ದಾವಣಗೆರೆಯಲ್ಲಿ ಮತ ಎಣಿಕೆಗೆ ಸಕಲ ಸಿದ್ಧತೆ: ಸಾರ್ವಜನಿಕರು, ಕಾರ್ಯಕರ್ತರು ಈ ವಿಚಾರಗಳನ್ನು ನೆನಪಿನಲ್ಲಿಡಿ
ದಾವಣಗೆರೆ, ಜೂನ್ 03: ದಾವಣಗೆರೆ ಲೋಕಸಭಾ ಕ್ಷೇತ್ರದ ಮತ ಎಣಿಕೆಯು ಜೂನ್ 4 ರಂದು ಬೆಳಗ್ಗೆ 6.30 ರಿಂದ ಭದ್ರತಾ ಕೊಠಡಿ ತೆರೆಯುವ ಮೂಲಕ 8 ಗಂಟೆಯಿಂದ ದಾವಣಗೆರೆ ವಿಶ್ವವಿದ್ಯಾನಿಲಯ ಶಿವಗಂಗೋತ್ರಿಯಲ್ಲಿ ಮತ ಎಣಿಕೆ ನಡೆಯಲಿದೆ. ಚುನಾವಣಾ ಕಣದಲ್ಲಿದ್ದ 30 ಅಭ್ಯರ್ಥಿಗಳ ಫಲಿತಾಂಶ ಮಧ್ಯಾಹ್ನದೊಳಗೆ ಹೊರ ಬೀಳುವ ಸಾಧ್ಯತೆ ಇದೆ ಎಂದು ಜಿಲ್ಲಾಧಿಕಾರಿ ಹಾಗೂ ಚುನಾವಣಾಧಿಕಾರಿ ಡಾ. ವೆಂಕಟೇಶ್ ಎಂ.ವಿ ತಿಳಿಸಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ದಾವಣಗೆರೆ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಹರಪನಹಳ್ಳಿ ಸೇರಿದಂತೆ ದಾವಣಗೆರೆ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳು ಸೇರಿ 8 ಕ್ಷೇತ್ರಗಳ ಎಣಿಕೆಯು ಶಿವಗಂಗೋತ್ರಿಯಲ್ಲಿ ನಡೆಯಲಿದೆ. ಪ್ರತಿ ಕ್ಷೇತ್ರದಲ್ಲಿ 14 ಟೇಬಲ್‍ಗಳಲ್ಲಿ ಎಣಿಕೆ ನಡೆಯಲಿದ್ದು ಗರಿಷ್ಠ 19 ಸುತ್ತುಗಳಲ್ಲಿ ಎಣಿಕೆ ನಡೆಯಲಿದೆ. ಪ್ರತಿ ಸುತ್ತಿನಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ಎಣಿಕೆ ನಡೆದ ನಂತರ ಮುಂದಿನ ಸುತ್ತು ಎಣಿಕೆ ಆರಂಭಿಸಲಾಗುತ್ತದೆ ಎಂದರು.

ಪ್ರತಿ ಎಣಿಕೆ ಟೇಬಲ್‌ಗಳಲ್ಲಿ ಎಣಿಕೆ ಮೇಲ್ವಿಚಾರಕ, ಒಬ್ಬ ಎಣಿಕೆ ಸಹಾಯಕ, ಒಬ್ಬರು ಮೈಕ್ರೋ ಅಬ್ಸರ್‍ವರ್ ನೇಮಕ ಮಾಡಿದ್ದು ಎಲ್ಲಾ 8 ಕ್ಷೇತ್ರಗಳಿಗೆ 336 ಎಣಿಕೆ ಸಿಬ್ಬಂದಿಗಳನ್ನು ನೇಮಕ ಮಾಡಿ ಎರಡು ಹಂತದ ತರಬೇತಿ ನೀಡಲಾಗಿದೆ. ಮತ ಎಣಿಕೆ ಮುಕ್ತಾಯದ ನಂತರ ವಿವಿ ಪ್ಯಾಟ್ ಸ್ಲಿಪ್ ಎಣಿಕೆ ನಡೆಯಲಿದ್ದು ಪ್ರತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 5 ಮತಗಟ್ಟೆಗಳಲ್ಲಿ ಲಾಟರಿ ಮೂಲಕ ಆಯ್ಕೆ ಮಾಡಿ ವಿವಿ ಪ್ಯಾಟ್ ಸ್ಲಿಪ್ ಎಣಿಕೆ ಮಾಡಲಾಗುತ್ತದೆ ಎಂದು ಹೇಳಿದರು.
ಅಂಚೆ ಮತ ಎಣಿಕೆಗೆ ಪ್ರತ್ಯೇಕ ಟೇಬಲ್
85 ವರ್ಷ ಮೇಲ್ಪಟ್ಟ ಹಾಗೂ ವಿಶೇಷಚೇತನರ, ಅಗತ್ಯ ಸೇವೆಗಳ ಗೈರು ಹಾಜರಿ ಮತದಾರರು, ಚುನಾವಣಾ ಕರ್ತವ್ಯ ನಿರತರು ಸೇರಿದಂತೆ 4918 ಅಂಚೆ ಮತಪತ್ರಗಳು ಸ್ವೀಕೃತವಾಗಿದ್ದು ಅಂಚೆ ಮತ ಪತ್ರಗಳನ್ನು ಎಣಿಕೆ ಮಾಡಲು 12 ಎಣಿಕೆ ಟೇಬಲ್‌ಗಳನ್ನು ಸ್ಥಾಪನೆ ಮಾಡಲಾಗಿದೆ. ಇದಕ್ಕಾಗಿ ಪ್ರತಿ ಟೇಬಲ್‍ಗೆ ಒಬ್ಬ ಸಹಾಯಕ ಚುನಾವಣಾಧಿಕಾರಿ, ಒಬ್ಬ ಎಣಿಕೆ ಮೇಲ್ವಿಚಾರಕ, ಒಬ್ಬ ಎಣಿಕೆ ಸಹಾಯಕರನ್ನು ನೇಮಕ ಮಾಡಲಾಗಿದೆ.
ಎಣಿಕೆ ಕೇಂದ್ರದಲ್ಲಿ ಮೂರು ಹಂತದ ಭದ್ರತಾ ವ್ಯವಸ್ಥೆ
ಮತ ಎಣಿಕೆ ಕೇಂದ್ರದ ಸುತ್ತಮುತ್ತ ಮೂರು ಹಂತದಲ್ಲಿ ಭದ್ರತೆಯನ್ನು ಒದಗಿಸಲಾಗಿದ್ದು ಮೊದಲ ಹಂತದಲ್ಲಿ ಕೇಂದ್ರ ಸಶಸ್ತ್ರ ಮೀಲಸು ಪೊಲೀಸ್ ಪಡೆ, ಎರಡನೇ ಹಂತದಲ್ಲಿ ರಾಜ್ಯ ಸಶಸ್ತ್ರ ಮೀಸಲು ಪೊಲೀಸ್ ಪಡೆ ಹಾಗೂ ಮೂರನೇ ಹಂತದಲ್ಲಿ ಸಿವಿಲ್ ಪೊಲೀಸ್ ವ್ಯವಸ್ಥೆಯಿಂದ ಭದ್ರತೆ ಒದಗಿಸಲಾಗಿದೆ. ಅಭ್ಯರ್ಥಿಗಳ ಎಣಿಕೆ ಏಜೆಂಟರು, ಎಣಿಕೆ ಸಿಬ್ಬಂದಿಗಳಿಗೆ ಪ್ರವೇಶಕ್ಕೆ ಗುರುತಿನ ಚೀಟಿ ನೀಡಲಾಗಿದ್ದು ಗುರುತಿನ ಚೀಟಿ ಇಲ್ಲದ ಯಾರಿಗೂ ಒಳಗೆ ಪ್ರವೇಶ ಇರುವುದಿಲ್ಲ ಎಂದು ತಿಳಿಸಿದರು.
ಸಾರ್ವಜನಿಕರಿಗೆ ಫಲಿತಾಂಶ ವಿವರ ಲಭ್ಯ
ಪ್ರತಿ ಸುತ್ತಿನ ಎಣಿಕೆ ನಂತರ ಸಾರ್ವಜನಿಕವಾಗಿ ಧ್ವನಿವರ್ಧಕದ ಮೂಲಕ ಸಾರ್ವಜನಿಕರಿಗೆ ಎಣಿಕೆ ವಿವರವನ್ನು ಪ್ರಚಾರ ಮಾಡಲಾಗುತ್ತದೆ. ಸಾರ್ವಜನಿಕರು ಸೇರಿದಂತೆ ಪಕ್ಷಗಳ ಕಾರ್ಯಕರ್ತರು ತಾಳ್ಮೆಯನ್ನು ವಹಿಸುವ ಮೂಲಕ ಸಹಕಾರ ನೀಡಬೇಕು. ಸಾರ್ವಜನಿಕ ಶಾಂತಿ, ಕಾನೂನು ಸುವ್ಯವಸ್ಥೆ ಕಾಪಾಡಲು ಜಿಲ್ಲೆಯಾದ್ಯಂತ 144 ಸೆಕ್ಷನ್ ಜಾರಿಗೊಳಿಸಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಅಕ್ರಮ ಗುಂಪು ಸೇರುವಂತಿಲ್ಲ, ಮೆರವಣಿಗೆ ಮಾಡುವಂತಿಲ್ಲ, ಪಟಾಕಿ ಸಿಡಿಸುವುದು, ವಿಜಯೋತ್ಸವ ಆಚರಣೆ ಮಾಡುವಂತಿಲ್ಲ ಎಂದರು.












Click it and Unblock the Notifications