ಲಾಕ್ ಡೌನ್ ಉಲ್ಲಂಘಿಸುತ್ತಿರುವ ದಾವಣಗೆರೆ ಜನತೆ
ದಾವಣಗೆರೆ. ಏಪ್ರಿಲ್ 23: ಲಾಕ್ ಡೌನ್ ಸಡಿಲಿಕೆಗೂ ಮುನ್ನವೇ ದಾವಣಗೆರೆ ಜನತೆ ರಿಲ್ಯಾಕ್ಸ್ ಮೂಡ್ ಗೆ ಜಾರಿದ್ದಾರೆ. ಇಂದಿನಿಂದ ಕೆಲ ಅಗತ್ಯ ಸೇವೆಗಳಿಗೆ ಸರ್ಕಾರ ಅನುಮತಿ ನೀಡಿದೆ. ಆದರೆ ದಾವಣಗೆರೆ ಜನತೆ ನಿಯಂತ್ರಣವಿಲ್ಲದೆ ವಾಹನಗಳಲ್ಲಿ ಸಂಚರಿಸುತ್ತಿದ್ದಾರೆ.
ಇಂದು ಬೆಳಿಗ್ಗೆ ನಗರದಲ್ಲೆಡೆ ಜನರು ಹಾಗೂ ವಾಹನಗಳ ಸಂಚಾರ ಹೆಚ್ಚಾಗಿಯೇ ಕಂಡುಬಂದಿತ್ತು. ನಗರದ ಕೆಲಭಾಗಗಳಲ್ಲಿ ಹಾಗೂ ಮುಖ್ಯ ವ್ಯಾಪಾರದ ಸ್ಥಳಗಳಲ್ಲಿ ಜನರು ಕೊರೊನಾ ವೈರಸ್ ಭೀತಿಯಿಲ್ಲದಂತೆ ತಮ್ಮ ಕಾರ್ಯಗಳಲ್ಲಿ ತೊಡಗಿಕೊಂಡಿದ್ದ ದೃಶ್ಯ ಸಾಮಾನ್ಯವಾಗಿತ್ತು.
ದಾವಣಗೆರೆ ನಗರದ ಮಂಡಿಪೇಟೆಯಲ್ಲಿ ಕೆಲ ವಾಹನ ಸವಾರರು ಪೋಲಿಸ್ ಇಲಾಖೆ ಅಳವಡಿಸಿದ್ದ ಬ್ಯಾರಿಕೇಡ್ ಗಳನ್ನು ಮುಲಾಜಿಲ್ಲದೇ ತೆಗೆದುಹಾಕಿ ಸಂಚರಿಸುತ್ತಿದ್ದ ಘಟನೆಯೂ ಜರುಗಿದೆ. ಪ್ರಮುಖ ಸ್ಥಳಗಳಲ್ಲಿ ಎಲೆಕ್ಟ್ರಿಕಲ್, ಕೊರಿಯರ್ ಶಾಪ್ ಗಳು ಪ್ರಾರಂಭಗೊಂಡಿವೆ.

ರಾಂ ಅಂಡ್ ಕೋ ವೃತ್ತ, ಬಾಪೂಜಿ ಆಸ್ಪತ್ರೆ ರಸ್ತೆ, ವಿದ್ಯಾರ್ಥಿ ಭವನ ರಸ್ತೆ, ಗಡಿಯಾರ ಕಂಬದ ಬಳಿ, ಮಂಡಿಪೇಟೆ ಸೇರಿದಂತೆ ಹಲವೆಡೆ ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಮಾತನಾಡುತ್ತಾ ನಿಂತಿರುವುದು ಸಾಮಾನ್ಯವಾಗಿತ್ತು.

ಮಾರುಕಟ್ಟೆಯ ಪ್ರಮುಖ ಭಾಗಗಳಲ್ಲಿಯೂ ಸಹ ಸಾಮಾಜಿಕ ಅಂತರ ಕಾಪಾಡದ ಜನತೆ ಎಲ್ಲೆಂದರಲ್ಲಿ ಸಂಚಾರ ಮಾಡುತ್ತಿದ್ದಾರೆ. ಪೆಟ್ರೋಲ್ ಬಂಕ್ ಗಳಲ್ಲಿ ಅಗತ್ಯ ಸೇವೆಗಳಿಗೆ ಹೊರತಾಗಿಯೂ ಇಂಧನ ಸೇವೆ ಮುಂದುವರೆದಿದೆ. ಅಗತ್ಯ ವಸ್ತುಗಳಲ್ಲದೇ ಕದ್ದುಮುಚ್ಚಿ ಎಲ್ಲಾ ಮಾದರಿಯ ವ್ಯಾಪಾರ ನಡೆಯುತ್ತಿದೆ. ಜಿಲ್ಲಾಡಳಿತದ ಕಟ್ಟುನಿಟ್ಟಿನ ಸೂಚನೆ ನಡುವೆಯೂ ವಾಹನಗಳ ಓಡಾಟ ಮಾತ್ರ ಎಗ್ಗಿಲ್ಲದೆ ಸಾಗಿದೆ.












Click it and Unblock the Notifications