ನಿವೃತ್ತ ಸರ್ಕಾರಿ ಅಧಿಕಾರಿ ಚಿನ್ನಾಭರಣ ದೋಚಿದ ನಕಲಿ ಪೊಲೀಸ್!
ದಾವಣಗೆರೆ, ಡಿಸೆಂಬರ್ 24: ಪೊಲೀಸರಂತೆ ಬಂದ ಇಬ್ಬರು ದುಷ್ಕರ್ಮಿಗಳು ವಾಯುವಿಹಾರ ಮುಗಿಸಿ ತೆರಳುತ್ತಿದ್ದ ನಿವೃತ್ತ ಸರ್ಕಾರಿ ಅಧಿಕಾರಿ ಚಿನ್ನಾಭರಣ ದೋಚಿದ್ದಾರೆ. ದಾವಣಗೆರೆಯ ಬಡಾವಣೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಎಂಸಿಸಿ 'ಎ' ಬ್ಲಾಕ್ ನಿವಾಸಿ ಎನ್. ಆರ್. ಮಂಜುನಾಥ ರಾವ್ ವಂಚನೆಗೊಳಗಾದ ನಿವೃತ್ತ ಸಹಾಯಕ ಕಾರ್ಯಪಾಲಕ ಇಂಜಿನಿಯರ್. ಇಂದು ಬೆಳಗ್ಗೆ ಎಂದಿನಂತೆ ವಾಯುವಿಹಾರ ಮುಗಿಸಿಕೊಂಡು ಅವರು ಮನೆಗೆ ವಾಪಸ್ ಆಗುತ್ತಿದ್ದರು.
ಆಗ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು 1 ಲಕ್ಷ ರೂ. ಮೌಲ್ಯದ ಬಂಗಾರದ ಸರ, ಉಂಗುರವನ್ನು ದೋಚಿ ಪರಾರಿಯಾಗಿದ್ದಾರೆ. ವಾಯುವಿಹಾರಕ್ಕೆ ಬರುವಾಗ ಚಿನ್ನಾಭರಣ ಧರಿಸಿ ಬರಬಾರದು ಎಂದು ಬುದ್ಧಿವಾದ ಹೇಳಿದ್ದಾರೆ.

ಎಂಸಿಸಿ 'ಎ' ಬ್ಲಾಕ್ 7ನೇ ಮೇನ್‌ನಲ್ಲಿ ನಡೆದುಕೊಂಡು ಹೋಗುವಾಗ ಬೈಕ್‌ನಲ್ಲಿ ಬಂದ ಇಬ್ಬರು ಅಡ್ಡಗಟ್ಟಿದ್ದಾರೆ. ತಾವು ಗಸ್ತಿನಲ್ಲಿರುವ ಪೊಲೀಸರು ಎಂದು ಹೇಳಿ ಬಂಗಾರವನ್ನು ಹಾಕಿಕೊಂಡು ಓಡಾಡಬಾರದು ಎಂದು ಅದನ್ನು ಬಿಚ್ಚುವಂತೆ ಹೇಳಿದ್ದಾರೆ.
15 ಗ್ರಾಂ ತೂಕದ ಒಂದು ಎಳೆಯ 45 ಸಾವಿರ ಮೌಲ್ಯದ ಸರ, 8 ಗ್ರಾಂ ತೂಕದ 25 ಸಾವಿರ ಮೌಲ್ಯದ ಬಂಗಾರದ ನವರತ್ನದ ಹಾರ ಹಾಗೂ ಕೈ ಬೆರಳಲ್ಲಿದ್ದ 10 ಗ್ರಾಂ ತೂಕದ 30 ಸಾವಿರ ಮೌಲ್ಯದ ಬಂಗಾರದ ನವಗ್ರಹದ ಒಂದು ಉಂಗುರ, ವಾಚ್, ಮೊಬೈಲ್ ಪಡೆದುಕೊಂಡಿದ್ದಾರೆ.
ಅದನ್ನು ಕರವಸ್ತ್ರದಲ್ಲಿ ಕಟ್ಟಿಕೊಡುವಂತೆ ನಾಟಕವಾಡಿ ಬೈಕ್‌ನಲ್ಲಿ ಪರಾರಿಯಾಗಿದ್ದಾರೆ. ಪೊಲೀಸರು ಎಂದು ನಂಬಿ ಚಿನ್ನಾಭರಣವನ್ನು ತೆಗೆದು ಕೊಟ್ಟ ಎನ್. ಆರ್. ಮಂಜುನಾಥ ರಾವ್‌ಗೆ ಬಳಿಕ ಅವರು ನಕಲಿ ಪೊಲೀಸರು ಎಂಬುದು ತಿಳಿದಿದೆ.
ಬಡಾವಣೆ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ. ಪೊಲೀಸರು ಆರೋಪಿಗಳಿಗಾಗಿ ಹುಡುಕಾಟವನ್ನು ನಡೆಸುತ್ತಿದ್ದಾರೆ.












Click it and Unblock the Notifications