ಪಠ್ಯಪುಸ್ತಕ ಪರಿಷ್ಕರಣೆ ಬಗ್ಗೆ ಪ್ರತಿಕ್ರಿಯಿಸಿದ್ದ ಕಾದಂಬರಿಕಾರ ಬಿ.ಎಲ್.ವೇಣುಗೆ ಅನಾಮಧೇಯ ಪತ್ರ
ಚಿತ್ರದುರ್ಗ ಜೂ.10: ರೋಹಿತ್ ಚಕ್ರತೀರ್ಥ ಪರಿಷ್ಕರಿಸಿದ್ದ ಪಠ್ಯಪುಸ್ತಕ ಹಾಗೂ ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದ ಕನ್ನಡದ ಕಾದಂಬರಿಕಾರ ಬಿ.ಎಲ್. ವೇಣು ಅವರಿಗೆ ಅನಾಮಧೇಯ ಪತ್ರ ಬಂದಿದೆ. ಅದರಲ್ಲಿ ಸಾವರ್ಕರ್ ಬಗ್ಗೆ ತಾವು ಹೇಳಿದ ಹೇಳಿಕೆಗೆ ಕ್ಷಮೆಯಾಚಿಸುವಂತೆ ಆಗ್ರಹಿಸಲಾಗಿದೆ.
ಕಾದಂಬರಿಕಾರ ಬಿ.ಎಲ್.ವೇಣು ಅವರಿಗೆ ರವಾನಿಸಿದ ಎರಡು ಪುಟವುಳ್ಳ ಈ ಪತ್ರದಲ್ಲಿ ಬರೆದವರ ಹೆಸರು, ವಿಳಾಸವಿಲ್ಲ. ಕ್ಷಮೆ ಕೇಳಬೇಕು ಎಂದು ತಾಕೀತು ಮಾಡಿರುವ ಜತೆಗೆ ಸಾಹಿತಿಗಳಿಗೆ ತಿಳಿಹೇಳುವಂತೆ ಬಿ.ಎಲ್.ವೇಣು ಅವರಿಗೆ ಸಲಹೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಪಾಳೆಗಾರರ ಇತಿಹಾಸಕ್ಕೆ ಸಂಬಂಧಿಸಿದಂತೆ ಬರೆದ ನಿಮ್ಮ ಬಗ್ಗೆ ನಮಗೆ ಅಪಾರ ಗೌರವವಿದೆ. ಇತ್ತೀಚಿನ ಬೆಳವಣಿಗೆ ಕುರಿತು ತಾವು ಎಳೆ ಮಕ್ಕಳ ಮನಸ್ಸಿನಲ್ಲಿ ವಿಷಬೀಜ ಬಿತ್ತಬೇಡಿ ಎಂದು ಹೇಳಿದ್ದಿರಿ. ದೇಶದ್ರೋಹಿ ಗುಂಪುಗಳಾದ ಎಸ್‌ಡಿಪಿಐನಂತಹ ಸಂಘಟನೆಗಳನ್ನು ಮತ್ತು ಭಯೋತ್ಪಾದನೆ, ಎಡಪಂಥದವರನ್ನು ಬೆಂಬಲಿಸುತ್ತೀರಿ. ಅಲ್ಲದೇ 61ಸಾಹಿತಿಗಳು ದುಷ್ಟಗುಂಪನ್ನು ಸೇರಿದ್ದಿರಾ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಸಾವರ್ಕರ್ ಬಗ್ಗೆ ಹಗುರವಾಗಿ ಮಾತನಾಡಬೇಡಿ:
ವಿಷ ಬೀಜ ಬಿತ್ತುವ ಕೆಲಸ ಎಸ್‌ಡಿಪಿಐ ಹಾಗೂ ಮುಸ್ಲಿಂ ಸಂಘಟನೆಗಳು ಮಾಡುತ್ತವೆ. ನೀವು ಹಿಂದುಗಳಾಗಿ ಮೊದಲು ಹಿಂದುಗಳ ವಿರುದ್ಧ ಮಾತನಾಡುವುದನ್ನು ಬಿಡಬೇಕು. ದೇಶದ್ರೋಹಿಗಳಿಗೆ ಮೊದಲು ತಿಳಿಹೇಳಿ. ಸಾವರ್ಕರ್ ಬಗ್ಗೆ ಹಗುರವಾಗಿ ಮಾತನಾಡಬೇಡಿ. ಮನಬಂದಂತೆ ಮಾತನಾಡುವ ಧರ್ಮ ಗುರುಗಳು, ರಾಜಕೀಯ ಮುಖಂಡರಿಗೆ ಮಾತನಾಡುವುದನ್ನು ಕಲಿಸಿ ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಅಲ್ಲದೇ ಕಾಂಗ್ರೆಸ್ ಹಾಗೂ ಜೆಡಿಎಸ್ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಮತ್ತು ಎಚ್.ಡಿ .ಕುಮಾರಸ್ವಾಮಿ ಅವರನ್ನು ಬೆಂಬಲಿಸುವುದನ್ನು ಬಿಡಿ ಎಂದು ತಾಕೀತು ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಕಾದಂಬರಿಕಾರರು ಹೇಳಿದ್ದೇನು?:
ಹಿಂದಿನಿಂದಲೂ ಆಗಾಗ ಇಂತಹ ಪತ್ರಗಳು ಬರುವುದು ಸಾಮಾನ್ಯ. ಪ್ರಸ್ತುತ ಈ ಅನಾಮಧೇಯ ಪತ್ರವು ಚಿತ್ರದುರ್ಗದಿಂದಲೇ ಪೋಸ್ಟ್ ಹಾಕಿರುವ ಸಾಧ್ಯತೆ ಇದೆ. ಇಂತಹ ಅನೇಕ ಪತ್ರಗಳನ್ನು ಹರಿದು ಹಾಕಿದ್ದೇನೆ. ಈ ಬಗ್ಗೆ ಭಯಪಡುವ ವ್ಯಕ್ತಿ ನಾನಲ್ಲ ಎಂದು ಕಾದಂಬರಿಕಾರ ಬಿ.ಎಲ್.ವೇಣು ಹೇಳಿದ್ದಾರೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications