ಚಂದ್ರು ಸಾವಿನ ಹಿಂದೆ ಕಾಣದ ಕೈಗಳ ಕೈವಾಡ: ರೇಣುಕಾಚಾರ್ಯ ಆರೋಪ
ದಾವಣಗೆರೆ, ನವೆಂಬರ್ 3: ಚಂದ್ರಶೇಖರ್ ನನ್ನ ಸಹೋದರನ ಮಗನಲ್ಲ ನನ್ನ ಮಗ. ಅವನದ್ದು ಸಹಜ ಸಾವಲ್ಲ, ಅಪಘಾತ ಅಲ್ಲ, ಸಾವಿನ ಹಿಂದೆ ಕಾಣದ ಕೈವಾಡಗಳು ಇವೆ. ಈ ಬಗ್ಗೆ ಪೊಲೀಸರು ಸೂಕ್ತ ತನಿಖೆ ನಡೆಸಬೇಕು. ಎಲ್ಲಾ ರೀತಿಯಲ್ಲಿಯೂ ಸಹಕಾರ ನೀಡುತ್ತೇನೆ ಎಂದು ಶಾಸಕ ಎಂ. ಪಿ. ರೇಣುಕಾಚಾರ್ಯ ಹೇಳಿದ್ದಾರೆ.
ಹೊನ್ನಾಳಿ ಪಟ್ಟಣದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ನಾನು ಯಾರ ಮೇಲೆ ಆರೋಪ ಮಾಡಲು ಹೋಗುವುದಿಲ್ಲ. ಹಣ ಬೇಕಾದರೆ ಎಷ್ಟು ಬೇಕಾದರೂ ಕೊಡುತ್ತೇವೆ ಎಂದಿದ್ದೆ. ರಾಜಕಾರಣಕ್ಕಾಗಿ ನನಗೆ ಅನುಕಂಪ ಬೇಡ. ನನ್ನ ಮಗ ನನಗೆ ಬೇಕು. ನಾನಾಗಲೀ, ಕುಟುಂಬದವರಾಗಲೀ ಕೇಸ್ ಕೊಡುವುದಿರಲಿ. ಪೊಲೀಸರೇ ಬೇಕಾದರೆ ಸುಮೋಟೋ ಪ್ರಕರಣ ದಾಖಲಿಸಲಿ. ಆ ದೇವರು ತಪ್ಪಿತಸ್ಥರಿಗೆ ಶಿಕ್ಷೆ ಕೊಡಬೇಕು ಎಂದು ಆಗ್ರಹಿಸಿದರು.
ನನ್ನ ಮಗ ಚಂದ್ರಶೇಖರ್ ಕೆಟ್ಟ ಶಬ್ಧ ಬಳಕೆ ಮಾಡಿದವನಲ್ಲ. ಕಾರಿನ ಸೀಟಿನ ಹಿಂದೆ ಮಲಗಿದ್ದಾನೆ. ಅದನ್ನು ನೋಡಿದಾಕ್ಷಣ ದುಃಖ ತಡೆದುಕೊಳ್ಳಲಾಗಲಿಲ್ಲ. ನನಗೆ ಯಾವುದೇ ಸ್ಥಾನಮಾನ ಬೇಕಿಲ್ಲ. ನನ್ನ ಮಗು ಬೇಕು ಅಷ್ಟೇ. ನಾನು ಸಂಜೆ 3.30ರಿಂದ 4 ಗಂಟೆಯವರೆಗೆ ದೇವರಿಗೆ ಪೂಜೆ ಸಲ್ಲಿಸಿದ್ದೆ. ಸುಡುವುದಾದರೆ ಆತನ ಜೊತೆ ನನ್ನನ್ನು ಸುಟ್ಟುಬಿಡು ದೇವರೇ ಎಂದು ಪ್ರಾರ್ಥಿಸಿದ್ದೆ. ವಿಧಿಯಾಟವೇ ಬೇರೆಯಾಗಿತ್ತು. ಆತನಿಲ್ಲ ಎಂಬುದನ್ನು ಊಹಿಸಿಕೊಳ್ಳಲು ಆಗುತ್ತಿಲ್ಲ. ಜೀವಂತವಾಗಿ ನನ್ನ ಮಗ ಬರಬೇಕು. ಅಧಿಕಾರವೂ ನನಗೆ ಬೇಡ ಎಂದರು.

ಇನ್ನು ಬೆಳೆಯುತ್ತಿದ್ದ ಮಗು ಅದು. ನಾಲೆಯೊಳಗಿನ ಕಾರಿನ ಸೀಟಿನ ಹಿಂದೆ ಹೋಗಲು ಹೇಗೆ ಸಾಧ್ಯ?. ಯಾರೋ ಆತನನ್ನು ಮಲಗಿಸಿದ್ದಾರೆ. ಕೇಸರಿ ಶಾಲು ಧರಿಸಿದ್ದ. ಕಪ್ಪು ಶರ್ಟ್ ಹಾಗೂ ಪ್ಯಾಂಟ್ ಧರಿಸಿದ್ದ. ನನಗೆ ಬೆದರಿಕೆ ಕರೆಗಳು ಬಂದಾಗ ಹೆದರಲಿಲ್ಲ. ಸಹಜ ಸಾವೋ, ಅಸಹಜ ಸಾವೋ ಎಂಬುದನ್ನು ಮಾಧ್ಯಮದವರೇ ಗಮನಿಸಲಿ. ಸೀಟ್ ನಲ್ಲಿ ಇರಬೇಕಾದವನು ಹಿಂದೆ ಹೇಗೆ ಹೋಗಿದ್ದ. ಪೊಲೀಸರು ತನಿಖೆ ಮಾಡಿಸಲಿ. ಎಲ್ಲಾ ರೀತಿಯಲ್ಲಿ ಸಹಕಾರ ನೀಡುತ್ತೇವೆ ಎಂದು ತಿಳಿಸಿದರು.
ಮನೆ ಮುಂದೆ ಜನಸಾಗರ; ಇನ್ನು ತುಂಗಾ ಮೇಲ್ದಂಡೆ ನಾಲೆಯ ಸೇತುವೆಯಿಂದ ಮನೆಗೆ ಆ್ಯಂಬುಲೆನ್ಸ್ ಮೂಲಕ ಚಂದ್ರಶೇಖರ್ ಪಾರ್ಥೀವ ಶರೀರವನ್ನು ತರಲಾಯಿತು. ಈ ವೇಳೆ ರೇಣುಕಾಚಾರ್ಯರ ಮನೆ ಮುಂದೆ ಸಾವಿರಾರು ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು. ಮನೆ ಬಳಿ ಆ್ಯಂಬುಲೆನ್ಸ್ ಬರುತ್ತಿದ್ದಂತೆ ಚಂದ್ರು ತಂದೆ ರಮೇಶ್, ತಾಯಿ, ಕುಟುಂಬಸ್ಥರು, ರೇಣುಕಾಚಾರ್ಯರ ಪತ್ನಿ, ಪುತ್ರ, ಪುತ್ರಿ ಸೇರಿದಂತೆ ಎಲ್ಲರ ಕಣ್ಣಾಲಿಗಳು ತೇವವಾದವು.
ರೇಣುಕಾಚಾರ್ಯರನ್ನು ಸಂತೈಸಲು ನೂರಾರು ಸಂಖ್ಯೆಯಲ್ಲಿ ಹಳ್ಳಿ ಹಳ್ಳಿಗಳಿಂದಲೂ ಜನರು ಬಂದಿದ್ದರು. ಅವರಿಗೆ ಧೈರ್ಯ ತುಂಬುವ ಪ್ರಯತ್ನ ಮಾಡಿದರು. ಪ್ರತಿಯೊಬ್ಬರ ಮೊಗದಲ್ಲಿಯೂ ನೋವು ಮಡುಗಟ್ಟಿತ್ತು.
ಅಂತ್ಯಕ್ರಿಯೆ; ಶಾಸಕ ರೇಣುಕಾಚಾರ್ಯರ ಸಹೋದರನ ಪುತ್ರ ಚಂದ್ರಶೇಖರ್ ಅಂತ್ಯಕ್ರಿಯೆ ನವೆಂಬರ್ 4ರಂದು ನೆರವೇರಲಿದೆ. ಮಧ್ಯಾಹ್ನ 3 ಗಂಟೆಗೆ ಜರುಗಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.











Click it and Unblock the Notifications