ಕೊರೊನಾ ವೈರಸ್ ಬಗ್ಗೆ ಅರಿತು ಎಚ್ಚರದಿಂದಿರಿ: ಡಾ.ಕೆ.ಸುಧಾಕರ್
ದಾವಣಗೆರೆ, ಮೇ 9, 2020 : ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಸರ್ಕಾರದ ಜೊತೆ ಸಾರ್ವಜನಿಕರು ಕೂಡ ಕೈಜೋಡಿಸಬೇಕು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅಭಿಪ್ರಾಯಪಟ್ಟಿದ್ದಾರೆ.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ನಡೆದ ಪರಾಮರ್ಶೆ ಸಭೆಯಲ್ಲಿ ಮಾತನಾಡಿದ ಡಾ.ಕೆ.ಸುಧಾಕರ್, ''ಇದುವರೆಗೂ ರಾಜ್ಯ ಸರ್ಕಾರ ಅತ್ಯಂತ ಜವಾಬ್ದಾರಿಯುತವಾಗಿ ಕೊರೊನಾ ಸೋಂಕನ್ನು ಹಿಮ್ಮೆಟ್ಟಿಸಿದೆ. ಲಾಕ್ ಡೌನ್ ಸಡಿಲಿಕೆ ಬಳಿಕ ಜನರು ಕೂಡ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕಿದೆ'' ಅಂತ ಹೇಳಿದರು.
''ಇಡೀ ದೇಶದಲ್ಲಿ ಪ್ರಾರಂಭದಲ್ಲೇ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದರಿಂದ ರಾಜ್ಯದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಕಣ್ಣಿಗೆ ಕಾಣದ ಈ ವೈರಾಣು ಪ್ರಬಲ ರಾಷ್ಟ್ರಗಳನ್ನು ನಡುಗಿಸಿದೆ. ಆದರೆ ನಮ್ಮ ದೇಶದಲ್ಲಿ ಮತ್ತು ಕರ್ನಾಟಕದಲ್ಲಿ ಕೈಗೊಂಡ ಕ್ರಮಗಳು ಇವತ್ತಿನ ಸಮಾಧಾನಕರ ಪರಿಸ್ಥಿತಿಗೆ ಕಾರಣವಾಗಿದೆ'' ಎಂದರು.
ಕೊರೊನಾ ಭೀತಿಯ ನಡುವೆ ವಾಣಿ ವಿಲಾಸ್ ಆಸ್ಪತ್ರೆ ಸಿಬ್ಬಂದಿಗಳ ಆಕ್ರೋಶ!
''ಸಾರ್ವಜನಿಕರು ರೋಗದ ಬಗ್ಗೆ ಅನಗತ್ಯ ಗೊಂದಲಗಳನ್ನು ಹರಡಿಸುವುದನ್ನು ಅಂತೆ ಕಂತೆಗಳು ನಂಬುವುದನ್ನು ಬಿಡಬೇಕು. ಕಾಲದಿಂದ ಕಾಲಕ್ಕೆ ರಾಜ್ಯ ಸರಕಾರ ಜಾರಿಗೊಳಿಸುವ ಮಾರ್ಗಸೂಚಿಗಳನ್ನು ಚಾಚು ತಪ್ಪದೇ ಅನುಸರಿಸಬೇಕು. ಇಲ್ಲವಾದಲ್ಲಿ ಪರಿಸ್ಥಿತಿ ಬೇರೆ ಬೇರೆ ಸ್ವರೂಪ ಪಡೆಯುವ ಸಾಧ್ಯತೆಗಳಿವೆ'' ಎಂದು ಸಚಿವ ಸುಧಾಕರ್ ಎಚ್ಚರಿಸಿದ್ದಾರೆ.

ಜನ ಎಚ್ಚರಿಕೆಯ ಕ್ರಮಗಳನ್ನು ಅಳವಡಿಸಿಕೊಳ್ಳಬೇಕು
''ರಾಜ್ಯ ಸರ್ಕಾರ ಜನರ ಜೀವ ಮತ್ತು ಜೀವನವನ್ನು ಕಾಪಾಡುವ ನಿಟ್ಟಿನಲ್ಲಿ ಎಚ್ಚರಿಕೆಯಿಂದ ಹೆಜ್ಜೆಗಳನ್ನು ನೀಡುತ್ತಿದೆ. ಜನರು ಕೂಡ ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ಕೆಲವೊಂದು ಎಚ್ಚರಿಕೆ ಕ್ರಮಗಳನ್ನು ಅಳವಡಿಸಿಕೊಳ್ಳಬೇಕು. ಶುಚಿತ್ವದ ವಿಚಾರದಲ್ಲಿ ನಿರ್ಲಕ್ಷ್ಯ ತೋರಬಾರದು. ಕೊರೊನಾ ರೋಗಕ್ಕೆ ಲಸಿಕೆ ಮತ್ತು ಅಧಿಕೃತ ಚಿಕಿತ್ಸೆ ಲಭ್ಯವಾಗುವ ತನಕ ಕೆಲವು ಬದಲಾವಣೆಗಳ ಜೊತೆಗೆ ಕಟ್ಟಿಕೊಳ್ಳುವುದು ಅನಿವಾರ್ಯ. ಕೊರೊನಾ ವೈರಸ್ ಇರುತ್ತದೆ. ಅದರೊಂದಿಗೆ ನಾವೂ ಇರಬೇಕು. ಆದರೆ ಅದರಿಂದ ಅಂತರ ಕಾಯ್ದುಕೊಳ್ಳಬೇಕು. ಅದು ಚಲಿಸುವುದಿಲ್ಲ. ನಮ್ಮ ಜೊತೆ ಚಲಿಸುತ್ತಿದೆ ಎಂಬುದನ್ನು ಅರಿತುಕೊಳ್ಳಬೇಕು'' ಎಂದಿದ್ದಾರೆ ಸಚಿವ ಸುಧಾಕರ್.

ತಪ್ಪು ಕಲ್ಪನೆ ಇದೆ
''ಕೆಲ ಚುನಾಯಿತ ಪ್ರತಿನಿಧಿಗಳೂ ಸೇರಿದಂತೆ ಸಾರ್ವಜನಿಕರಲ್ಲಿ ರೋಗದ ಬಗ್ಗೆ ತಪ್ಪು ಕಲ್ಪನೆಯಿದೆ. ಸೋಂಕಿತರನ್ನು ಮತ್ತು ಅವರ ಕುಟುಂಬ ಸದಸ್ಯರನ್ನು ಕಳಂಕಿತರಂತೆ ನೋಡುವ ಮನೋಭಾವ ಬಿಡಬೇಕು. ಈ ಬಗ್ಗೆ ಭಯ ಪಡುವ ಅಗತ್ಯವಿಲ್ಲ. ಇತರೆ ರೋಗಗಳಂತೆ ಇದೂ ಒಂದು ರೋಗಾಣು ಅಷ್ಟೆ. ಸೋಂಕು ತಗುಲಿದ ಶೇಕಡ ಎಂಬತ್ತಕ್ಕೂ ಹೆಚ್ಚು ಮಂದಿ ಗುಣಮುಖರಾಗಿ ಮನೆಗೆ ಹಿಂತಿರುಗಿದ್ದಾರೆ. ಸಾರ್ಸ್ ರೋಗಕ್ಕಿಂತ ಕೊರೊನಾ ಸೋಂಕಿತರ ಮರಣ ಪ್ರಮಾಣ ಕಡಿಮೆ ಇದೆ. ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯದಲ್ಲಿ ಜನಪ್ರತಿನಿಧಿಗಳು ಪಾಲ್ಗೊಳ್ಳಬೇಕು. ಇದಕ್ಕಾಗಿ ರಾಜ್ಯ ಸರ್ಕಾರ ಜಾರಿಗೊಳಿಸಿರುವ 104 ಸಹಾಯವಾಣಿಯ ಸೌಲಭ್ಯ ಪಡೆದುಕೊಳ್ಳಬೇಕು. ಕೇಂದ್ರ ಸರ್ಕಾರ ರೂಪಿಸಿರುವ "ಆರೋಗ್ಯ ಸೇತು" ಆಪ್ ಡೌನ್ಲೋಡ್ ಮಾಡಿಕೊಳ್ಳಬೇಕು. ಆ ಮೂಲಕ ಹೆಚ್ಚಿನ ಮಾಹಿತಿ ಲಭ್ಯವಿರುತ್ತದೆ'' ಎಂದು ಸಚಿವ ಸುಧಾಕರ್ ತಿಳಿಸಿದ್ದಾರೆ.
ಅಬ್ಬಬ್ಬಾ.. ಕರ್ನಾಟಕಕ್ಕೆ ಬರಲು 'ಇಷ್ಟೊಂದು' ಜನ ನೋಂದಣಿ ಮಾಡಿಸಿದ್ದಾರಾ?

ಜಿಲ್ಲಾಸ್ಪತ್ರೆ ಈಗ 'ಕೋವಿಡ್ ಆಸ್ಪತ್ರೆ'
ಈ ಹಿಂದೆ ಹಸಿರು ವಲಯದಲ್ಲಿದ್ದ ದಾವಣಗೆರೆ ಜಿಲ್ಲೆ ಇದೀಗ ಕೆಂಪು ವಲಯಕ್ಕೆ ಸೇರ್ಪಡೆಯಾಗಿದೆ. ಜಿಲ್ಲಾ ಆಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆ ಎಂದು ಗುರುತಿಸಲಾಗಿದ್ದು, ಕೊರೊನಾಯೇತರ ಚಿಕಿತ್ಸೆಗೆ ಬೇರೆ ಆಸ್ಪತ್ರೆಯಲ್ಲಿ ವ್ಯವಸ್ಥೆ ಮಾಡಲು ಸಚಿವ ಸುಧಾಕರ್ ಸೂಚನೆ ನೀಡಿದ್ದಾರೆ

ಟೆಸ್ಟಿಂಗ್ ಲ್ಯಾಬ್ ಉದ್ಘಾಟನೆ
ಇಂದು ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿ ಜಿಲ್ಲೆಯ ಮೊದಲ ಟೆಸ್ಟಿಂಗ್ ಲಾಬ್ ನ್ನು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಉದ್ಘಾಟಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ್, ಸಂಸದ ಜಿ.ಎಂ.ಸಿದ್ದೇಶ್ವರ್, ಶಾಸಕ ಶ್ಯಾಮನೂರು ಶಿವಶಂಕರಪ್ಪ ಉಪಸ್ಥಿತರಿದ್ದರು.

ಜಿಲ್ಲಾಸ್ಪತ್ರೆಯಲ್ಲೂ ಟೆಸ್ಟಿಂಗ್ ಲ್ಯಾಬ್
''ಇನ್ನೆರಡು ದಿನದಲ್ಲಿ ಜಿಲ್ಲಾ ಆಸ್ಪತ್ರೆಯಲ್ಲೂ ಟೆಸ್ಟಿಂಗ್ ಲ್ಯಾಬ್ ಕಾರ್ಯಾರಂಭಿಸಲಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪರೀಕ್ಷೆಗಳನ್ನು ನಡೆಸಿ ಕ್ವಾರಂಟೈನ್ ಪ್ರದೇಶದ ಎಲ್ಲ ನಾಗರೀಕರ ತಪಾಸಣೆ ಕಾರ್ಯವನ್ನು ಮುಗಿಸಬೇಕು. ಟೆಸ್ಟಿಂಗ್ ಸಂಬಂಧ ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ಒದಗಿಸಲಾಗುವುದು'' ಎಂದು ಸಚಿವ ಸುಧಾಕರ್ ತಿಳಿಸಿದ್ದಾರೆ.
13 ಜನರಿಂದ 328 ಮಂದಿಗೆ ಕೊರೊನಾ: ಬೆಚ್ಚಿಬೀಳಿಸುವ 'ಸೂಪರ್ ಸ್ಪ್ರೆಡರ್ಸ್' ಕಹಾನಿ!