Durgambika Jatra 2024: ದಾವಣಗೆರೆ ರಕ್ಷಕಿ ದುರ್ಗಾಂಬಿಕಾ ಜಾತ್ರೆಗೆ ಸಿದ್ಧತೆ ಹೇಗಿದೆ?-ಪ್ರಮುಖಾಂಶಗಳು ಇಲ್ಲಿವೆ
ದಾವಣಗೆರೆ, ಮಾರ್ಚ್, 06: ನಗರದೇವತೆ ದುರ್ಗಾಂಬಿಕಾ ದೇವಿಯ ಜಾತ್ರೆಯು ಮೂರು ವರ್ಷಗಳಿಗೊಮ್ಮೆ ನಡೆಯಲಿದ್ದು, ಮಾರ್ಚ್ 17ರಿಂದ 20ರ ವರೆಗೆ ಅದ್ಧೂರಿಯಾಗಿ ಜರುಗುವುದರಿಂದ ಭಕ್ತಾಧಿಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸಬೇಕು ಎಂದು ದಾವಣಗೆರೆ ದಕ್ಷಿಣ ಶಾಸಕರು ಹಾಗೂ ದುರ್ಗಾಂಬಿಕಾ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಡಾ.ಶಾಮನೂರು ಶಿವಶಂಕರಪ್ಪ ತಿಳಿಸಿದರು.
ಅವರು ದುರ್ಗಾಂಬಿಕಾ ದೇವಸ್ಥಾನದ ಆವರಣದಲ್ಲಿ ಜಾತ್ರಾ ಸಿದ್ಧತೆ ಪ್ರಯುಕ್ತ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಜಾತ್ರಾ ಸಂದರ್ಭದಲ್ಲಿ ಲಕ್ಷಾಂತರ ಭಕ್ತಾಧಿಗಳು ಇಲ್ಲಿಗೆ ಆಗಮಿಸುವುದರಿಂದ ಜನರಿಗೆ ಸುಗಮ ಸಂಚಾರ, ನೀರಿನ ವ್ಯವಸ್ಥೆ, ವಿದ್ಯುತ್ ಪೂರೈಕೆ, ಪೊಲೀಸ್ ಬಂದೋಬಸ್ತ್, ಶೌಚಾಲಯದ ವ್ಯವಸ್ಥೆ ಸೇರಿದಂತೆ ಜನರ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ.
ಜಿಲ್ಲಾಡಳಿತದಿಂದ ಜಾತ್ರೆಗೆ ಬೇಕಾದ ಎಲ್ಲಾ ನೆರವು ನೀಡಬೇಕು ಮತ್ತು ಮಹಾನಗರ ಪಾಲಿಕೆಯಿಂದ ಸ್ವಚ್ಚತೆ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕು ಎಂದರು.

ಜಾತ್ರೆಯನ್ನು ಸರ್ಕಾರ ಹೇಳಿದ ರೀತಿ ನಡೆಸಲಾಗುತ್ತದೆ. ಪ್ರಾಣಿಬಲಿ ನೀಡುವುದಿಲ್ಲ, ಮೌಢ್ಯಾಚರಣೆ ಮಾಡಲಾಗುವುದಿಲ್ಲ. ಎಲ್ಲಾ ಇಲಾಖೆ ಅಧಿಕಾರಿಗಳು ಸಮನ್ವಯದಿಂದ ಕೆಲಸ ಮಾಡುವ ಮೂಲಕ ನಗರ ದೇವತೆ ಜಾತ್ರೆಯನ್ನು ಯಶಸ್ವಿಯಾಗಿ ನಡೆಸಬೇಕು ಎಂದು ತಿಳಿಸಿದರು.
ಲಕ್ಷಾಂತರ ಭಕ್ತಾಧಿಗಳು ಜಾತ್ರಾ ವೇಳೆ ಆಗಮಿಸುವುದರಿಂದ ಇಲ್ಲಿ ಅವರು ತಮ್ಮ ಹರಕೆಯ ವಸ್ತುಗಳನ್ನು ಬಿಡುವುದು, ಹೂ, ಬೇವಿನಸೊಪ್ಪು ತರುವುದರಿಂದ ಆಗಿಂದಾಗ್ಗೆ ತೆರವು ಮಾಡಬೇಕಾಗುತ್ತದೆ. ಇದಕ್ಕಾಗಿ ಪಾಲಿಕೆಯಿಂದ ಸಿಬ್ಬಂದಿಗಳನ್ನು ನಿಯೋಜಿಸಬೇಕು. ಮತ್ತು ನಿರಂತರ ನೀರು ಸರಬರಾಜು ಮಾಡಬೇಕು. ದೇವಸ್ಥಾನದ ಬಳಿ ಎರಡು ಶೌಚಾಲಯಗಳು ಇದ್ದು, ಹೆಚ್ಚುವರಿಯಾಗಿ ಮೊಬೈಲ್ ಟಾಯ್ಲೆಟ್‍ಗಳನ್ನು ಪಾಲಿಕೆಯಿಂದ ಅಳವಡಿಸಬೇಕೆಂದು ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಎಂ.ವಿ ತಿಳಿಸಿದರು.
ಪಾಲಿಕೆ ಆಯುಕ್ತರು ಮಾತನಾಡಿ, ಪಾಲಿಕೆಯಿಂದ ಸ್ವಚ್ಚತೆಗೆ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತದೆ. ಮತ್ತು ಈಗಾಗಲೇ ಇಲ್ಲಿನ ರಸ್ತೆ ಗುಂಡಿ ಮುಚ್ಚಲು, ಚರಂಡಿ ದುರಸ್ಥಿಗೆ ಹಾಗೂ ಈ ಭಾಗದಲ್ಲಿನ 40 ದೇವಸ್ಥಾನಗಳ ಸುಣ್ಣ ಬಣ್ಣಕ್ಕಾಗಿ ಪಾಲಿಕೆಯಿಂದ 2 ಕೋಟಿ ರೂಪಾಯಿ ವೆಚ್ಚ ಮಾಡಲಾಗುತ್ತಿದೆ ಎಂದರು.
ನಿರಂತರ ವಿದ್ಯುತ್: ಜಾತ್ರೆಯಲ್ಲಿ ಹೆಚ್ಚು ಜನರು ಭಾಗವಹಿಸುವುದರಿಂದ ರಾತ್ರಿ ವೇಳೆ ನಿರಂತರ ವಿದ್ಯುತ್ ಪೂರೈಕೆ ಮಾಡಬೇಕು. ಜೊತೆಗೆ ಎಲ್ಲಿಯೂ ಶಾರ್ಟ್‍ಸರ್ಕ್ಯೂಟ್ ಆಗದ ರೀತಿ ನೋಡಿಕೊಂಡು ಇಲ್ಲಿಗೆ ಸಿಬ್ಬಂದಿಯನ್ನು ನೇಮಕ ಮಾಡಬೇಕೆಂದು ಬೆಸ್ಕಾಂ ಇಂಜಿನಿಯರ್‌ಗೆ ತಿಳಿಸಲಾಯಿತು.
ಆರೋಗ್ಯ ರಕ್ಷಣೆ: ಜಾತ್ರಾ ವೇಳೆ ಹೆಚ್ಚು ಜನರು ಭಾಗವಹಿಸುವುದರಿಂದ ಈಗ ಬಿಸಿಲು ಹೆಚ್ಚಿದೆ, ಜನಸಂದಣಿ ಜಾಸ್ತಿಯಾಗುವುದರಿಂದ ಕೆಲವು ಸಂದರ್ಭದಲ್ಲಿ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆ ಇದ್ದು, ಪಾಲಿಕೆಯಿಂದ ಚರಂಡಿಗಳಿಗೆ ರಾಸಾಯಿನಿಕ ಸಿಂಪಡಣೆ ಮಾಡಬೇಕು. ಆರೋಗ್ಯ ಇಲಾಖೆಯಿಂದ ಮೊಬೈಲ್ ಚಿಕಿತ್ಸಾಲಯ ನಿಯೋಜಿಸಿ ತುರ್ತು ಸೇವೆಗಾಗಿ ಅಂಬುಲೆನ್ಸ್ ವ್ಯವಸ್ಥೆಯನ್ನು ಮಾಡಬೇಕು ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ: ಜಾತ್ರಾ ವೇಳೆ ಭಕ್ತಾಧಿಗಳು ಮೂಢನಂಬಿಕೆಗಳನ್ನು ಆಚರಣೆ ಮಾಡುವ ಸಾಧ್ಯತೆ ಇದ್ದು, ಸಿಬ್ಬಂದಿಗಳ ನೇಮಕ ಮಾಡುವ ಮೂಲಕ ತೀವ್ರ ನಿಗಾವಹಿಸಲು ತಿಳಿಸಲಾಯಿತು.
ಮಾರ್ಚ್ 17ರಿಂದ 20ರವರೆಗೆ ದುರ್ಗಾಂಬಿಕಾ ದೇವಿಯ ಜಾತ್ರಾ ಮಹೋತ್ಸವ ಅದ್ಧೂರಿ ಆಚರಣೆಗೆ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದ್ದು, ಜಾತ್ರಾ ವೇಳೆ ಜನಸಂದಣಿ ಹೆಚ್ಚಿರುವುದರಿಂದ ಜೇಬುಗಳ್ಳರು, ಸರಗಳ್ಳಲು ಹೆಚ್ಚಾಗುವ ಸಂದರ್ಭವಿರುತ್ತದೆ. ಆದ್ದರಿಂದ ಎಲ್ಲಾ ಕಡೆ ಸಿಸಿ ಕ್ಯಾಮೆರಾ ಅಳವಡಿಕೆಯನ್ನು ದೇವಸ್ಥಾನ ಸಮಿತಿಯಿಂದ ಮಾಡಿಕೊಳ್ಳಬೇಕೆಂದು ಜಿಲ್ಲಾ ರಕ್ಷಣಾಧಿಕಾರಿ ಉಮಾ ಪ್ರಶಾಂತ್ ತಿಳಿಸಿದರು.
18 ಕಡೆ ಚೆಕ್ ಪೋಸ್ಟ್‍ಗಳ ನಿರ್ಮಾಣ ಮಾಡಲಾಗುತ್ತದೆ. ರಸ್ತೆ ಬದಿಯಲ್ಲಿ ಅಂಗಡಿ ಮುಂಗಟ್ಟುಗಳಿಗೆ ಅವಕಾಶ ಮಾಡಿಕೊಡದೆ ಸುಗಮ ಸಂಚಾರಕ್ಕಾಗಿ ಅನುಕೂಲ ಮಾಡಿಕೊಡಬೇಕು. ಬ್ಯಾರಿಕೇಡಿಂಗ್ ವ್ಯವಸ್ಥೆ ಮಾಡಬೇಕಾಗುತ್ತದೆ. ಸಾಮಾಜಿಕ ಜಾಲತಾಣದಲ್ಲಿ ದ್ವೇಷ ಹುಟ್ಟಿಸುವ ಪೋಸ್ಟ್‍ಗಳನ್ನು ಹಾಕಬಾರದುಎ ಎಂದರು.
ಇನ್ನು ಜಾತ್ರಾ ವೇಳೆ ಜಗಳಗಳು ನಡೆಯದಂತೆ ದೇವಸ್ಥಾನ ಸಮಿತಿಯಿಂದ ಸ್ವಯಂ ಸೇವಕರನ್ನು ನೇಮಿಸುವ ಮೂಲಕ ಆಗಮಿಸುವ ಭಕ್ತರೊಂದಿಗೆ ಸೌಜನ್ಯಯುತವಾಗಿ ನಡೆದುಕೊಳ್ಳುವಂತೆ ನೋಡಿಕೊಂಡು ಅನಾವಶ್ಯಕವಾಗಿ ಪೊಲೀಸ್ ಭಾಗಿಯಾಗದಂತೆ ನೋಡಿಕೊಳ್ಳಬೇಕು ಎಂದರು.
ಫ್ಲೆಕ್ಸ್, ಬಂಟಿಂಗ್ಸ್‌ಗೆ ಬೇಕು ಅನುಮತಿ: ಜಾತ್ರಾ ವೇಳೆ ಫ್ಲೆಕ್ಸ್, ಬಂಟಿಂಗ್ಸ್ ಹಾಕುವವರು ಪಾಲಿಕೆಯಿಂದ ಅನುಮತಿ ಪಡೆದುಕೊಂಡಿರಬೇಕು. ಅನುಮತಿ ಇಲ್ಲದೇ ಇರುವ ಫ್ಲೆಕ್ಸ್‌ಗಳಿಗೆ ಅವಕಾಶ ಇರುವುದಿಲ್ಲ. ಪ್ಲಾಸ್ಟಿಕ್ ಬಳಕೆಯನ್ನು ಮಿತಿಗೊಳಿಸಿ ಪರಿಸರ ಸ್ನೇಹಿ ಜಾತ್ರೆ ಆಚರಣೆಗೆ ಮುಂದಾಗಬೇಕು. ಚುನಾವಣೆ ನೀತಿ ಸಂಹಿತೆ ಜಾರಿಯಾಗುವ ನಿರೀಕ್ಷೆಯಿದ್ದು, ಇದನ್ನು ಪಾಲನೆ ಮಾಡಬೇಕಾಗುತ್ತದೆ. ಜಾತ್ರಾ ಸಂದರ್ಭದಲ್ಲಿ ಎಲ್ಲ ವ್ಯವಸ್ಥೆಗಳ ನಿರ್ವಹಣೆಗಾಗಿ ಕಂಟ್ರೋಲ್ ರೂಂ ಸ್ಥಾಪನೆ ಮಾಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ತಿಳಿಸಿದರು.
ಹಾಗೆಯೇ ಟ್ರಸ್ಟ್ ಸದಸ್ಯರಾದ ಚನ್ನಬಸಪ್ಪನವರು ಎಲ್ಲರ ಸಹಕಾರದಿಂದ ಜಾತ್ರೆಯನ್ನು ಸುಗಮವಾಗಿ ನಡೆಸಿಕೊಂಡು ಹೋಗೋಣ ಎಂದರು. ಸಭೆಯಲ್ಲಿ ದುರ್ಗಾಂಬಿಕಾ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಡಾ.ಶಾಮನೂರು ಶಿವಶಂಕರಪ್ಪ, ಪಾಲಿಕೆ ಮೇಯರ್ ವಿನಾಯಕ್ ಬಿ.ಹೆಚ್, ಟ್ರಸ್ಟ್ ಸದಸ್ಯ ವೀರಣ್ಣ, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ವಿಜಯಕುಮಾರ್ ಎಂ.ಸಂತೋಷ್, ಮಂಜುನಾಥ್, ಪಾಲಿಕೆ ಆಯುಕ್ತರಾದ ರೇಣುಕಾ, ಉಪವಿಭಾಗಾಧಿಕಾರಿ ದುರ್ಗಶ್ರೀ, ತಹಶೀಲ್ದಾರ್ ಡಾ. ಅಶ್ವಥ್ ಎಂ.ಬಿ ಹಾಗೂ ಇನ್ನಿತರೆ ಇಲಾಖೆ ಅಧಿಕಾರಿಗಳು, ಪಾಲಿಕೆ ಸದಸ್ಯರು ಹಾಗೂ ಸಾರ್ವಜನಿಕರು ಸಭೆಯಲ್ಲಿ ಭಾಗವಹಿಸಿದ್ದರು.












Click it and Unblock the Notifications