ಡೆಡ್ ಸ್ಟೋರೇಜ್ ತಲುಪಿದ್ದ ವಿವಿ ಸಾಗರ ಡ್ಯಾಮ್ 88 ವರ್ಷಗಳ ಬಳಿಕ ಭರ್ತಿಯಾಗಿದ್ದೇಗೆ?
ಚಿತ್ರದುರ್ಗ, ಆಗಸ್ಟ್ 20: ಬಯಲು ಸೀಮೆಯ ಏಕೈಕ ಜಲಪಾತ್ರೆ ಎಂದು ಕರೆಸಿಕೊಳ್ಳುವ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ವಾಣಿ ವಿಲಾಸಪುರ ಬಳಿ ಇರುವ ವಾಣಿವಿಲಾಸ ಸಾಗರ ಜಲಾಶಯ ಡೆಡ್ ಸ್ಟೋರೇಜ್ ತಲುಪಿದ್ದು, ಇದೀಗ ಭರ್ತಿಗೆ ದಿನಗಣನೆ ಆರಂಭವಾಗಿದೆ. ಕೋಡಿ ಬೀಳಲು ಕೇವಲ 2 ಅಡಿ ನೀರು ಬಾಕಿ ಮಾತ್ರ ಬಾಕಿ ಇದೆ.
88 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಭಾರಿ ಪ್ರಮಾಣದ ಜಲಾಶಯಕ್ಕೆ ನೀರು ಸಂಗ್ರಹವಾಗಿದೆ. ಜಲಾಶಯ ಕೋಡಿ ಬೀಳಲು ಕೇವಲ 2 ಅಡಿ ಕಡಿಮೆ ಇದ್ದರೆ, ಮತ್ತೊಂದು ಕಡೆ ಕೋಡಿ ಬೀಳುವ ಐತಿಹಾಸಿಕ ದೃಶ್ಯವನ್ನು ನೋಡಿ ಕಣ್ತುಂಬಿಕೊಳ್ಳಲು ಜನತೆ ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.
130 ಅಡಿ ಎತ್ತರ ಹೊಂದಿರುವ ಡ್ಯಾಮ್, 30 ಟಿಎಂಸಿ ಅಡಿ ನೀರಿನ ಸಾಮರ್ಥ್ಯ ಹೊಂದಿದೆ. 1907 ರಲ್ಲಿ ನಿರ್ಮಾಣವಾದ ಜಲಾಶಯ ಮೊದಲ ಬಾರಿಗೆ 1933ರಲ್ಲಿ ಭರ್ತಿಯಾಗಿ ಕೋಡಿಬಿದ್ದು ದಾಖಲೆ ನಿರ್ಮಿಸಿತ್ತು. ಇದೀಗ ಪ್ರಸ್ತುತ ಜಲಾಶಯದ ನೀರಿನ ಮಟ್ಟ 127.95 ಅಡಿ ನೀರು ಇದೆ.

ಜಲಾಶಯ ಭರ್ತಿಯಾಗಿದ್ದು ಹೇಗೆ?
ಹಿರಿಯೂರು, ಚಳ್ಳಕೆರೆ, ಚಿತ್ರದುರ್ಗದ ಕುಡಿಯುವ ನೀರಿನ ಮೂಲವಾಗಿರುವ ಈ ಜಲಾಶಯ 2017ರಲ್ಲಿ ವಿವಿ ಸಾಗರದ ನೀರಿನ ಮಟ್ಟ 66 ಅಡಿಗೆ ಡೆಡ್ ಸ್ಟೋರೇಜ್ ತಲುಪಿ, ಕುಡಿಯುವ ನೀರಿಗಾಗಿ ಹಾಹಾಕಾರ ಉಂಟಾಗಿತ್ತು. ನೀರು ಇಲ್ಲದೆ ತೋಟಗಳು ಬತ್ತಿ ಹೋಗಿ ಲಕ್ಷಾಂತರ ತೆಂಗು, ಬಾಳೆ, ಅಡಿಕೆ ಮರಗಳು ನಾಶವಾದವು. ಜನರು ಗೂಳೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿತ್ತು.ಇಂತಹ ಸಂದರ್ಭದಲ್ಲಿ ರೈತ ಸಂಘದ ಹೋರಾಟ ಹಾಗೂ ಶಾಸಕಿ ಕೆ. ಪೂರ್ಣಿಮಾ ಶ್ರೀನಿವಾಸ್ ಮತ್ತು ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ಪ್ರಯತ್ನದಿಂದ 2019ರಲ್ಲಿ ಮೊದಲ ಬಾರಿಗೆ ಭದ್ರಾ ಮೇಲ್ದಂಡೆ ಯೋಜನೆಯ ಮೂಲಕ ನೀರು ಹರಿಸಲು ಆರಂಭಿಸಿದರು. ಜಲಾಶಯಕ್ಕೆ ಭದ್ರಾ ಮೇಲ್ದಂಡೆ ಜಲಾಶಯದ ನೀರು ಹಾಗೂ ವರುಣನ ಕೃಪೆಯಿಂದ ಡ್ಯಾಮ್‌ನಲ್ಲಿ ನೀರಿನ ಮಟ್ಟ ಅಧಿಕವಾಯಿತು.
2017 ರಲ್ಲಿ 66.10 ಅಡಿ ಇದ್ದ ನೀರು 2018ರಲ್ಲಿ 67.60 ಅಡಿ ನಂತರ 2019 ರಲ್ಲಿ 102.15 ಅಡಿಗೆ ಏರಿಕೆ ಕಂಡಿತು. 2020ರಲ್ಲಿ 106. ಅಡಿ ನೀರು ಸಂಗ್ರಹವಾಗುವ ಮೂಲಕ ಮತ್ತಷ್ಟು ಹೆಚ್ಚಳವಾಯಿತು. ಕಳೆದ 2021ರಲ್ಲಿ ಜಲಾಶಯದ ನೀರಿನ ಮಟ್ಟ 125.50 ಅಡಿಗೆ ತಲುಪಿ ದಾಖಲೆ ನಿರ್ಮಿಸಿತು. ಈ ವರ್ಷದ ಅಕ್ಟೋಬರ್ 15 ರಿಂದ ವಿವಿ ಸಾಗರಕ್ಕೆ ಭದ್ರಾ ನೀರು ಹರಿಸುವಂತೆ ಸರ್ಕಾರ ಆದೇಶ ಹೊರಡಿಸಿತ್ತು. ಆದರೆ ತಾಂತ್ರಿಕ ಕಾರಣಗಳಿಂದ ನೀರು ಹರಿಸಲಿಲ್ಲ. ಚಿಕ್ಕಮಗಳೂರು ಭಾಗದಲ್ಲಿ ವರುಣದೇವ ಅಬ್ಬರಿಸಿದ್ದರಿಂದ ಪ್ರಸ್ತುತ ವರ್ಷ ಸುಮಾರು 8 ಅಡಿ ನೀರು ಸಂಗ್ರಹವಾಯಿತು.

ಹಿನ್ನೀರು ಹೆಚ್ಚಳ, ಜಲವೃತವಾದ ಬೆಳೆ
ಹಿರಿಯೂರು ತಾಲ್ಲೂಕಿನ ವಾಣಿ ವಿಲಾಸ ಪುರ ಬಳಿ ನಿರ್ಮಿಸಿರುವ ಅಣೆಕಟ್ಟೆ ಬಹುತೇಕ ಹಿನ್ನೀರು ಹೊಸದುರ್ಗ ತಾಲ್ಲೂಕಿನಲ್ಲಿದೆ. ಜಲಾಶಯದಲ್ಲಿ ಹಂತ ಹಂತವಾಗಿ ನೀರಿನ ಸಂಗ್ರಹ ಹೆಚ್ಚುತ್ತಿದ್ದಂತೆಯೇ ಕಂಚಿಪುರ, ಬೇವಿನಹಳ್ಳಿ ಸೇರಿದಂತೆ ಇನ್ನಿತರ ಗ್ರಾಮಗಳ ಜನರಲ್ಲಿ ಭೀತಿ ಶುರುವಾಗಿದೆ. ಮತ್ತೊಂದು ಕಡೆ ಡ್ಯಾಮ್ ಕೋಡಿ ಬಿದ್ದು, 5 ರಿಂದ 15 ಸಾವಿರ ಹೆಚ್ಚು ಕ್ಯೂಸೆಕ್ ಹೊರಹರಿವು ನೀರು ಬಂದರೆ ಹಿರಿಯೂರಿನ ಕೆಲವು ಪ್ರದೇಶಗಳು ಸಹ ಮುಳುಗುವ ಸಾಧ್ಯತೆ ಇದೆ . ಇತ್ತ ಜಲಾಶಯದ ಹಿನ್ನೀರಿನ ಪ್ರದೇಶಗಳಲ್ಲಿ ಹಲವು ಬೆಳೆಗಳು ಜಲಾವೃತವಾಗಿವೆ. ತೊಗರಿ, ತೆಂಗು, ರಾಗಿ, ಅಡಿಕೆ, ಹತ್ತಿ, ಈರುಳ್ಳಿ ಸೇರಿದಂತೆ ಇತರೆ ಬೆಳೆಗಳು ನೀರಿಲ್ಲಿ ಮುಳುಗಿ ಹೋಗಿದ್ದು, ರೈತರಿಗೆ ಲಕ್ಷಾಂತರ ನಷ್ಟ ಸಂಭವಿಸಿದೆ.












Click it and Unblock the Notifications