Bhadra Dam: ಭದ್ರಾ ಜಲಾಶಯದಿಂದ ನೀರು, ರೈತರಿಗೆ ಪ್ರಮುಖ ಮಾಹಿತಿ
ದಾವಣಗೆರೆ, ಮಾರ್ಚ್ 02: ಶಿವಮೊಗ್ಗ ಮತ್ತು ದಾವಣಗೆರೆ ಜಿಲ್ಲೆಯ ಜನರ ಜೀವನಾಡಿ ಭದ್ರಾ ಜಲಾಶಯ. ಕೃಷಿ ಮತ್ತು ಉತ್ತರ ಕರ್ನಾಟಕ ಭಾಗಕ್ಕೆ ಕುಡಿಯುವ ನೀರು ಪೂರೈಕೆಯಲ್ಲಿ ಈ ಡ್ಯಾಂ ನೀರು ಪ್ರಮುಖ ಪಾತ್ರ ವಹಿಸುತ್ತದೆ. ಕಳೆದ ವರ್ಷ ಒಂದು ಬೆಳೆಗೆ ಮಾತ್ರ ನೀರು ಸಿಕ್ಕಿತ್ತು. ಆದರೆ ಮುಂಗಾರು ಮಳೆ ಉತ್ತಮವಾಗಿ ಸುರಿದ ಕಾರಣ ಈ ಬಾರಿ, ಎರಡೂ ಬೆಳೆಗೆ ನೀರು ಸಿಗುತ್ತದೆ ಎಂದು ರೈತರು ವಿಶ್ವಾಸದಲ್ಲಿದ್ದಾರೆ. ಆದರೆ ಕಾಲುವೆಗೆ ಹರಿಸಿದ ನೀರು ಕೊನೆಯ ತನಕ ತಲುಪುವುದಿಲ್ಲ ಎಂಬುದು ಆರೋಪವಾಗಿದೆ.
ದಾವಣಗೆರೆ ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ ಜಿ. ಎಂ. ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರೊಂದಿಗೆ ಸಭೆಯನ್ನು ನಡೆಸಿದರು. "ಭದ್ರಾ ಜಲಾಶಯದ ಕಾಲುವೆ ಮೂಲಕ ಬಿಡುವ ನೀರು ಕೊನೆ ಭಾಗದ ಅಚ್ಚುಕಟ್ಟುದಾರರಿಗೂ ತಲುಪಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ" ಎಂದು ಭರವಸೆಯನ್ನು ನೀಡಿದರು.

ಭದ್ರಾ ಅಚ್ಚುಕಟ್ಟು ಪ್ರದೇಶದ ರೈತ ಮುಖಂಡರು, ಅಪರ ಜಿಲ್ಲಾಧಿಕಾರಿ ಪಿ. ಎನ್. ಲೋಕೇಶ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಮಂಜುನಾಥ, ಜಿಲ್ಲಾ ಯೋಜನಾ ನಿರ್ದೇಶಕರಾದ ಮಹಾಂತೇಶ್ ಮುಂತಾದವರು ಸಭೆಯಲ್ಲಿ ಉಪಸ್ಥಿತರಿದ್ದರು. ಭದ್ರಾ ಡ್ಯಾಂನಿಂದ ನೀರು ಬಿಡುಗಡೆ, ಅದು ಕೊನೆಯ ತನಕ ತಲುಪುವ ಕುರಿತು ಸಭೆಯಲ್ಲಿ ಚರ್ಚೆಗಳು ನಡೆದವು.
ನೀರಿನ ಸಮಸ್ಯೆ ಬಗೆಹರಿಸುವ ಭರವಸೆ: ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ ಜಿ. ಎಂ., "ಭದ್ರಾ ಜಲಾಶಯದಿಂದ ಅಚ್ಚುಕಟ್ಟುದಾರರಿಗೆ ನೀರು ಹರಿಸಿ ಒಂದೆರಡು ದಿನಗಳಲ್ಲಿ ನಿಮ್ಮ ಸಮಸ್ಯೆಯನ್ನು ಬಗೆಹರಿಸುತ್ತೇನೆ. ಕಾಲುವೆಗಳಿಗೆ ಅನಧಿಕೃತವಾಗಿ ಪಂಪ್ ಅಳವಡಿಸಿ ನೀರೆತ್ತಲಾಗುತ್ತಿದೆ. ಇದರಿಂದ ಕೊನೆ ಭಾಗದ ರೈತರಿಗೆ ನೀರು ಸಿಗುತ್ತಿಲ್ಲ. ಅನಧಿಕೃತ ಪಂಪ್‌ಗಳನ್ನು ತೆರವು ಮಾಡಿ ವಿದ್ಯುತ್ ಸಂಪರ್ಕವನ್ನು ಕಡಿತ ಮಾಡಲಾಗುತ್ತದೆ" ಎಂದರು.
"ಬೇಸಿಗೆಯಾಗಿರುವುದರಿಂದ ಗೇಟ್‌ಗಳಲ್ಲಿ ನೀರಿನ ಸೋರಿಕೆ ಮತ್ತು ಕಾಲುವೆ ದುರಸ್ಥಿಗೆ ಅಗತ್ಯ ಅನುದಾನ ಬಿಡುಗಡೆಗೆ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗುತ್ತದೆ. ಕಾಲುವೆಗಳ ನೀರು ನಿರ್ವಹಣೆಗೆ ಸಿಬ್ಬಂದಿಗಳ ಕೊರತೆ ಇದ್ದು ಈ ಸಮಸ್ಯೆಯನ್ನು ಬಗೆಹರಿಸಲು ಅಧೀಕ್ಷಕ ಇಂಜಿನಿಯರ್‌ಗೆ ಸೂಚಿಸಲಾಗುತ್ತದೆ" ಎಂದು ತಿಳಿಸಿದರು.
ಸಭೆಯಲ್ಲಿ ಮಾತನಾಡಿದ ಹರಿಹರ ಕ್ಷೇತ್ರದ ಶಾಸಕ ಬಿ. ಪಿ. ಹರೀಶ್, "ಜಲಾಶಯದ ದುರಸ್ಥಿ ಮಾಡಿಸಿ, ಭದ್ರಾ ಇಂಜಿನಿಯರ್‌ಗಳು ವೈಜ್ಞಾನಿಕ ತಂತ್ರಜ್ಞಾನ ಬಳಸಿ ನೀರು ಪೋಲಾಗದಂತೆ ಕ್ರಮ ತೆಗೆದುಕೊಳ್ಳಬೇಕು. ಭದ್ರಾ ನಾಲೆ ಅಚ್ಚುಕಟ್ಟು ಪ್ರದೇಶದ ಬಹುತೇಕ ಭಾಗದಲ್ಲಿ ನೀರಾವರಿ ಕಟ್ಟಡ ಹಾಗೂ ನಾಲೆಯ ಗೇಟ್‍ಗಳು ಹಾಳಾಗಿವೆ. ಆದ್ದರಿಂದ ನೀರು ಹೆಚ್ಚಿನ ಪ್ರಮಾಣದಲ್ಲಿ ಪೋಲಾಗುತ್ತಿದೆ" ಎಂದರು.
"ಭದ್ರಾ ಜಲಾಶಯದಿಂದ ನೀರು ಹರಿಸಿ 50 ದಿನ ಕಳೆದಿದೆ, ಇನ್ನೂ 70 ದಿನ ಮಾತ್ರ ಬಾಕಿ ಉಳಿದಿದೆ. ಕೊನೆ ಭಾಗದ ಅಚ್ಚುಕಟ್ಟು ಪ್ರದೇಶಗಳಾದ ಮಲೆಬೆನ್ನೂರು, ಬಸವಪಟ್ಟಣದ ರೈತರ ಜಮೀನುಗಳಿಗೆ ನೀರು ಇನ್ನೂ ತಲುಪಿಲ್ಲ. ಭದ್ರಾ ಜಲಾಶಯದ ನೀರು ಜಿಲ್ಲೆಯ ಜೀವನಾಡಿಯಾಗಿದ್ದು, ಈ ನೀರು ನಂಬಿ ಲಕ್ಷಾಂತರ ಎಕರೆ ಭೂಮಿಯಲ್ಲಿ ರೈತರು ಬೆಳೆ ಬೆಳೆಯುತ್ತಿದ್ದಾರೆ" ಎಂದು ಸಭೆಯ ಗಮನ ಸೆಳೆದರು.
ತಿಂಗಳು ಸಮೀಪವಾದರೂ ಭದ್ರಾ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಬರುತ್ತಿಲ್ಲ. ಭದ್ರಾ ಜಲಾಶಯದ ನೀರನ್ನು ನಂಬಿ ಭತ್ತ ನಾಟಿ ಮಾಡಿರುವ ಲಕ್ಷಾಂತರ ರೈತರು ನೀರಿಗಾಗಿ ಕಾದು ಕುಳಿತಿದ್ದಾರೆ. ಮಲೆಬೆನ್ನೂರಿನ ಕೊನೆ ಭಾಗದ ರೈತರು ಸೇರಿದಂತೆ ಹತ್ತಾರು ಹಳ್ಳಿಗಳು ನೀರಿಗಾಗಿ ಕಾಯುತ್ತಿವೆ. ತಿಂಗಳು ಸಮೀಪವಾದರೂ ಈ ಪ್ರದೇಶಕ್ಕೆ ನೀರು ಬರುತ್ತಿಲ್ಲ ಎಂದು ರೈತರು ಸಭೆಯಲ್ಲಿ ಅಕ್ರೋಶ ವ್ಯಕ್ತ ಪಡಿಸಿದರು.
ಭದ್ರಾ ಡ್ಯಾಂನಿಂದ ಈಗಾಗಲೇ ಬೇಸಿಗೆ ಹಂಗಾಮಿನ ಕೃಷಿ ಚಟುವಟಿಕೆಗೆ ಎಡದಂಡೆ ಕಾಲುವೆಗಳಿಂದ ಜನವರಿ 5ರಿಂದ ಬಲದಂಡೆ ಕಾಲುವೆಗಳಿಗೆ ಜನವರಿ 8ರ ರಾತ್ರಿಯಿಂದಲೇ ನೀರು ಹರಿಸಲಾಗುತ್ತಿದೆ. ಡ್ಯಾಂನಿಂದ ಕಾಲುವೆಗಳಿಗೆ ನಿರಂತರವಾಗಿ 120 ದಿನ ನೀರು ಹರಿಸಲಾಗುತ್ತದೆ. ಎಡದಂಡೆ ನಾಲೆಗೆ 380 ಕ್ಯೂಸೆಕ್, ಬಲದಂಡೆ ನಾಲೆಗೆ 2650 ಕ್ಯುಸೆಕ್ ನೀರು ಹರಿಸಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.












Click it and Unblock the Notifications