ನಾಯಕನಹಟ್ಟಿ ಪ.ಪಂ ಕಾಂಗ್ರೆಸ್ ಮಡಿಲಿಗೆ; ಸಚಿವ ಶ್ರೀರಾಮುಲುಗೆ ಮುಖಭಂಗ
ಚಿತ್ರದುರ್ಗ, ಡಿಸೆಂಬರ್ 30: ಮಧ್ಯ ಕರ್ನಾಟಕದ ಚಿತ್ರದುರ್ಗ ಜಿಲ್ಲೆಯಲ್ಲಿ ಭಾರಿ ಕೂತೂಹಲ ಮೂಡಿಸಿದ್ದ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಪಟ್ಟಣ ಪಂಚಾಯಿತಿ ಫಲಿತಾಂಶ ಪ್ರಕಟಗೊಂಡಿದ್ದು, ಅಚ್ಚರಿ ರೀತಿಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೇರಿದೆ.
ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಹಾಗೂ ಸಾರಿಗೆ ಸಚಿವ ಬಿ. ಶ್ರೀರಾಮುಲು ಭಾರೀ ಮುಖಭಂಗ ಅನುಭವಿಸಿದ್ದು, ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನಾಯಕನಹಟ್ಟಿ ಪಟ್ಟಣ ಪಂಚಾಯತಿ ಚುನಾವಣೆಯಲ್ಲಿ 16 ವಾರ್ಡ್‌ಗಳಲ್ಲಿ ಕಾಂಗ್ರೆಸ್ 11 ಕ್ಷೇತ್ರದಲ್ಲಿ ಜಯಭೇರಿ ಬಾರಿಸಿದೆ, 3 ಸ್ಥಾನಗಳಲ್ಲಿ ಪಕ್ಷೇತರ ಅಭ್ಯರ್ಥಿಗಳು ಗೆಲುವಿನ ನಗೆ ಬೀರಿದ್ದರೆ, ಬಿಜೆಪಿ 2 ಸ್ಥಾನಗಳಿಗೆ ತೃಪ್ತಿ ಪಟ್ಟುಕೊಂಡು ಮೂರನೇ ಸ್ಥಾನಕ್ಕೆ ಇಳಿದಿದೆ.
ಇನ್ನು ಗೆದ್ದಿರುವ ಮೂವರು ಪಕ್ಷೇತರ ಅಭ್ಯರ್ಥಿಗಳಾದ ದುರ್ಗಪ್ಪ, ಕುಮಾರ್, ಉಮಾಪತಿ ಇವರು ಕಾಂಗ್ರೆಸ್ ಬಂಡಾಯ ಅಭ್ಯರ್ಥಿಗಳಾಗಿ ಸ್ಪರ್ಧಿಸಿ ಗೆಲುವು ಕಂಡಿದ್ದಾರೆ. ಬಿಜೆಪಿ ತೆಕ್ಕೆಯಲ್ಲಿದ್ದ ನಾಯಕನಹಟ್ಟಿ ಪಟ್ಟಣ ಪಂಚಾಯತಿಯಲ್ಲಿ ಇದೀಗ ಕಾಂಗ್ರೆಸ್ ಬಹುಮತ ಪಡೆಯುವುದರ ಮೂಲಕ ಆಡಳಿತ ಚುಕ್ಕಾಣಿ ಹಿಡಿದಿದೆ.

2018ರ ವಿಧಾನಸಭಾ ಚುನಾವಣೆಯಲ್ಲಿ ಬಿ. ಶ್ರೀರಾಮುಲು ಎದುರು ಪರಾಭವಗೊಂಡಿದ್ದ ಕಾಂಗ್ರೆಸ್ ಪಕ್ಷದ ಯೋಗೀಶ್ ಬಾಬು ನೇತೃತ್ವದಲ್ಲಿ ಭರ್ಜರಿ ಗೆಲುವು ಸಾಧಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಯೋಗೀಶ್ ಬಾಬು, "ಈ ಗೆಲುವು ನಮ್ಮ ಕಾಂಗ್ರೆಸ್ ಪಕ್ಷದ ಗೆಲುವು, ಕ್ಷೇತ್ರದ ಜನರು ಸಚಿವ ಬಿ. ಶ್ರೀರಾಮುಲುರವರ ಆಡಳಿತವನ್ನು ವಿರೋಧಿಸಿದ್ದಾರೆ. ಕ್ಷೇತ್ರದಲ್ಲಿ ಶೂನ್ಯ ಅಭಿವೃದ್ಧಿಯಾಗಿದೆ. ಕ್ಷೇತ್ರದಲ್ಲಿ ಸಚಿವರ ಆಪ್ತ ಸಲಹೆಗಾರರ ದರ್ಬಾರ್ ಮಿತಿ ಮೀರಿದ ವರ್ತನೆ ನೋಡಿರುವ ಮತದಾರರು ಕಾಂಗ್ರೆಸ್ ಪಕ್ಷವನ್ನು ಬೆಂಬಲಸಿದ್ದಾರೆ''.
ಹೊರಗಿನಿಂದ ಬಂದು ಗೆದ್ದು ಶಾಸಕನಾಗಿ, ಮಂತ್ರಿಯಾದ ಶ್ರೀರಾಮುಲುರಿಗೆ ಇದೊಂದು ಪಾಠ. ಶ್ರೀರಾಮುಲು ಅವರ ಕ್ಷೇತ್ರಕ್ಕಿಂತ ಬೇರೆ ಕ್ಷೇತ್ರಗಳ ಮೇಲೆ ಹೆಚ್ಚು ಪ್ರೀತಿ. ಜಿಲ್ಲಾ ಉಸ್ತುವಾರಿ ಸಚಿವರು ಈಗಿಂದಲೇ ಬೇರೆ ಕ್ಷೇತ್ರ ನೋಡಿಕೊಳ್ಳಲಿ ಎಂದು ಯೋಗಿಶ್ ಬಾಬು ಶ್ರೀರಾಮುಲುಗೆ ಟಾಂಗ್ ನೀಡಿದರು. ಕ್ಷೇತ್ರದ ಮತದಾರರು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವುದರ ಮೂಲಕ ಬಹುಮತ ಪಡೆದಿದ್ದೇವೆ. ಇದು ಮುಂದಿನ ಚುನಾವಣೆಗೆ ಬುನಾದಿ ಎಂದು ಯೋಗೀಶ್ ಬಾಬು ತಿಳಿಸಿದರು.

ಗ್ರಾಪಂ ಉಪಚುನಾವಣೆ ಫಲಿತಾಂಶ
ಹಿರಿಯೂರು ತಾಲ್ಲೂಕಿನ ಹರ್ತಿಕೋಟೆ ಗ್ರಾಮ ಪಂಚಾಯಿತಿಯ ಹರ್ತಿಕೋಟೆ 1 ಹಾಗೂ ಧರ್ಮಪುರ ಗ್ರಾಮ ಪಂಚಾಯಿತಿ ಕೃಷ್ಣಾಪುರ ಕ್ಷೇತ್ರಕ್ಕೆ ಉಪ ಚುನಾವಣೆ ನಡೆದಿದ್ದು, ಗುರುವಾರ ಫಲಿತಾಂಶ ಪ್ರಕಟಗೊಂಡಿದೆ.
ಹರ್ತಿಕೋಟೆ ಗ್ರಾ.ಪಂ ಉಪ ಚುನಾವಣೆಯಲ್ಲಿ ಚಂದ್ರಶೇಖರಯ್ಯ ವಿರುದ್ಧ ಮಹೇಶ್ವರಿ 546 ಮತ ಪಡೆದು ಆಯ್ಕೆಯಾಗಿದ್ದಾರೆ. ಇನ್ನು ಕೃಷ್ಣಾಪುರ ಕ್ಷೇತ್ರದ ಉಪ ಚುನಾವಣೆಯಲ್ಲಿ ಜುಂಜಪ್ಪ, ಜಯಲಕ್ಷ್ಮಿ, ರಾಜೇಶ ಮೂವರು ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಜಯಲಕ್ಷ್ಮಿ ವಿರುದ್ಧ ಜುಂಜಪ್ಪ 336 ಮತಗಳಿಂದ ಜಯ ಸಾಧಿಸಿದ್ದಾರೆ. ಜಯಲಕ್ಷ್ಮಿ 141, ರಾಜೇಶ 04 ಮತ ಪಡೆದರೆ 06 ಮತಗಳು ತಿರಸ್ಕೃತಗೊಂಡಿವೆ.
ಚಳ್ಳಕೆರೆ ಫಲಿತಾಂಶ
ಚಳ್ಳಕೆರೆ ತಾಲೂಕಿನ ನಗರಂಗೆರೆ, ಪಗಡಲಬಂಡೆ ಹಾಗೂ ಸಿದ್ದೇಶ್ವರನದುರ್ಗ ಗ್ರಾಮ ಪಂಚಾಯಿತಿಯ ಉಪ ಚುನಾವಣೆ ಫಲಿತಾಂಶ ಪ್ರಕಟಗೊಂಡಿದೆ. ಇನ್ನು ಹೊಸದುರ್ಗ ತಾಲ್ಲೂಕಿನ ಜಾನಕಲ್ಲು, ಕೈನಡು ಗ್ರಾಮ ಪಂಚಾಯಿತಿ ಹಾಗೂ ಚಿತ್ರದುರ್ಗ ತಾಲೂಕಿನ ತುರುವನೂರು ಗ್ರಾಮ ಪಂಚಾಯಿತಿಯ ಮೂರು ಕ್ಷೇತ್ರ, ಜಾನುಕೊಂಡ, ಬ್ಯಾಲಾಳು ಗ್ರಾಮ ಪಂಚಾಯಿತಿಯ ಉಪ ಚುನಾವಣೆ ಫಲಿತಾಂಶ ಪ್ರಕಟಗೊಂಡಿದೆ.
ಒಟ್ಟಾರೆಯಾಗಿ ಚಿತ್ರದುರ್ಗ ಜಿಲ್ಲೆಯ ನಾಯಕನಹಟ್ಟಿ ಪಟ್ಟಣ ಪಂಚಾಯಿತಿ ಕಾಂಗ್ರೆಸ್ ತೆಕ್ಕೆಗೆ ತೆಗೆದುಕೊಳ್ಳುವುದರ ಜೊತೆಗೆ ಗ್ರಾಮ ಪಂಚಾಯಿತಿ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಈ ಚುನಾವಣೆಯಿಂದ ಚಿತ್ರದುರ್ಗ ಜಿಲ್ಲೆಯಲ್ಲಿ ಬಿಜೆಪಿ ಪಕ್ಷಕ್ಕೆ ಹಿನ್ನಡೆ ಉಂಟಾಗಿದೆ.
ಮತ ಎಣಿಕೆ ಕಾರ್ಯ ಬೆಳಗ್ಗೆ 8 ಗಂಟೆಗೆ ಆರಂಭವಾಯಿತು. ನಾಯಕನಹಟ್ಟಿ ಪಟ್ಟಣ ಪಂಚಾಯಿತಿ ಮತ ಎಣಿಕೆ ಕಾರ್ಯ ಚಳ್ಳಕೆರೆಯ ಡಿಗ್ರಿ ಕಾಲೇಜಿನಲ್ಲಿ ನಡೆಯಿತು. ಹಿರಿಯೂರು ಗ್ರಾಮ ಪಂಚಾಯಿತಿ ಉಪ ಚುನಾವಣೆ ಮತ ಎಣಿಕೆ ತಾಲೂಕು ಕಚೇರಿ ಸಭಾಂಗಣದಲ್ಲಿ ನಡೆಯಿತು.












Click it and Unblock the Notifications