ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾಡುಗೊಲ್ಲರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಯತ್ನ: ಕೇಂದ್ರ ಸಚಿವ

By ಚಿತ್ರದುರ್ಗ ಪ್ರತಿನಿಧಿ
|
Google Oneindia Kannada News

ಚಿತ್ರದುರ್ಗ, ಆಗಸ್ಟ್ 21: "ಕಾಡುಗೊಲ್ಲರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ದಶಕಗಳಿಂದ ಹೋರಾಟ ನಡೆಸಿಕೊಂಡು ಬರುತ್ತಿರುವ ಸಮುದಾಯವನ್ನು ಮುಂದಿನ ಒಂದೆರಡು ತಿಂಗಳಲ್ಲಿ ಕಡತ ತರಿಸಿಕೊಂಡು, ಏನೇನು ದಾಖಲೆ ಬೇಕು ಎನ್ನುವುದನ್ನು ಪರಿಶೀಲನೆ ನಡೆಸಿ ಕಾಡುಗೊಲ್ಲರನ್ನು ಎಸ್ಟಿಗೆ ಸೇರಿಸಲು ಪ್ರಯತ್ನ ಮಾಡುತ್ತೇನೆ," ಎಂದು ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ಭರವಸೆ ನೀಡಿದರು.

"ಕಳೆದ ಎಪ್ಪತ್ತು ವರ್ಷಗಳ ಕಾಲ ದೇಶವನ್ನಾಳಿದ ಪಕ್ಷದಿಂದ ಏನು ಸಾಧನೆಯಾಗಿದೆ. ಯಾವ ಪರಿವರ್ತನೆಯಾಗಿದೆ," ಎಂದು ಪ್ರಶ್ನಿಸುವ ಮೂಲಕ ಹೆಸರು ಹೇಳದೆ ಕಾಂಗ್ರೆಸ್ ಪಕ್ಷದ ವಿರುದ್ಧ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಖಾತೆ ಸಚಿವ ಎ. ನಾರಾಯಣಸ್ವಾಮಿ ವಾಗ್ದಾಳಿ ನಡೆಸಿದರು.

ಕರ್ನಾಟಕ ರಾಜ್ಯ ಕಾಡುಗೊಲ್ಲರ ಸಂಘ ಹಾಗೂ ಜಿಲ್ಲಾ ಗೊಲ್ಲರ ಸಂಘದ ಸಂಯುಕ್ತಾಶ್ರಯದಲ್ಲಿ ಚಿತ್ರದುರ್ಗ ನಗರದ ರಂಗಯ್ಯನಬಾಗಿಲು ಸಮೀಪವಿರುವ ಜಿಲ್ಲಾ ಗೊಲ್ಲ ಸಂಘದ ಸಮುದಾಯ ಭವನದ ಭೂಮಿ ಪೂಜೆ, ಕಾಡುಗೊಲ್ಲ ಜನಾಂಗವನ್ನು ಎಸ್.ಟಿ ಸೇರ್ಪಡೆಗೆ ಹಕ್ಕೊತ್ತಾಯ ಸಮಾರಂಭವನ್ನು ಶನಿವಾರ ಉದ್ಘಾಟಿಸಿ ನಂತರ ಸನ್ಮಾನ ಸ್ವೀಕರಿಸಿ ಮಾತನಾಡಿದರು.

Will Try To Add Kadugolla Community Into Scheduled Tribes: Union Minister A Narayanswamy

"ನೂರಕ್ಕೆ ತೊಂಬತ್ತು ಭಾಗ ಗೊಲ್ಲರಹಟ್ಟಿಗಳಲ್ಲಿ ಇದುವರೆಗೂ ರಸ್ತೆಗಳಿಲ್ಲ. ಗೊಲ್ಲರಹಟ್ಟಿಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಿಲ್ಲ. ಅವರಿಗೆ ಹಕ್ಕುಪತ್ರಗಳನ್ನು ಕೊಟ್ಟಿಲ್ಲ. ಆದರೂ ನೀವುಗಳು ಇಲ್ಲಿಯವರೆಗೂ ಮತ ಕೊಡುತ್ತಲೇ ಬರುತ್ತಿದ್ದೀರ, ನಾನು ಇಂದು ಇಲ್ಲಿ ನಿಂತು ಮಾತನಾಡಲು ನೀವು ಸಹ ಕಾರಣರಾಗಿದ್ದೀರ, ನಾನು ಯಾವ ಸಂಸದ, ಶಾಸಕ, ಅಧಿಕಾರಿಗಳ ಗುಲಾಮನಲ್ಲ. ನನಗೆ ಮತ ನೀಡಿದ ಲೋಕಸಭಾ ಕ್ಷೇತ್ರದ ಗೊಲ್ಲ ಮತದಾರರಿಗೆ ಗುಲಾಮನಾಗಿ ಅಧಿಕಾರದಲ್ಲಿರುವತನಕ ತಲೆಬಾಗಿಸಿ ಸೇವೆ ಮಾಡುತ್ತೇನೆಂದು," ಗೊಲ್ಲ ಸಮುದಾಯಕ್ಕೆ ವಚನ ನೀಡಿದರು.

"ಈಗಾಗಲೇ ಕಾಡುಗೊಲ್ಲರನ್ನು ಪರಿಶಿಷ್ಟ ವರ್ಗಕ್ಕೆ ಸೇರಿಸಬೇಕೆಂಬ ಯಾವ ವರದಿ ಎಲ್ಲಿಗೆ ಬಂತು. ಎಲ್ಲಿ ಹೋಯಿತು ಎಂಬುದನ್ನು ತಿಳಿದುಕೊಂಡಿದ್ದೇನೆ. ಅಂತಿಮವಾಗಿ ಕೇಂದ್ರದಲ್ಲಿ ಕಡತ ತಿರಸ್ಕಾರವಾಗಿದೆ. ಎಲ್ಲವೂ ನನಗೆ ಗೊತ್ತಿದೆ. ರಾಜ್ಯ ಸರ್ಕಾರ ಮತ್ತು ಇಲಾಖೆಯಲ್ಲಿ ಏನು ತಪ್ಪಿದೆ ಎನ್ನುವುದನ್ನು ಪತ್ತೆ ಮಾಡುವುದಕ್ಕಾಗಿಯೇ ಗೊಲ್ಲ ಸಮಾಜದ ಒಬ್ಬರನ್ನು ನೇಮಿಸಿದ್ದೇನೆ. ನೀವುಗಳು ನನ್ನ ಮೇಲಿಟ್ಟಿರುವ ಪ್ರೀತಿ ಅಭಿಮಾನಕ್ಕೆ ಏನು ಕೇಳಿದರೂ ಕೆಲಸ ಮಾಡಿ ಕೊಡುತ್ತೇನೆ ಎನ್ನುವ ಭರವಸೆ ನೀಡಿದರು. ಒಂದೆರಡು ತಿಂಗಳಲ್ಲಿ ರಾಜ್ಯಕ್ಕೆ ಮತ್ತೆ ಕಡತ ತರಿಸಿ ಏನೇನು ದಾಖಲೆ ಬೇಕು ಎನ್ನುವುದನ್ನು ಪರಿಶೀಲಿಸಿ ಗೊಲ್ಲ ಜನಾಂಗವನ್ನು ಎಸ್ಟಿಗೆ ಸೇರಿಸುವಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆಂದು," ಭರವಸೆ ನೀಡಿದರು.

"ಶಿಕ್ಷಣದಿಂದ ಮಾತ್ರ ಸಮಾಜದಲ್ಲಿ ಕ್ರಾಂತಿ ಸಾಧ್ಯ, ನಾನು ಸೆಲ್ಫಿ ನಾರಾಯಣಸ್ವಾಮಿ ಅಲ್ಲ, ಫೋಟೋ ತೆಗೆಸಿಕೊಂಡು ಹೋಗಲು ಬಂದಿಲ್ಲ. ಗೊಲ್ಲ ಜನಾಂಗದ ಸಮುದಾಯ ಭವನಕ್ಕೆ ಎಷ್ಟು ಅನುದಾನ ಬೇಕೋ ಅಷ್ಟು ಕೊಡಿಸುತ್ತೇನೆ. ನಾನು ಯಾರಿಗೂ ಮೋಸ ಮಾಡಿಲ್ಲ. ಕೆಟ್ಟದ್ದನ್ನು ಮಾಡಲ್ಲ. ಎಲ್ಲಾ ಜಾತಿ ಜನಾಂಗದ ಅಭಿವೃದ್ದಿ ಮುಖ್ಯ. ಪರಿಸರ, ಸಮಾಜ, ಭೂಮಿ ಎಲ್ಲರ ಸ್ವತ್ತು. ಒಂದು ಜಾತಿ ಧರ್ಮದ್ದಲ್ಲ."

Will Try To Add Kadugolla Community Into Scheduled Tribes: Union Minister A Narayanswamy

"ಸಮಾಜವನ್ನು ಭಿಕ್ಷೆಯಿಂದ ಮುಕ್ತಿ ಮಾಡಬೇಕಾದರೆ ಶಿಕ್ಷಣವೊಂದೆ ದಾರಿ. ಮುಂದಿನ ಹದಿನೈದು ದಿನದಲ್ಲಿ ಕಾಡುಗೊಲ್ಲ ಅಭಿವೃದ್ದಿ ನಿಗಮಕ್ಕೆ ಅಧ್ಯಕ್ಷರನ್ನು ನೇಮಕ ಮಾಡುತ್ತೇನೆ. ಮಾದಿಗ ಸಮಾಜದಲ್ಲಿ ಗೊಂದಲವಿದ್ದಂತೆ ಗೊಲ್ಲ ಸಮಾಜದಲ್ಲಿಯೂ ಇದೆ. ಸಂಘಟನೆಗೆ ಶಕ್ತಿ ಬರಬೇಕಾದರೆ ಪ್ರತಿಯೊಬ್ಬರ ಗೊಲ್ಲರು ಸಂಘಕ್ಕೆ ಸದಸ್ಯರಾಗಿ ಶಕ್ತಿ ತುಂಬಿ ಎಂದು ಮನವಿ ಮಾಡಿದರು. ಪಾವಗಡ ತಾಲ್ಲೂಕಿನ ಪೆಮ್ಮನಹಳ್ಳಿ ಗೊಲ್ಲರಹಟ್ಟಿ ಘಟನೆಗೆ ಪ್ರತಿಕ್ರಿಯೆ ನೀಡಿರುವ ಅವರು ನನಗೆ ಗೊಲ್ಲರಹಟ್ಟಿ ಗೊತ್ತಿರಲಿಲ್ಲ, ಮಾರ್ಗ ಮಧ್ಯೆ ಹೋಗುವಾಗ ಗೊಲ್ಲ ಸಮಾಜದ ವ್ಯಕ್ತಿಯೊಬ್ಬರು ಈ ಗೊಲ್ಲರಹಟ್ಟಿ ಬಹಳ ಹಿಂದುಳಿದಿದೆ, ಭೇಟಿ ನೀಡಿ ಎಂದಾಗ ಅಲ್ಲಿಗೆ ಹೋಗಲಾಯಿತು. ನಮಗೆ ಗೊತ್ತಿಲ್ಲದಂತೆ ಅಲ್ಲಿದ್ದ ವ್ಯಕ್ತಿಯೊಬ್ಬ ಚಿತ್ರೀಕರಣ ಮಾಡಿಕೊಂಡು ಮಾಧ್ಯಮಗಳಿಗೆ ಹರಿಬಿಟ್ಟಿದ್ದಾರೆ," ಎಂದರು.

ಹಿರಿಯೂರು ಶಾಸಕಿ ಕೆ. ಪೂರ್ಣಿಮಾ ಶ್ರೀನಿವಾಸ್ ಮಾತನಾಡಿ, "ನಮ್ಮ ಗೊಲ್ಲ ಜನಾಂಗದ ಶ್ರೀಗಳನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಬೇಕಿತ್ತು. ಸ್ವಾಮಿಯನ್ನು ಕರೆಸಿಲ್ಲದಿರುವುದು ನೋವಿನ ಸಂಗತಿ. ಗುರುಗಳ ಮಾರ್ಗದರ್ಶನವಿದ್ದರೆ ಜನಾಂಗಕ್ಕೆ ಒಂದು ಶಕ್ತಿ ಬರುತ್ತದೆ," ಎಂದರು.

"ನಮ್ಮಲ್ಲಿ ಭಿನ್ನಾಭಿಪ್ರಾಯಗಳಿದ್ದರೆ ನಾಲ್ಕು ಗೋಡೆ ಮಧ್ಯೆ ಕುಳಿತು ಬಗೆಹರಿಸಿಕೊಳ್ಳಬೇಕು. ಬೇರೆಯವರಿಗೆ ಗೊತ್ತಾಗಬಾರದು. ಮುಂದೆ ಇಂತಹ ತಪ್ಪು ನಡೆಯಬಾರದೆಂದು ಸಲಹೆ ನೀಡಿದರು. ರಾಜ್ಯದಲ್ಲಿ ಗೊಲ್ಲ ಸಮಾಜ ತುಂಬಾ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಸಿದ್ದರಾಮಯ್ಯನವರು ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಗೊಲ್ಲ ಜನಾಂಗವನ್ನು ಎಸ್ಟಿಗೆ ಸೇರಿಸುವಂತೆ ಕೇಂದ್ರಕ್ಕೆ ಶಿಫಾರಸ್ಸು ಮಾಡಿದ್ದರು. ನಾನು ಕಾಡುಗೊಲ್ಲರ ವಿರೋಧಿ ಎಂದು ಕೆಲವರು ಹೇಳುತ್ತಿದ್ದಾರೆ. ಮಾನವೀಯ ಮೌಲ್ಯವಿಲ್ಲದವರು ಮಾತ್ರ ಇಂತಹ ಅಪಪ್ರಚಾರ ಮಾಡುತ್ತಾರೆಂದು ತಿರುಗೇಟು ನೀಡಿದರು. ಇದೇ ವೇಳೆ ಶಾಸಕರು ಕಾಡುಗೊಲ್ಲರನ್ನು ಎಸ್ಟಿಗೆ ಸೇರಿಸಲೇಬೇಕೆಂದು," ಕೇಂದ್ರ ಸಚಿವರನ್ನು ಒತ್ತಾಯಿಸಿದರು.

ಜಿಲ್ಲಾ ಕಾಡುಗೊಲ್ಲರ ಸಂಘದ ಅಧ್ಯಕ್ಷ ಮೀಸೆ ಮಹಾಲಿಂಗಪ್ಪ ಮಾತನಾಡಿ, "1987-88 ರಿಂದಲೂ ಕಾಡುಗೊಲ್ಲರನ್ನು ಎಸ್ಟಿಗೆ ಸೇರಿಸುವಂತೆ ಅನೇಕ ಹೋರಾಟಗಳನ್ನು ಮಾಡಿಕೊಂಡು ಬರುತ್ತಿದ್ದರೂ, ಜಿಲ್ಲೆಯ ಯಾವೊಬ್ಬ ಶಾಸಕರೂ ನಮ್ಮ ಧ್ವನಿಯನ್ನು ಆಲಿಸುತ್ತಿಲ್ಲ ಎಂದು ಏರುಧ್ವನಿಯಲ್ಲಿ ಖಂಡಿಸಿದರು. 35 ವರ್ಷಗಳಿಂದಲೂ ಮಕ್ಕಳ ಶಿಕ್ಷಣ ಹಾಸ್ಟೆಲ್‍ಗಾಗಿ ಜೀವ ಸವೆಸುತ್ತಿದ್ದೇನೆ. ಎಲ್ಲಾ ಸರ್ಕಾರಗಳು ನಮ್ಮನ್ನು ಕಡೆಗಣಿಸುತ್ತಲೆ ಬರುತ್ತಿವೆ. ಕಮೀಷನ್ ಆಸೆಗಾಗಿ ಸಿಸಿ ರಸ್ತೆಗಳನ್ನು ನಿರ್ಮಿಸಲಾಗುತ್ತಿದೆ. ಇದು ನಿಲ್ಲಬೇಕು," ಎಂದರು.

English summary
I will make an effort to Add the Kadugolla community into the ST after a file review, Union Minister A Narayanaswamy promised.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X