ಬೆಣ್ಣೆನಗರಿಯಿಂದ ಬಸವರಾಜ ಬೊಮ್ಮಾಯಿ ಚುನಾವಣಾ ಕಣಕ್ಕೆ?
ದಾವಣಗೆರೆ, ಮಾರ್ಚ್ 15: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದಾವಣಗೆರೆಯಿಂದ 2023ರ ವಿಧಾನಸಭೆ ಚುನಾವಣಾ ಕಣಕ್ಕಿಳಿಯಲು ಮುಂದಾಗಿದ್ದಾರೆ? ಎಂಬ ಸುದ್ದಿ ಹಬ್ಬಿದೆ. ಇದು ಜಿಲ್ಲೆ ಸೇರಿದಂತೆ ರಾಜ್ಯ ರಾಜಕೀಯದಲ್ಲಿ ಬಿಸಿಬಿಸಿ ಚರ್ಚೆಗೆ ಕಾರಣವಾಗಿದೆ.
ಕಳೆದ ಕೆಲವು ದಿನಗಳ ಹಿಂದೆ ಬಸವರಾಜ ಬೊಮ್ಮಾಯಿ ದಾವಣಗೆರೆಯಿಂದ ಕಣಕ್ಕಿಳಿಯಲು ಗಂಭೀರವಾಗಿ ಚಿಂತನೆ ನಡೆಸಿದ್ದಾರೆ ಎಂಬ ವದಂತಿ ಹಬ್ಬಿತ್ತು. ಈಗ ಇದಕ್ಕೆ ಪುಷ್ಠಿ ನೀಡುವಂತೆ ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದಾವಣಗೆರೆ ಉತ್ತರ ಕ್ಷೇತ್ರದಿಂದ ಚುನಾವಣಾ ಕಣಕ್ಕಿಳಿಯಲಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಈ ಕುರಿತು ಶಾಸಕ ಎಸ್. ಎ. ರವೀಂದ್ರನಾಥ್ ಪ್ರತಿಕ್ರಿಯೆ ನೀಡಿದ್ದಾರೆ. #Basavarajbommai #Davangere #BJP #PoliticalNews pic.twitter.com/J4iHTbmV24
— oneindiakannada (@OneindiaKannada) March 15, 2022
ಪಕ್ಷದ ಹಿರಿಯ ನಾಯಕ, ಶಾಸಕ ಎಸ್. ಎ. ರವೀಂದ್ರನಾಥ್ ಮಾತನಾಡಿ, "ಮುಂದಿನ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ. ಯಾರೇ ಬಂದರೂ ನಾವು ಅವರ ಗೆಲುವಿಗೆ ಶ್ರಮಿಸುತ್ತೇವೆ. ಬಸವರಾಜ ಬೊಮ್ಮಾಯಿ ಈಗಾಗಲೇ ಎರಡು ಬಾರಿ ಮಾತುಕತೆ ನಡೆಸಿದ್ದಾರೆ. ಇದುವರೆಗೆ ಯಾವುದೇ ಚರ್ಚೆ ಪಕ್ಷದ ವೇದಿಕೆಯಲ್ಲಿ ಆಗಿಲ್ಲ" ಎಂದು ಹೇಳಿದ್ದಾರೆ.

"ಅಂತಿಮವಾಗಿ ಪಕ್ಷದ ಹೈಕಮಾಂಡ್ ಸ್ಪರ್ಧೆ ಬಗ್ಗೆ ನಿರ್ಧರಿಸಲಿದೆ. ಇನ್ನು ಈ ಕ್ಷೇತ್ರಕ್ಕೆ ಯಾರೇ ಬಂದರೂ ಗೆಲ್ಲಿಸಿ ಕಳುಹಿಸುತ್ತೇವೆ" ಎಂದು ಎಸ್. ಎ. ರವೀಂದ್ರನಾಥ್ ಹೇಳಿದ್ದಾರೆ. ಇದರಿಂದಾಗಿ ಮುಖ್ಯಮಂತ್ರಿಗಳು ಸ್ಪರ್ಧಿಸುವ ವಿಚಾರಕ್ಕೆ ಮತ್ತಷ್ಟು ಪುಷ್ಠಿ ಸಿಕ್ಕಿದೆ.
ದಾವಣಗೆರೆಯಿಂದ ಏಕೆ ಸ್ಪರ್ಧೆ?; ಬಸವರಾಜ ಬೊಮ್ಮಾಯಿ ಸದ್ಯ ಹಾವೇರಿ ಜಿಲ್ಲೆಯ ಶಿಗ್ಗಾಂವಿ ಕ್ಷೇತ್ರದ ಶಾಸಕರು. ಹಾನಗಲ್ ಉಪಚುನಾವಣೆ, ವಿಧಾನ ಪರಿಷತ್ ಚುನಾವಣೆ ಸೇರಿದಂತೆ ಬೇರೆ ಬೇರೆ ಚುನಾವಣೆಯಲ್ಲಿ ತವರು ಕ್ಷೇತ್ರದಲ್ಲಿ ಹಿನ್ನಡೆ ಅನುಭವಿಸಿದ ಕಾರಣ ಮುಖ್ಯಮಂತ್ರಿಗಳು ಎರಡು ಕ್ಷೇತ್ರಗಳಲ್ಲಿ ಮುಂದಿನ ಚುನಾವಣೆಗೆ ಸ್ಪರ್ಧಿಸುವ ಸಾಧ್ಯತೆ ಹೆಚ್ಚಿದೆ.
ದಾವಣಗೆರೆ ಉತ್ತರ ಕ್ಷೇತ್ರದಲ್ಲಿ ಬಸವರಾಜ ಬೊಮ್ಮಾಯಿ ಸಮುದಾಯದ ಜನರು ಹೆಚ್ಚಿದ್ದಾರೆ. ಈ ಕ್ಷೇತ್ರದಲ್ಲಿ ಸಾದು ಲಿಂಗಾಯತರದ್ದೇ ಪ್ರಾಬಲ್ಯ. ಇಲ್ಲಿನ ಜನರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಜಿಎಂಐಟಿಗೆ ಹಲವು ಬಾರಿ ಸಿಎಂ ಬರುತ್ತಿರುವುದು ಗಮನಿಸಿದರೆ ಈ ಬಗ್ಗೆ ಹೆಚ್ಚು ಚರ್ಚೆ ನಡೆಸಿರಬಹುದು ಎಂಬ ಮಾತು ಕೇಳಿ ಬರುತ್ತಿದೆ.
ಬಿಜೆಪಿಯ ತಂತ್ರಗಾರಿಕೆ ಬದಲು; ಪಂಚ ರಾಜ್ಯಗಳ ಫಲಿತಾಂಶದ ಬಳಿಕ ಕರ್ನಾಟಕದಲ್ಲಿ ಬಿಜೆಪಿ ತಂತ್ರಗಾರಿಕೆ ಬದಲಾಗಿದೆ. ದಾವಣಗೆರೆ ಉತ್ತರ ಕ್ಷೇತ್ರದಿಂದ ಬಸವರಾಜ ಬೊಮ್ಮಾಯಿ 2023ರ ವಿಧಾನಸಭಾ ಚುನಾವಣೆಯಲ್ಲಿ ಕಣಕ್ಕಳಿಯುವ ಸಾಧ್ಯತೆ ಹೆಚ್ಚಿದೆ ಎಂಬುದನ್ನು ಬಿಜೆಪಿ ನಾಯಕರು, ಕಾರ್ಯಕರ್ತರು ಮಾತನಾಡತೊಡಗಿದ್ದಾರೆ.
ಬೆಣ್ಣೆನಗರಿ ಮೇಲೆ ಸಿಎಂ ಕಣ್ಣು ಇಟ್ಟಿದ್ದು, ಚುನಾವಣೆಗೆ ಒಂದು ವರ್ಷ ಇರುವಾಗಲೇ ರಣತಂತ್ರ ರೂಪಿಸಿದ್ದಾರೆ ಎಂಬ ಸುದ್ದಿ ಇದೆ. ಶಿಗ್ಗಾಂವಿ ಜೊತೆಗೆ ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದಿಂದಲೂ ಸ್ಪರ್ಧೆ ಮಾಡುವ ಬಗ್ಗೆ ಈಗಾಗಲೇ ಬಸವರಾಜ ಬೊಮ್ಮಾಯಿ ಸ್ಥಳೀಯ ನಾಯಕರ ಜೊತೆ ಗಂಭೀರ ಚರ್ಚೆ ನಡೆಸಿದ್ದಾರೆ. ದಾವಣಗೆರೆ ಸಂಸದ ಜಿ. ಎಂ. ಸಿದ್ದೇಶ್ವರ್, ಶಾಸಕ ರವೀಂದ್ರನಾಥ್‌ಗೆ ಚುನಾವಣೆ ಹೊಣೆ ಹೊರಿಸಲಾಗಿದೆ ಎಂದು ತಿಳಿದು ಬಂದಿದೆ.
ಈಗಾಗಲೇ ಮಾತುಕತೆ ಆಗಿದೆ ಎಂದು ಹಾಲಿ ಬಿಜೆಪಿ ಶಾಸಕ ಎಸ್. ಎ. ರವೀಂದ್ರನಾಥ್ ಹೇಳಿರುವುದು ಇದಕ್ಕೆ ಪುಷ್ಟಿ ಕೊಟ್ಟಿದೆ. "ನಮ್ಮ ಕ್ಷೇತ್ರಕ್ಕೆ ಸಿಎಂ ಬಂದರೆ ಗೆಲ್ಲಿಸಿ ಕಳುಹಿಸೋದು ನಮ್ಮ ಕರ್ತವ್ಯ. ಈಗಾಗಲೇ ಸ್ಪರ್ಧೆ ಬಗ್ಗೆ ದಾವಣಗೆರೆ ಸಂಸದರ ಜೊತೆ ಮಾತನಾಡಿದ್ದಾರೆ. ನಾನು ಮುಂದಿನ ಚುನಾವಣೆಗೆ ನಿಲ್ಲೋದಿಲ್ಲ. ಯಾರೇ ಬಂದರೂ ಗೆಲ್ಲಿಸಿ ಕಳುಹಿಸುವುದು ನಮ್ಮ ಜವಾಬ್ದಾರಿ. ಬಸವರಾಜ ಬೊಮ್ಮಾಯಿ ಅವರಿಗೂ ಸ್ವಾಗತ ಮಾಡಿದ್ದೇವೆ" ಎಂದು ರವೀಂದ್ರನಾಥ್ ತಿಳಿಸಿದ್ದಾರೆ.












Click it and Unblock the Notifications