ಅಸಮರ್ಪಕ ವಿದ್ಯುತ್ ಪೂರೈಕೆಗೆ ರೊಚ್ಚಿಗೆದ್ದ ಕೇಸರಿ ಕಲಿಗಳು: ಕೆಇಬಿ ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ
ದಾವಣಗೆರೆ, ಅಕ್ಟೋಬರ್ 16: ರಾಜ್ಯದಲ್ಲಿ ರೈತರು ಹಾಗೂ ಜನಸಾಮಾನ್ಯರಿಗೆ ಅಸಮರ್ಪಕ ವಿದ್ಯುತ್ ಪೂರೈಕೆ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರದ ದುರಾಡಳಿತದ ವಿರುದ್ಧ ದಾವಣಗೆರೆ ಜಿಲ್ಲಾ ಬಿಜೆಪಿ ಘಟಕವು ಪ್ರತಿಭಟನೆ ನಡೆಸಿದೆ.
ದಾವಣಗೆರೆ ಸಂಸದ ಡಾ.ಜಿ.ಎಂ ಸಿದ್ದೇಶ್ವರ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ, ನಗರದ ಅಂಬೇಡ್ಕರ್ ವೃತ್ತದ ಸಮೀಪದಲ್ಲಿನ ಕೆಇಬಿ ಕಚೇರಿಗೆ ಮುತ್ತಿಗೆ ಹಾಕಿ ಬಿಜೆಪಿ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.

ದಾವಣಗೆರೆಯಲ್ಲಿ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ, ಬೆಸ್ಕಾಂನ ಅಧೀಕ್ಷಕ ಅಭಿಯಂತರ ಕಚೇರಿ ಮುಂದೆ ನೂರಾರು ಕಾರ್ಯಕರ್ತರು, ಮುಖಂಡರು ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಪ್ರತಿಭಟಿಸಿ, ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಹಾಕಿದರು.
ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ ಮಾತನಾಡಿ, ಕರ್ನಾಟಕ ರಾಜ್ಯದಿಂದ ಸಂಗ್ರಹ ಆದ ಹಣವನ್ನು ಪಂಚ ರಾಜ್ಯಗಳ ಚುನಾವಣೆಗೆ ಪಂಡಿಂಗ್ ಮಾಡಲಾಗುತ್ತಿದೆ. ಇತ್ಯ ರಾಜ್ಯದ ಕಾವೇರಿ ನೀರನ್ನು ತಮಿಳುನಾಡು ರಾಜ್ಯಕ್ಕೆ ಬಿಡುವ ಮೂಲಕ ರಾಜ್ಯ ವಿರೋಧಿ ನೀತಿ ಅನುಸರಿಸುತ್ತಿದೆ. ಗ್ಯಾರೆಂಟಿ ಯೋಜನೆ 1.28ಕೋಟಿ ಮಹಿಳೆಯರಿಗೆ ಬರಬೇಕಾದ ಹಣ ಕೇವಲ 50 ಲಕ್ಷ ಜನರಿಗೆ ಮಾತ್ರ ನೀಡಲಾಗುತ್ತಿದೆ. ಅದೇ ರೀತಿ ಅನ್ನ ಭಾಗ ಯೋಜನೆಯಲ್ಲಿ ಕೂಡ ಅಕ್ಕಿ ಸರಿಯಾದ ರೀತಿಯಲ್ಲಿ ಕೊಡುತ್ತಿಲ್ಲ. ಎಲ್ಲಾ ಗ್ಯಾರೆಂಟಿ ಯೋಜನೆಗಳು ವಿಫಲವಾಗಿವೆ ಎಂದು ಆರೋಪಿಸಿದರು.
ಎಲ್ಲಾ ಹಣವನ್ನು ಲೂಟಿ ಮಾಡಲಾಗುತ್ತಿದೆ. ಎಲ್ಲಾ ಯೋಜನೆಗಳ ಹಣವನ್ನು ಲೂಟಿ ಮಾಡಲಾಗುತ್ತಿದೆ. ರಾಜ್ಯ ಸರ್ಕಾರದ ದಂಧೆಯ ಹಣ ಅಂಬಿಕಾಪತಿ ಮನೆಯಲ್ಲಿ ಸಿಕ್ಕಿದೆ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರಿಗೆ ನೈತಿಕತೆ ಇದ್ದರೆ, ತಕ್ಷಣವೇ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ರಾಜ್ಯದ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ಸಚಿವರು, ಶಾಸಕರಿಗೆ ಮಾತ್ರ 24 ಗಂಟೆ ಕರೆಂಟ್ ಸಿಗುತ್ತದೆ. ಕಾರಣ ಎಟಿಎಮ್ ಮಿಷನ್ ರೀತಿಯಲ್ಲಿ ಹಣ ವಸೂಲಿ ಮಾಡಬೇಕಲ್ಲ ಎಂದು ಆರೋಪಿಸಿದರು.
ರಾಜ್ಯದಲ್ಲಿರುವುದು ಒಬ್ಬ ಕಳ್ಳ, ಒಬ್ಬ ಮಳ್ಳ ಸರ್ಕಾರ, ಕಮೀಷನ್ ದಂಧೆ ಮಾಡುತ್ತಿದೆ. ರಾಜ್ಯದ ಜನರಿಗೆ ನಿರಂತರ ವಿದ್ಯುತ್ ಕೊಡದೇ ಕತ್ತಲೆ ಭಾಗ್ಯ ತಂದಿದೆ. ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಮೇಲೆ ಅಭಿವೃದ್ಧಿ ಶೂನ್ಯವಾಗಿದೆ. ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ರಾಜ್ಯದ ಲೂಟಿ ಹೊಡೆಯುತ್ತಿರುವ ಈ ಕಾಂಗ್ರೆಸ್ ಸರ್ಕಾರ ರಾಜ್ಯದ ಜನರಿಗೆ ಶಾಪ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹರಿಹರ ಶಾಸಕ ಬಿ.ಪಿ.ಹರೀಶ್ ಮಾತನಾಡಿ, ಸರ್ಕಾರ ಐದು ಗ್ಯಾರಂಟಿ ಯೋಜನೆಗಳನ್ನು ಮಾಡಿ ರಾಜ್ಯವನ್ನು ಕತ್ತಲೆ ಕೂಪಕ್ಕೆ ತಳ್ಳಿದೆ. ರೈತರಿಗೆ ಅನ್ಯಾಯವಾಗುತ್ತಿದ್ದರೂ ಸಹ ರಾಜ್ಯ ಸರ್ಕಾರ ಕಣ್ಮುಚ್ಚಿ ಕುಳಿತಿದೆ. ವಿದ್ಯುತ್ ಇಲ್ಲದೇ ರಾಜ್ಯದ ರೈತರು ಪರದಾಡುವ ಪರಿಸ್ಥಿತಿ ಎದುರಾಗಿದೆ. ಯಾವುದೇ ಗ್ಯಾರಂಟಿ ಸಮರ್ಪಕವಾಗಿ ರಾಜ್ಯದ ಮಹಿಳೆಯರಿಗೆ ತಲುಪಿಲ್ಲ. ಯಾವುದೇ ಅನ್ಯಾಯ ಮಾಡಿದ ಸರ್ಕಾರವನ್ನು ಕಿತ್ತೊಗೆಯುವ ತನಕ ವಿಶ್ರಮಿಸಬಾರದು. ನರೇಂದ್ರ ಮೋದಿ ಅವರು ಮತ್ತೆ ಪ್ರಧಾನ ಮಂತ್ರಿ ಮಾಡಿ, ಭಾರತವನ್ನು ವಿಶ್ವ ಗುರುವನ್ನಾಗಿ ಮಾಡುವತ್ತ ದೇಶದ ಜನರು ಕೈ ಜೋಡಿಸಲಿ ಎಂದು ಹೇಳಿದರು.

ಮಾಜಿ ಸಚಿವ ಎಸ್.ಎ ರವೀಂದ್ರನಾಥ್, ಹರಿಹರ ಬಿಜೆಪಿ ಶಾಸಕ ಬಿ. ಪಿ. ಹರೀಶ್, ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್, ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಶಿವಯೋಗಿಸ್ವಾಮಿ, ಮಾಜಿ ಶಾಸಕರಾದ ಎಸ್. ವಿ. ರಾಮಚಂದ್ರಪ್ಪ, ಪ್ರೊ. ಲಿಂಗಣ್ಣ, ಜಿಲ್ಲಾ ಬಿಜೆಪಿ ಅಧ್ಯಕ್ಷ ವೀರೇಶ್ ಹನಗವಾಡಿ, ಉಪಾಧ್ಯಕ್ಷ ಶ್ರೀನಿವಾಸ್ ದಾಸಕರಿಯಪ್ಪ, ಮಹಾನಗರ ಪಾಲಿಕೆ ಮಾಜಿ ಮೇಯರ್ ಗಳಾದ ಬಿ. ಜೆ. ಅಜಯಕುಮಾರ್, ಎಸ್. ಟಿ. ವೀರೇಶ್, ದೂಡಾ ಮಾಜಿ ಅಧ್ಯಕ್ಷ ಎ. ವೈ. ಪ್ರಕಾಶ್, ಲೋಕಿಕೆರೆ ನಾಗರಾಜ್, ಬಿ. ಎಂ. ಸತೀಶ್, ಮಾಯಕೊಂಡ ಬಿಜೆಪಿ ಯುವ ಮುಖಂಡ ಶ್ಯಾಮ್, ಕೊಂಡಜ್ಜಿ ಜಯಪ್ರಕಾಶ್, ಪಾಲಿಕೆ ಸದಸ್ಯ ಕೆ. ಎಂ. ವೀರೇಶ್ ಪೈಲ್ವಾನ್ ಸೇರಿದಂತೆ ಬಿಜೆಪಿ ಮುಖಂಡರು, ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.












Click it and Unblock the Notifications