Vani Vilasa Sagara Dam: ವಿವಿ ಸಾಗರ ಜಲಾಶಯದ ಒಳಹರಿವು ಹೆಚ್ಚಳ, 2022ರ ದಾಖಲೆ ಉಡೀಸ್ ಆಗುತ್ತಾ?
Vani Vilasa Sagara Dam: ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ವರುಣನ ಆರ್ಭಟ ಮುಂದುವರಿದಿದ್ದು, ಇತ್ತ ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯಾದ್ಯಂತ ಕೃತಿಕಾ ಮಳೆ ಅಬ್ಬರ ಮುಂದುವರೆದಿದ್ದು, ಈ ಹಿನ್ನೆಲೆ ಜಿಲ್ಲೆಯ ಜೀವನಾಡಿಯಾದ ಹಿರಿಯೂರು ತಾಲೂಕಿನ ವಾಣಿ ವಲಾಸ ಸಾಗರ ಜಲಾಶಯದ ಒಳಹರಿವಿನ ಪ್ರಮಾಣ ಹೆಚ್ಚಾಗಿದೆ. ಹಾಗಾದರೆ ಇದೀಗ ಇಂದು (ಮೇ 21) ನೀರಿನ ಮಟ್ಟ ಎಷ್ಟಿದೆ ಎನ್ನುವ ಅಂಕಿಅಂಶಗಳನ್ನು ಇಲ್ಲಿ ಗಮನಿಸಿ.
ಸೋಮವಾರ (ಮೇ 20) ಸಂಜೆಯಿಂದ ಆರಂಭವಾದ ಮಳೆ ಸಮಯ ಕಳೆದಂತೆ ಬಿರುಸು ಪಡೆಯಿತು. ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಚರಂಡಿ ಕಾಲುವೆಗಳು, ಸಣ್ಣಪುಟ್ಟ ಕೆರೆಕಟ್ಟೆಗಳು ತುಂಬಿ ಹರಿದವು. ಇನ್ನು ನಗರದ ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿ ಅವಾಂತರಗಳು ಕೂಡ ಸೃಷ್ಟಿಯಾಗಿವೆ.

ಒಳಹರಿವು ಹೆಚ್ಚಳ: ಜಿಲ್ಲೆಯ ಜೀವನಾಡಿಯಾಗಿರಯವ ಹಿರಿಯೂರು ತಾಲೂಕಿನ ವಾಣಿವಿಲಾಸ ಜಲಾಶಯಕ್ಕೆ ಒಳಹರಿವು ಹೆಚ್ಚಾಗುತ್ತಲೇ ಇದೆ. ವಿವಿ ಸಾಗರಕ್ಕೆ 5,100 ಕ್ಯೂಸೆಕ್ ಒಳಹರಿವು ನೀರು ಸಂಗ್ರಹವಾಗಿದ್ದು, ಇದರಿಂದ ಪ್ರಸ್ತುತ ಜಲಾಶಯದ ನೀರಿನ ಮಟ್ಟ 112,70 ಅಡಿ ಇದೆ. ಪ್ರಸಕ್ತ ಸಾಲಿನಲ್ಲಿ ಜಲಾಶಯಕ್ಕೆ 1 ಅಡಿಗೂ ಹೆಚ್ಚು ನೀರು ಸಂಗ್ರಹವಾಗಿದೆ. ಇನ್ನು ಹೀಗೆ ಮಳೆ ಮುಂದುವರೆದರೆ, ಈ ವರ್ಷ ಡ್ಯಾಂ ಕೋಡಿ ಬೀಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
3,800 ಕ್ಯೂಸೆಕ್ ಒಳಹರಿವು: ಮೊನ್ನೆಯಷ್ಟೇ ಜಿಲ್ಲೆಯಲ್ಲಿ ಅಬ್ಬರಿಸಿದ ಕೃತಿಕಾ ಮಳೆಯಿಂದ ಹೊಸದುರ್ಗ ತಾಲೂಕಿನ ಕೆಲ್ಲೋಡ್ ಚೆಕ್ ಡ್ಯಾಂ ಒಂದೇ ದಿನಕ್ಕೆ ಭರ್ತಿಯಾಗಿ ನೀರು ವಿವಿ ಸಾಗರ ಜಲಾಶಯದ ಕಡೆಗೆ ಹರಿದು ಬಂದಿತ್ತು. ಈ ನಿಟ್ಟಿನಲ್ಲಿ ಜಲಾಶಯಕ್ಕೆ 3,800 ಕ್ಯೂಸೆಕ್ ಒಳಹರಿವು ನೀರು ಸಂಗ್ರಹವಾಗಿದೆ. ಇದರಿಂದ ಪ್ರಸ್ತುತ ಜಲಾಶಯದ ನೀರಿನ ಮಟ್ಟ 112 ಅಡಿ ನೀರು ತಲುಪಿದೆ. 0.55 ಅರ್ಧ ಅಡಿ ನೀರು ಸಂಗ್ರಹವಾಗಿದೆ. ಇನ್ನು ವಿವಿ ಸಾಗರ ಡ್ಯಾಂ 30 ಟಿಎಂಸಿ ನೀರಿನ ಸಾಮರ್ಥ್ಯ ಹೊಂದಿದೆ.
ಕಳೆದ 2022ರಲ್ಲಿ ಜಲಾಶಯಕ್ಕೆ 135 ಅಡಿಗೂ ಹೆಚ್ಚು ನೀರು ಸಂಗ್ರಹವಾಗುವ ಮೂಲಕ ಎರಡನೇ ಬಾರಿಗೆ ಜಲಾಶಯ ಕೊಡಿ ಬಿದ್ದಿತ್ತು. 2023ರಲ್ಲಿ ಮಳೆ ಇಲ್ಲದ ಕಾರಣ ಜಲಾಶಯಕ್ಕೆ ಯಾವುದೇ ಹೇಳಿಕೊಳ್ಳುವಂತಹ ಒಳಹರಿವು ನೀರು ಸಂಗ್ರಹವಾಗಿರಲಿಲ್ಲ. ಇದೀಗ ಆರಂಭದಲ್ಲಿಯೇ ಜಲಾಶಯಕ್ಕೆ ಒಳಹರಿವು ಹರಿದು ಬರುತ್ತಿದ್ದು, ಈ ಭಾಗದ ರೈತರಲ್ಲಿ ಹೊಸ ಆಶಾಭಾವನೆ ಮೂಡಿಸಿದೆ. ಇದೇ ರೀತಿ ಇನ್ನೊಂದು ವಾರದಲ್ಲಿ ಹೆಚ್ಚು ಮಳೆ ಬಂದು ಜಲಾಶಯಕ್ಕೆ ನೀರು ಹರಿದು ಬಂದರೆ ಜಲಾಶಯದ ನೀರಿನ ಮಟ್ಟ 120 ಅಡಿ ತಲುಪುವ ಸಾಧ್ಯತೆ ಇರುತ್ತದೆ.
ಇತ್ತ ಹಿರಿಯೂರು ತಾಲೂಕಿನಲ್ಲಿ ಅಬ್ಬರದ ಮಳೆಯಾಗಿದ್ದು, ಧರ್ಮಪುರ ಹೋಬಳಿಯಿಂದ ಅರಳಿಕೆರೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕುಸಿದಿದ್ದು, ಈ ರಸ್ತೆಯಲ್ಲಿ ಪ್ರಯಾಣಿಸಿದ ಕಾರೊಂದು ಗುಂಡಿಯಲ್ಲಿ ಸಿಕ್ಕಿಹಾಕಿಕೊಂಡ ಘಟನೆ ನಡೆದಿದೆ. ಈ ವೇಳೆ ಸದ್ಯ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಇನ್ನು ಚಳ್ಳಕೆರೆ ತಾಲ್ಲೂಕಿನ ನಾಯಕನಹಟ್ಟಿಯಲ್ಲಿ 5 ಸೆಂಟಿ ಮೀಟರ್ ಮಳೆ, ಹೊಳಲ್ಕೆರೆ ಚಿಕ್ಕಜಾಜೂರಿನಲ್ಲಿ 3 ಸೆಂಟಿ ಮೀಟರ್ ಸುರಿದೆ ಎಂದು ತಿಳಿದುಬಂದಿದೆ.












Click it and Unblock the Notifications