ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಫೇಸ್‌ಬುಕ್ ಖಾತೆ ಹ್ಯಾಕ್
ದಾವಣಗೆರೆ, ಜೂನ್, 03: ಇತ್ತೀಚಿನ ದಿನಗಳಲ್ಲಿ ರಾಜಕಾರಣಿಗಳು, ಉದ್ಯಮಿಗಳ ಸಾಮಾಜಿಕ ಜಲಾತಾಣಗಾಳಾದ ಫೇಸ್‌ಬುಕ್, ಟ್ವಿಟರ್ ಖಾತೆಗಳು ಹ್ಯಾಕ್ ಆಗುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಹಾಗೆಯೇ ಇದೀಗ ಶಾಮನೂರು ಶಿವಶಂಕರಪ್ಪನವರ ಸೊಸೆ, ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರ ಪತ್ನಿ ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರ ಹೆಸರಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ನಕಲಿ ಖಾತೆ ಸೃಷ್ಟಿಸಿ ಹಣಕ್ಕೆ ಬೇಡಿಕೆಯಿಟ್ಟಿರುವುದಾಗಿ ಮಾಹಿತಿ ತಿಳಿದುಬಂದಿದೆ. ಹಾಗಾದರೆ ಈ ಬಗ್ಗೆ ಪ್ರಭಾ ಮಲ್ಲಿಕಾರ್ಜುನ್ ಅವರು ಏನು ಹೇಳಿದ್ದಾರೆ ಎಂದು ಇಲ್ಲಿ ತಿಳಿಯಿರಿ.
"ಯಾರೋ ಕಿಡಿಗೇಡಿಗಳು ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ prabha mallikarjun (for MP) ಹೆಸರಿನಲ್ಲಿ ಖಾತೆ ತೆರೆದು ಸಾರ್ವಜನಿಕರಲ್ಲಿ ಹಣದ ಬೇಡಿಕೆ ಇಡುತ್ತಿರುವುದು ಗಮನಕ್ಕೆ ಬಂದಿದ್ದು, ಈ ತರಹದ ಬೇಡಿಕೆಗಳಿಗೆ ಸೊಪ್ಪು ಹಾಕಲು ಹೋಗಬೇಡಿ ಎಂದು ಮನವಿ ಮಾಡಿದ್ದಾರೆ," ಎಂದು ತಿಳಿದುಬಂದಿದೆ.

ಮತ ಎಣಿಕೆಗೆ ಸಿದ್ಧತೆ ಹೇಗಿದೆ?: ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಮೇ 7ಕ್ಕೆ ಮುಗಿದಿದ್ದು, ಫಲಿತಾಂಶಕ್ಕೆ ಇನ್ನು ಕೆಲವೇ ಕ್ಷಣಗಳು ಬಾಕಿಯಿವೆ. ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದ್ದು, ಪಕ್ಷೇತರ ಅಭ್ಯರ್ಥಿ ಜಿ.ಬಿ.ವಿನಯ್ ಕುಮಾರ್ ಅವರು ಎಷ್ಟು ಮತ ಪಡೆಯುತ್ತಾರೆ ಎಂಬ ಕುತೂಹಲವೂ ಗರಿಗೆದರಿದೆ. ಹಾಗಾದರೆ ಹೆಚ್ಚು ಗೆಲುವಿನ ವರ್ಚಸ್ಸು ಯಾರಿಗಿದೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಕಾಂಗ್ರೆಸ್‌ನಿಂದ ಡಾ.ಶಾಮನೂರು ಶಿವಶಂಕರಪ್ಪನವರ ಸೊಸೆ, ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರ ಪತ್ನಿ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರು ಕಣಕ್ಕಿಳಿದಿದ್ದರೆ, ಬಿಜೆಪಿ ಪಕ್ಷದಿಂದ ಸಂಸದ ಡಾ.ಜಿ.ಎಂ.ಸಿದ್ದೇಶ್ವರರ ಪತ್ನಿ
ಗಾಯಿತ್ರಿ ಸಿದ್ದೇಶ್ವರ ಕಣಕ್ಕಿಳಿದಿದ್ದು, ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಈ ಇಬ್ಬರ ಪೈಕಿ ಯಾರೇ ಗೆದ್ದರೂ ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಇತಿಹಾಸ ಸೃಷ್ಟಿಯಾಗಲಿದೆ.
ಇದುವರೆಗೆ ಮಹಿಳೆಯೊಬ್ಬರು ಸಂಸದರಾಗಿದ್ದ ಇತಿಹಾಸ ಇಲ್ಲ. ಹಾಗಾಗಿ, ಪ್ರಭಾ ಮಲ್ಲಿಕಾರ್ಜುನ್ ಇಲ್ಲವೇ ಗಾಯಿತ್ರಿ ಸಿದ್ದೇಶ್ವರ ಇಬ್ಬರ ಪೈಕಿ ಒಬ್ಬರೂ ಗೆದ್ದರೂ ಹೊಸ ಇತಿಹಾಸ ಬರೆದಂತೆ.
ಮೇಲ್ನೋಟಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಗೆಲುವು ಸಿಗುತ್ತದೆ ಎಂದು ವಿಶ್ಲೇಷಿಸಲಾಗುತ್ತಿದೆ. ಇದೇ ರೀತಿಯಲ್ಲಿ ಬಿಜೆಪಿಯೂ ಸಹ ಕನಿಷ್ಠ 10,000 ಮತಗಳ ಅಂತರದಿಂದ ಗೆಲ್ಲುವ ವಿಶ್ವಾಸ ಹೊಂದಿದೆ. ಎರಡು ಕುಟುಂಬಗಳ ನಡುವೆ ಪ್ರತಿಷ್ಠೆ ಏರ್ಪಟ್ಟಿರುವ ಈ ಚುನಾವಣಾ ಫಲಿತಾಂಶಕ್ಕೆ ಎಲ್ಲರೂ ಕಾಯುತ್ತಿದ್ದು, ಅಭ್ಯರ್ಥಿಗಳಲ್ಲಿ ಢವ ಢವ ಶುರುವಾಗಿದೆ.
ದಾವಣಗೆರೆ ಲೋಕಸಭಾ ಕ್ಷೇತ್ರದ ಮತ ಎಣಿಕೆಯು ಜೂನ್ 4ರಂದು ಬೆಳಗ್ಗೆ 6.30ರಿಂದ ಭದ್ರತಾ ಕೊಠಡಿ ತೆರೆಯುವ ಮೂಲಕ 8 ಗಂಟೆಯಿಂದ ದಾವಣಗೆರೆ ವಿಶ್ವವಿದ್ಯಾನಿಲಯ ಶಿವಗಂಗೋತ್ರಿಯಲ್ಲಿ ಮತ ಎಣಿಕೆ ನಡೆಯಲಿದೆ. ಚುನಾವಣಾ ಕಣದಲ್ಲಿದ್ದ 30 ಅಭ್ಯರ್ಥಿಗಳ ಫಲಿತಾಂಶ ಮಧ್ಯಾಹ್ನದೊಳಗೆ ಹೊರ ಬೀಳುವ ಸಾಧ್ಯತೆ ಇದೆ ಎಂದು ಜಿಲ್ಲಾಧಿಕಾರಿ ಹಾಗೂ ಚುನಾವಣಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ತಿಳಿಸಿದರು.
ದಾವಣಗೆರೆ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಹರಪನಹಳ್ಳಿ ಸೇರಿದಂತೆ ದಾವಣಗೆರೆ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳು ಸೇರಿ 8 ಕ್ಷೇತ್ರಗಳ ಎಣಿಕೆಯು ಶಿವಗಂಗೋತ್ರಿಯಲ್ಲಿ ನಡೆಯಲಿದೆ. ಪ್ರತಿ ಕ್ಷೇತ್ರದಲ್ಲಿ 14 ಟೇಬಲ್‍ಗಳಲ್ಲಿ ಎಣಿಕೆ ನಡೆಯಲಿದ್ದು, ಗರಿಷ್ಠ 19 ಸುತ್ತುಗಳಲ್ಲಿ ಎಣಿಕೆ ನಡೆಯಲಿದೆ. ಪ್ರತಿ ಸುತ್ತಿನಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ಎಣಿಕೆ ನಡೆದ ನಂತರ ಮುಂದಿನ ಸುತ್ತು ಎಣಿಕೆ ಆರಂಭಿಸಲಾಗುತ್ತದೆ ಎಂದು ಹೇಳಿದರು.
ಪ್ರತಿ ಎಣಿಕೆ ಟೇಬಲ್‍ಗಳಲ್ಲಿ ಎಣಿಕೆ ಮೇಲ್ವಿಚಾರಕ, ಒಬ್ಬ ಎಣಿಕೆ ಸಹಾಯಕ, ಒಬ್ಬರು ಮೈಕ್ರೋ ಅಬ್ಸರ್‍ವರ್ ನೇಮಕ ಮಾಡಿದ್ದು, ಎಲ್ಲಾ 8 ಕ್ಷೇತ್ರಗಳಿಗೆ 336 ಎಣಿಕೆ ಸಿಬ್ಬಂದಿಗಳನ್ನು ನೇಮಕ ಮಾಡಿ ಎರಡು ಹಂತದ
ತರಬೇತಿ ನೀಡಲಾಗಿದೆ. ಮತ ಎಣಿಕೆ ಮುಕ್ತಾಯದ ನಂತರ ವಿವಿ ಪ್ಯಾಟ್ ಸ್ಲಿಪ್ ಎಣಿಕೆ ನಡೆಯಲಿದ್ದು, ಪ್ರತಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 5 ಮತಗಟ್ಟೆಗಳಲ್ಲಿ ಲಾಟರಿ ಮೂಲಕ ಆಯ್ಕೆ ಮಾಡಿ ವಿವಿ ಪ್ಯಾಟ್ ಸ್ಲಿಪ್ ಎಣಿಕೆ ಮಾಡಲಾಗುತ್ತದೆ ಎಂದರು.












Click it and Unblock the Notifications