ದಾವಣಗೆರೆಯ ಸೂಳೆಕೆರೆ ಭರ್ತಿ, ಬಾಗಿನ ಅರ್ಪಣೆ
ದಾವಣಗೆರೆ, ಅಕ್ಟೋಬರ್ 12 : ಏಷ್ಯಾ ಖಂಡದ ಎರಡನೇ ಅತಿದೊಡ್ಡ ಕೆರೆಯಾದ ಸೂಳೆಕೆರೆ ಭರ್ತಿಯಾಗಿದೆ. ಭದ್ರಾ ಜಲಾಶಯದಿಂದ ಕೆರೆಗೆ ನೀರು ಹರಿಸಲಾಗಿದ್ದು, ಜೀವ ಕಳೆ ಬಂದಿದೆ. ಮೈದುಂಬಿರುವ ಕೆರೆಗೆ ಬಾಗಿನ ಅರ್ಪಿಸಲಾಗಿದೆ.
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನಲ್ಲಿ ಶಾಂತಿ ಸಾಗರ (ಸೂಳೆಕೆರೆ) ಇದೆ. ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳ ವಿವಿಧ ತಾಲೂಕುಗಳಿಗೆ ಕುಡಿಯುವ ನೀರು ಪೂರೈಕೆಗೆ ಮಾಡಲು ಸೂಳೆಕೆರೆ ಪ್ರಮುಖ ಮೂಲವಾಗಿದೆ.

ಚಿತ್ರದುರ್ಗ ನಗರ, ಹೊಳಲ್ಕೆರೆ, ಜಗಳೂರು, ಮಲ್ಲಾಡಿಹಳ್ಳಿ, ಸಿರಿಗೆರೆ, ಚನ್ನಗಿರಿ ಪಟ್ಟಣ, ಸಂತೆಬೆನ್ನೂರು, ತ್ಯಾವಣಗಿ ಸೇರಿದಂತೆ ವಿವಿಧ ಪ್ರದೇಶಗಳಿಗೆ ಈ ಕೆರೆಯ ಮೂಲಕ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತದೆ.
ಜಿಲ್ಲೆಯಲ್ಲಿ ಈ ಬಾರಿ ಮಳೆಯ ಕೊರತೆ ಉಂಟಾಗಿ ಕೆರೆ ಬತ್ತಿತ್ತು. ಆದ್ದರಿಂದ, ಎರಡು ತಿಂಗಳಿನಿಂದ ಕುಡಿಯುವ ನೀರು ಪೂರೈಕೆ ಸ್ಥಗಿತಗೊಂಡಿತ್ತು. ಭದ್ರಾ ಜಲಾಶಯದ ಕಾಲುವೆ ಮೂಲಕ ಕೆರೆಗೆ ನೀರು ಹರಿಸಲಾಗಿದ್ದು, ಕೆರೆ ತುಂಬಿದೆ.

ದಾವಣಗೆರೆ ಜಿಲ್ಲೆಯಲ್ಲಿ ಕೆಲವು ದಿನಗಳಿಂದ ಭಾರೀ ಮಳೆಯಾಗುತ್ತಿದೆ. ಆದ್ದರಿಂದ, ಕೆರೆಯ ನೀರಿನ ಪ್ರಮುಖ ಸೆಲೆಯಾದ ಕಾಕನೂರು ಬಳಿಯ ಹಿರೇಹಳ್ಳ ತುಂಬಿದೆ. ಆದ್ದರಿಂದ, ಹೆಚ್ಚಿನ ನೀರು ಹರಿದುಬರುತ್ತಿದೆ.
ಬಾಗಿನ ಅರ್ಪಣೆ : ಮೈದುಂಬಿರುವ ಸೂಳೆಕೆರೆಗೆ ಚನ್ನಗಿರಿ ಶಾಸಕ ವಡ್ನಾಳ್ ರಾಜಣ್ಣ, ವಿವಿಧ ರೈತರು ಬಾಗಿನ ಅರ್ಪಿಸಿದ್ದಾರೆ. ಕೆರೆ ತುಂಬಿರುವುದರಿಂದ ಸುತ್ತಲಿನ ಕೊಳವೆ ಬಾವಿಗಳಲ್ಲಿ ಅಂತರ್ಜಲ ಮಟ್ಟವೂ ಹೆಚ್ಚಾಗಿದೆ.












Click it and Unblock the Notifications