ಬಿಜೆಪಿ 600 ಆಶ್ವಾಸನಗಳಲ್ಲಿ ಶೇ.9 ಮಾತ್ರ ಈಡೇರಿವೆ: ಅವರದು ಜನಸಂಕಷ್ಟ ಯಾತ್ರೆ- ಧ್ರುವನಾರಾಯಣ
ದಾವಣಗೆರೆ, ಅಕ್ಟೋಬರ್, 12: ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಯಾವ ಪುರುಷಾರ್ಥಕ್ಕೆ ಜನಸಂಕಲ್ಪ ಯಾತ್ರೆ ನಡೆಸುತ್ತಿದ್ದಾರೆ ಎಂಬುದು ಗೊತ್ತಾಗುತ್ತಿಲ್ಲ. ಅವರದ್ದು 'ಜನರ ಸಂಕಷ್ಟ ಯಾತ್ರೆ' ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ ದಾವಣಗೆರೆಯಲ್ಲಿ ಟೀಕಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, "ಚುನಾವಣೆಗೆ ಮುನ್ನ ಬಿಜೆಪಿಯು ಪ್ರಣಾಳಿಕೆಯಲ್ಲಿ ನೀಡಿದ್ದ 600 ಆಶ್ವಾಸನೆಗಳ ಪೈಕಿ ಈಡೇರಿಸಿರುವುದು ಶೇಕಡಾ 9ರಷ್ಟು ಮಾತ್ರ. ಜನರು ಸಂಕಷ್ಟದಲ್ಲಿದ್ದಾರೆ, ಇಂತಹ ಸಮಯದಲ್ಲಿ ಯಾತ್ರೆ ನಡೆಸುತ್ತಿರುವುದು ಯಾಕೆ? ಕೊಳ್ಳೆ ಹೊಡದ, ಭ್ರಷ್ಟಾಚಾರದ ಹಣದಿಂದ ಯಾತ್ರೆ ನಡೆಸಲಾಗುತ್ತಿದೆ," ಎಂದು ಆರೋಪಿಸಿದರು.
ಮಾಜಿ ಸಿಎಂ ಯಡಿಯೂರಪ್ಪ ಅವರು, ಮಾಜಿ ಸಿಎಂ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ ಕಾಲ ಕೆಳಗೆ ಕೂರಲು ನಾಲಾಯಕ್ ಹಾಗೂ "ರಾಹುಲ್ ಗಾಂಧಿ ಎಳಸು'' ಎಂಬ ಹೇಳಿಕೆ ನೀಡಿರುವುದು ಸರಿಯಲ್ಲ. ಸಿದ್ದರಾಮಯ್ಯ ಅವರ ಬಗ್ಗೆ ಏಕವಚನದಲ್ಲಿ ಮಾತನಾಡುವುದು ಯಡಿಯೂರಪ್ಪ ಘನತೆಗೆ ಶೋಭೆ ತರುವುದಿಲ್ಲ. ಇಂತಹ ಹೇಳಿಕೆಯಿಂದ ಅಪ್ಪಟ ಕನ್ನಡಿಗ ಸಿದ್ದರಾಮಯ್ಯಗೆ ಅಪಮಾನ ಮಾಡಿದ್ದಾರೆ. 40 ವರ್ಷದಿಂದ ಯಾವುದೇ ಕಪ್ಪು ಚುಕ್ಕೆ ಇಲ್ಲದ ರಾಜಕಾರಣಿ ಎಂದರೆ ಸಿದ್ದರಾಮಯ್ಯ. ಸಣ್ಣ ಮಟ್ಟದ ಹೇಳಿಕೆಯನ್ನು ಯಡಿಯೂರಪ್ಪ ನೀಡಬಾರದಿತ್ತು. ಹೇಳಿಕೆ ಹಿಂಪಡೆದು ಯಡಿಯೂರಪ್ಪ ರಾಜ್ಯದ ಜನರ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.

ಜನರ ಕಷ್ಟಗಳಿಗೆ ರಾಹುಲ್ ಸ್ಪಂದಿಸುತ್ತಾರೆ
ರಾಹುಲ್ ಗಾಂಧಿ ದೇಶದ ಯುವನಾಯಕರಾಗಿದ್ದು, ಅವರು ಸಂಸತ್ ಸದಸ್ಯರಾಗಿ ಕೆಲಸ ಮಾಡುತ್ತಿದ್ದಾರೆ. ಎಲ್ಲೆಡೆ ಓಡಾಡಿ ಜನರ ಕಷ್ಟಗಳನ್ನು ಆಲಿಸುತ್ತಿದ್ದಾರೆ. ಈ ಮೂಲಕ ಜನರ ವಿಶ್ವಾಸ ಗಳಿಸುತ್ತಿದ್ದಾರೆ. ಆದರೆ ವಿನಾಕಾರಣ ಅವರ ವಿರುದ್ಧ ಆರೋಪ ಮಾಡಲಾಗುತ್ತಿದೆ. ರಾಹುಲ್ ಗಾಂಧಿ ಬಗ್ಗೆ ಕೇವಲವಾಗಿ ಮಾತನಾಡುವುದು ಸರಿಯಲ್ಲ ಎಂದು ಧ್ರುವನಾರಾಯಣ್ ಬಿಜೆಪಿ ನಾಯಕರಿಗೆ ಎಚ್ಚರಿಕೆ ನೀಡಿದ್ದಾರೆ.

ದಲಿತರ ಬಗ್ಗೆ ಬಿಜೆಪಿಗರಿಗೆ ಕಾಳಜಿ ಇಲ್ಲ
ದಲಿತರ ಬಗ್ಗೆ ಬಿಜೆಪಿಗರಿಗೆ ಕಾಳಜಿ ಇದ್ದರೆ ಮೂರು ಲಕ್ಷ ಎಸ್‌ಸಿ, ಎಸ್‌ಟಿ ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ ನೀಡಲಿ. ಜನಸಂಖ್ಯೆಗೆ ಅನುಗುಣವಾಗಿ ನೀಡುತ್ತಿದ್ದ ಅನುದಾನ ಕಡಿಮೆ ಮಾಡಿದರೆ ದಲಿತರ ಅಭಿವೃದ್ಧಿ ಆಗುತ್ತದೆಯಾ? ಭಾರತ ಜಾತ್ಯತೀತ ರಾಷ್ಟ್ರವಾಗಿದೆ. "ಅನ್ಯಧರ್ಮೀಯರ ಮನೆಯಲ್ಲಿ ಚಹಾ ಮಾತ್ರ ಸೇವನೆ ಮಾಡಿದ್ದಾರೆ. ಊಟ ಸೇವಿಸಿಲ್ಲ, ಇದು ಬಿಜೆಪಿಗರ ಮನಃಸ್ಥಿತಿ ಏನೆಂಬುದನ್ನು ತೋರಿಸುತ್ತದೆ. ಕೇವಲ ಮತ ಬ್ಯಾಂಕ್‌ಗಾಗಿ ನಾಟಕ ಆಡುವುದನ್ನು ಬಿಡಿ. ಕಾಂಗ್ರೆಸ್ ಮನಸುಗಳ ಜೋಡಣೆಗೆ ಯಾತ್ರೆ ನಡೆಸುತ್ತಿದೆ. ನೀವು ಮನಸುಗಳನ್ನು ಒಡೆಯಬೇಡಿ," ಎಂದು ಬಿಜೆಪಿ ಸರ್ಕಾದ ವಿರುದ್ದ ಹರಿಹಾಯ್ದಿದ್ದಾರೆ.

ಕಾಂಗ್ರೆಸ್ ಮೀಸಲಾತಿ ಪರವಾಗಿರುವ ಪಕ್ಷ
ಎಸ್‌ಸಿ, ಎಸ್‌ಟಿಗೆ ಮೀಸಲಾತಿ ಹೆಚ್ಚಳ ಮಾಡಲು ನ್ಯಾ. ನಾಗಮೋಹನ್ ದಾಸ್ ವರದಿಯನ್ನು ಜಾರಿಗೊಳಿಸುವುದಾಗಿ ಹೇಳಿದೆ. ಯಾವ ರೀತಿ ಜಾರಿಗೊಳಿಸುತ್ತದೆ ಎಂಬ ಸ್ಪಷ್ಟನೆಯನ್ನು ರಾಜ್ಯ ಸರ್ಕಾರ ನೀಡಬೇಕು. ಕಾಂಗ್ರೆಸ್ ಪಕ್ಷ ಮೀಸಲಾತಿ ವಿರೋಧಿ ಅಲ್ಲ. ಮೀಸಲಾತಿ ಪರವಾಗಿರುವ ಪಕ್ಷ ಆಗಿದೆ. ಹಿಂದುಳಿದ ವರ್ಗ, ನಾಯಕ, ಲಂಬಾಣಿ, ಬೋವಿ ಸಮಾಜ ಸೇರಿದಂತೆ ಹಲವು ಸಮಾಜಗಳಿಗೆ ಹಾವನೂರು ವರದಿ ಜಾರಿಗೊಳಿಸಿ ಮೀಸಲಾತಿ ನೀಡಿದೆ ಎಂದು ತಿಳಿಸಿದರು.

ಅ.15ರಂದು ರಾಹುಲ್ ನೇತೃತ್ವದಲ್ಲಿ ಸಭೆ
ಅಕ್ಟೋಬರ್ 15ರಂದು ಬಳ್ಳಾರಿಯಲ್ಲಿ ರಾಹುಲ್ ಗಾಂಧಿ ಉಪಸ್ಥಿತಿಯಲ್ಲಿ ಬೃಹತ್ ಬಹಿರಂಗ ಸಭೆ ನಡೆಯಲಿದೆ. 22 ದಿನ ರಾಜ್ಯದಲ್ಲಿ ಯಾತ್ರೆ ನಡೆದರೂ ಎಲ್ಲೂ ಬಹಿರಂಗ ಸಭೆ ಇರಲಿಲ್ಲ. ಬಳ್ಳಾರಿಯಲ್ಲಿ ನಡೆಯುವ ಸಭೆಯಲ್ಲಿ ಎಲ್ಲರೂ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.
ಸಿದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್. ಬಿ. ಮಂಜಪ್ಪ, ಪ್ರಧಾನ ಕಾರ್ಯದರ್ಶಿಗಳಾದ ಎಸ್. ಮಲ್ಲಿಕಾರ್ಜುನ್, ದಿನೇಶ್ ಕೆ. ಶೆಟ್ಟಿ, ಪರಶುರಾಮ್, ಕೆ. ಜಿ. ಶಿವಕುಮಾರ್, ಹಾಲೇಶ್, ಹರೀಶ್ ಬಸಾಪುರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.












Click it and Unblock the Notifications