ಬಿಜೆಪಿಯ ಕಳೆದ 8 ತಿಂಗಳ ಅಭಿವೃದ್ಧಿ ಕುರಿತ ಚರ್ಚೆಗೆ ಸಿದ್ಧ: ಗಡಿಗುಡಾಳ್ ಮಂಜುನಾಥ್ ಸವಾಲ್
ದಾವಣಗೆರೆ, ಅಕ್ಟೋಬರ್ 20: ದಾವಣಗೆರೆ ಮಹಾನಗರ ಪಾಲಿಕೆಯ ಇತಿಹಾಸದಲ್ಲೇ ಇಂಥ ಕೆಟ್ಟ ಆಡಳಿತ ನೋಡಿಲ್ಲ. ಕಳೆದ ಎಂಟು ತಿಂಗಳ ಅವಧಿಯಲ್ಲಿ ಯಾವೆಲ್ಲಾ ಅಭಿವೃದ್ಧಿ ಮಾಡಿದ್ದಾರೆ ಎಂಬ ಬಗ್ಗೆ ಬಿಜೆಪಿ ಹೇಳಲಿ. ಮೇಯರ್ ಯಾವ ಸಾಧನೆ ಮಾಡಿದ್ದಾರೆ ಎಂಬ ಬಗ್ಗೆ ಚರ್ಚೆಗೆ ನಾವು ಸಿದ್ಧರಿದ್ದೇವೆ ಎಂದು ಪಾಲಿಕೆ ವಿರೋಧ ಪಕ್ಷದ ನಾಯಕ ಗಡಿಗುಡಾಳ್ ಮಂಜುನಾಥ್ ಪಂಥಾಹ್ವಾನ ನೀಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಧಿಕಾರಿಗಳ ಬೇಜವಾಬ್ದಾರಿತನ ಹೇಳತೀರದ್ದು. ಮೇಯರ್ ಆಗಿ ಜಯಮ್ಮ ಗೋಪಿನಾಯ್ಕ್ ಎಂಟು ತಿಂಗಳಾಗುತ್ತಾ ಬಂದರೂ ಒಂದೇ ಒಂದು ಟೆಂಡರ್ ಕರೆದಿಲ್ಲ. ಆಡಳಿತ ಯಂತ್ರ ಸಂಪೂರ್ಣವಾಗಿ ಕುಸಿದಿರುವುದಕ್ಕೆ ಇದಕ್ಕಿಂತ ಸಾಕ್ಷಿ ಬೇಕಾ? ಕೇವಲ ಅವರು ಗೆದ್ದು ಬಂದಿರುವ ವಾರ್ಡ್ ಗಷ್ಟೇ ಮೇಯರ್ ಆಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದಾವಣಗೆರೆ ಧಾರಾಕಾರ ಮಳೆ; ಹಲವು ವರ್ಷಗಳ ನಂತರ ಕೋಡಿ ಬಿದ್ದ ಕೆರೆಗಳು ಇವೆ ನೋಡಿ
ಜನರ ಸಂಕಷ್ಟ ಆಲಿಸಲು, ಪರಿಹರಿಸಲು ಸಾಧ್ಯವಾಗದಿದ್ದರೆ ಅಧಿಕಾರ ಬಿಟ್ಟು ತೊಲಗಿ. ಪಾಲಿಕೆ ವ್ಯಾಪ್ತಿಯಲ್ಲಿ ಯುಜಿಡಿ ವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟು ಹೋಗಿದೆ. ಮಳೆ ಬರುತ್ತಿರುವುದರಿಂದ ನೀರೆಲ್ಲಾ ರಸ್ತೆ ಮೇಲೆ ನಿಂತಿರುತ್ತದೆ. ಜನರ ಓಡಾಟಕ್ಕೆ ತುಂಬಾನೇ ತೊಂದರೆ ಆಗಿದೆ. ಅಧಿಕಾರಿಗಳು ಹಾಗೂ ಮೇಯರ್ ಗಮನಕ್ಕೆ ತಂದಿದ್ದರೂ ಪ್ರಯೋಜನ ಮಾತ್ರ ಶೂನ್ಯ. ದಪ್ಪ ಚರ್ಮದ ಆಡಳಿತ ವರ್ಗ ಹಾಗೂ ಅಧಿಕಾರ ವರ್ಗ ತಲೆಕೆಡಿಸಿಕೊಳ್ಳುತ್ತಿಲ್ಲ. ಎಲ್ಲೆಂದರಲ್ಲಿ ಗುಂಡಿ ಅಗೆಯಲಾಗಿದೆ. ಕಾಮಗಾರಿ ಸರಿಯಾಗಿ ನಡೆಯುತ್ತಿಲ್ಲ. ಚಿಗಟೇರಿ ಆಸ್ಪತ್ರೆಗೆ ಹೋಗುವ ದಾರಿಯಲ್ಲಿ ಗುಂಡಿ ಅಗೆದಿದ್ದು, ವೇಗವಾಗಿ ಕಾಮಗಾರಿ ನಡೆಯುತ್ತಿಲ್ಲ ಎಂದು ಆರೋಪಿಸಿದರು.

ಒಂದೇ ವಾರ್ಡ್‌ಗೆ ಸೀಮಿತವಾದ ಮೇಯರ್
ಪಾಮೇನಹಳ್ಳಿಯಲ್ಲಿ ಒಳಚರಂಡಿ ಅವ್ಯವಸ್ಥೆಯಿಂದ ಆಗಿರುವ ಸಮಸ್ಯೆಗಳು ಒಂದೆರಡಲ್ಲ. ಅಧಿಕಾರಿಗಳಿಗೆ ಕರೆ ಮಾಡಿದರೆ ಸ್ವೀಕರಿಸುವುದಿಲ್ಲ. ಆಮೇಲೆ ಏನೇನೋ ಸಬೂಬು ಹೇಳುತ್ತಾರೆ. ಮೇಯರ್ ಅವರ ಗಮನಕ್ಕೆ ತಂದರೂ ಉಡಾಫೆ ಮಾತನಾಡುತ್ತಾರೆ. ಇವರಿಗೆ ಜನರ ಕಷ್ಟ ಕೇಳುವ ವ್ಯವಧಾನವೂ ಇಲ್ಲ. ಇನ್ನು ಪರಿಹರಿಸುವ ಮಾತು ಎಲ್ಲಿ ಎಂದು ಪ್ರಶ್ನಿಸಿದರು.
ಜನರು ಒತ್ತಾಯ ಕೇಳಿ ಬಂದ ಹಿನ್ನೆಲೆಯಲ್ಲಿ ಬೆಳಿಗ್ಗೆ 8 ಗಂಟೆಗೆ ನಾನು ಹೋಗಿದ್ದೆ. ಪಾಮೇನಹಳ್ಳಿ ನಾಗರಾಜ್ ಕೂಡ ಇದ್ದರು. ಅಧಿಕಾರಿಗಳು ಸ್ಥಳಕ್ಕೆ ಬರಲಿಲ್ಲ. ಮೇಯರ್ ಜಯಮ್ಮ ಗೋಪಿನಾಯ್ಕ್ ಅವರಿಗೆ ಕೇಳಿದರೆ ನನ್ನ ಪತಿ ವಾರ್ಡ್‌ಗೆ ಹೋಗಿದ್ದಾರೆ. ಅವರು ಬಂದ ಬಳಿಕ ಬರುತ್ತೇನೆ ಎಂದರು. ಅದೂ 10. 30ರ ಸುಮಾರಿಗೆ ಬಂದರು. ಇವರ ವಾರ್ಡ್‌ನಲ್ಲಿ ಮಾತ್ರ ಸಮಸ್ಯೆನಾ? ಪತಿ ಬರದಿದ್ದರೆ ಮೇಯರ್ ಜನರ ಸಂಕಷ್ಟ ಆಲಿಸಲು ಬರುವುದಿಲ್ಲವಾ ಎಂದು ಪ್ರಶ್ನೆ ಮಾಡಿದರು.
ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ ವಿವೇಚನೆ ಇಲ್ಲದ ವ್ಯಕ್ತಿ: ಸುಮಲತಾ ಕಿಡಿ

ಆಡಳಿತ ಸಂಪೂರ್ಣ ನಿಷ್ಕ್ರಿಯ
ಸಾಮಾನ್ಯ ಸಭೆ ನಡೆಸಿ ನಾಲ್ಕೈದು ತಿಂಗಳಾಗುತ್ತಾ ಬಂದಿದ್ದರೂ ಯಾವ ಕೆಲಸವೂ ಆಗುತ್ತಿಲ್ಲ. ಆಡಳಿತ ಸಂಪೂರ್ಣ ನಿಷ್ಕ್ರಿಯಗೊಂಡಿದೆ. ವಿರೋಧ ಪಕ್ಷದ ಸದಸ್ಯರು ಪ್ರತಿಭಟನೆ, ಮುತ್ತಿಗೆ ಹಾಕುವಂಥ ಹೋರಾಟ ನಡೆಸಿದಾಗ ಕಣ್ಣೊರೆಸುವಂತೆ ನಾಟಕ ಮಾಡುವ ಆಡಳಿತ ಪಕ್ಷದವರಿಗೆ ಅಭಿವೃದ್ಧಿ ಬಗ್ಗೆ ಚಿಂತನೆ ನಡೆಸುತ್ತಿಲ್ಲ. ಜನರ ಸಮಸ್ಯೆ, ಸಂಕಷ್ಟಗಳಿಗೆ ಸ್ಪಂದಿಸಿ ಅಭಿವೃದ್ಧಿ ಕೆಲಸ ಮಾಡಲಿ. ಇಲ್ಲದಿದ್ದರೆ ಅಧಿಕಾರ ಬಿಟ್ಟು ಹೋಗಲಿ ಎಂದು ಕಿಡಿಕಾರಿದರು.

ಅನುದಾನದಲ್ಲಿ ರಾಜಕೀಯ
15ನೇ ಹಣಕಾಸು ಯೋಜನೆಯಡಿ 29 ಕೋಟಿ ರೂ. ಅನುದಾನ ಕಳೆದ ಎಂಟು ತಿಂಗಳ ಹಿಂದೆ ಬಂದಿದೆ. ಇಲ್ಲಿಯ ತನಕ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡಿಲ್ಲ. 2 ತಿಂಗಳ ಹಿಂದೆ ನಡೆದ ಸಾಮಾನ್ಯ ಸಭೆಯಲ್ಲಿ 15ನೇ ಹಣಕಾಸಿನ ಯೋಜನೆ ಬಿಜೆಪಿ ವಾರ್ಡ್ ಗಳಿಗೆ ಹೆಚ್ಚಿನ ಹಣ ನೀಡಲಾಗಿದೆ. ಕಾಂಗ್ರೆಸ್ ಸದಸ್ಯರ ವಾರ್ಡ್‌ಗಳಿಗೆ ಅಲ್ಪ ಅನುದಾನ ನೀಡುವ ಮೂಲಕ ರಾಜಕೀಯ ಮಾಡುತ್ತಿದ್ದಾರೆ ಎಂದು ದೂರಿದರು.

ಕಾಂಗ್ರೆಸ್ ಸದಸ್ಯರಿಗೆ ಅನುದಾನ ಕೊಡುವಲ್ಲಿಯೂ ತಾರತಮ್ಯ
45 ವಾರ್ಡ್‌ಗಳಿಗೂ ಸಮಾನಾಗಿ ಅನುದಾನ ನೀಡುವ ಭರವಸೆ ಸುಳ್ಳಾಗಿದೆ. ಸಭೆಯ ನಡವಳಿ ನೀಡಿಲ್ಲ. 2022-23ನೇ ಸಾಲಿನ ಆಯವ್ಯಯದಲ್ಲಿ ಘೋಷಿಸಿರುವ ಒಂದು ಸಹ ಕಾರ್ಯರೂಪಕ್ಕೆ ಬಂದಿಲ್ಲ. ಈ ರೀತಿ ಮಾಡುವುದಾದರೆ ಬಜೆಟ್ ಯಾಕೆ ಬೇಕು. ಎಸ್. ಟಿ. ವೀರೇಶ್ ಅವರು ಮೇಯರ್ ಆಗಿದ್ದಾಗ ಘೋಷಿಸಿದ್ದ ಕಾರ್ಯಕ್ರಮಗಳು ಸಮರ್ಪಕವಾಗಿ ಅನುಷ್ಠಾನಗೊಳಿಸಿಲ್ಲ ಎಂದು ದೂರಿದರು.
ಕಾಂಗ್ರೆಸ್ ಸದಸ್ಯರಿಗೆ ಅನುದಾನ ಕೊಡುವಲ್ಲಿಯೂ ತಾರತಮ್ಯ ಮಾಡಿದ್ದ ಬಿಜೆಪಿ, ಯಾವುದೇ ಅಭಿವೃದ್ಧಿ ಕಾರ್ಯ ಮಾಡದೇ ಸಂಪೂರ್ಣವಾಗಿ ವಿಫಲವಾಗಿದೆ. ಪಾಲಿಕೆ ವ್ಯಾಪ್ತಿಯಲ್ಲಿ ಕೆಲವೆಡೆ ಎಂಟು ದಿನಗಳಿಗೆ ಒಮ್ಮೆನೀರು ಬಿಡುತ್ತಿದ್ದಾರೆ. ಈ ವರ್ಷ ಅತಿ ಹೆಚ್ಚು ಮಳೆ ಬಂದಿದೆ. ಎಲ್ಲೆಡೆ ಪ್ರವಾಹ ಹರಿದಿದೆ. ಕೆರೆ ಕಟ್ಟೆಗಳು ತುಂಬಿ ಹರಿಯುತ್ತಿವೆ. ಆದರೂ ಕೆಲ ಬಡಾವಣೆಗಳಲ್ಲಿ ಸರಿಯಾಗಿ ನೀರು ಪೂರೈಕೆ ಮಾಡಲು ಆಗಲ್ಲ ಎಂದರೆ ಎಂಥ ಕೆಟ್ಟ ಆಡಳಿತ ನಡೆಸುತ್ತಿದ್ದಾರೆ ಎಂಬುದು ಗೊತ್ತಾಗುತ್ತದೆ ಎಂದರು.

ಬಾಯಿ ಮಾತಿನ ಅಭಿವೃದ್ಧಿ ಬೇಡ
ನಮಗೆ ಬೇಕಿರುವುದು ಅಭಿವೃದ್ಧಿ. ಮಾತೆತ್ತಿದರೆ ರಾಜಕೀಯ ಎನ್ನುವ ಬಿಜೆಪಿ ಪಾಲಿಕೆ ಸದಸ್ಯರು ಕಳೆದ ಎಂಟು ತಿಂಗಳಲ್ಲಿ ಯಾವ ಅಭಿವೃದ್ಧಿ ಕಾರ್ಯ ಮಾಡಿದ್ದಾರೆ? ಹೊಸ ಯೋಜನೆ ಯಾವುದನ್ನು ಘೋಷಣೆ ಮಾಡಿದ್ದಾರೆ ಎಂದು ಹೇಳಲಿ. ಕೇವಲ ಬಾಯಿ ಮಾತಿನಲ್ಲಿ ಹೇಳುವುದು ಬೇಡ. ಅಧಿಕಾರಿಗಳು ಯಾರ ಮಾತು ಕೇಳುತ್ತಿಲ್ಲ. ಅವರು ಆಡಿದ್ದೇ ಆಟ ಎಂಬಂತಾಗಿದೆ. ಮೇಯರ್ ಸೇರಿದಂತೆ ಯಾರ ಮಾತನ್ನು ಕೇಳುತ್ತಿಲ್ಲ.ಇಂಥ ದುರಾಡಳಿತ, ನಿರ್ಲಕ್ಷ್ಯ, ಆಡಳಿತ ಕುಸಿತ ಆಗಿರುವುದು ನೋಡಿಯೇ ಇಲ್ಲ ಎಂದು ಹೇಳಿದರು.
ಪಾಲಿಕೆ ಸದಸ್ಯ ಅಬ್ದುಲ್ ಲತೀಫ್ ಮಾತನಾಡಿ, ಕಾಂಗ್ರೆಸ್ ಗೆದ್ದಿರುವ ವಾರ್ಡ್‌ಗಳಿಗೆ ಅನುದಾನ ನೀಡದ ಬಿಜೆಪಿ ಆಡಳಿತ ವರ್ಗದವರಿಗೆ ಬಿಜೆಪಿಗೆ ಮತ ಹಾಕಿರುವ ಮತದಾರರು ಕಣ್ಣಿಗೆ ಕಾಣುವುದಿಲ್ಲವೇ? ಜನರ ಹಿತ ಮುಖ್ಯ. ಅನುದಾನ ನೀಡಿಕೆ ವಿಚಾರದಲ್ಲಿ ರಾಜಕೀಯ ಸರಿಯಲ್ಲ ಎಂದು ಕಿಡಿಕಾರಿದರು. ಗೋಷ್ಠಿಯಲ್ಲಿ ಪಾಲಿಕೆ ಸದಸ್ಯರಾದ ಕೆ. ಚಮನ್ ಸಾಬ್, ಅಬ್ದುಲ್ ಲತೀಫ್, ವಿನಾಯಕ್ ಪೈಲ್ವಾನ್, ಕಾಂಗ್ರೆಸ್ ಮುಖಂಡರಾದ ಹುಲ್ಲುಮನಿ ಗಣೇಶ್, ಇಟ್ಟುಗುಡಿ ಮಂಜುನಾಥ್, ಜಗದೀಶ್ ಮತ್ತಿತರರು ಹಾಜರಿದ್ದರು.