಿಸ್ತು ಸಮಿತಿಗೆ ಶಿಫಾರಸು ಮಾಡಿದ್ದೇನೆ. ಸಮಿತಿಯವರು ತೀರ್ಮಾನ ತೆಗೆದುಕೊಂಡಿದ್ದಾರೆ. ಉಚ್ಚಾಟನೆ ಮಾಡಿದ್ದಾರೆ. ಕೆಪಿಸಿಸಿಗೆ ಹೋಗಿ ಕೇಳಲಿ ನಾವೇನೂ ಬೇಡವೆಂದಿಲ್ಲವಲ್ಲ ಎಂದು ಹೇಳಿದರು.

ವೈ. ರಾಮಪ್ಪ ಹೇಳಿದಾಕ್ಷಣ ಉತ್ತರ ಕೊಡಬೇಕೆಂದಿಲ್ಲ

ವೈ. ರಾಮಪ್ಪ ಹೇಳಿದಾಕ್ಷಣ ಉತ್ತರ ಕೊಡಬೇಕೆಂದಿಲ್ಲ

ಕೆಪಿಸಿಸಿ ಅಧ್ಯಕ್ಷರು ನನಗೆ ಏಳು ದಿನಗಳೊಳಗೆ ಉತ್ತರ ನೀಡಬೇಕು ಎಂದರೆ ನಾನು ಕೊಡುತ್ತೇನೆ. ವೈ. ರಾಮಪ್ಪ ಹೇಳಿದಾಕ್ಷಣ ಉತ್ತರ ಕೊಡಬೇಕು ಎಂದರೆ ಇವರಿಗ್ಯಾಕೆ ನಾನು ಉತ್ತರ ನೀಡಬೇಕು. ಜಿಲ್ಲಾ ಸಮಿತಿಯಲ್ಲಿ ಈ ತೀರ್ಮಾನ ಮಾಡಿದ್ದೇವೆ. ಪಕ್ಷಕ್ಕೆ ಮುಜುಗರ ಆಗುವಂತೆ ನಡೆದುಕೊಂಡಿರುವುದಕ್ಕೆ ಬಹಳಷ್ಟು ಉದಾಹರಣೆಗಳಿವೆ. ಇಲ್ಲಿ ಈಗ ಮಾತನಾಡಲ್ಲ. ನಮಗೂ ಜಿಲ್ಲೆ, ರಾಜ್ಯ, ರಾಷ್ಟ್ರ ಹೈಕಮಾಂಡ್ ಇರುತ್ತೆ. ಅವರು ಹೇಳಿದ ಮಾತು ಕೇಳಬೇಕಾಗುತ್ತದೆ. ಸುಖಾಸುಮ್ಮನೆ ಆಪಾದನೆ ಮಾಡುತ್ತಾ ಹೋದರೆ ಆಗುತ್ತಾ? ಎಂದು ಪ್ರಶ್ನಿಸಿದರು.

ಪಕ್ಷಕ್ಕಾಗಿ ಹೋರಾಟ ಮಾಡಿದ್ದೇವೆ. ಅಧಿಕಾರ ಇದ್ದಾಗಲೂ ಮಾಡಿದ್ದೇವೆ, ಇಲ್ಲದಾಗಲೂ ಮಾಡುತ್ತಿದ್ದೇವೆ. ನಾನೊಬ್ಬನೆ ಉಚ್ಚಾಟನೆ ಮಾಡಲು ಆಗದು. ನಾನು ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದರೆ ಸಾಬೀತು ಮಾಡಲಿ. ಮೇಲ್ಮಟ್ಟದ ನಾಯಕರಿಗೆ ದೂರು ಕೊಡಲಿ. ಲೋಕಸಭೆ ಚುನಾವಣೆಯಲ್ಲಿ ನನ್ನ ಪರವಾಗಿ ಕೆಲಸ ಮಾಡಿದ್ದಾರೆ. ಇಲ್ಲ ಎಂದು ನಾನೇನೂ ಹೇಳಿಲ್ಲವಲ್ಲ. ಕೆಪಿಸಿಸಿ ನಮಗೆ ನಿರ್ದೇಶನ ಕೊಡುತ್ತದೆ. ಶಿಸ್ತು ಸಮಿತಿ ಸರಿಯಿಲ್ಲ ಎಂದು ಅವರು ಹೇಳೋದು ಹೇಗೆ? ಕಾಂಗ್ರೆಸ್ ಪಕ್ಷದಲ್ಲಿದ್ದು ಅಧಿಕಾರ ಅನುಭವಿಸಿ ಹೊರಹೋಗುವಾಗ ಆರೋಪ ಮಾಡುತ್ತಾರೆ. ಇದಕ್ಕೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಮಂಜಪ್ಪ ಹೇಳಿದರು.

English summary
Former ZP President Y Ramappa Outrage against Davangere district Congress Leaders for Expulsion from the party,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X