ಹಿರಿಯೂರು: ಗೊಲ್ಲಹಳ್ಳಮ್ಮನ ಭಂಡಾರೋತ್ಸವದಲ್ಲಿ ಊರ ಸೊಸೆಯಂದಿರ ಕಣಿತ
ಹಿರಿಯೂರು, ಅಕ್ಟೋಬರ್, 17: ಚಿತ್ರದುರ್ಗ ಜಿಲ್ಲೆ, ಹಿರಿಯೂರು ತಾಲ್ಲೂಕಿನ ಬಾಲೆನಹಳ್ಳಿ ಗ್ರಾಮದಲ್ಲಿ ಕಾಡುಗೊಲ್ಲರ ಆರಾಧ್ಯ ದೈವತೆ ಗೊಲ್ಲಹಳಮ್ಮನ ಭಂಡಾರೋತ್ಸವ ಗುರುವಾರ (ಅಕ್ಟೋಬರ್ 17) ಅದ್ದೂರಿಯಾಗಿ ಜರುಗಿತು. ಈ ಭಂಡಾರೋತ್ಸವದಲ್ಲಿ ಗ್ರಾಮದ ಸೊಸೆಯಂದಿರು ಕುಣಿಯುವುದು ವಾಡಿಕೆಯಾಗಿದೆ.
ದಸರಾ ಹಬ್ಬದ ವಿಜಯದಶಮಿ ಅಂಬಿನೋತ್ಸವದೊಂದಿಗೆ ಆರಂಭವಾಗುವ ಈ ಜಾತ್ರೆ ಏಕಾದಶಿ ವಿಶೇಷ ಪೂಜೆ, ದ್ವಾದಶಿ, ಹರಿಸೇವೆ, ಕುರಿ ಕರೆಯುವ ಉತ್ಸವ, ಪಲ್ಲಕ್ಕಿ ಉತ್ಸವ, ಆರತಿ, ಸಿಡಿ ಮದ್ದಿನ ಉತ್ಸವ, ಮರುದಿನ ಬಂಡಾರೋತ್ಸವ ಕಾರ್ಯಕ್ರಮ ವಿಜೃಂಭಣೆಯಿಂದ ಕೊನೆಗೊಳ್ಳುತ್ತದೆ.

ಹಬ್ಬದ ಕೊನೆಯ ದಿನದಲ್ಲಿ ಸೊಸೆಯಂದಿರು ಸೀರೆಉಟ್ಟು, ಕೈಯಲ್ಲಿ ಬೇವಿನ ಸೊಪ್ಪು ಹಿಡಿದು, ದೇವಿಯ ಬಂಡಾರವನ್ನು ಹಣೆಗೆ ಇಟ್ಟುಕೊಂಡು ಸ್ವಯಂ ಪ್ರೇರಿತರಾಗಿ ಹೊಲಗ ಹಾಗೂ ತಮಟೆಯ ಸದ್ದಿಗೆ ಹೆಜ್ಜೆ ಹಾಕುವ ಮೂಲಕ ಹರಕೆ ತೀರಿಸುತ್ತಾರೆ.
ಚಿತ್ತಮುತ್ತಿ ಕುಲದ ಕರಡಿ ಕುಳ್ಳಪ್ಪನ ವಂಶಸ್ಥರಾದ ಕರಡಿಗೊಲ್ಲರು ಈ ಶ್ರೀದೇವಿ ಗೊಲ್ಲಳ್ಳಮ್ಮ, ಶ್ರೀ ಚಿತ್ರಲಿಂಗೇಶ್ವರ ಸ್ವಾಮಿ ಹಾಗೂ ಶ್ರೀ ತಿಮ್ಮಪ್ಪ ಸ್ವಾಮಿಯನ್ನು ಆರಾಧನೆ ಮಾಡಿಕೊಂಡು ಬರುತ್ತಿದ್ದಾರೆ.
ವಾರದವರೆಗೂ ದಸರಾ ಹಬ್ಬವನ್ನು ವಿಶೇಷವಾಗಿ ವೈಭವದಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಗ್ರಾಮದಲ್ಲಿ ಬಹುತೇಕ ಕರಡಿಗೊಲ್ಲರ ಬೆಡಗಿನ ಮನೆಗಳಿವೆ. ಈ ಕುಟುಂಬಗಳಿಗೆ ಸೊಸೆಯಾಗಿ ಬಂದವರು ಪ್ರತಿಯೊಬ್ಬರು ಈ ಬಂಡಾರ ಉತ್ಸವದಲ್ಲಿ ಭಾಗಿಯಾಗಿ ಕುಣಿಯುವ ಮೂಲಕ ಆಚರಣೆ ಮಾಡಿಕೊಂಡು ಬರುತ್ತಿರುವುದು ತಾಲೂಕಿನಲ್ಲಿಯೇ ವಿಶಿಷ್ಟವಾಗಿ ಕಾಣಬಹುದು.
ಗ್ರಾಮಕ್ಕೆ ಮದುವೆಯಾಗಿ ಬಂದ ಸೊಸೆಯಂದಿರು ಕುಣಿಯದಿದ್ದರೆ, ಗ್ರಾಮದೇವತೆ ಗೊಲ್ಲಾಳಮ್ಮ ಕುಣಿಯುತ್ತಾಳೆ. ಹೀಗಾಗಿ ಅಮ್ಮನ ಅಪ್ಪಣೆಯಂತೆ ಅನಾದಿಕಾಲದಿಂದಲೂ ಸೊಸೆಯಂದಿರು ಈ ಉತ್ಸವದಲ್ಲಿ ಕುಣಿಯುವುದು ವಾಡಿಕೆಯಾಗಿ ಮುಂದುವರೆದುಕೊಂಡು ಬಂದಿದೆ.
ಹಬ್ಬದ ಕೊನೆಯ ಭಂಡರೋತ್ಸವದ ದಿನದಂದು ಗ್ರಾಮದಲ್ಲಿ ಶಾಂತಿ, ಸಮೃದ್ಧಿಗಾಗಿ ದೇವರು ಮನೆ ಮನೆಗೆ ಭೇಟಿ ನಿಡುತ್ತದೆ. ಬಳಿಕ ಸೊಸೆಯಂದಿರು ಗ್ರಾಮದ ಹನುಮಂತರಾಯ ದೇವಸ್ಥಾನದಿಂದ ಕುಣಿತ ಆರಂಭಗೊಳ್ಳುತ್ತದೆ. ಇದಾದ ಬಳಿಕ ಮಣೆವು ಕಾರ್ಯಕ್ರಮದೊಂದಿಗೆ ದಸರಾ ಹಬ್ಬ ಕೊನೆಗೊಳ್ಳುತ್ತದೆ.
"ನಮ್ಮೂರಿನ ದೇವಿಗೆ ಕುಣಿಯುವುದು ಎಂದರೇ ಬಲು ಆಸೆಯಾಗಿದೆ. ಆದ್ದರಿಂದ ನಾವು ದೇವಿಯನ್ನು ಸಂತೃಪ್ತಿಗೊಳಿಸಲು ಕುಣಿಯುತ್ತೇವೆ. ಮಕ್ಕಳ ಜೊತೆ ಕುಣಿಸಿ ಕೊಳ್ಳುವುದು ದೇವಿಗೆ ಇಷ್ಟವಿಲ್ಲ. ಈ ಹಿನ್ನೆಲೆ ವಿಶೇಷವಾಗಿ ಸೊಸೆಯಂದಿರು ಕುಣಿದಾಗ ದೇವಿ ಸಂತೃಪ್ತಿಯಾಗುತ್ತಾಳೆ. ಗ್ರಾಮದಲ್ಲಿ ಉತ್ತಮ ಮಳೆಯಾಗಲಿ, ಯಾವುದೇ ರೋಗ ರುಜಿನಗಳು ಬಾರದಿರಲಿ. ಊರು ಅಭಿವೃದ್ಧಿಯಾಗಲಿ, ಶಾಂತಿ ನೆಮ್ಮದಿ ದೊರಕಲಿ ಎಂಬುದು ಕುಣಿತದ ಸಂಕೇತವಾಗಿದೆ," ಎನ್ನುತ್ತಾರೆ ದೇವಿಯ ಸೊಸೆಯಂದಿರು.
ಹುಣ್ಣಿಮೆ ಹಿನ್ನೆಲೆ ಆರತಿ: ಕರ್ನಾಟಕ, ತಮಿಳುನಾಡಿನ ಜೀವನದಿ ಕಾವೇರಿ ನದಿಯಲ್ಲಿ ಸಾಲೂರು ಬೃಹನ್ ಮಠದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮಿ ನೇತೃತ್ವದಲ್ಲಿ ಇಂದು (ಅಕ್ಟೋಬರ್ 17) ವಿಶೇಷ ಕಾವೇರಿ ಆರತಿ ನಡೆಯಿತು.
ಹುಣ್ಣಿಮೆ ಹಾಗೂ ಕಾವೇರಿ ಸಂಕ್ರಮಣ ಹಿನ್ನೆಲೆ ಕರ್ನಾಟಕ ಗಡಿ ಭಾಗವಾದ ಮೆಟ್ಟೂರಿನ ಹಿನ್ನೀರಿನಲ್ಲಿ ಕಾವೇರಿಗೆ ವಿಶೇಷ ಆರತಿ ಪೂಜೆ, ಹೋಮ ನೆರವೇರಿಸಲಾಯಿತು.
ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ಪ್ರಸಿದ್ದ ಪ್ರಖ್ಯಾತಿ ಇತಿಹಾಸ ಹೊಂದಿರುವ ಶ್ರೀ ಸಾಲೂರು ಬೃಹನ್ಮಠದ ಶ್ರೀಗಳಾದ ಡಾ.ಶಾಂತ ಮಲ್ಲಿಕಾರ್ಜುನಸ್ವಾಮೀಜಿ ನೇತೃತ್ವದಲ್ಲಿ ಕಾವೇರಿ ಆರತಿ, ಗಣಪತಿ ಪೂಜೆ, ಪುಣ್ಯ ಗಣ ಹೋಮ, ರುದ್ರ ಹೋಮ ಶ್ರದ್ಧಾ ಭಕ್ತಿಯಿಂದ ನಡೆಯಿತು.












Click it and Unblock the Notifications