ಚಿತ್ರದುರ್ಗ; ಬ್ರಿಡ್ಜ್‌ಗಳ ಕೆಳಗೆ ನೀರು ಶೇಖರಣೆಯಾಗದಂತೆ ಕ್ರಮ ಕೈಗೊಳ್ಳಿ, ಕೇಂದ್ರ ಸಚಿವ ಸೂಚನೆ
ಚಿತ್ರದುರ್ಗ, ಅಕ್ಟೋಬರ್, 21: ಜಿಲ್ಲಾ ವ್ಯಾಪ್ತಿಯ ರೈಲ್ವೆ ಅಂಡರ್, ಪ್ಲೈ ಓವರ್ ಬ್ರಿಡ್ಜ್‌ಗಳಲ್ಲಿ ಮಳೆ ನೀರು ಶೇಖರಣೆಯಾಗದ ರೀತಿ ಶಾಶ್ವತ ಪರಿಹಾರ ಕಾರ್ಯ ಕೈಗೊಳ್ಳುವಂತೆ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ರೈಲ್ವೆ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲೆಯ ರೈಲ್ವೆ ಅಂಡರ್, ಓವರ್ ಬ್ರಿಡ್ಜ್‌ಗಳ ಸಮಸ್ಯೆ ಕುರಿತು ಸಾರ್ವಜನಿಕರಿಂದ ದೂರು ಬಂದಿದ್ದವು. ಅಹವಾಲುಗಳಲ್ಲಿ ಪ್ರಸ್ತಾಪಿಸಿರುವ ಸಮಸ್ಯೆಗಳ ಪರಿಹಾರಕ್ಕೆ ಮತ್ತು ಅಗತ್ಯತೆಗಳ ಪೂರೈಕೆಗೆ ಸಂಬಂಧಪಟ್ಟಂತೆ ರೈಲ್ವೆ ಇಲಾಖೆ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಈ ಬಾರಿ ಹೆಚ್ಚಿನ ಮಳೆ ಆಗಿದ್ದರಿಂದ ರೈಲ್ವೆ ಅಂಡರ್ ಹಾಗೂ ಓವರ್ ಬ್ರಿಡ್ಜ್‌ಗಳಲ್ಲಿ ಮಳೆ ನೀರು ಶೇಖರಣೆಯಾಗಿದೆ. ಇದರಿಂದ ಸಾರ್ವಜನಿಕರ ಓಡಾಟಕ್ಕೆ, ವಾಹನ ಸಂಚಾರಕ್ಕೆ ತೀವ್ರ ತೊಂದರೆ ಆಗುತ್ತಿರುವ ಬಗ್ಗೆ ದೂರುಗಳು ಬರುತ್ತಿದೆ. ಕಳೆದ ಎರಡು ವರ್ಷಗಳ ಹಿಂದೆ ರೈಲ್ವೆ ಕೆಳ ಸೇತುವೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪರಿಹಾರ ಕೈಗೊಳ್ಳುವಂತೆ ಸೂಚನೆ ನೀಡಿದರೂ ಅಗತ್ಯ ಕ್ರಮ ಕೈಗೊಂಡಿಲ್ಲ. ಹಾಗಾಗಿ ಶಾಶ್ವತ ಪರಿಹಾರ ಕಾರ್ಯಕ್ಕಾಗಿ ಹೊಸದಾಗಿ ಸೆನ್ಸರ್ ಪಂಪ್ ಅಳವಡಿಕೆಗೆ ಕ್ರಮ ಕೈಗೊಳ್ಳುವಂತೆ ತಾಕೀತು ಮಾಡಿದರು.
ಹಿರೇಗುಂಟನೂರು, ಹಳಿಯೂರು ರಸ್ತೆ, ಮೆದೇಹಳ್ಳಿ ರಸ್ತೆ, ಗೋನೂರು-ಚಿತ್ರದುರ್ಗ ರೈಲ್ವೆ ಅಂಡರ್ ಬ್ರಿಡ್ಜ್‌ಗಳಲ್ಲಿ ಒಂದುವರೆ ಅಡಿ ಮಳೆ ನೀರು ನಿಂತಿದೆ. ಇದರಿಂದ ಗಂಭೀರ ಸಮಸ್ಯೆ ಆಗಿದ್ದು, ಈ ಸಮಸ್ಯೆಯನ್ನು ಹೇಗೆ ಬಗೆಹರಿಸುತ್ತೀರಾ ಎಂದು ಸಚಿವರು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ರೈಲ್ವೆ ಇಲಾಖೆ ಅಧಿಕಾರಿ ರವಿಚಂದ್ರನ್, ರೈಲ್ವೆ ಬ್ರಿಡ್ಜ್‌ಗಳಲ್ಲಿ ಮಳೆ ನೀರು ನಿಲ್ಲದಂತೆ ಕ್ರಮ ವಹಿಸಲಾಗುತ್ತಿದೆ. ಹೆಚ್ಚುವರಿ ಪಂಪ್ ಅವಳಡಿಸಿ, ನೀರು ಹಾಕಲು ಸೂಕ್ತ ವ್ಯವಸ್ಥೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಅಧಿಕಾರಿಗಳಿಗೆ ಕೇಂದ್ರ ಸಚಿವರಿಂದ ಕ್ಲಾಸ್
ರೈಲ್ವೆ ಅಂಡರ್ ಬ್ರಿಡ್ಜ್‌ಗಳಲ್ಲಿ ಹೆಚ್ಚಿನ ಪ್ರಮಾಣದ ಮಳೆ ನೀರು ಶೇಖರಣೆ ಆಗಿರುವುದರಿಂದ ರಸ್ತೆಯು ಹಾಳಾಗಿದೆ. ಇದೇ ರೀತಿ ಜಿಲ್ಲೆಯ ಉಳಿದ ರೈಲ್ವೆ ಅಂಡರ್ ಬ್ರಿಡ್ಜ್‌ಗಳ ಬಳಿ ಹಾಳಾದ ರಸ್ತೆಯ ದುರಸ್ಥಿ ಕಾರ್ಯ ಮಾಡುವಂತೆ ರೈಲ್ವೆ ಇಲಾಖೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಅಂಡರ್ ಬ್ರಿಡ್ಜ್‌ಗಳಿಗೆ ರೈಲ್ವೆ, ಲೋಕೋಪಯೋಗಿ, ಪಂಚಾಯತ್ ರಾಜ್ ಇಂಜಿನಿಯರಿಂಗ್ ಹಾಗೂ ನಗರಸಭೆ ಅಧಿಕಾರಿಗಳು ಜಂಟಿಯಾಗಿ ಸ್ಥಳ ವೀಕ್ಷಣೆ ಮಾಡಿ. ಮಳೆ ನೀರು ಬಾರದಂತೆ ತಡೆಯುವುದರ ಬಗ್ಗೆ ಯೋಚಿಸಿ ತಡೆಗೋಡೆ ನಿರ್ಮಾಣ ಗುರುತಿಸಬೇಕು. ಹಾಗೂ ಶಾಶ್ವತ ಪರಿಹಾರಕ್ಕಾಗಿ ಸೆನ್ಸಾರ್ ಮೋಟಾರ್ ಪಂಪ್ ಅಳವಡಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಆದಷ್ಟು ಬೇಗ ದುರಸ್ಥಿಗೆ ಕ್ರಮ ಕೈಗೊಳ್ಳಿ
ದಾವಣಗೆರೆ-ಚಿತ್ರದುರ್ಗ-ತುಮಕೂರು ನೇರ ರೈಲ್ವೆ ಮಾರ್ಗಕ್ಕೆ ಸಂಬಂಧಪಟ್ಟಂತೆ ತುಮಕೂರಿನಿಂದ ಶಿರಾದವರೆಗೆ ಕೆಲಸ ಬಾಕಿ ಇದೆ. ಇದಕ್ಕೆ ಬೇಕಾದ ಅನುದಾನವೂ ಲಭ್ಯವಿದೆ. ಇನ್ನು ಶಿರಾದಿಂದ ಹಿರಿಯೂರಿನವರೆಗೆ 8 ಕಿಲೋ ಮೀಟರ್ ಕೆಲಸ ಆಗಬೇಕಿದೆ. ಇನ್ನೂ 12 ಕಿಲೋ ಮೀಟರ್ ದುರಸ್ತಿ ಕಾರ್ಯ ಆದರೆ ತುಮಕೂರು ಹಾಗೂ ಶಿರಾ ಟೆಂಡರ್ ಪ್ರಕ್ರಿಯೆ ನಡೆಯಲಿದೆ. ದಾವಣಗೆರೆಯಿಂದ ಭರಮಸಾಗರ ಗಡಿವರೆಗೂ ಟೆಂಡರ್ ಪ್ರಕ್ರಿಯೆ ಮುಕ್ತಾಯವಾಗಿದೆ. ಭರಮಸಾಗರದಿಂದ ಸಿರಿಗೆರೆವರೆಗೂ ಕೆಲಸ ಬಾಕಿ ಇದೆ. ಇದು ಮುಕ್ತಾಯವಾದ ನಂತರ ಟೆಂಡರ್ ಪ್ರಕ್ರಿಯೆ ನಡೆಯಲಿದೆ. ಚಿತ್ರದುರ್ಗದಿಂದ ಶಿರಾದವರೆಗೆ ಇನ್ನೂ 100 ಕೋಟಿ ರೂಪಾಯಿ ಅನುದಾನದ ಅವಶ್ಯಕತೆ ಇದೆ. ಈಗಾಗಲೇ ಮುಖ್ಯಮಂತ್ರಿಗಳೊಂದಿಗೆ ಈ ಬಗ್ಗೆ ಚರ್ಚಿಸಲಾಗಿದೆ. ತುಮಕೂರು ಹಾಗೂ ದಾವಣಗೆರೆ ಎರಡು ಕಡೆಗಳಿಂದಲೂ ಕಾಮಗಾರಿಯನ್ನು ಪ್ರಾರಂಭ ಮಾಡಲು ಸೂಚನೆ ನೀಡಲಾಗಿದೆ ಎಂದು ಹೇಳಿದರು.

ಸಂಚಾರಕ್ಕೆ ಸಮಸ್ಯೆ ಆಗಬಾರದು
ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಮಾತನಾಡಿ, ರೈಲ್ವೆ ಅಂಡರ್ ಹಾಗೂ ಓವರ್ ಬ್ರಿಡ್ಜ್‌ಗಳಿಗೆ ಕೇವಲ ಮಳೆ ನೀರು ನಿಂತಾಗ ಮಾತ್ರ ಅಲ್ಲದೇ, ನಿಯಮಿತವಾಗಿ ವೀಕ್ಷಣೆ ಮಾಡಬೇಕು. ಸಾರ್ವಜನಿಕರಿಗೆ ಸಂಚಾರಕ್ಕೆ ಸಮಸ್ಯೆ ಆಗದಂತೆ ಅಗತ್ಯ ಕ್ರಮವಹಿಸಬೇಕು ಎಂದು ಸೂಚನೆ ನೀಡಿದರು. ಚಿತ್ರದುರ್ಗ ನಗರದ ಎಪಿಎಂಸಿಯಲ್ಲಿ ರೈಲ್ವೆ ಇಲಾಖೆ ವತಿಯಿಂದ ಕೈಗೊಂಡಿರುವ ಕಾಮಗಾರಿ ಬಹಳ ನಿಧಾನಗತಿಯಲ್ಲಿ ನಡೆಯುತ್ತಿದೆ ಎಂದು ಸಾರ್ವಜನಿಕರಿಂದ ದೂರುಗಳು ಬರುತ್ತಿವೆ. ಸೂಕ್ತ ಮಾರ್ಗದರ್ಶನ ನೀಡಿ ತ್ವರಿತಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ರೈಲ್ವೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಇಲಾಖಾವಾರು ಅಧಿಕಾರಿಗಳು ಹಾಜರು
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣ, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಡಾ.ರಂಗಸ್ವಾಮಿ, ಹುಬ್ಬಳಿಯ ನೈರುತ್ಯ ರೈಲ್ವೆ ಇಲಾಖೆ ಮುಖ್ಯ ಯೋಜನಾ ನಿರ್ದೇಶಕ ವಿಜಯ್ ಕಿಟಕಿ, ವಿಭಾಗೀಯ ರೈಲ್ವೆ ವ್ಯವಸ್ಥಾಪಕ ರಾಹುಲ್ ಅಗರ್‌ವಾಲ್, ವಿಭಾಗೀಯ ಅಭಿಯಂತರ ಸಮನ್ವಯಾಧಿಕಾರಿ ರವಿಚಂದ್ರನ್, ವಿಭಾಗೀಯ ಅಭಿಯಂತರ ರೋಹನ್ ಡೋಂಗ್ರೆ, ಸಹಾಯಕ ವಿಭಾಗೀಯ ಅಭಿಯಂತರ ಶುಭಂ ಶರ್ಮ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.












Click it and Unblock the Notifications