ಚಿತ್ರದುರ್ಗ: ರಾಷ್ಟ್ರೀಯ ಹೆದ್ದಾರಿಯಲ್ಲಿ ಎರಡು ಲಾರಿಗಳು ಧಗಧಗ
ಹಿರಿಯೂರು, ಮೇ, 19: ಪ್ರತ್ಯೇಕ ಘಟನೆಯಲ್ಲಿ ನಿಲ್ಲಿಸಿದ್ದ ಎರಡು ಲಾರಿಗಳಲ್ಲಿ ಆಕಸ್ಮಿಕ ಬೆಂಕಿ ಸಂಭವಿಸಿದ್ದು, ಎರಡು ಲಾರಿಯ ಮುಂಭಾಗದಲ್ಲಿ ಸಂಪೂರ್ಣ ಸುಟ್ಟು ಹೋದ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನಲ್ಲಿ ನಡೆದಿದೆ.
ನಗರದ ರಾಷ್ಟ್ರೀಯ ಹೆದ್ದಾರಿ ನಾಲ್ಕರ ಬೆಂಗಳೂರು ರಸ್ತೆಯ ಸ್ವಾಮಿಯಪ್ಪ ಹೋಟೆಲ್ ಬಳಿ ರಸ್ತೆಯ ಪಕ್ಕದಲ್ಲಿ ತಮಿಳುನಾಡು ನಂಬರ್‌ನ ಲಾರಿಯ ಮುಂಭಾಗದಲ್ಲಿ ಬೆಂಕಿ ಕಾಣಿಸಿಕೊಂಡು, ಹೊತ್ತಿ ಉರಿದಿದೆ. ಇದಲ್ಲದೆ ತಾಲೂಕಿನ ಕೆ.ಆರ್.ಹಳ್ಳಿ ಗೇಟ್ ಬಳಿಯ ಡಾಬಾ ಹೋಟೆಲ್ ಬಳಿ ನಿಲ್ಲಿಸಿದ್ದ ಟ್ರಕ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಮುಂಭಾಗದಲ್ಲಿ ಸುಟ್ಟು ಕರಕಲಾಗಿದೆ.

ಇನ್ನು ಸ್ಥಳೀಯರ ಮಾಹಿತಿ ಮೇರೆಗೆ ತಕ್ಷಣ ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಭೇಟಿ ನೀಡಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಘಟನೆ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಬರಬೇಕಿದೆ.
ಸುಟ್ಟು ಕರಕಲಾದ ಕುರಿ ಶೆಡ್‌ಗಳು: ಚಿತ್ರದುರ್ಗ ಜಿಲ್ಲೆಯ ಜವನಗೊಂಡನಹಳ್ಳಿ ಹೋಬಳಿ ಓಣಿಹಟ್ಟಿ ಗ್ರಾಮದಲ್ಲಿ ಆಕಸ್ಮಿಕ ಬೆಂಕಿ ಅನಾಹುತದಿಂದ 35ಕ್ಕೂ ಹೆಚ್ಚು ಕುರಿಗಳು ಮೃತಪಟ್ಟ ಹಾಗೂ ಎರಡು ಕುರಿ ಶೆಡ್‌ಗಳು ಸುಟ್ಟು ಕರಕಲಾಗಿರುವ ಘಟನೆ ಮಾರ್ಚ್ 30ರಂದು ಸಂಜೆ ನಡೆದಿದೆ.
ಹಿರಿಯೂರು ತಾಲೂಕಿನ ಓಣಿಹಟ್ಟಿ ಗ್ರಾಮದ ಚಿತ್ತಪ್ಪ, ಶಿವಣ್ಣ, ಚಿತ್ತಯ್ಯ ಅವರಿಗೆ ಸೇರಿದ ಕುರಿಗಳು ಹಾಗೂ ಎರಡು ಕುರಿ ಶೆಡ್‌ಗಳು ಸುಟ್ಟು ಕರಕಲಾಗಿವೆ. ಶನಿವಾರ ಸಂಜೆ ಸುಮಾರು 4 ಗಂಟೆ ವೇಳೆಗೆ 30*40*40 ಅಳತೆಯ ಎರಡು ಕುರಿ ಶೆಡ್‌ಗಳಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ವ್ಯಾಪಕವಾಗಿ ಹರಡಿದೆ.
ಇನ್ನು ಶೆಡ್‌ನಲ್ಲಿದ್ದ 15 ಕುರಿಗಳು, 01 ಮೇಕೆ ಹಾಗೂ 20 ಕುರಿಮರಿಗಳು ಸುಟ್ಟು ಕರಕಲಾಗಿದ್ದು, ಶೆಡ್‌ನ ಮೇಲ್ಛಾವಣಿ ಮತ್ತು ಶೆಡ್ ಹಾಗೂ 10 ತೆಂಗಿನ ಮರಗಳು ಬೆಂಕಿಯಲ್ಲಿ ಸುಟ್ಟಿವೆ. ವಿಷಯ ತಿಳಿದ ತಕ್ಷಣವೇ ಅಗ್ನಿಶಾಮಕ ಸಿಬ್ಬಂದಿ ಭೇಟಿ ನೀಡಿ ಬೆಂಕಿ ನಂದಿಸಿದ್ದಾರೆ.
ಈ ಬಗ್ಗೆ ತಹಶೀಲ್ದಾರ್ ಸಿ.ರಾಜೇಶ್ ಕುಮಾರ್ ಸುದ್ದಿಗಾರರೊಂದಿಗೆ ಮಾತನಾಡಿ, ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ತೆಂಗಿನ ಮರಕ್ಕೆ ಬೆಂಕಿ ತಗುಲಿ ಬೆಂಕಿ ಹತ್ತಿಕೊಂಡು ಕುರಿಗಳು ಹಾಗೂ ಕುರಿಶೆಡ್‌ಗಳು ಸುಟ್ಟಿವೆ. ವಿಷಯ ತಿಳಿದ ತಕ್ಷಣವೇ ಪಶುವೈದ್ಯ ಡಾ.ಹುಸೇನ್, ಡೆಪ್ಯೂಟಿ ತಹಶೀಲ್ದಾರ್ ಜಗನ್ನಾಥ್, ವಿಎ ಮಂಜುನಾಥ್ ಭೇಟಿ ನೀಡಿ ಪರೀಶಿಲನೆ ನಡೆಸಿದ್ದಾರೆ. ಸರ್ಕಾರದಿಂದ ಅವರಿಗೆ ಸೂಕ್ತ ಪರಿಹಾರ ಕೊಡಿಸಲಾಗುತ್ತದೆ ಎಂದರು.












Click it and Unblock the Notifications