ಸ್ಥಗಿತಗೊಂಡ ಭದ್ರಾ ಜಲಾಶಯದ ನೀರು; ಕೋಡಿ ಬೀಳುವ ಸನಿಹದಲ್ಲಿ ಮಾರಿಕಣಿವೆ ಡ್ಯಾಂ, ನೀರಿನ ಮಟ್ಟ ಎಷ್ಟಿದೆ.?
Vani Vilasa Sagara Dam: ಭದ್ರಾ ಮೇಲ್ದಂಡೆ ಜಲಾಶಯದಿಂದ ವಾಣಿ ವಿಲಾಸ ಜಲಾಶಯಕ್ಕೆ ಹರಿದು ಬರುತ್ತಿದ್ದ ಒಳಹರಿವು ಸ್ಥಗಿತಗೊಂಡಿದೆ. ಪ್ರತಿದಿನ 700 ಕ್ಯೂಸೆಕ್ ನೀರನ್ನು ಭದ್ರಾ ನದಿಯಿಂದ ಹಿರಿಯೂರು ತಾಲ್ಲೂಕಿನ ವಾಣಿ ವಿಲಾಸ ಜಲಾಶಯಕ್ಕೆ ಹರಿಸಲಾಗುತ್ತಿತ್ತು. ಆದರೆ, ಇದೀಗ ಸ್ಥಗಿತಗೊಂಡಿದೆ. ಹಾಗಾದರೆ ಇದೀಗ ನೀರಿನ ಮಟ್ಟ ಎಷ್ಟಿದೆ ಎಂದು ಇಲ್ಲಿ ತಿಳಿಯಿರಿ.
ಇಂದಿನ (ನವೆಂಬರ್ 30) ವರದಿಯಲ್ಲಿ ವಾಣಿ ವಿಲಾಸ ಸಾಗರ ಜಲಾಶಯಕ್ಕೆ ಯಾವುದೇ ಒಳಹರಿವು ನೀರು ಹರಿದು ಬಂದಿಲ್ಲ. ಪ್ರಸ್ತುತ ಜಲಾಶಯದ ನೀರಿನ ಮಟ್ಟ 128.65 ಅಡಿ ಇದೆ. ಜಲಾಶಯ ಕೋಡಿ ಬೀಳಲು ಕೇವಲ 1.35 ಅಡಿ ನೀರು ಬರಬೇಕಿತ್ತು. ಇದೀಗ ಒಳಹರಿವು ಸ್ಥಗಿತಗೊಂಡಿದ್ದರಿಂದ ರೈತರಲ್ಲಿ ಕೋಡಿ ಬೀಳುವ ನಿರಾಸೆ ಮೂಡಿಸಿದೆ.

ಭದ್ರಾ ನೀರು ಹರಿಸುವಂತೆ ಆದೇಶ: ಭದ್ರಾ ಜಲಾಶಯದಿಂದ ವಾಣಿ ವಿಲಾಸ ಜಲಾಶಯಕ್ಕೆ 2025ರ ಜನವರಿವರೆಗೂ ನೀರು ಹರಿಸುವುದನ್ನು ಮುಂದುವರೆಸುವಂತೆ ಕಳೆದ ಮೂರು ದಿನಗಳ ಹಿಂದೆ ಸರ್ಕಾರ ಆದೇಶ ಹೊರಡಿಸಿತ್ತು. ಭದ್ರಾ ಜಲಾಶಯದಿಂದ ಭದ್ರಾ ಮೇಲ್ದಂಡೆ ಯೋಜನೆಗಾಗಿ ಹಂಚಿಕೆಯಾದ 12.50 ಟಿಎಂಸಿ ನೀರಿನ ಪೈಕಿ ತರೀಕೆರೆ ನೀರಾವರಿ ಯೋಜನೆಗೆ 1.47 ಟಿಎಂಸಿ ಹಾಗೂ ವಾಣಿ ವಿಲಾಸ ಸಾಗರಕ್ಕೆ ಎರಡು ಟಿಎಂಸಿಯಂತೆ 3.4 ಟಿಎಂಸಿ ನೀರನ್ನೆತ್ತಲು ಅನುಮತಿ ನೀಡಲಾಗಿತ್ತು.
ಇದೀಗ ಮುಂದುವರೆದು ತರೀಕೆರೆ ಏತ ನೀರಾವರಿ ಯೋಜನೆಗೆ ಸೌಲಭ್ಯ ಕಲ್ಪಿಸಲು ಹಾಗೂ ವಾಣಿ ವಿಲಾಸ ಸಾಗರ ಜಲಾಶಯದಲ್ಲಿ ನೀರು ಸಂಗ್ರಹಿಸುವ ಸಲುವಾಗಿ ಇನ್ನುಳಿದ 9.03 ಟಿಎಂಸಿ ನೀರಿನ ಮಿತಿಯಲ್ಲಿ ಪ್ರತಿದಿನ 700 ಕ್ಯೂಸೆಕ್ ನೀರನ್ನು ಜನವರಿ 2025ರ ವರೆಗೆ ಮಾತ್ರ ಹರಿಸಲು ಅನುಮತಿ ನೀಡಲಾಗಿದೆ ಎಂದು ಜಲಸಂಪನ್ಮೂಲ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ವನಿತಾಮಣಿ ತಿಳಿಸಿದ್ದರು.
ಯಾವ್ಯಾವ ವರ್ಷ ಎಷ್ಟು ನೀರು ಸಂಗ್ರಹ?: ಹಳೇ ಅಣೆಕಟ್ಟುಗಳಲ್ಲಿ ವಾಣಿ ವಿಲಾಸ ಸಾಗರ ಡ್ಯಾಂ ಕೂಡ ಒಂದಾಗಿದೆ ಎನ್ನಬಹುದು. 1907ರಲ್ಲಿ ನಿರ್ಮಾಣ ಆಗಿರುವ ಈ ಡ್ಯಾಂಗೆ ಸುಮಾರು 117 ವರ್ಷಗಳ ಕಾಲ ಇತಿಹಾಸವಿದೆ. 1935ರಲ್ಲಿ ಜಲಾಶಯಕ್ಕೆ 135.25 ಅಡಿ ನೀರು ಸಂಗ್ರಹವಾಗುವ ಮೂಲಕ ಮೊದಲ ಬಾರಿಗೆ ಡ್ಯಾಂ ಕೋಡಿ ಬಿದ್ದು, ಇತಿಹಾಸ ಸೃಷ್ಟಿಸಿತ್ತು.
ಬಳಿಕ ಕಳೆದ ವರ್ಷ 2022ರಲ್ಲಿ ಎರಡನೇ ಬಾರಿಗೆ 135 ಅಡಿ ನೀರು ಸಂಗ್ರಹವಾಗಿ ಡ್ಯಾಂ ಕೋಡಿ ಬಿದ್ದು ಐತಿಹಾಸಿಕ ಸಾಧನೆಗೆ ಕಾರಣವಾಗಿತ್ತು. ಈ ವರ್ಷದಲ್ಲಿ ಒಂದೂವರೆ ಅಡಿ ನೀರು ಬಂದರೆ ಡ್ಯಾಂ ಕೋಡಿ ಬೀಳಲಿದೆ.
1917ರಲ್ಲಿ 120.60 ಅಡಿ, 1918ರಲ್ಲಿ 121.30, 1919ರಲ್ಲಿ 128.30, 1920ರಲ್ಲಿ 125.50, 1932ರಲ್ಲಿ 125.50, ಅಡಿ, 1933ರಲ್ಲಿ 135.25 ಅಡಿ, 1934ರಲ್ಲಿ 130.24 ಅಡಿ, 1935ರಲ್ಲಿ 123,22 ಅಡಿ, 1956ರಲ್ಲಿ 125 ಅಡಿ, 1957ರಲ್ಲಿ 125.05 ಅಡಿ, 1958ರಲ್ಲಿ 124.50 ಅಡಿ, 2000ರಲ್ಲಿ 122.50 ಅಡಿ, 2021ರಲ್ಲಿ 125.50 ಅಡಿ, 2022ರಲ್ಲಿ 135 ಅಡಿ ನೀರು ಸಂಗ್ರಹವಾಗಿತ್ತು.
ಚಿಕ್ಕಮಗಳೂರು ಜಿಲ್ಲೆಯ ಬಾಬು ಬುಡನ್ ಗಿರಿ ಕಂದಕಗಳಲ್ಲಿ ಜನಿಸುವ "ವೇದಾ" ನದಿ ಕಡೂರಿನ ಬಳಿ "ಅವತಿ" ಎಂಬ ನದಿಯನ್ನು ಸೇರಿ ಮುಂದೆ 'ವೇದಾವತಿ' ನದಿಯಾಗಿ ಹರಿಯುತ್ತದೆ. ಇನ್ನು ವಾಣಿ ವಿಲಾಸ ಜಲಾಶಯವನ್ನು ನೋಡಲು ಬಯಸುವ ಪ್ರವಾಸಿಗರು ಹಿರಿಯೂರು ನಗರದಿಂದ ಹೊಸದುರ್ಗ ರಸ್ತೆ ಮಾರ್ಗವಾಗಿ 18 ಕಿಲೋ ಮೀಟರ್ ದೂರದ ಎಡಭಾಗಕ್ಕೆ ಜಲಾಶಯ ತಲುಪಬಹುದು. ಬೆಂಗಳೂರು, ತುಮಕೂರಿನಿಂದ ಹಿರಿಯೂರು ನಗರದ ಮೂಲಕ ಡ್ಯಾಂ ಪ್ರವೇಶಿಸಬಹುದು.












Click it and Unblock the Notifications